ಪಟ್ಟಾಭಿಷೇಕದ ನಂತರ ಬಿಜೆಪಿಯನ್ನು ಟೀಕಿಸುತ್ತಲೇ ಭರವಸೆ ಮಾತುಗಳಾಡಿದ ರಾಹುಲ್

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಪಕ್ಷದ ಅದ್ಯಕ್ಷರಾಗಿ ರಾಹುಲ್ ಗಾಂಧಿ ಅಧಿಕಾರ ಸ್ವೀಕರಿಸಿದ ಮೇಲೆ ಮೊದಲ ಭಾಷಣದಲ್ಲೇ ಬಿಜೆಪಿ ವಿರುದ್ಧ ಟೀಕೆ ಮಾಡುವುದರ ಜತೆಗೆ ಜನರ ಮನ ಗೆಲ್ಲುವ ಪ್ರಯತ್ನವನ್ನೂ ಮಾಡಿದ್ದಾರೆ. ಇಂದು ನವದೆಹಲಿಯ ಕಾಂಗ್ರೆಸ್ ಪಕ್ಷದ ಮುಖ್ಯ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅಧ್ಯಕ್ಷ ರಾಹುಲ್ ಗಾಂಧಿ ಮಾತನಾಡಿದರು. ಈ ವೇಳೆ ಅವರು ಹೇಳಿದಿಷ್ಟು…

ರಾಹುಲ್ ಗಾಂಧಿ:

‘ದೇಶದ ಅನೇಕರಂತೆ ನಾನು ಕೂಡ ಸಿದ್ಧಾಂತವಾದಿ. ಆದರೆ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ನಾವೆಲ್ಲರೂ ಭ್ರಮೆಯಲ್ಲಿದ್ದೀವಿ. ರಾಜಕೀಯ ಜನರಿಗೆ ಸೀಮಿತವಾಗಬೇಕು. ಆದರೆ ಇಂದಿನ ರಾಜಕೀಯ ಜನರನ್ನು ತುಳಿಯಲಾಗುತ್ತಿದೆ. ಜನರನ್ನು ಮೆಲೆತ್ತುವ ಕೆಲಸ ಆಗುತ್ತಿಲ್ಲ. ಇಂದು ಅಧಿಕಾರದಲ್ಲಿರುವವರನ್ನು ಪ್ರಶ್ನಿಸಿದರೆ ನಿಮ್ಮ ವಿರುದ್ಧ ಸುಳ್ಳು ಹೇಳುತ್ತಾರೆ ದಾಳಿ ಮಾಡುತ್ತಾರೆ. ಇಂದಿನ ಪ್ರಧಾನಿ ನಮ್ಮೆಲ್ಲರನ್ನು ಮುಂದಕ್ಕೆ ಕರೆದೊಯ್ಯುವ ಬದಲು ಹಿಂದಕ್ಕೆ ಕರೆದೊಯ್ಯುತ್ತಿದ್ದಾರೆ. ಇಂದು ನಮ್ಮ ದೇಶದ ವಿದೇಶಾಂಗ ನೀತಿಯು ಕೇವಲ ಒಬ್ಬ ವ್ಯಕ್ತಿಯನ್ನು ಶಕ್ತಿಶಾಲಿ ಎಂದು ಬಿಂಬಿಸುತ್ತಿವೆ.

ಅಧಿಕಾರದಲ್ಲಿರುವವರು ನಮ್ಮನ್ನು ಮತ್ತಷ್ಟು ದುರ್ಬಲರನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ನಾವು ಹಿಂದಕ್ಕೆ ಹೆಜ್ಜೆ ಇಟ್ಟರೆ ಮಾತ್ರ ಅದು ಸಾಧ್ಯ. ಹೀಗಾಗಿ ನಾವು ಎದ್ದು ನಿಂತು ಅವರ ಸವಾಲುಗಳನ್ನು ಎದುರಿಸಬೇಕು. ನಾವು ದೇಶದ ಪ್ರತಿಯೊಬ್ಬರ ಧ್ವನಿಯಾಗಬೇಕು. ಕಾಂಗ್ರೆಸ್ ಕಾರ್ಯಕರ್ತರಿಗೆ ಒಂದು ಮಾತನ್ನು ಹೇಳುತ್ತೇನೆ. ನೀವೇಲ್ಲರು ನನ್ನ ಕುಟುಂಬ ಸದಸ್ಯರು. ಪ್ರೀತಿ ಹಾಗೂ ಕರುಣೆಯಿಂದ ನಾವು ಭಾರತವನ್ನು ಕಟ್ಟುವ ಕೆಲಸ ಮಾಡಬೇಕಿದೆ. ಅದಕ್ಕೆ ದೇಶದ ಯುವಕರಿಗೆ ನಾನು ಆಮಂತ್ರಣ ನೀಡುತ್ತೇನೆ. ಬಿಜೆಪಿಯವರನ್ನು ನಾವು ಸೋದರರು ಹಾಗೂ ಸೋದರಿಯಂತೆ ಕಾಣುತ್ತೇವೆ. ಆದರೂ ಅವರ ಸಿದ್ಧಾಂತವನ್ನು ನಾವು ಒಪ್ಪುವುದಿಲ್ಲ. ಆದರೆ ನಾವು ದ್ವೇಷವನ್ನು ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷ ಯಾವಾಗಲೂ ಸವಾಲುಗಳನ್ನು ಪ್ರೀತಿಯಿಂದಲೇ ಸ್ವಾಗತಿಸುತ್ತದೆ.’

ಸೋನಿಯಾ ಗಾಂಧಿ:

’20 ವರ್ಷಗಳ ಹಿಂದೆ ನೀವು ನನ್ನನ್ನು ಪಕ್ಷದ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದಾಗ ನಾನು ಇದೇ ರೀತಿ ನಿಮ್ಮನ್ನು ಉದ್ದೇಶಿಸಿ ಮಾತನಾಡಿದ್ದೆ. ಆಗ ನಾನು ಹೆದರಿದ್ದೆ. ಪಕ್ಷವನ್ನು ನಾನು ಹೇಗೆ ನಿಬಾಯಿಸುತ್ತೇನೆ ಎಂಬ ಆತಂಕ ಮೂಡಿತ್ತು. ಅಲ್ಲಿಯವರೆಗೂ ರಾಜೀವ್ ಗಾಂಧಿ ಅವರ ಪತ್ನಿಯಾಗಷ್ಟೇ ರಾಜಕೀಯ ನೋಡಿದ್ದೆ.

ನಾನು ಮದುವೆಯಾದ ಕುಟುಂಬವೇ ಒಂದು ಕ್ರಾಂತಿಕಾರಿ ಕುಟುಂಬ. ಇಂದಿರಾ ಗಾಂಧಿ ಅವರು ದೇಶಕ್ಕಾಗಿ ಇಡೀ ಕುಟುಂಬವನ್ನೇ ತ್ಯಾಗ ಮಾಡಿದರು. ಅವರೇ ನನಗೆ ಸಂವಿಧಾನದ ಮೂಲ ಮೌಲ್ಯಗಳನ್ನು ಹೇಳಿಕೊಟ್ಟರು. ಆಕೆ ಹತ್ಯೆಯಾದಾಗ ನಾನು ನನ್ನ ತಾಯಿಯನ್ನು ಕಳೆದುಕೊಂಡೆ. ಆಗ ನಾನು ನನ್ನ ಕುಟುಂಬವನ್ನು ರಾಜಕೀಯದಿಂದ ದೂರವಿಡಲು ಪ್ರಯತ್ನಿಸಿದೆ. ನನ್ನ ಪತಿಗೆ ದೇಶವನ್ನು ಮುನ್ನಡೆಸುವ ಜವಾಬ್ದಾರಿ ನೀಡಲಾಯಿತು. ನಂತರ ನನ್ನ ಪತಿಯನ್ನೂ ಹತ್ಯೆ ಮಾಡಲಾಯಿತು. ಆ ಆಘಾತದಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡೆ.

ಈ ಹಂತದಲ್ಲಿ ಕಾಂಗ್ರೆಸ್ ದುರ್ಬಲವಾಗುತ್ತಿರುವುದನ್ನು ನೋಡಿದೆ. ಈ ಹಂತದಲ್ಲಿ ಪಕ್ಷದ ಜವಾಬ್ದಾರಿ ಹೊತ್ತುಕೊಳ್ಳದಿದ್ದರೆ ಇಂದಿರಾ ಅವರು ಹಾಗೂ ನನ್ನ ಪತಿ ಬೇಸರಗೊಳ್ಳುತ್ತಾರೆ ಎಂದು ಭಾವಿಸಿ ಪಕ್ಷದ ಜವಾಬ್ದಾರಿಯನ್ನು ತೆಗೆದುಕೊಂಡೆ. ಆಸಂದರ್ಭದಲ್ಲಿ ನಾವು ಕೇವಲ 3 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದೆವು. ಕೇಂದ್ರ ಸರ್ಕಾರದ ಅದಿಕಾರ ನಮ್ಮಿಂದ ದೂರವಿತ್ತು. ಆದರೆ ನಂತರದ ದಿನಗಳಲ್ಲಿ ನಮ್ಮ ಸಾಧನೆ ಗಮನಾರ್ಹ. ಇದು ಕೇವಲ ಒಬ್ಬ ವ್ಯಕ್ತಿಯಿಂದ ಸಾಧ್ಯವಲ್ಲ. ಇದರಲ್ಲಿ ನಿಮ್ಮೆಲ್ಲರ ಪರಿಶ್ರಮ ಮಹತ್ವದ್ದಾಗಿದೆ. ಡಾ.ಮನಮೋಹನ್ ಸಿಂಗ್ ಅವರು ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದಾರೆ.

ಈಗ ನಾವು ವಿರೋಧ ಪಕ್ಷದ ಸ್ಥಾನದಲ್ಲಿದ್ದು, ನಮ್ಮ ಮುಂದೆ ದೊಡ್ಡ ಸವಾಲುಗಳಿವೆ. ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯ ನೌತಿಕ ಮೌಲ್ಯ ಹಾಗೂ ವಾಕ್ ಸ್ವಾತಂತ್ರ್ಯದ ಮೇಲೆ ದಾಳಿಯಾಗುತ್ತಿದೆ. ಈ ಸಮಯದಲ್ಲಿ ಕಾಂಗ್ರೆಸ್ ಮತ್ತೆ ಹೋರಾಟ ನಡೆಸಬೇಕು. ನಾವು ಈ ಕೆಲಸ ಮಾಡದಿದ್ದರೆ ಸಾಮಾನ್ಯ ಜನರನ್ನು ಗೌರವಿಸಿದಂತೆ ಆಗುವುದಿಲ್ಲ. ಭಾರತ ಯುಕರ ರಾಷ್ಟ್ರವಾಗಿದ್ದು, ನಾವು ಹೊಸ ಶಕ್ತಿಯಾಗಿ ಬೆಳೆಯಲಿದ್ದೇವೆ. ಕಳೆದ 20 ವರ್ಷಗಳಿಂದ ನನ್ನನ್ನು ಪ್ರೀತಿಯಿಂದ ನೋಡಿಕೊಂಡಿದ್ದೀರಿ. ನಿಮ್ಮ ಪ್ರೀತಿಗೆ ಹೃದಯದಾಳದಿಂದ ಧನ್ಯವಾದ ಅರ್ಪಿಸುತ್ತೇನೆ.’

Leave a Reply