ಮೋದಿ ಸಂಪುಟ ಸೇರಲು ಯಡಿಯೂರಪ್ಪಗೆ ಎಡೆ ಇದೆಯೇ?

ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದರೂ ಬಿಜೆಪಿ ಬಾವುಟ ನಿರೀಕ್ಷಿತ ಎತ್ತರದಲ್ಲಿ ಹಾರುತ್ತಿಲ್ಲ. ಏನೇ ಮಾಡಿದರೂ ಬಿಜೆಪಿ ಚಕ್ಕಡಿಯ ನೊಗಕ್ಕೆ ಸಮರ್ಥ ಭುಜ ಸಿಗುತ್ತಿಲ್ಲ. ಎಷ್ಟೆಲ್ಲ ಕಾಲು ಎಳೆದು ಹಾಕಿದರೂ ಗಾಡಿ ಮುಂದಕ್ಕೆ ಹೋಗುತ್ತಿಲ್ಲ. ಕೇಂದ್ರ ನಾಯಕರೇ ಬಂದು ಹೋದರೂ ಜಗ್ಗುತ್ತಿಲ್ಲ. ದೇಶದ ಉದ್ದಗಲಕ್ಕೂ ಏನೆಲ್ಲ ತಂತ್ರಗಾರಿಕೆ ಮಾಡಿ ದಕ್ಕಿಸಿಕೊಂಡಿರುವ ವರಿಷ್ಠರಿಗೆ ಅದೇಕೋ ಏನೋ ಕರ್ನಾಟಕ ಮಾತ್ರ ಸುಲಭವಾಗಿ ಎಟುಕುತ್ತಿಲ್ಲ. ಧರ್ಮ ಸಂಘರ್ಷ, ಕೋಮು ಸಂಘರ್ಷಗಳಂಥ ವಿಚಾರಗಳೂ ಅದರ ಕೈ ಹಿಡಿಯುತ್ತಿಲ್ಲ. ಇದು ಅವರನ್ನು ತೀವ್ರ ಚಿಂತೆಗೆ ಗುರಿ ಮಾಡಿದೆ.

ಪರಿಸ್ಥಿತಿ ಹೀಗೇ ಮುಂದುವರಿದರೆ ಪಕ್ಷ ಭವಿಷ್ಯದ ಗತಿಯೇನು ಎಂಬ ಯೋಚನೆಗೆ ಬಿದ್ದಿರುವ ವರಿಷ್ಠರು ಪರ್ಯಾಯ ಮಾರ್ಗೋಪಾಯಗಳ ಚಿಂತನೆಗೆ ಇಳಿದಿದ್ದಾರೆ. ಈಗಿನ ಪರಿಸ್ಥಿತಿ ನಿವಾರಿಸಿಕೊಳ್ಳಲು ಬೇಕಾದ ತಂತ್ರಗಾರಿಕೆಗಳ ಅನ್ವೇಷಣೆಗಿಳಿದಿದ್ದಾರೆ. ಅವರಿಗೆ ಈಗಾಗಲೇ ಒಂದೆರಡು ಆಲೋಚನೆಗಳೂ ಹೊಳೆದಿವೆ. ಯಾವುದೇ ನಾಯಕರ ಭಾವನೆಗೂ ನೋವಾಗಬಾರದು, ಮತ್ತದೇ ಕಾಲಕ್ಕೆ ಪಕ್ಷಕ್ಕೂ ಒಳಿತಾಗಬೇಕು. ಅಂಥದೊಂದು ಸೂತ್ರ ಮುಂದಿಟ್ಟುಕೊಂಡು ಕೂತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಕೇಂದ್ರ ಸಂಪುಟಕ್ಕೆ ತೆಗೆದುಕೊಂಡು, ಸಾಮೂಹಿಕ ನಾಯಕತ್ವದಲ್ಲೇ ವಿಧಾನಸಭೆ ಚುನಾವಣೆ ಎದುರಿಸಿದರೆ ಹೇಗೆ ಎಂಬುದು ಸದ್ಯಕ್ಕೆ ಅವರ ಮುಂದಿರುವ  ‘ಸಿದ್ಧ ಸೂತ್ರ’.

ಹಾಗೆಂದು ಈ ಸೂತ್ರ ಯಡಿಯೂರಪ್ಪನವರ ವಿರುದ್ಧ ಎಂದೇನೂ ಅಲ್ಲ. ಅವರ ಗೌರವ, ಘನತೆಗೆ ಕುಂದು ತರುವಂಥದ್ದೂ ಅಲ್ಲ. ಅವರಿಗೆ ಹಿಂಬಡ್ತಿಯೂ ಅಲ್ಲ. ಬದಲಿಗೆ ಅವರಿಗೊಂದು ಮುಂಬಡ್ತಿ ಕೊಟ್ಟು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ನಡುಗುತ್ತಿರುವ ಬಿಜೆಪಿಗೆ ಚುಚ್ಚು ಮದ್ದು ನೀಡುವುದು. ಹೇಗಿದ್ದರೂ ಯಡಿಯೂರಪ್ಪನವರು ಈಗ ಲೋಕಸಭಾ ಸದಸ್ಯರು. ಜತೆಗೆ ಹಿರಿಯರು. ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡುವುದು ಸುಲಭ. ಸಂಪುಟಕ್ಕೆ ತೆಗೆದುಕೊಂಡರೆ ಅವರಿಗೂ ಸಮಾಧಾನ. ಅವರು ಪ್ರತಿನಿಧಿಸುವ ರಾಜ್ಯದ ಪ್ರಭಾವಿ ಲಿಂಗಾಯತ ಸಮುದಾಯಕ್ಕೂ ಸಮಾಧಾನ.  2019 ರಲ್ಲಿ ನಡೆಯುವ ಲೋಕಸಭಾ ಚುನಾವಣೆವರೆಗೂ ಸಂಪುಟದಲ್ಲಿ ಅವರು ಇರಬಹುದು. ಮಂತ್ರಿ ಸ್ಥಾನದಿಂದಲೂ ರಾಜ್ಯಕ್ಕೆ ಒಂದಷ್ಟು ಕೆಲಸಗಳನ್ನು ಮಾಡಬಹುದು. ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ನೋಡಿಕೊಂಡು ಒಂದೊಮ್ಮೆ ಅವರ ಸೇವೆ ಅಗತ್ಯವೆನಿಸಿದರೆ ಇಲ್ಲಿಯೂ ಬಳಸಿಕೊಳ್ಳಬಹುದು. ಇದು ಸದ್ಯ ವರಿಷ್ಠರ ಚಿಂತನೆ.

ಹಾಗಾದರೆ ವರಿಷ್ಠರು ಇಂಥದ್ದೊಂದು ಚಿಂತನೆಗೆ ಮೊರೆ ಹೋಗಲು ಕಾರಣವೇನು? ಇದರಿಂದ ಏನು ಪ್ರಯೋಜನ? ಯಾರನ್ನು ಮೆಚ್ಚಿಸಲು ಈ ತಂತ್ರ ಹೆಣೆಯುತ್ತಿದ್ದಾರೆ. ನಿಜಕ್ಕೂ ಇದು ಫಲ ನೀಡುವುದೇ? ಯಡಿಯೂರಪ್ಪ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೆ ಅದರಿಂದ ಯಡವಟ್ಟಾಗುವುದಿಲ್ಲವೇ? ಅವರು ಪ್ರತಿನಿಧಿಸುವ ಲಿಂಗಾಯತ ಸಮುದಾಯ ಮುನಿಸಿಕೊಳ್ಳುವುದಿಲ್ಲವೇ? ಇದರಿಂದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವುದಿಲ್ಲವೇ ಎಂಬ ಪ್ರಶ್ನೆಗಳು ಇಲ್ಲಿ ಸಹಜ. ತಂತ್ರಗಾರಿಕೆಗೆ ಹೆಸರಾದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿಂದತೆ ವರಿಷ್ಠರು ಯಾವುದಾದರೂ ಒಂದು ಚಿಂತನೆ ಮಾಡಿದರೆ ಅದಕ್ಕಾ ಸಕಾರಣಗಳು ಇದ್ದೇ ಇರುತ್ತವೆ. ಲಾಭ ಆಗುತ್ತದೆ ಎಂದೆನಿಸಿದರೆ ಅವರು ಯಾವುದನ್ನೂ ಮಾಡಲು ಹೋಗುವುದಿಲ್ಲ. ಯಡವಟ್ಟಾಗುತ್ತದೆ ಎಂದು ಗೊತ್ತಿದ್ದರೂ ಯಾರಾದರೂ ಸುಖಾಸುಮ್ಮನೆ ತೊಂದರೆಯನ್ನು ಮೈಮೇಲೆ ಎಳೆದುಕೊಳ್ಳುತ್ತಾರೆಯೇ? ಇಲ್ಲ. ವಿಧಾನಸಭೆ ಚುನಾವಣೆಯಲ್ಲಿ ಅನುಕೂಲ ಆಗುತ್ತದೆ ಎಂಬ ಭರವಸೆಯೊಂದಿಗೆ ಇಂಥದೊಂದು ಯೋಚನೆಗೆ ಇಳಿದಿದ್ದಾರೆ. ಆದರೆ ಅದಿನ್ನು ಚಿಂತನೆಯ ಹಂತದಲ್ಲಷ್ಟೇ ಉಳಿದಿದೆ. ಇನ್ನೂ ನಿರ್ಣಯ ಆಗಿಲ್ಲ.

ಮೊದಲನೆಯದಾಗಿ ಯಡಿಯೂರಪ್ಪ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದಾಗ ವರಿಷ್ಠರು ಪಕ್ಷ ಪ್ರಗತಿ ಬಗ್ಗೆ ಒಂದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ ಅದರಲ್ಲಿ ನಿರೀಕ್ಷಿತ ಯಶಸ್ಸು ಕಾಣುತ್ತಿಲ್ಲ. ಇದಕ್ಕೆ ಯಡಿಯೂರಪ್ಪನವರ ಸಾಮರ್ಥ್ಯದ ಪ್ರಶ್ನೆಗಿಂಥ ಪಕ್ಷದ ಅನ್ಯ ನಾಯಕರ ಅಸಹಕಾರ ಧೋರಣೆ ಪ್ರಮುಖ ಕಾರಣ. ಅನ್ಯ ನಾಯಕರಿಗೆ ಪಕ್ಷದ ಮೇಲೆ ಪ್ರೀತಿ ಇದೆ. ಆದರೆ ಅದೇ ಪ್ರೀತಿ ಯಡಿಯೂರಪ್ಪನವರ ಮೇಲೆ ಇಲ್ಲ. 2008 ರ ಚುನಾವಣೆ ಸಂದರ್ಭದಲ್ಲಿ ಪಕ್ಷದೊಳಗೆ ಯಡಿಯೂರಪ್ಪನವರಿಗೆ ಸಿಕ್ಕಿದ್ದ ಸಹಕಾರ ಈಗ ಸಿಗುತ್ತಿಲ್ಲ. ಯಡಿಯೂರಪ್ಪನವರು ಕೂಡ ಅವತ್ತು ಇದ್ದಂತೆ ಇವತ್ತು ಇಲ್ಲ. ಅವತ್ತಿನ ಯಡಿಯೂರಪ್ಪನವರೇ ಬೇರೆ. ಇವತ್ತಿನ ಯಡಿಯೂರಪ್ಪನವರೇ ಬೇರೆ. ಮಾಜಿ ಮುಖ್ಯಮಂತ್ರಿ ಆದ ನಂತರ ಬಿಜೆಪಿಯಿಂದ ಹೊರಹೋಗಿ ಬಂದ ಯಡಿಯೂರಪ್ಪನವರ ಬಗ್ಗೆ ರಾಜ್ಯದ ಬೇರೆ ನಾಯಕರಿಗೆ ಏನೋ ಒಂದು ರೀತಿ ತಾತ್ಸಾರ ಧೋರಣೆ. ಹರಳೆಣ್ಣೆಯಂತೆ ಜಡ್ಡುಗಟ್ಟಿದ ಮನಸ್ಥಿತಿ. ಪಕ್ಷ ಮತ್ತು ಯಡಿಯೂರಪ್ಪ ಅವರನ್ನು ಬೇರ್ಪಡಿಸಿ ನೋಡಿದರೆ ಚುನಾವಣೆಯಲ್ಲಿ ಲಾಭ ಆಗುವುದಿಲ್ಲ, ಇದರಿಂದ ತೊಂದರೆಯೇ ಹೆಚ್ಚು ಎಂದು ನಿಖರವಾಗಿ ಗೊತ್ತು. ಆದರೂ ಅವರ ಮನಸ್ಸು ಮಾತ್ರ ಮುಕ್ತವಾಗಿ ಹರಿಯುತ್ತಿಲ್ಲ.

ಇನ್ನೊಂದೆಡೆ, ಅದಕ್ಕೆ ತಕ್ಕಂತೆ ಯಡಿಯೂರಪ್ಪನವರು ಕೂಡ ತಮ್ಮ ಎಂದಿನ ಹಠಮಾರಿತನ, ಹುಂಬತನ, ಕಡ್ಡಿ ತುಂಡು ಮಾಡಿದಂತೆ ನಿರ್ಣಯ ತೆಗೆದುಕೊಳ್ಳುವ ಮನೋಭಾವ ಬಿಟ್ಟಿಲ್ಲ. ಚುನಾವಣೆ ಸಮಯದಲ್ಲಿ ಕಡ್ಡಾಯವಾಗಿ ಬೇಕಿದ್ದ ನಯ-ನಾಜೂಕು ಮೆರೆಯುತ್ತಿಲ್ಲ, ಬದಲಿಗೆ ಅದನ್ನೂ ಸಂಪೂರ್ಣ ಮರೆತುಹೋಗಿದ್ದಾರೆ. ತಮ್ಮ ಬಾಲಬಡುಕರಿಗಷ್ಟೇ ಮಣೆ ಹಾಕುತ್ತಿದ್ದಾರೆ. ಪಕ್ಷದ ನಾನಾ ವೇದಿಕೆಗಳ ಪದಾಧಿಕಾರಿಗಳ ಆಯ್ಕೆಯಿಂದ ಹಿಡಿದು ಇತ್ತೀಚಿನ ಪರಿವರ್ತನಾ ಯಾತ್ರೆವರೆಗೂ ತಮ್ಮ ಹಿಂಬಾಲಕರಿಗೆ ಆದ್ಯತೆ ನೀಡಿರುವುದು ಉಳಿದವರ ಅಸಮಾಧಾನಕ್ಕೆ ಗುರಿ ಆಗಿದೆ. ಹಾಗಂಥ ಯಾರೂ ಹೊರಗೆ ತೋರಗೊಡುತ್ತಿಲ್ಲ. ಆದರೆ ಒಂದು ಚುನಾವಣೆ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಿಗೆ ನೀಡಬೇಕಾದ ಸಹಕಾರವನ್ನು ಕೊಡುತ್ತಿಲ್ಲ. ಹೀಗಾಗಿ ಯಾವುದೇ ಒಂದು ಸರಕಾರದ ಸಹಜ ಆಡಳಿತವಿರೋಧಿ ಅಲೆಯನ್ನು ಸದ್ಬಳಕೆ ಮಾಡಿಕೊಳ್ಳಲು ಬಿಜೆಪಿಗೆ ಆಗುತ್ತಿಲ್ಲ. ಬದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವೇ ಪ್ರತಿಪಕ್ಷದ ಮೇಲೆ ಸವಾರಿ ಮಾಡುತ್ತಿದೆ. ಕಾಂಗ್ರೆಸ್ ಉಳಿದ ನಾಯಕರ ಮಾತು ಒತ್ತಟ್ಟಿಗಿರಲಿ ಸಿದ್ದರಾಮಯ್ಯ ಅವರಂತೂ ಯಡಿಯೂರಪ್ಪನವರನ್ನು ಹೋದಲ್ಲಿ ಬಂದಲ್ಲಿ ಏಕವಚನದಲ್ಲೇ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಚುನಾವಣೆ ಪ್ರಚಾರ ಕಾರ್ಯಕ್ರಮಗಳಲ್ಲಿ ಮಾತಿಗೆ ಮೊದಲು ಯಡಿಯೂರಪ್ಪನವರನ್ನು ‘ಜೈಲಿಗೆ ಹೋಗಿ ಬಂದವರು’, ‘ಭ್ರಷ್ಟಾಚಾರದ ಮೇರು ಪರ್ವತ’ ಎಂದೆಲ್ಲ ಟೀಕಿಸುತ್ತಿದ್ದಾರೆ.  ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಅವರು ರಾಜ್ಯ ಬಿಜೆಪಿ ಚುಕ್ಕಾಣಿ ಹಿಡಿದಿರುವವರೆಗೂ ಕಾಂಗ್ರೆಸ್ಸಿಗೆ ಯಾವುದೇ ತೊಂದರೆ ಇಲ್ಲ. ಅಷ್ಟೇ ಅಲ್ಲದೆ, ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಅವರು ರಾಜ್ಯ ಬಿಜೆಪಿ ಚುಕ್ಕಾಣಿ ಹಿಡಿದಿರುವವರೆಗೂ ಕಾಂಗ್ರೆಸ್ಸಿಗೆ ಯಾವುದೇ ತೊಂದರೆ ಇಲ್ಲ. ಅವರ ಜೋಡಿ ಕಾಂಗ್ರೆಸ್ಸಿಗೊಂದು ವರದಾನ ಎಂದೂ ಅಣಕಿಸುತ್ತಿದ್ದಾರೆ. ರಾಜ್ಯ ಸರಕಾರದ ನ್ಯೂನತೆಗಳನ್ನು ಎತ್ತಾಡುವಲ್ಲಿನ ಬಿಜೆಪಿ ಅಸ್ತ್ರಗಳನ್ನು ಈ ಟೀಕೆ, ಅಣಕಗಳು ತುಂಡರಿಸಿ ಹಾಕುತ್ತಿದೆ. ರಾಜ್ಯ ಸರಕಾರದ ಭ್ರಷ್ಟಾಚಾರ ಪ್ರಕರಣಗಳು ಯಡಿಯೂರಪ್ಪನವರ ಹಳೇ ಪ್ರಕರಣಗಳ ಮುಂದೆ ಗೌಣವಾಗಿ ಹೋಗಿವೆ. ‘ಜೈಲಿಗೆ ಹೋಗಿ ಬಂದವರು’ ಎಂಬ ಕಾಂಗ್ರೆಸ್‌ನ ಚುನಾವಣೆ ಪ್ರಚಾರದ ಘೋಷವಾಕ್ಯವಾಗಿ ಹೋಗಿದೆ. ಇದರಿಂದ ಜನರಿಗೂ ಪ್ರತಿಕೂಲ ಸಂದೇಶ ರವಾನೆ ಆಗುತ್ತಿದೆ. ಇದನ್ನು ವರಿಷ್ಠರ ಗಮನಕ್ಕೆ ತಂದಿರುವ ರಾಜ್ಯ ಬಿಜೆಪಿ ಅನ್ಯ ನಾಯಕರು ಚುನಾವಣೆ ಪ್ರಚಾರ ಕಾರ್ಯಕ್ರಮಗಳಲ್ಲಿ ತಮಗೆ ತೀವ್ರ ಮುಜುಗರ ಆಗುತ್ತಿದೆ ಎಂದು ಫಿಟ್ಟಿಂಗ್ ಇಟ್ಟಿದ್ದಾರೆ.

2008 ರಲ್ಲಿ ಇದ್ದಂಥ ಪರಿಸ್ಥಿತಿ ಈಗ ಇಲ್ಲ. ಆಗ ಮೈತ್ರಿ ಸರಕಾರದಲ್ಲಿ ಕುಮಾರಸ್ವಾಮಿ ಅವರು ಅಧಿಕಾರ ಹಸ್ತಾಂತರ ಮಾಡದೇ ಹೋದದ್ದು ಯಡಿಯೂರಪ್ಪನವರ ಪರ ಅನುಕಂಪದ ಅಲೆ ಸೃಷ್ಟಿಗೆ ಕಾರಣವಾಗಿತ್ತು. ಜತೆಗೆ ಯಡಿಯೂರಪ್ಪನವರ ಬಗ್ಗೆ ಯಾವುದೇ ಆರೋಪಗಳು ಇರಲಿಲ್ಲ. ಹೀಗಾಗಿ ಅವರ ಮತ್ತು ಅವರ ನೇತೃತ್ವದ ಬಿಜೆಪಿ ಗೆಲುವು ಸುಲಭವಾಗಿತ್ತು. ಇನ್ನೂ ಸರಿಯಾಗಿ ಹೇಳಬೇಕೆಂದರೆ ಯಡಿಯೂರಪ್ಪನವರಿಂದಾಗಿಯೇ ಪಕ್ಷ ಅಧಿಕಾರಕ್ಕೆ ಬಂದಿತ್ತು. ಅವರ ಬಗ್ಗೆ ರಾಜ್ಯ ನಾಯಕರಿರಲಿ, ರಾಷ್ಟ್ರೀಯ ನಾಯಕರೇ ಹೆದರುತ್ತಿದ್ದರು. ಆನೆ ನಡೆದದ್ದೇ ದಾರಿ ಎಂಬಂತೆ ಯಡಿಯೂರಪ್ಪ ಹೇಳಿದ್ದೇ ವೇದವಾಕ್ಯವಾಗಿತ್ತು. ಆದರೆ ಇವತ್ತು ಅದೇ ಪರಿಸ್ಥಿತಿ ಇಲ್ಲ. ಯಡಿಯೂರಪ್ಪನವರ ಮೇಲಿನ ಆರೋಪಗಳು ಕೋರ್ಟ್‌ಲ್ಲಿ ಬಿದ್ದು ಹೋಗಿದ್ದರೂ ಜೈಲಿಗೆ ಹೋಗಿ ಬಂದ ನೋಟ ಜನರ ಮನಸ್ಸಿಂದ ಇನ್ನೂ ಕಣ್ಮರೆ ಆಗಿಲ್ಲ. ಜತೆಗವರು ಬಿಜೆಪಿ ಬಿಟ್ಟು ಕರ್ನಾಟಕ ಭಾರತೀಯ ಜನತಾಪಾರ್ಟಿ (ಕೆಜೆಪಿ) ಕಟ್ಟಿ, ವಾಪಸ್ಸು ಬಂದವರು. ಪಕ್ಷದ ಇತರ ನಾಯಕರಿಗೆ ಅವರೀಗ ‘ಸಲೀಸು’ ನಾಯಕರು. ಹಳೇ ಭಯವಾಗಲಿ, ಗೌರವವಾಗಲಿ ಉಳಿದಿಲ್ಲ. ಮುಂದೆ ನಮಿಸಿದರೂ ಹಿಂದೆ ನಿಂದಿಸುವವರೇ ಹೆಚ್ಚು. ಇವತ್ತಿಗೆ ಯಡಿಯೂರಪ್ಪ ಅವರೊಬ್ಬರೇ ಪಕ್ಷವನ್ನು ಚುನಾವಣೆಯಲ್ಲಿ ಗೆದ್ದು ತರುವ ಸ್ಥಿತಿಯಲ್ಲಿ ಇಲ್ಲ. ಜತೆಗೆ ವಯೋಸಹಜ ಇತಿಮಿತಿಗಳಿಗೆ ಅವರೂ ಹೊರತಾಗಿಲ್ಲ. ಆರೋಗ್ಯ, ಶಕ್ತಿ, ಸಾಮರ್ಥ್ಯ ಮೊದಲಿನಂತೆ ಸಹಕರಿಸುತ್ತಿಲ್ಲ. ಜತೆಗೆ ಮರೆವಿನ ಸಮಸ್ಯೆ ಬೇರೆ. ಬೃಹತ್ ಸಮಾವೇಶಗಳಲ್ಲೂ ಲಿಖಿತ ಭಾಷಣ ಓದಬೇಕಾದ ಪರಿಸ್ಥಿತಿ.

ಈ ಮಧ್ಯೆ, ಸಚಿವ ಎಂ.ಬಿ. ಪಾಟೀಲ್, ವಿನಯ ಕುಲಕರ್ಣಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಕೈಗೆತ್ತಿಕೊಂಡಿರುವ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಸಮುದಾಯದ ಮತಗಳನ್ನು ಪಲ್ಲಟ ಮಾಡಿಟ್ಟಿದೆ. ಲಿಂಗಾಯತ ಸಮುದಾಯ ಒಗ್ಗಟ್ಟಿಗೆ ಹೆಸರು. ಆದರೂ ಸ್ವಲ್ಪ ಮಟ್ಟಿಗೆ ಅದನ್ನು ಕದಡಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಮತ ರಾಜಕೀಯದಲ್ಲೂ ಇದರ ಪರಿಣಾಮ ಇದ್ದದ್ದೇ. ಬಿಜೆಪಿ ವರಿಷ್ಠರ ಗಮನಕ್ಕೆ ಇದು ಬಾರದೇ ಏನಿಲ್ಲ. ಈಗಿನ ಸ್ಥಿತಿಯಲ್ಲಿ ಸಂಘಟಿತ ಪ್ರಯತ್ನ, ಸಾಮೂಹಿಕ ನಾಯಕತ್ವ ಅನಿವಾರ್ಯ ಎನ್ನುವುದು ಅದಕ್ಕೆ ಮನವರಿಕೆ ಆಗಿದೆ. ಹೀಗಾಗಿ ಅವರು ಅನುಕೂಲ ತಂತ್ರದ ಮೊರೆ ಹೋಗಿದ್ದಾರೆ.

ಈ ತಂತ್ರದ ಪ್ರಕಾರ ಯಡಿಯೂರಪ್ಪ ಅವರೇ ಸ್ವಯಂಪ್ರೇರಿತರಾಗಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದು. ಅವರನ್ನು ಕೇಂದ್ರ ಸಂಪುಟಕ್ಕೆ ತೆಗೆದುಕೊಳ್ಳುವುದು. ರಾಜ್ಯದಲ್ಲಿ ಚುನಾವಣೆ ಚುಕ್ಕಾಣಿಯನ್ನು ಯಾರಿಗೂ ವಹಿಸದಿರುವುದು. ಬದಲಿಗೆ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎದುರಿಸುವುದು. ಇದರಿಂದ ಯಾರಿಗೂ ಅಸಮಾಧಾನ ಆಗುವುದಿಲ್ಲ. ಕೇಂದ್ರ ಸಚಿವರನ್ನಾಗಿ ಮಾಡುವ ಮೂಲಕ ಯಡಿಯೂರಪ್ಪನವರಿಗೂ ಬೇಸರ ಆಗದಂತೆ ನೋಡಿಕೊಳ್ಳುವುದು. ಚುನಾವಣೆ ಪ್ರಚಾರ ಕಾರ್ಯದಲ್ಲಿ ಅವರನ್ನೂ ಈಗಿನಂತೆಯೇ ಬಳಸಿಕೊಳ್ಳುವುದು. ಆದರೆ ಕೇಂದ್ರದ ಸಚಿವರಾಗಿ, ಸಾಮೂಹಿಕ ನಾಯಕರಲ್ಲಿ ಒಬ್ಬರಾಗಿ ಅವರು ಭಾಗಿಯಾಗುತ್ತಾರೆ. ಇದರಿಂದ ಎದುರಾಳಿಗಳು ಯಡಿಯೂರಪ್ಪನವರನ್ನು ತಮ್ಮ ಟೀಕಾ ಕೇಂದ್ರ ಮಾಡಿಕೊಳ್ಳುವುದನ್ನು ತಪ್ಪಿಸಬಹುದು. ನಾಳೆ ಚುನಾವಣೆ ಮುಗಿದು, ಫಲಿತಾಂಶ ಬಂದ ನಂತರ ಆಗಿನ ಪರಿಸ್ಥಿತಿ ನೋಡಿಕೊಂಡು ಸೂಕ್ತ ನಿರ್ಣಯ ಕೈಗೊಳ್ಳುವುದು. ಅಲ್ಲಿಯವರೆಗೂ ಇದು ಹೀಗೇ ಎಂದು ನಿಖರ ಗೆರೆ ಎಳೆಯದಿರುವುದು ವರಿಷ್ಠರ ಆಲೋಚನೆಯಾಗಿದೆ.

ವರಿಷ್ಠರು ಈ ರೀತಿ ಚಿಂತನೆ ನಡೆಸಲು ಇನ್ನೂ ಒಂದು ಪ್ರಮುಖ ಅಂಶ ಇಲ್ಲಿ ಕೆಲಸ ಮಾಡುತ್ತಿದೆ. ಯಡಿಯೂರಪ್ಪನವರು ಮಿಷನ್-150 ಎಂದು ಎಷ್ಟೇ ಸಾರಿಕೊಂಡರೂ, ಉಳಿದವರು ಮೇಲ್ಮನಸ್ಸಿನಿಂದ ಅದಕ್ಕೆ ತಾಳ-ತಂಬೂರಿ ಹಾಕಿದ್ದರೂ  ಬಾಹ್ಯ ಮತ್ತು ಆಂತರಿಕ ಸಮೀಕ್ಷೆಗಳ ಪ್ರಕಾರ ಬಿಜೆಪಿ ಸರಕಾರ ರಚನೆ ಮಾಡುವಷ್ಟು ಸ್ಥಾನ ಗಳಿಸುವ ಸ್ಥಿತಿಯಲ್ಲಿ ಇಲ್ಲ. ಬಿಜೆಪಿ ನಡೆಸಿರುವ ಆಂತರಿಕ ಸಮೀಕ್ಷೆಯೂ ಇದನ್ನೇ ಹೇಳುತ್ತಿದೆ. ವಾಸ್ತವವಾಗಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬರುವುದಿಲ್ಲ ಎಂಬುದು ಈ ಕ್ಷಣದವರೆಗಿನ ಸಮೀಕ್ಷಾ ಸತ್ಯ. ಆದರೆ ಆಡಳಿತರೂಢ ಕಾಂಗ್ರೆಸ್ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ ಎಂಬುದು ನಾನಾ ರಾಜಕೀಯ ಸಮೀಕ್ಷೆಗಳಿಂದ ವೇದ್ಯವಾಗಿರುವ ಸಂಗತಿ. ಹಲವು ಬಾರಿ ನಡೆದಿರುವ ಸಮೀಕ್ಷೆಯಲ್ಲಿ ತಾನು ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮುವ  ಸಂಗತಿ ಒಮ್ಮೆಯೂ ಹೊರಬೀಳದಿರುವುದು ಬಿಜೆಪಿ ಚಿಂತೆಗೆ ಕಾರಣವಾಗಿದೆ. ಹೀಗಾಗಿ ಪರ್ಯಾಯ ಮಾರ್ಗೋಪಾಯಗಳನ್ನು ಅದು ಹುಡುಕುತ್ತಿದೆ. ಅದರಲ್ಲಿ ಪ್ರಮುಖವಾಗಿ ಅದಕ್ಕೆ ಹೊರಳಿರುವುದು ಯಡಿಯೂರಪ್ಪನವರನ್ನು ಕೇಂದ್ರ ಸಂಪುಟಕ್ಕೆ ತೆಗೆದುಕೊಳ್ಳುವ ತಂತ್ರ. ಚುನಾವಣೆ ಸಮೀಪದಲ್ಲಿಟ್ಟುಕೊಂಡು ಇಂಥದೊಂದು ಪ್ರಯೋಗ ಸಾಧುವೇ ಎಂಬ ಮಗ್ಗುಲಿನ ಬಗ್ಗೆಯೂ ಅದು ಅಳೆದು-ತೂಗಿ ನೋಡುತ್ತಿದೆ.

ಆದರೆ ಒಂದು ವಿಷಯ ಸ್ಪಷ್ಟ. ಯಡಿಯೂರಪ್ಪನವರು ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರೂ ಚುನಾವಣೆ ಟಿಕೆಟ್ ಹಂಚಿಕೆ ಸ್ವಾತಂತ್ರ ಅವರ ಬಳಿ ಇಲ್ಲ. ಅವರೊಬ್ಬರೆ ಅಲ್ಲ, ಯಾವ ನಾಯಕರಿಗೂ ಆ ಅಧಿಕಾರ ಇಲ್ಲ, ಅಭ್ಯರ್ಥಿಗಳ ಆಯ್ಕೆ ತಮಗೆ ಬಿಟ್ಟದ್ದು ಎಂದು ವರಿಷ್ಠರು ಈಗಾಗಲೇ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಈ ಮಾತನ್ನು ಅವರು ಏಕಾಏಕಿ ಹೇಳಿದ್ದಲ್ಲ. ಬದಲಿಗೆ ಬಹಳ ಚಿಂತನೆ ಮಾಡಿ ತೆಗೆದುಕೊಂಡಿರುವ ಈ ನಿರ್ಣಯದ ಹಿಂದೆ ‘ಸಂದರ್ಭೋಚಿತ ಸ್ವಾತಂತ್ರ್ಯ’ ಚಲಾವಣೆ ಹಕ್ಕನ್ನು ತಮ್ಮ ಬಳಿಯೇ ಇರಿಸಿಕೊಳ್ಳುವ ದೂರದೃಷ್ಟಿ  ಅಡಗಿದೆ. ಅವರ ಈ ಹಕ್ಕು ಯಡಿಯೂರಪ್ಪನವರನ್ನು ಕೇಂದ್ರ ಸಂಪುಟಕ್ಕೆ ಕೊಂಡೊಯ್ದರೆ ಅಚ್ಚರಿಪಡಬೇಕಿಲ್ಲ!

ಲಗೋರಿ: ಅಕಾಲಿಕ ಚಿಂತನೆ ಮತ್ತಷ್ಟು ಚಿಂತೆ ತರಬಹುದು!

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply