ವೈಫಲ್ಯ ಮುಚ್ಚಿಹಾಕಲು ಮತ್ತೆ ಮತಯಂತ್ರದ ಮೇಲೆ ಕಾಂಗ್ರೆಸ್ ನಾಯಕರ ಆರೋಪ!

ಡಿಜಿಟಲ್ ಕನ್ನಡ ಟೀಮ್:

ಮೋದಿ ಸುಳ್ಳು ಹೇಳಿದ್ದಾರೆ, ಭಾವನಾತ್ಮಕ ಭಾಷಣದಿಂದ ಮತದಾರರನ್ನು ಸೆಳೆದಿದ್ದಾರೆ, ಚುನಾವಣಾ ಆಯೋಗ ಬಿಜೆಪಿ ಒತ್ತಡಕ್ಕೆ ಮಣಿದಿದೆ, ಮತ ಯಂತ್ರಗಳನ್ನು ತಿರುಚಲಾಗಿದೆ… ಇವು ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ ಸಂಪೂರ್ಣವಾಗಿ ಪ್ರಕಟವಾಗುವ ಮುನ್ನ ಸೋಲೊಪ್ಪಿಕೊಂಡ ಕಾಂಗ್ರೆಸ್ ನಾಯಕರು ನೀಡುತ್ತಿರುವ ಸಬೂಬು.

ಕಾಂಗ್ರೆಸ್ ನಾಯಕರ ಕೂಗು ಇದೇ ಮೋದಲಲ್ಲ. ಮೋದಿ ಪ್ರಧಾನಿಯಾದ ನಂತರ ನಡೆದ ಬಹುತೇಕ ಎಲ್ಲಾ ಚುನಾವಣೆಗಳ ಫಲಿತಾಂಶ ಹೊರ ಬಂದಾಗಲೂ ಕಾಂಗ್ರೆಸ್ ನಾಯಕರ ಈ ರಾಗ ಸರ್ವೇ ಸಾಮಾನ್ಯವಾಗಿದೆ. ಬಿಜೆಪಿ ಮತಯಂತ್ರಗಳ ತಿರುಚಿದ್ದೇ ಆಗಿದ್ದಲ್ಲಿ, ದೆಹಲಿ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟವಾಗಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರುತ್ತಿರಲಿಲ್ಲ. ಪಂಜಾಬ್ ನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿಲ್ಲ. ಇದನ್ನು ಸ್ವತಃ ಪಂಜಾಬ್ ಕಾಂಗ್ರೆಸ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರೇ ಒಪ್ಪಿಕೊಂಡಿದ್ದಾರೆ. ಹೀಗೀರುವಾಗ ಕಾಂಗ್ರೆಸ್ ಇತರೆ ನಾಯಕರು ಮತಯಂತ್ರಗಳ ಮೇಲೆ ಗೂಬೆ ಕೂರಿಸುವುದನ್ನು ಮಾತ್ರ ನಿಲ್ಲಿಸಿಲ್ಲ.

ಫಲಿತಾಂಶ ಸಂಪೂರ್ಣವಾಗಿ ಹೊರ ಬೀಳುವ ಮುನ್ನವೇ ಕಾಂಗ್ರೆಸ್ ನಾಯಕರು ಮತ್ತೆ ಮತಯಂತ್ರದ ಮೇಲೆ ಗೂಬೆ ಕೂರಿಲು ಆರಂಭಿಸಿದ್ದಾರೆ. ಆದರೆ ಗುಜರಾತಿನಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಎಲ್ಲಾ ಅವಕಾಶಗಳಿದ್ದರೂ ಸೋಲಿನತ್ತ ಸಾಗಿರುವುದರ ಹಿಂದೆ ತನ್ನದೇ ತಪ್ಪುಗಳು ಎಂದು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಕಳೆದ 22 ವರ್ಷಗಳಿಂದ ಮೋದಿಗೆ ಪರ್ಯಾಯವಾಗಿ ನಾಯಕನೊಬ್ಬನ್ನನು ಬೆಳಸಲು ಸಾಧ್ಯವಾಗಿಲ್ಲ ಎಂಬ ಸತ್ಯವನ್ನು ಕಾಂಗ್ರೆಸ್ ಮನವರಿಕೆ ಮಾಡಿಕೊಂಡಿಲ್ಲ. ಇದು ಚುನಾವಣೆಯ ಸೋಲಿಗೆ ಕಾರಣ ಎಂದು ಅರ್ಥ ಮಾಡಿಕೊಳ್ಳದಿರುವುದು ಕಾಂಗ್ರೆಸ್ ದುಸ್ಥಿತಿಗೆ ಸಾಕ್ಷಿ.

ಈ ಬಾರಿಯ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರನ್ನೇ ಚುನಾವಣಾ ಐಕಾನ್ ಆಗಿ ಬಿಂಬಿಸಿದ ಕಾಂಗ್ರೆಸ್ ಅಲ್ಪೇಶ್, ಜಿಗ್ನೆಶ್ ಹಾಗೂ ಹಾರ್ದಿಕ್ ಪಟೇಲ್ ನೆರವು ಪಡೆದಾಗಲೇ ಅದು ತನ್ನ ಪಕ್ಷದಲ್ಲಿ ಸ್ಥಳೀಯ ನಾಯಕನ ಕೊರತೆ ಇರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿತ್ತು. ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್ ನಾಯಕರ ಮತ ಯಂತ್ರದ ಮೇಲಿನ ಆರೋಪ ಮುಂದುವರಿದಿದೆ. ಕಾಂಗ್ರೆಸ್ ನಾಯಕರು ತನ್ನ ಸೋಲಿನ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡು ತಪ್ಪು ತಿದ್ದುಕೊಳ್ಳದಿದ್ದರೆ, ಮುಂಬರುವ ಮಿಜೋರಾಮ್, ಮೇಘಾಲಯ ರಾಜ್ಯಗಳ ಚುನಾವಣೆಯಲ್ಲೂ ಕಾಂಗ್ರೆಸ್ ನೆಲಕಚ್ಚುವುದು ಖಚಿತ.

Leave a Reply