ಆಡಳಿತ ವಿರೋಧಿ ಅಲೆ ಬಳಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲ, ಬಿಜೆಪಿ ತೆಕ್ಕೆಗೆ ಗುಜರಾತ್- ಹಿಮಾಚಲ ಪ್ರದೇಶ

ಡಿಜಿಟಲ್ ಕನ್ನಡ ಟೀಮ್:

‘ಗೆಲುವಿನಲ್ಲೂ ಸೋತ ಬಿಜೆಪಿ, ಸೋಲಿನಲ್ಲೂ ಗೆದ್ದ ಕಾಂಗ್ರೆಸ್’ ಇದು ಗುಜರಾತ್ ಚುನಾವಣೆಯ ಫಲಿತಾಂಶದ ಒಂದು ಸಾಲಿನ ಸಾರಾಂಶ. ಇನ್ನು ಹಿಮಾಚಲ ಪ್ರದೇಶದಲ್ಲಿನ ಆಡಳಿತ ವಿರೋಧಿ ಅಲೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ದೇಶದಲ್ಲಿ ತನ್ನ ಪ್ರಾಬಲ್ಯ ವಿಸ್ತರಿಸಿಕೊಂಡಿದೆ. ಅದರೊಂದಿಗೆ ದೇಶದ ಗಮನವನ್ನೇ ಸೆಳೆದಿದ್ದ ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸರಳ ಬಹುಮತ ಪಡೆದು ಅಧಿಕಾರ ಚುಕ್ಕಾಣಿ ಹಿಡಿದಿದೆ.

ಗುಜರಾತಿನ 182 ಕ್ಷೇತ್ರಗಳ ಪೈಕಿ ಬಿಜೆಪಿ 99, ಕಾಂಗ್ರೆಸ್ 77, ಇತರೆ 06, ಕ್ಷೇತ್ರಗಳಲ್ಲಿ ಮುನ್ನಡೆಯೊಂದಿಗೆ ಗೆಲುವಿನ ಸಮೀಪಕ್ಕೆ ಹೋದರೆ. ಇನ್ನು ಹಿಮಾಚಲ ಪ್ರದೇಶದ 68 ಕ್ಷೇತ್ರಗಳ ಪೈಕಿ ಬಿಜೆಪಿ 45, ಕಾಂಗ್ರೆಸ್ 19, ಇತರೆ 4, ಕ್ಷೇತ್ರಗಳಲ್ಲಿ ಮುನ್ನಡೆಯೊಂದಿಗೆ ಗೆಲುವು ಖಚಿತಪಡಿಸಿಕೊಂಡಿದೆ. ಅದರೊಂದಿಗೆ ಈ ಎರಡೂ ರಾಜ್ಯಗಳಲ್ಲೂ ಕೇಸರಿ ಪಾಳಯ ಅಧಿಕಾರದ ಗದ್ದುಗೆ ಏರುವುದು ಖಚಿತ.

22 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಬಿಜೆಪಿಯನ್ನು ಕೆಳಗಿಳಿಸಿ ಅಧಿಕಾರ ಹಿಡಿಯುವ ಅತ್ಯುತ್ತಮ ಅವಕಾಶ ಕಾಂಗ್ರೆಸ್ ಮುಂದಿತ್ತು. ಆದರೆ ಆ ಅವಕಾಶವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಕಾಂಗ್ರೆಸ್ ಸಂಪೂರ್ಣವಾಗಿ ಎಡವಿತು. ಗುಜರಾತಿನಲ್ಲಿ ಈ ಬಾರಿಯ ಆಡಳಿತ ವಿರೋಧದ ಅಲೆ ದೊಡ್ಡ ಮಟ್ಟದಲ್ಲಿತ್ತು. ಈ ಆಡಳಿತ ವಿರೋಧಿ ಅಲೆಯನ್ನು ಕಾಂಗ್ರೆಸ್ ಸರಿಯಾಗಿ ಬಳಸಿಕೊಂಡಿದ್ದರೆ ಪ್ರಧಾನಿ ಮೋದಿ ಅಲೆ ಹಾಗೂ ಅಮಿತ್ ಶಾ ಅವರ ತಂತ್ರಗಾರಿಕೆ ಮೆಟ್ಟಿ ನಿಲ್ಲಬಹುದಿತ್ತು. ಆದರೆ ಈ ಪ್ರಯತ್ನದಲ್ಲಿ ಕಾಂಗ್ರೆಸ್ ವಿಫಲವಾಗಿದೆ.

ಕಾಂಗ್ರೆಸ್ ಈ ಬಾರಿ ಚುನಾವಣೆ ಪೂರ್ವದಲ್ಲೇ ಹಾರ್ದಿಕ್ ಪಟೇಲ್, ಜಿಗ್ನೆಶ್ ಹಾಗೂ ಅಲ್ಪೇಶ್ ಅವರ ಜತೆ ಮೈತ್ರಿ ಮಾಡಿಕೊಂಡಿದ್ದು, ಕಾಂಗ್ರೆಸ್ ನ ನಿಲುವು ಏನು ಎಂಬುದರ ಬಗ್ಗೆ ಗೊಂದಲ ಮೂಡಿತ್ತು. ಕಾರಣ, ಹಾರ್ದಿಕ್ ಪಟೇಲ್ ಹಿಂದುಳಿದ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಹೋರಾಟದಿಂದ ಮೇಲಕ್ಕೆ ಬಂದರೆ, ಅಲ್ಪೇಶ್ ಮೀಸಲಾತಿ ಬೇಡ ಎಂಬ ವಾದ ಮಂಡಿಸುತ್ತಿದ್ದರು. ಹೀಗಾಗಿ ಈ ಇಬ್ಬರೊಂದಿಗೂ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ಜನರನ್ನು ತಲುಪುವಲ್ಲಿ ವಿಫಲವಾಗಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ ಕಾಂಗ್ರೆಸ್ ಈ ಮೂವರು ಯುವಕರನ್ನು ಬಿಟ್ಟು ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸಿದ್ದರೆ 90 ಸ್ಥಾನಗಳನ್ನು ಗೆದ್ದು ಬಿಜೆಪಿಗೆ ನಿಕಟ ಪೈಪೋಟಿ ನೀಡಬಹುದಿತ್ತು ಎಂದು ವಿಶ್ಲೇಷಿಸಿದ್ದಾರೆ. ಇನ್ನು 49 ಶಾಸಕರ ಬಲವನ್ನು ಈ ಬಾರಿ 77ಕ್ಕೆ ಹೆಚ್ಚಿಸಿಕೊಂಡಿರುವ ಕಾಂಗ್ರೆಸ್ ಸೋಲಿನಲ್ಲೂ ಗೆಲುವನ್ನು ಕಾಣುವಂತಾಗಿದೆ.

ಇತ್ತ ಬಿಜೆಪಿ ನಾಯಕರು ಗೆದ್ದರೂ ಒಂದು ರೀತಿಯ ಸೋಲಿನ ಅನುಭವ ಪಡೆದಿದ್ದಾರೆ. ಈ ಬಾರಿ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿಯಿಂದ ಹಿಡಿದು ಪ್ರತಿಯೊಬ್ಬ ಬಿಜೆಪಿ ನಾಯಕರು ತಮ್ಮ ಸರ್ಕಾರದ ಸಾಧನೆಯನ್ನು ಹೇಳಿಕೊಳ್ಳುವುದಕ್ಕಿಂತ ಕಾಂಗ್ರೆಸ್ ತೇಜೋವಧೆ ಮಾಡಿದ್ದೇ ಹೆಚ್ಚು, ಮಣಿ ಶಂಕರ್ ಅಯ್ಯರ್ ಅವರ ನೀಚ ಎಂಬ ಹೇಳಿಕೆ, ರಾಹುಲ್ ದೇವಸ್ಥಾನ ಪ್ರವಾಸ, ರಾಹುಲ್ ಯಾವ ಧರ್ಮಕ್ಕೆ ಸೇರಿದವರು? ಕಾಂಗ್ರೆಸ್ ಪಾಕಿಸ್ತಾನದ ಜತೆ ಕೈ ಜೋಡಿಸಿದ್ದಾರೆ ಎಂಬ ವಿಷಯಗಳನ್ನಿಟ್ಟುಕೊಂಡೇ ಭಾವನಾತ್ಮಕವಾಗಿ ಜನರನ್ನು ತನ್ನತ್ತ ಸೆಳೆದುಕೊಂಡರು. 22 ವರ್ಷ ಅಧಿಕಾರ ನಡೆಸಿದ್ದ ಪಕ್ಷ ತನ್ನ ಕೆಲಸಕ್ಕಿಂತ ಭಾವನಾತ್ಮಕವಾಗಿ ಜನರನ್ನು ಸೆಳೆದು ಸರಳ ಬಹುಮತ ಪಡೆದಿರುವುದು ಗೆಲುವಿನಲ್ಲಿ ಕಾಣಬಹುದಾದ ಸೋಲು ಎಂಬುದು ಸ್ಪಷ್ಟವಾಗಿದೆ.

ಇನ್ನು ಮೋದಿ ವಿರುದ್ಧ ಸಮರ ಸಾರಿದ ಅಲ್ಪೇಶ್ ಠಾಕೂರ್ ಹಾಗೂ ಜಿಗ್ನೆಶ್ ಈ ಬಾರಿಯ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದಾರೆ. ಆ ಮೂಲಕ ಬಿಜೆಪಿ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ಈ ಇಬ್ಬರು ಯುವ ನಾಯಕರು ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹಿಮಾಚಲದೊಂದಿಗೆ ದೇಶದಲ್ಲಿ ಕೆಸರಿ ಬಲ ವಿಸ್ತರಣೆ…

ಅತ್ತ ಹಿಮಾಚಲ ಪ್ರದೇಶದಲ್ಲಿ ಬಹುಮತ ಪಡೆದಿರುವ ಬಿಜೆಪಿ ಅಧಿಕಾರ ಹಿಡಿದು ಕಾಂಗ್ರೆಸ್ ಕೈನಿಂದ ಮತ್ತೊಂದು ರಾಜ್ಯವನ್ನು ಕಿತ್ತುಕೊಂಡಿದೆ. ಆ ಮೂಲಕ ದೇಶದಲ್ಲಿ ಕಾಂಗ್ರೆಸ್ ಪಾಲಿಗೆ ಉಳಿದಿರೋದು ಕೇವಲ ನಾಲ್ಕು ರಾಜ್ಯವಾಗಿದೆ. ಆಡಳಿತದ ವಿರೋಧಿ ಅಲೆಯನ್ನು ಮೆಟ್ಟಿ ನಿಲ್ಲುವಲ್ಲಿ ಕಾಂಗ್ರೆಸ್ ವಿಫಲವಾದರೆ, ಬಿಜೆಪಿ ಇದನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದಿದೆ.

Leave a Reply