ಬಿಜೆಪಿ ಪಾಲಾಯ್ತು ಗುಜರಾತ್- ಹಿಮಾಚಲ ಪ್ರದೇಶ, ಯಾವ ನಾಯಕರ ಅಭಿಪ್ರಾಯ ಏನು?

ಡಿಜಿಟಲ್ ಕನ್ನಡ ಟೀಮ್:

ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿದ್ದು, ಕಾಂಗ್ರೆಸ್ ಗೆ ಮತ್ತೊಮ್ಮೆ ಸೋಲು ಸಿಕ್ಕಿದೆ. ಈ ಫಲಿತಾಂಶದ ಕುರಿತಾಗಿ ರಾಜಕೀಯ ನಾಯಕರು ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ ನೋಡೋಣ ಬನ್ನಿ…

 • ‘ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ ಉತ್ತಮ ಆಡಳಿತ ಹಾಗೂ ಅಭಿವೃದ್ದಿಗೆ ಸಿಕ್ಕ ಗೆಲವು. ಈ ರಾಜ್ಯಗಳಲ್ಲಿ ಬಿಜೆಪಿ ಕಾರ್ಯಕರ್ತರ ಪರಿಶ್ರಮಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಬಿಜೆಪಿ ಬಗ್ಗೆ ಹಿಮಾಚಲ ಪ್ರದೇಶ ಹಾಗೂ ಗುಜರಾತಿನ ಜನರು ಹೊಂದಿರುವ ನಂಬಿಕೆ ಹಾಗೂ ಪ್ರೀತಿಗೆ ನಾನು ತಲೆಬಾಗುತ್ತೇನೆ. ಅಭಿವೃದ್ದಿಯ ನಮ್ಮ ಪಯಣವನ್ನು ಮುಂದುವರಿಸುತ್ತೇವೆ ಎಂದು ಜನರಿಗೆ ಭರವಸೆ ನೀಡುತ್ತೇನೆ.’
  – ನರೇಂದ್ರ ಮೋದಿ
 • ‘ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಭಾರತೀಯ ಜನತಾ ಪಾರ್ಟಿ ಅತ್ಯುತ್ತಮ ಜಯ ಸಾಧಿಸಿದೆ. ಜಾತಿ ವಿಚಾರದಲ್ಲಿ ಒಡೆದು ಆಳುವುದನ್ನು ಗುಜರಾತ್ ಜನ ತಿರಸ್ಕರಿಸಿದ್ದಾರೆ. ಈ ಜಯದಿಂದ ನಮ್ಮ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದೆ. ನಾಳೆಯಿಂದಲೇ ಬಿಜೆಪಿ ಪ್ರಚಾರ ಕಾರ್ಯ ಇನ್ನಷ್ಟು ಅದ್ಧೂರಿಯಾಗಿ ನಡೆಯಲಿದೆ. ಕರ್ನಾಟಕದಲ್ಲೂ ಬಿಜೆಪಿಗೆ 150 ಸ್ಥಾನಗಳನ್ನು ಗೆಲ್ಲುಲು ಶ್ರಮಿಸಲಾಗುವುದು.’
  – ಬಿ.ಎಸ್ ಯಡಿಯೂರಪ್ಪ
 • ‘ಆಡಳಿತ ವಿರೋಧ ಇದ್ದರೂ ಗುಜರಾತಿನಲ್ಲಿ ಬಿಜೆಪಿ ಗೆದ್ದಿರುವುದನ್ನು ನೋಡುತ್ತಿದ್ದಪರೆ, ಮತಯಂತ್ರಗಳ ಮೇಲಿನ ಶಂಕೆ ಮತ್ತಷ್ಟು ಹೆಚ್ಚಾಗುತ್ತದೆ. ಗುಜರಾತ್ ಚುನಾವಣೆಯಲ್ಲಿ ನಾವು ಗೆದ್ದು ಸೋತಿದ್ದೇವೆ. ನೋಟು ಅಮಾನ್ಯೀಕರಣ, ಜಿಎಸ್ಟಿ ನಿರ್ಧಾರಗಳಿಗೆ ಜನರು ಬಿಜೆಪಿಗೆ ಬಿಸಿ ಮುಟ್ಟಿಸಿದ್ದಾರೆ. ನಾನು ಗುಜರಾತಿನವನು ನನಗೆ ಆಶಿರ್ವಾದ ಮಾಡಿ ಎಂದು ಕೇಳಿಕೊಂಡು ಭಾವನಾತ್ಮಕವಾಗಿ ಮತದಾರರನ್ನು ಒಲಿಸಿಕೊಂಡಿದ್ದಾರೆ. ಆದರೆ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ. ಕರ್ನಾಟಕ ರಾಜ್ಯ ಚುನಾವಣೆಯನ್ನು ಗೆದ್ದು ರಾಹುಲ್ ಗಾಂಧಿ ಅವರ ಸಾರಥ್ಯಕ್ಕೆ ಉಡುಗೊರೆ ನೀಡಲಾಗುವುದು.’
  – ಮುಖ್ಯಮಂತ್ರಿ ಸಿದ್ದರಾಮಯ್ಯ
 • ‘ಇದೊಂದು ಮೋಸದ ಗೆಲುವು. ಬಿಜೆಪಿ ಅವರು ಜನರಿಗೆ ಸುಳ್ಳು ಹೇಳಿ ಪ್ರಚಾರ ಮಾಡಿದ್ದಾರೆ. ಅಲ್ಲದೆ ಮತಯಂತ್ರ ತಿರುಚಿದ್ದಾರೆ. ಹೀಗಾಗಿ ಆಡಳಿತ ವಿರೋಧವಿದ್ದರೂ ಬಿಜೆಪಿ ಜಯ ಸಾಧಿಸಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷ ಸುಪ್ರೀಂ ಕೋರ್ಟ್, ರಾಷ್ಟ್ರಪತಿ ಅವರಿಗೆ ಪತ್ರ ಬರೆಯಲಾಗುವುದು.’
  – ಎಂ.ಬಿ.ಪಾಟೀಲ್
 • ‘ನಾನು ಕಂಡ ಚುನಾವಣಾ ಪ್ರಚಾರದಲ್ಲಿ ಇದು ಅತ್ಯಂತ ಕೀಳು ಮಟ್ಟದ್ದಾಗಿದೆ. ಎರಡು ಪಕ್ಷಗಳು ಪೈಪೋಟಿ ನಡೆಸಿವೆ. ಗ್ರಾಮೀಣ ಪ್ರದೇಶದ ಜನ ಭಾರತೀಯ ಜನತಾ ಪಾರ್ಟಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಪ್ರಧಾನಿಯೊಬ್ಬರು ಚುನಾವಣಾ ಪ್ರಚಾರದ ಜವಾಬ್ದಾರಿ ಹೊತ್ತು ಇಷ್ಟು ಸಮಯ ವ್ಯಯಿಸಿರುವುದನ್ನು ನಾನು ನೋಡಿಲ್ಲ.’
  – ಹೆಚ್.ಡಿ. ದೇವೇಗೌಡ
 • ‘ಆತಂಕವಿಲ್ಲ ಎರಡು ರಾಜಕೀಯ ಪಕ್ಷ ಜನರ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಈ ಫಲಿತಾಂಶ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸಿದ್ದರಾಮಯ್ಯನವರು ಜಾಹಿರಾತಿಗಾಗಿ ಸಾಕಷ್ಟು ಖರ್ಚು ಮಾಡುತ್ತಿದ್ದಾರೆ. ಅವುಗಳೆಲ್ಲವನ್ನು ಸಂಗ್ರಹಿಸುತ್ತಿದ್ದೇನೆ. ಸಿದ್ದರಾಮಯ್ಯನವರ ಸರ್ಕಾರದ ಸಾಧನೆ ಏನು ಎಂಬುದನ್ನು ಕೆಲವೇ ದಿನಗಳಲ್ಲಿ ನಿಮ್ಮ ಮುಂದೆ ಇಡುತ್ತೇನೆ. ಇನ್ನು ಬಿಜೆಪಿ ಅವರು ತಮ್ಮ ಅವಧಿಯಲ್ಲಿ ಏನು ಮಾಡಿದ್ದೇವೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಅಮಿತ್ ಶಾ ಹಾಗೂ ಮೋದಿ 150 ಸೀಟು ಅಪೇಕ್ಷಸಿದ್ದಾರೆ ಎಂಬ ಕಾರಣಕ್ಕೆ ಮತ ನೀಡಿ ಎಂದು ಹೇಳುತ್ತಿದ್ದಾರೆಯೇ ಹೊರತು ರಾಜ್ದ ಜನತೆಗೆ ಏನು ಮಾಡುತ್ತೇವೆ ಎಂದು ಹೇಳುತ್ತಿಲ್ಲ.’
  – ಹೆಚ್.ಡಿ. ಕುಮಾರಸ್ವಾಮಿ

Leave a Reply