ವಿವಿಪ್ಯಾಟ್ ಪ್ರಯೋಗ- ಮತಯಂತ್ರ ದೋಷಮುಕ್ತ, ಇನ್ನಾದರೂ ದೂರು ನಿಲ್ಲಿಸುತ್ತಾರಾ ನಾಯಕರು?

ಡಿಜಿಟಲ್ ಕನ್ನಡ ಟೀಮ್:

‘ಗುಜರಾತಿನಲ್ಲಿ ಆಡಳಿತ ವಿರೋಧಿ ಅಲೆ ಇದ್ದರೂ ಬಿಜೆಪಿ ಸ್ಪಷ್ಟ ಬಹುಮತದಿಂದ ಗೆದ್ದಿರುವುದು ಅನುಮಾನಕ್ಕೆ ಕಾರಣವಾಗಿದೆ. ಮತಯಂತ್ರಗಳನ್ನು ತಿರುಚಿರುವ ಕುರಿತ ಅನುಮಾನ ಮತ್ತಷ್ಟು ಹೆಚ್ಚುತ್ತಿದೆ…’ ಇದು ಕಾಂಗ್ರೆಸ್ ಬಹುತೇಕ ಎಲ್ಲಾ ನಾಯಕರು ಗುಜರಾತ್ ಸೋಲಿಗೆ ಕೊಟ್ಟ ಕಾರಣ.

ನಿನ್ನೆ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಆಗ ಎಂದಿನಂತೆ ಕಾಂಗ್ರೆಸ್ ಹಾಗೂ ಇತರೆ ನಾಯಕರು ಹಾಗೂ ಬುದ್ಧಿಜೀವಿಗಳು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪ್ರಭಾವ ಬಳಸಿ ಮತಯಂತ್ರ ತಿರುಚಿದೆ ಎಂಬ ಆರೋಪ ಮಾಡಿದರು. ಈ ಹಿಂದೆ ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಇತರೆ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆದ್ದಾಗಲೂ ಇದೇ ಆರೋಪ ಕೇಳಿ ಬಂದಿದ್ದವು. ಹೀಗಾಗಿ ಗುಜರಾತ್ ಚುನಾವಣೆ ವೇಳೆ ಕೆಲವು ಮತಗಟ್ಟೆಗಳಲ್ಲಿ ವಿವಿಪ್ಯಾಟ್ (ವೋಟರ್ ವೇರಿಫಿಯಬಲ್ ಪೇಪರ್ ಆಡಿಟ್ ಟ್ರಯಲ್) ಮೂಲಕ ಮತದಾನ ಮಾಡಲಾಗಿತ್ತು. ಇಲ್ಲಿ ಮತಯಂತ್ರಗಳಲ್ಲಿ ಚಲಾಯಿಸಿದ ಮತವನ್ನು ಮತಪತ್ರಗಳ ಮೂಲಕ ದಾಖಲಿಸಿಕೊಳ್ಳಲಾಗಿತ್ತು. ಇದರಲ್ಲಿ ಮತಯಂತ್ರ ಹಾಗೂ ಮತಪತ್ರಗಳಲ್ಲಿನ ಫಲಿತಾಂಶವೂ ಶೇ.100ರಷ್ಟು ಸರಿಯಾಗಿದ್ದು, ಮತಯಂತ್ರಗಳು ದೋಷಮುಕ್ತವಾಗಿವೆ ಎಂಬುದು ಸಾಬೀತಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಈ ಪರೀಕ್ಷೆಯಿಂದ ಮತಯಂತ್ರಗಳು ಸಂಪೂರ್ಣವಾಗಿ ನಂಬಲಾರ್ಹ ಎಂಬುದು ಖಚಿತವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಚುನಾವಣಾ ಆಯೋಗ ಮುಖ್ಯಸ್ಥರುಗಳು ಸಹ ಮತಯಂತ್ರಗಳು ಸರಿಯಾಗಿವೆ ಎಂದೇ ವಾದ ಮಂಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್.ವೈ ಖುರೇಶಿ, ‘ಈ ಒಂದು ಪ್ರಯೋಗದಿಂದ ಮತ ಯಂತ್ರಗಳಲ್ಲಿ ಯಾವುದೇ ಲೋಪದೋಷ ಇಲ್ಲ ಎಂಬುದು ಖಚಿತಾಗಿದೆ. ಮತಯಂತ್ರಗಳ ಮೇಲೆ ಇನ್ನು ಅನುಮಾನ ಹೊಂದಿರುವವರಿಗೆ ಅಂತಿಮ ಮಾರ್ಗ ಇದೆ ಅದು ನ್ಯಾಯಾಲಯದ ಮೊರೆ ಹೋಗುವುದು’ ಎಂದರು.

ಇನ್ನು ಗುಜರಾತ್ ಚುನಾವಣಾ ಫಲಿತಾಂಶದ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆಣ ತೀವ್ರ ಪೈಪೋಟಿ ಜನರು ಮತಯಂತ್ರಗಳ ಮೇಲೆ ಜನರಿಟ್ಟಿರುವ ನಂಬಿಕೆಗೆ ಸಾಕ್ಷಿ ಎಂದು ಅಭಿಪ್ರಾಯಪಟ್ಟಿದ್ದಾರೆ ಮಾಜಿ ಚುನಾವಣಾ ಆಯೋಗ ಮುಖ್ಯಸ್ಥರುಗಳು. ಆ ಮೂಲಕ ಕಾಂಗ್ರೆಸ್ ಸೋಲಿಗೆ ಮತಯಂತ್ರಗಳ ದೋಷವೇ ಕಾರಣ ಎಂಬ ಹಾರ್ದಿಕ್ ಪಟೇಲ್ ಅವರ ಆರೋಪವನ್ನು ಮಾಜಿ ಚುನಾವಣಾ ಆಯೋಗದ ಮುಖ್ಯಸ್ಥ ಟಿ.ಎಸ್.ಕೃಷ್ಣಮೂರ್ತಿ ನಿರಾಕರಿಸಿದ್ದಾರೆ. ಈ ಬರ್ರೆ ಕೃಷ್ಣ ಮೂರ್ತಿ ಅವರು ಹೇಳೋದಿಷ್ಟು…

‘ಮತಯಂತ್ರಗಳ ಮೇಲೆ ಆರೋಪ ಮಾಡುವರು ತಮ್ಮ ಆರೋಪಕ್ಕೆ ಸೂಕ್ತ ಸಾಕ್ಷಿ ಒದಗಿಸಬೇಕು. ಒಂದು ವೇಳೆ ಮತಯಂತ್ರ ತಿರುಚಲಾಗಿದೆ ಎಂದು ಅನುಮಾನ ಬಂದರೆ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಲಯದ ಮೆಟ್ಟಿಲೇರಲಿ. ಸುಮ್ಮನೆ ತಪ್ಪು ಕಲ್ಪನೆಗಳಿಂದ ಆರೋಪ ಮಾಡಿದರೆ ಪ್ರಯೋಜನವಿಲ್ಲ. ಕಾಂಗ್ರೆಸ್ ಹಾಗೂ ಅದರ ಮೈತ್ರಿ ಪಕ್ಷಗಳು ತಮ್ಮ ಸೋಲಿನಿಂದಾಗುವ ಮುಖಭಂಗದಿಂದ ಪಾರಾಗಲು ಮತಯಂತ್ರಗಳ ಮೇಲೆ ದೂಷಿಸುತ್ತಿದ್ದಾರೆ.’

ಮತಯಂತ್ರಗಳ ಮೇಲಿನ ಅನುಮಾನ ಇಂದು ನಿನ್ನೆಯದಲ್ಲ. ಈ ಕುರಿತ ಅನುಮಾನವನ್ನು ಮೊದಲು ವ್ಯಕ್ತಪಡಿಸಿದ್ದೇ ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಅವರು. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಮತಯಂತ್ರಗಳನ್ನು ಪರಿಚಯಿಸಿದಾಗ ಇಂತಹ ಅನುಮಾನ ವ್ಯಕ್ತವಾದವು. ನಂತರ ಅದರ ಕುರಿತಂದೆ ಸಂವಿಧಾನಾತ್ಮಕ ಸಮಿತಿಯನ್ನು ರಚಿಸಲಾಯಿತು. ಆದರೆ ಈವರೆಗೂ ಅದರ ಬಗ್ಗೆ ಮಾಹಿತಿಯೂ ಇಲ್ಲ. ಇನ್ನು ಕೆಲ ತಿಂಗಳ ಹಿಂದೆ ಉತ್ತರ ಪ್ರದೇಸ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಜಯ ಸಾಧಿಸಿದಾಗಲೂ ಬಿಜೆಪಿ ಹೊರತಾಗಿ ಉಳಿದ ಎಲ್ಲಾ ಪಕ್ಷಗಳು ತಮ್ಮ ಸೋಲಿಗೆ ಮತಯಂತ್ರಗಳ ಮೇಲೆ ಗೂಬೆ ಕೂರಿಸಿದ್ದರು. ಆಗ ಆ ರಾಜಕೀಯ ನಾಯಕರುಗಳಿಗೆ ಸವಾಲೆಸೆದ ಚುನಾವಣಾ ಆಯೋಗ, ಮತಯಂತ್ರಗಳನ್ನು ತಿರುಚಲು ಸಾಧ್ಯವಿದೆ ಎನ್ನುವವರು ಅದನ್ನು ಸಾಬೀತುಪಡಿಸಲು ಎಂದು ಬಹಿರಂಗ ಸವಾಲೆಸೆದಿತ್ತು. ಆದರೆ ಆಗ ಮತಯಂತ್ರದ ಮೇಲೆ ಆರೋಪ ಮಾಡಿದ ಯಾವೊಬ್ಬ ನಾಯಕನೂ ತುಟಿ ಬಿಚ್ಚಲಿಲ್ಲ. ಈಗ ಮತ್ತೆ ಸೋಲು ಕಂಡಿರುವವರು ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮತಯಂತ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ಇನ್ನಾದರೂ ತಮ್ಮ ವೈಫಲ್ಯಗಳನ್ನು ಸರಿಪಡಿಸಿಕೊಂಡರೆ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ತಮ್ಮಲ್ಲಿ ವೈಫಲ್ಯಗಳಿಲ್ಲ. ಎಲ್ಲವೂ ಮತಯಂತ್ರದಿಂದಲೇ ಎಂಬ ಭ್ರಮೆ ಮುಂದಿನ ದಿನಗಳಲ್ಲೂ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷದ ನಾಯಕರಿಗೆ ಸೋಲುಣಿಸುವುದು ಖಚಿತ.

Leave a Reply