ಗುಜರಾತಿನಲ್ಲಿ ಮೋದಿಗೆ ಗಂಜಿನೀರು ಕುಡಿಸಿದ ರಾಹುಲ್ ಕರ್ನಾಟಕ ಚುನಾವಣೆಯಲ್ಲೂ ‘ಸ್ಟಾರ್ ಪ್ರಚಾರಕ’!

ಡಿಜಿಟಲ್ ಕನ್ನಡ ವಿಶೇಷ:

ತವರು ರಾಜ್ಯ ಗುಜರಾತ್ ನಲ್ಲಿ ಬಿಜೆಪಿ ಗೆಲುವಿನ ದಡ ಮುಟ್ಟಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಂಜಿನೀರು ಕುಡಿಸಿದ ಕಾಂಗ್ರೆಸ್ ರಾಷ್ಟ್ರೀಯ ನೂತನ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ರಾಜ್ಯ ಕಾಂಗ್ರೆಸ್ ನಾಯಕರು ನಿರ್ಣಯಿಸಿದ್ದಾರೆ.

ಇನ್ನಾರು ತಿಂಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ರಾಹುಲ್ ಗಾಂಧಿ ಅವರನ್ನು ಪ್ರಮುಖ ಪ್ರಚಾರಕರನ್ನಾಗಿ ಬಳಸಿಕೊಳ್ಳುವುದರ ಜತೆಗೆ ಬೆಂಗಳೂರು, ಉತ್ತರ ಕರ್ನಾಟಕ ಹಾಗೂ ಚಿಕ್ಕಮಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲು ರಾಜ್ಯ ಮುಖಂಡರು ಯೋಜನೆ ಸಿದ್ಧಪಡಿಸುತ್ತಿದ್ದಾರೆ.

ಈ ಹಿಂದೆ ದೇಶಾದ್ಯಂತ ಕಾಂಗ್ರೆಸ್ ನೆಲಕಚ್ಚಿದ್ದಾಗ ರಾಹುಲ್ ಗಾಂಧಿ ಅವರ ಅಜ್ಜಿ ಹಾಗೂ ಮಾಜಿ ಪ್ರಧಾನಿ ಇಂದಿರಾಗಾಂಧಿ ಕರ್ನಾಟಕದ ಚಿಕ್ಕಮಗಳೂರಿನಲ್ಲಿ ರಾಜಕೀಯ ಮರುಜನ್ಮ ಪಡೆದಿದ್ದರು. ಅದೇ ರೀತಿ ರಾಜೀವ್ ಗಾಂಧಿ ಹತ್ಯೆ ನಂತರ ಸಕ್ರಿಯ ರಾಜಕಾರಣಕ್ಕಿಳಿದ ಸೋನಿಯಾ ಗಾಂಧಿ ಅವರು ಅಮೇಥಿ ಜತೆಗೆ ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲೂ ಭರ್ಜರಿ ಜಯ ದಾಖಲಿಸಿದ್ದರು. ಹೀಗೆ ಇಂದಿರಾಗಾಂಧಿ ಕುಟುಂಬದ ಜತೆಗೆ ಕರ್ನಾಟಕಕ್ಕಿರುವ ಭಾವನಾತ್ಮಕ ಸಂಬಂಧವನ್ನು ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಮೂಲಕ ಬಳಸಿಕೊಳ್ಳುವುದು ಕಾಂಗ್ರೆಸ್ ತಂತ್ರಗಾರಿಕೆಯಾಗಿದೆ.

ಇಂದಿರಾ ಗಾಂಧಿ ಜನ್ಮಶತಮಾನೋತ್ಸವ ನಿಮಿತ್ತ ಚಿಕ್ಕಮಗಳೂರು, ಹಿಂದೆ ಇಂದಿರಾ ಗಾಂಧಿ ಅವರು ಭಾಷಣ ಮಾಡಿದ್ದ ಬೆಂಗಳೂರಿನ ಲಾಲ್ ಬಾಗ್ ಗಾಜಿನಮನೆಯಲ್ಲಿ ಸಮಾವೇಶ ನಡೆಸಲು ಯೋಜಿಸಲಾಗಿದ್ದು, ಇದರಲ್ಲಿ ರಾಹುಲ್ ಗಾಂಧಿ ಅವರು ಭಾಗವಹಿಸಲಿದ್ದಾರೆ. ಆ ಮೂಲಕ ಕರ್ನಾಟಕ ಚುನಾವಣೆ ಪ್ರಚಾರಕ್ಕೆ ರಾಹುಲ್ ಭರ್ಜರಿ ಎಂಟ್ರಿ ಕೊಡಲಿದ್ದಾರೆ. ಗುಜರಾತ್ ನಲ್ಲಿ ರಾಹುಲ್ ಗಾಂಧಿ ಅವರಿಗೆ ಸಿಕ್ಕ ಅದ್ಭುತ ಪ್ರತಿಕ್ರಿಯೆಯೇ ಇದಕ್ಕೆ ಪ್ರೇರಣೆ ಆಗಿದೆ.

ಗುಜರಾತ್ ಚುನಾವಣೆ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ನಡುವಣ ನೇರ ಖಡಾಖಡಿ ಎಂದೇ ಗುರುತಿಸಿಕೊಂಡಿತ್ತು. ಆಡಳಿತವಿರೋಧಿ ಅಲೆ ನಡುವೆಯೂ ನರೇಂದ್ರ ಮೋದಿ ಬಿಜೆಪಿಗೆ ಜಯ ತಂದುಕೊಡುವಲ್ಲಿ ಯಶಸ್ವಿಯಾಗಿದ್ದರೂ, ಅದಕ್ಕವರು ಪ್ರಯಾಸ ಪಡುವಂತೆ ಮಾಡಿದ ಹೆಗ್ಗಳಿಕೆ ರಾಹುಲ್ ಗಾಂಧಿ ಅವರದಾಗಿದೆ. ಅಲ್ಲಿ ಸಿಕ್ಕ ಜನಬೆಂಬಲವೇ ಕರ್ನಾಟಕ ಚುನಾವಣೆ ಪ್ರಚಾರಕ್ಕೂ ಮಾದರಿ ಎಂಬುದು ಕಾಂಗ್ರೆಸ್ ಮೂಲಗಳ ಅಭಿಪ್ರಾಯ.

Leave a Reply