ಅಹಿಂದವಾದಿಗಳು, ಹಿಂದೂ ಸಂಸ್ಕೃತಿ ರಕ್ಷಕರು, ಬುದ್ಧಿಜೀವಿಗಳು, ಸನ್ನಿ ವಿರುದ್ಧ ಹೋರಾಟಗಾರರು ದಾನೇಶ್ವರಿ ಪರ ಧ್ವನಿ ಎತ್ತುತ್ತಿಲ್ಲ, ಇದೇ ನಮ್ಮ ವ್ಯವಸ್ಥೆ!

  ಡಿಜಿಟಲ್ ಕನ್ನಡ ವಿಶೇಷ:

  ನಮ್ಮ ರಾಜ್ಯ ಯಾವ ಮಟ್ಟಕ್ಕೆ ತಲುಪಿದೆ? ಹೀಗೊಂದು ಪ್ರಶ್ನೆ ಮೂಡುವಂತೆ ಮಾಡಿದೆ 14 ವರ್ಷದ ಅಪ್ರಾಪ್ತೆ ದಾನೇಶ್ವರಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣ. ಇನ್ನು ಶಾಲೆಯಲ್ಲಿ ಓದುತ್ತಿರುವ ಈ ಪುಟ್ಟ ಹುಡುಗಿ ಮೇಲೆ ಕಾಮಾಂಧರು ನಡೆಸಿದ ದಾಳಿ ಸುಸಂಸ್ಕೃತ ನಾಡು ಎಂದು ಕರೆಸಿಕೊಳ್ಳುವ ನಮ್ಮ ರಾಜ್ಯವೇ ತಲೆತಗ್ಗಿಸುವಂತೆ ಮಾಡಿದೆ. ಅಹಿಂದದ ಜಪ ಮಾಡುವವರಾಗಲಿ, ಹಿಂದೂ ಸಂಸ್ಕೃತಿಯ ರಕ್ಷಕರಾಗಲಿ, ಸನ್ನಿ ಲಿಯೋನ್ ರಾಜ್ಯಕ್ಕೆ ಬಂದರೆ ನಮ್ಮ ಸಂಸ್ಕೃತಿಗೆ ಧಕ್ಕೆ ಆಗಲಿದೆ ಎನ್ನುವ ಹೋರಾಟಗಾರರಾಗಲಿ ಈವರೆಗೂ ದಾನೇಶ್ವರಿ ಪರವಾಗಿ ಧ್ವನಿ ಎತ್ತುತ್ತಿಲ್ಲ. ಈ ಎಲ್ಲ ಪರಿಸ್ಥಿತಿ ನೋಡಿದ ಮೇಲೆ ನಿಜವಾಗಿಯೂ ಈ ಮೇಲಿನ ಪ್ರಶ್ನೆ ಕಾಡಲಾರಂಭಿಸಿದೆ.

  ಈ ಹೀನಾಯ ಕೃತ್ಯ ನಡೆದು 24 ಗಂಟೆಗಳು ಕಳೆದಿವೆ. ಈವರೆಗೂ ಏನಾಗಿದೆ. ದೌರ್ಜನ್ಯಕ್ಕೊಳಗಾದ ಆ ಹುಡುಗಿ ಹಾಗೂ ಅವರ ಕುಟುಂಬದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಮ್ಮ ಇಡೀ ವ್ಯವಸ್ಥೆ ಯಾವ ಹಂತದವರೆಗೂ ಸಾಗಿದೆ ಎಂಬ ಪ್ರಶ್ನೆ ಹಾಕಿದರೆ ನಮಗೆ ಸಿಗುವ ಉತ್ತರ ಶೂನ್ಯ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯ ಇಂದೆಂದೂ ನೋಡದಂತಹ ಅತ್ಯುತ್ತಮ ಆಡಳಿತ ಕೊಟ್ಟಿದ್ದೇವೆ ಎಂದು ದರ್ಪ ತೋರಿಸುವ ಕಾಂಗ್ರೆಸ್ ನಾಯಕರಾಗಲಿ, ನಾಡಿನ ಸಂಸ್ಕೃತಿ, ಹಿಂದುತ್ವ, ದೇಶಾಭಿಮಾನದ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬಿಜೆಪಿ ನಾಯಕರಾಗಲಿ, ಅನಿಷ್ಟಕ್ಕೆಲ್ಲ ಶನೇಶ್ವರ ಕಾರಣ ಎಂಬ ಮಾತಿನಂತೆ ದೇಶದ ಯಾವ ಮೂಲೆಯಲ್ಲಿ ಏನೇ ಅನಾಹುತವಾದರೂ ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯೇ ಕಾರಣ ಎಂಬಂತೆ ಪ್ರಶ್ನೆ ಮಾಡುವ ಸೋ ಕಾಲ್ಡ್ ಪ್ರಗತಿಪರ ಚಿಂತಕರಾಗಲಿ, ಸನ್ನಿ ಲಿಯೋನ್ ರಾಜ್ಯಕ್ಕೆ ಬಂದರೆ ನಮ್ಮ ಸಂಸ್ಕೃತಿಗೆ ಹಾನಿಯಾಗುತ್ತದೆ ಎಂದು ಬೊಬ್ಬೆ ಹೊಡೆಯುವ ಹೋರಾಟಗಾರರಾಗಲಿ ದಾನೇಶ್ವರಿಗಾದ ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದಾರಾ? ಇಲ್ಲ.

  ಬಾಯಲ್ಲಿ ಅಹಿಂದ ಜಪ ಮಾಡುತ್ತಲೇ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಕ್ಕದ ವಿಜಯಪುರ ಜಿಲ್ಲೆಯಲ್ಲಿದ್ದರೂ ದಾನೇಶ್ವರಿ ಕುಟುಂಬವನ್ನು ಭೇಟಿ ಮಾಡಲು ಮನಸ್ಸು ಮಾಡಿಲ್ಲ. ಇನ್ನು ಹಿಂದು ಕಾರ್ಯಕರ್ತರ ಕೊಲೆಯಾದರೆ ಸರ್ಕಾರಕ್ಕೆ ಮುಂದಿದೆ ಮಾರಿ ಹಬ್ಬ ಎನ್ನುವ ಅನಂತಕುಮಾರ್ ಹೆಗಡೆ ಆಗಲಿ ಬಿಜೆಪಿ ನಾಯಕರಾಗಲಿ ಈ ಕೃತ್ಯ ವಿರೋಧಿಸಿ ಒಂದು ಹೇಳಿಕೆ ನೀಡಿಲ್ಲ. ಮೊನ್ನೆ ಗುಜರಾತಿನಲ್ಲಿ ಬಿಜೆಪಿ ಗೆದ್ದಾಗ ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿ ಟ್ವೀಟ್ ಮಾಡಿದ ಪ್ರಕಾಶ್ ರೈ ಅವರಂಥ ಬುದ್ಧಿಜೀವಿಗಳಿಗೆ ದಾನೇಶ್ವರಿಗಾದ ಅನ್ಯಾಯವನ್ನು ಪ್ರಶ್ನಿಸಿ ಸಿದ್ದರಾಮಯ್ಯನವರನ್ನು ಟೀಕಿಸಲು ಸಮಯವಿಲ್ಲ. ನೀಲಿ ಚಿತ್ರರಂಗದಿಂದ ಹೊರಬಂದು ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಸನ್ನಿ ಲಿಯೋನ್ ವಿರುದ್ಧ ಪ್ರತಿಭಟನೆ ಮಾಡಿದ ಧೀಮಂತ ಹೋರಾಟಗಾರರು ದಾನೇಶ್ವರಿ ಪ್ರಕರಣ ನಡೆದಾಗ ಯಾವ ಬಿಲದಲ್ಲಿ ಅಡಗಿದ್ದಾರೋ ಗೊತ್ತಿಲ್ಲ.

  ಇನ್ನು ಇಂತಹ ಪ್ರಕರಣಗಳು ನಡೆದಾಗ ಜವಾಬ್ದಾರಿ ನಿಭಾಯಿಸಬೇಕಾದ ಅಧಿಕಾರಿಗಳು ಬೇಜವಾಬ್ದಾರಿಯಾಗಿ ನಡೆದುಕೊಳ್ಳುತ್ತಿದ್ದಾರೆ ಜಿಲ್ಲಾ ಎಸ್ಪಿ ಕುಲ್ದೀಪ್ ಅವರು ಈ ಪ್ರಕರಣದ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಾರೆ. ಇಂತಹ ಅಧಿಕಾರಿಗಳು ನಾಯಕರುಗಳನ್ನು ಹೊಂದಿರುವ ನಮ್ಮ ಸಮಾಜ ವ್ಯವಸ್ಥೆಯಲ್ಲಿ ದಾನೇಶ್ವರಿಗೆ ನಿಜಕ್ಕೂ ನ್ಯಾಯಾ ಸಿಗುತ್ತೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಧೈರ್ಯವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಇಷ್ಟು ಹೀನಾಯ ಪರಿಸ್ಥಿತಿಗೆ ಇಳಿದಿರುವ ನಮ್ಮ ಸಮಾಜವನ್ನು ನಾಗರೀಕರೇ ಸರಿಪಡಿಸಿಕೊಳ್ಳಬೇಕು. ರಾಜಕೀಯ ನಾಯಕರನ್ನು ನಂಬಿ ಕೂತರೆ ನಮ್ಮ ವ್ಯವಸ್ಥೆ ಇನ್ನಷ್ಟು ಹಳ್ಳ ಹಿಡಿಯಲಿದೆ. ಹೀಗಾಗಿ ಎಲ್ಲರು ಒಟ್ಟಾಗಿ ಈ ಕೃತ್ಯವನ್ನು ವಿರೋಧಿಸಿ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ.

  Leave a Reply