ಐಪಿಎಲ್ ಆಟಗಾರರ ಹರಾಜು ದಿನಾಂಕ ನಿಗದಿ, ಬೆಂಗಳೂರಿನಲ್ಲೇ ನಡೆಯಲಿದೆ ಹೈವೋಲ್ಟೇಜ್ ಬಿಡ್ಡಿಂಗ್

ಡಿಜಿಟಲ್ ಕನ್ನಡ ಟೀಮ್:

ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿರುವ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ದಿನಾಂಕ ಹಾಗೂ ಸ್ಥಳವನ್ನು ಐಪಿಎಲ್ ಆಡಳಿತ ಮಂಡಳಿ ಪ್ರಕಟಿಸಿದ. ಮುಂದಿನ ವರ್ಷ ಜನವರಿ 27 ಹಾಗೂ 28ರಂದು ಆಟಗಾರರ ಹರಾಜು ಪ್ರಕ್ರಿಯೆಯನ್ನು ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಿದೆ.

ಈ ಬಾರಿಯ ಆಟಗಾರರ ಹರಾಜು ಪ್ರಕ್ರಿಯೆ ಮೆಘಾ ಹರಾಜು ಪ್ರಕ್ರಿಯೆಯಾಗಲಿದೆ ಎಂದು ಬಿಸಿಸಿಐ ತಿಳಿಸಿತ್ತು. ಆದರೆ ಇತ್ತೀಚೆಗೆ ಒಂದು ತಂಡ ಐದು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿರುವುದರಿಂದ ಧೋನಿ, ಕೊಹ್ಲಿ, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ ಆಯಾಯ ತಂಡಗಳಲ್ಲೇ ಉಳಿದುಕೊಳ್ಳಲಿದ್ದಾರೆ. ಆದರೂ ಈ ಬಾರಿ ಸಾಕಷ್ಟು ಅಂತಾರಾಷ್ಟ್ರೀಯ ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದು, ಯಾರು ಯಾವ ತಂಡಕ್ಕೆ ಸೇರಲಿದ್ದಾರೆ, ಯಾವ ಫ್ರಾಂಚೈಸಿಗಳು ಯಾವ ಯಾವ ಆಟಗಾರರನ್ನು ಆಯ್ಕೆ ಮಾಡಿಕೊಂಡು ತಂಡವನ್ನು ಕಟ್ಟಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಆಟಗಾರರನ್ನು ಉಳಿಸಿಕೊಳ್ಳುವ ವಿಧಾನದ ಬಗ್ಗೆ ಈಗಾಗಲೇ ಡಿಜಿಟಲ್ ಕನ್ನಡದಲ್ಲಿ ವರದಿ ಪ್ರಕಟವಾಗಿದ್ದು, ಇಲ್ಲಿ ಮತ್ತೊಂದು ಟ್ವಿಸ್ಟ್ ಏನೆಂದರೆ, ಒಂದು ತಂಡ ಗರಿಷ್ಠ 3 ಭಾರತದ ಅಂತಾರಾಷ್ಟ್ರೀಯ ಆಟಗಾರರು, ಗರಿಷ್ಠ 2 ವಿದೇಶಿ ಆಟಗಾರರು ಹಾಗೂ ಗರಿಷ್ಠ 2 ಪ್ರಥಮದರ್ಜೆ ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದಾಗಿದೆ. ಈ ನಿಯಮ ಯಾವ ತಂಡದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕು.

ಹರಾಜು ಪ್ರಕ್ರಿಯೆಗೂ ಮುನ್ನ ಯಾವ ತಂಡ ಎಷ್ಟು ಆಟಗಾರರನ್ನು ಉಳಿಸಿಕೊಳ್ಳಲಿದೆ, ಆ ಆಟಗಾರರು ಯಾರು ಎಂಬ ಕುತೂಹಲವು ಅಭಿಮಾನಿಗಳಲ್ಲಿ ಹೆಚ್ಚಿದೆ. ಈ ಎಲ್ಲ ಕುತೂಹಲಗಳಿಗೆ ಇನ್ನೊಂದು ತಿಂಗಳಲ್ಲಿ ಬಗೆ ಹರಿಯಲಿದ್ದು, 11ನೇ ಆವೃತ್ತಿಯ ಐಪಿಎಲ್ ನಲ್ಲಿ ಯಾವ ತಂಡ ಯಾವ ಆಟಗಾರರೊಂದಿಗೆ ಕಣಕ್ಕಿಳಿಯಲಿದೆ ಎಂಬುದು ಸ್ಪಷ್ಟವಾಗಲಿದೆ.

ಈಗಾಗಲೇ ಭಾರತದ ಮಾಜಿ ಬೌಲರ್ ಆಶಿಶ್ ನೆಹ್ರಾ ಆರ್ ಸಿಬಿ ತಂಡದ ಮಾರ್ಗದರ್ಶಕರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಆರ್ ಸಿಬಿ ಅಭಿಮಾನಿಗಳು ಈ ಬಾರಿ ತಂಡದಲ್ಲಿ ಯಾವ ಬೌಲರ್ಗಳು ಆಗಮಿಸಲಿದ್ದಾರೆ ಎಂಬ ಕುತೂಹಲ ಹೊಂದಿದ್ದಾರೆ.

Leave a Reply