ಚುನಾವಣೆ ಕಾವು ಹೆಚ್ಚಿದ್ದಂತೆ ಬೆಟ್ಟದಂತಿದ್ದ ಮಹದಾಯಿ ವಿವಾದ ಮಂಜಿನಂತೆ ಕರಗುತ್ತಿದೆ!

ಡಿಜಿಟಲ್ ಕನ್ನಡ ಟೀಮ್:

ಭಾರತದಲ್ಲಿ ಚುನಾವಣೆ ಎಂಬುದು ಎಲ್ಲಾ ಸಮಸ್ಯೆಗಲಿಗೂ ಪರಿಹಾರ ನೀಡುವ ವೇದಿಕೆಯಾಗುತ್ತಿದೆ. ಬಗೆಹರಿಯಲು ಸಾಧ್ಯವೇ ಇಲ್ಲ ಎಂಬಂತಹ ಜನರ ಎಷ್ಟೋ ಸಮಸ್ಯೆಗಳು ಚುನಾವಣೆ ಸಮೀಪಿಸುತ್ತಿದ್ದಂತೆ ಬಗೆಹರಿದು ಬಿಡುತ್ತವೆ. ಅದು ರಸ್ತೆ ಸಮಸ್ಯೆ ಇರಲಿ ಅಥವಾ ವಿದ್ಯುತ್ ಸಮಸ್ಯೆಯೇ ಇರಲಿ ಚುನಾವಣಾ ಕಾಲಘಟ್ಟದಲ್ಲಿ ಎಲ್ಲಾ ಸಮಸ್ಯೆಗಳು ನಾಪತ್ತೆಯಾಗುತ್ತವೆ. ಇದಕ್ಕೆ ಮತ್ತೊಂದು ಉದಾಹರಣೆಯಾಗಲಿದೆ ಮಹದಾಯಿ ನೀರು ಹಂಚಿಕೆ ವಿವಾದ.

ಕಳೆದ ಎರಡೂವರೆ ಮೂರು ವರ್ಷಗಳಿಂದ ಉತ್ತರ ಕರ್ನಾಟಕ ಭಾಗದ ಜನರು ಬೀದಿಗಿಳಿದು ಹೋರಾಟ ನಡೆಸಿದರೂ ಪರಿಹಾರ ಸಿಗದೇ ಬೆಟ್ಟದಂತಿದ್ದ ಸಮಸ್ಯೆ ಚುನಾವಣೆ ಸಮೀಪಿಸುತ್ತಿದ್ದಂತೆ ಮಂಜಿನಂತೆ ಕರಗುತ್ತಿದೆ. ಕಳೆದ ತಿಂಗಳು ನಡೆದ ಚಳಿಗಾಲದ ಅಧಿವೇಶನದಲ್ಲಿ ಮಹದಾಯಿ ನೀರು ವಿಚಾರವಾಗಿ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಚರ್ಚೆ ಆರಂಭವಾದಾಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರು ಮುಂದಿನ ಒಂದು ತಿಂಗಲಲ್ಲಿ ಸಿಹಿ ಸುದ್ದಿ ನೀಡುತ್ತೇವೆ ಎಂಬ ಭರವಸೆ ಕೊಟ್ಟರು. ಅವರ ಆ ಭರವಸೆ ಈಗ ಈಡೇರುವ ಹಂತಕ್ಕೆ ಬಂದು ನಿಂತಿದೆ.

ಕಾರಣ, ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಕರ್ ಹಾಗೂ ರಾಜ್ಯ ಬಿಜೆಪಿ ನಾಯಕರುಗಳು ಭಾಗವಹಿಸಿದ್ದು, ಸಭೆ ಯಶಸ್ವಿಯಾಗಿದೆ. ಮಹದಾಯಿ ನೀರು ವಿಚಾರದಲ್ಲಿ ಗೋವಾ ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದು, ನಾಳೆಯ ಒಳಗಾಗಿ ಅವರು ಪತ್ರದ ಮೂಲಕ ತಿಳಿಸಲಿದ್ದಾರೆ. ಅವರ ನಿರ್ಧಾರವನ್ನು ನಾಳೆ ಹುಬ್ಬಳ್ಳಿಯಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಯಲ್ಲಿ ಘೋಷಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ.

ಮಹದಾಯಿ ನೀರು ಹಂಚಿಕೆ ಸಮಸ್ಯೆ ಕುರಿತಾಗಿ ಕರ್ನಾಟಕ ಹಾಗೂ ಗೋವಾ ರಾಜ್ಯಗಳ ನಡುವಮ ಕಿತ್ತಾಟ ಹೇಗಿತ್ತು ಎಂದರೆ, ಈ ಸಮಸ್ಯೆ ಕುರಿತು ಚರ್ಚೆಯಲ್ಲಿ ಭಾಗವಹಿಸಲು ಗೋವಾ ಮುಖ್ಯಮಂತ್ರಿಗಳು ಬಿಲ್ ಕುಲ್ ಸಿದ್ಧರಿರಲಿಲ್ಲ. ಆದರೆ ಕರ್ನಾಟಕ ಚುನಾವಣೆ ನಮ್ಮ ಮುಂದಿನ ಗುರಿ ಎಂದು ಅಮಿತ್ ಶಾ ಹೇಳಿದ ಕೆಲವೇ ದಿನಗಳಲ್ಲಿ ಈ ಸಮಸ್ಯೆ ಕುರಿತು ಚರ್ಚೆ ನಡೆಸಲು ಅಮಿತ್ ಶಾ ಅವರ ನಿವಾಸವೇ ವೇದಿಕೆಯಾಗಿದೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ಇದು ಬಿಜೆಪಿಯ ಚುನಾವಣಾ ರಣತಂತ್ರದ ಒಂದು ಭಾಗ ಎಂಬುದು ತಿಳಿಯುತ್ತದೆ.

ಕೆಲವೇ ತಿಂಗಳಲ್ಲಿ ಕೇಂದ್ರದ ನಾಯಕರುಗಳೆಲ್ಲಾ ಕರ್ನಾಟಕದಲ್ಲಿ ಪರೇಡ್ ನಡೆಸಿ ಮತ ನೀಡುವಂತೆ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಹೀಗೆ ಮತ ಕೇಳುವಾಗ ಒಂದು ಪ್ರಬಲ ಕಾರಣ ಬಿಜೆಪಿ ನಾಯಕರಿಗೆ ಅಗತ್ಯವಿದೆ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಮಹದಾಯಿ ಸಮಸ್ಯೆ ಬಗೆಹರಿಸಿದ್ದನ್ನೇ ಕರ್ನಾಟಕದಲ್ಲಿ ಚುನಾವಣಾ ಅಸ್ತ್ರವನ್ನಾಗಿ ಬಳಸುವ ಸಾಧ್ಯತೆ ಹೆಚ್ಚಾಗಿದೆ.

ಚುನಾವಣೆ ನೆಪದಲ್ಲಾದರೂ ಉತ್ತರ ಭಾಗದ ಜನರಿಗೆ ಕುಡಿಯುವ ನೀರಿಗೆ ಅಗತ್ಯವಾಗಿದ್ದ ಮಹದಾಯಿ ನೀರು ಬರುತ್ತಿದೆ. ಇನ್ನು ಮುಂದಾದರೂ ಅಲ್ಲಿನ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂಬುದೇ ತೃಪ್ತಿದಾಯಕ ವಿಚಾರ.

Leave a Reply