ಆರ್ ಕೆ ನಗರ ಉಪಚುನಾವಣೆ ಒಂದು ದಿನ ಮುನ್ನ ಜಯಲಲಿತಾ ಅಸ್ಪತ್ರೆ ವಿಡಿಯೋ ಬಹಿರಂಗ, ಇದು ಚುನಾವಣೆಗೆ ದಿನಕರನ್ ಬಳಸಿದ ಅಸ್ತ್ರ 

ಡಿಜಿಟಲ್ ಕನ್ನಡ ಟೀಮ್:

ಜಯಲಲಿತಾ ಅವರ ವಿಧಾನಸಭಾ ಕ್ಷೇತ್ರ ಆರ್ ಕೆ ನಗರದಲ್ಲಿ ಉಪ ಚುನಾವಣೆಯ ಮತದಾನಕ್ಕೆ ಒಂದು ದಿನ ಮುಂಚಿತವಾಗಿ ಜಯಲಲಿತಾ ಅವರು ಆಸ್ಪತ್ರೆಯಲ್ಲಿದ್ದ ವಿಡಿಯೋ ಬಿಡುಗಡೆಯಾಗಿದೆ. ಈ ವಿಡಿಯೋ ಬಿಡುಗಡೆ ಹಿಂದೆ ರಾಜಕೀಯ ಲೆಕ್ಕಾಚಾರ ಇರುವುದು ಸ್ಪಷ್ಟವಾಗಿದೆ. ಟಿಟಿವಿ ದಿನಕರನ್ ಪಾಳೆಯದಿಂದ ಈ ವಿಡಿಯೋ ಬಿಡುಗಡೆಯಾಗಿದ್ದು, ಮತದಾರರನ್ನು ಭಾವನಾತ್ಮಕವಾಗಿ ಸೆಳೆಯಲು ಈ ಯತ್ನ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆರ್ ಕೆ ನಗರ ಉಪ ಚುನಾವಣೆ ಕೇವಲ ಪಕ್ಷ ಪಕ್ಷಗಳ ನಡುವಣ ಹಣಾಹಣಿಯಾಗಿ ಉಳಿದಿಲ್ಲ. ಬದಲಾಗಿ ಎಐಎಡಿಎಂಕೆ ಪಕ್ಷದಲ್ಲಿನ ಒಪಿಎಸ್-ಇಪಿಎಸ್ ಬಣ ಹಾಗೂ ದಿನಕರನ್ ಬಣಗಳ ನಡುವಣ ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿ ಈ ಕ್ಷೇತ್ರದ ಚುನಾವಣೆ ಎಲ್ಲರ ಗಮನ ಸೆಳೆದಿದೆ. ಬಿಡುಗಡೆಯಾದ ಈ ವಿಡಿಯೋದಲ್ಲಿ ಜಯಲಲಿತಾ ಅವರು ಸಾಮಾನ್ಯ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಣ್ಣಿನ ರಸ ಕುಡಿಯುತ್ತಿರುವುದು ದಾಖಲಾಗಿದೆ.

ಜಯಲಲಿತಾ ಅವರು ಸತ್ತು ಒಂದು ವರ್ಷ ಕಳೆದಿದೆ. ಜಯಲಲಿತಾ ಅವರ ಸಾವಿನ ವಿಚಾರವಾಗಿ ಈಗಲೂ ಅನೇಕ ಅನುಮಾನಗಳಿದ್ದು, ಆ ಕುರಿತು ತನಿಖೆ ಕೂಡ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕಳೆದ ಒಂದು ವರ್ಷದಲ್ಲಿ ಬಿಡುಗಡೆಯಾಗದ ವಿಡಿಯೋ, ಮತದಾನದ ಒಂದು ದಿನ ಮುಂಚಿತವಾಗಿ ಬಿಡುಗಡೆಯಾಗಿರುವುದರ ಹಿಂದೆ ರಾಜಕೀಯ ಹೊರತಾಗಿ ಬೇರೆ ಕಾರಣ ಇರುವ ಸಾಧ್ಯತೆ ತೀರಾ ಕಡಿಮೆ.

ಜಯಲಲಿತಾ ಸಾವಿನ ತನಿಖೆ ನಡೆಸುತ್ತಿರುವ ತಂಡಕ್ಕೆ ನೀಡಿದ್ದಾರೆಯೋ ಇಲ್ಲವೋ ಎಂಬ ಅಂಶ ತಿಳಿದು ಬರಬೇಕಿದೆ. ಈ ವಿಡಿಯೋ ಬಿಡುಗಡೆಯಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಚುನಾವಣಾ ಆಯೋಗ ಈ ಕುರಿತು ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.

Leave a Reply