2ಜಿ ಹಗರಣ: ಎ.ರಾಜ-ಕನಿಮೋಳಿ ಸೇರಿ 17 ಆರೋಪಿಗಳು ನಿರ್ದೋಷಿ, ಹಗರಣ ನಡೆದಿದ್ದೇ ಸುಳ್ಳಾ? ಸಿಬಿಐ ಕಡಿದು ಕಟ್ಟೆ ಹಾಕಿದ್ದು ಏನು?

  ಡಿಜಿಟಲ್ ಕನ್ನಡ ಟೀಮ್:

  ದೇಶದ ಇತಿಹಾಸದಲ್ಲಿ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿರುವ 2ಜಿ ಹಗರಣದ ಕುರಿತಂತೆ ಇಂದು ಸಿಬಿಐ ವಿಶೇಷ ನ್ಯಾಯಾಲಯ ಆಶ್ಚರ್ಯಕಾರಿ ತೀರ್ಪು ನೀಡಿದೆ. ಅದೇನೆಂದರೆ, ಈ ಪ್ರಕರಣದಲ್ಲಿ ಆರೋಪಿಯಾಗಿದ್ದ 2008ರ ಯುಪಿಎ ಸರ್ಕಾರದ ಟೆಲಿಕಾಂ ಸಚಿವ ಎ.ರಾಜ ಹಾಗೂ ಕನಿಮೋಳಿ ಸೇರಿದಂತೆ ಇತರ 15 ಆರೋಪಿಗಳು ದೋಷಮುಕ್ತರಾಗಿದ್ದಾರೆ. ಈ ತೀರ್ಪಿನ ನಂತರ ಈ 2ಜಿ ಹಗರಣ ನಡೆದಿದ್ದೇ ಸುಳ್ಳಾ? ಈ ಸುಳ್ಳು ಹಗರಣವನ್ನೇ ಮುಂದಿಟ್ಟುಕೊಂಡು ಭ್ರಷ್ಟಾಚಾರ ಆರೋಪದ ಅಸ್ತ್ರ ಬಳಸಿ ಬಿಜೆಪಿ ಚುನಾವಣೆಯಲ್ಲಿ ಜಯಿಸಿತಾ? ಹಗರಣ ನಡೆದಿದ್ದೇ ಆದರೆ ಲಕ್ಷಾಂತಕ ಕೋಟಿ ಹಣ ನುಂಗಿ ನೀರು ಕುಡಿದವರಾರು? ಹಗರಣದ ಬಗ್ಗೆ ಸಿಬಿಐ ಸರಿಯಾದ ತನಿಖೆ ನಡೆಸಿಲ್ಲವಾ? ಹೀಗೆ ಅನೇಕ ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದೆ ನ್ಯಾಯಾಲಯದ ತೀರ್ಪು.

  ಪ್ರಕರಣ ಬೆಳಕಿಗೆ ಬಂದ 7 ವರ್ಷಗಳ ನಂತರ ತೀರ್ಪು ಪ್ರಕಟವಾಗಿದ್ದು, ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಒಪಿ ಸೈನಿ ಈ ತೀರ್ಪು ಪ್ರಕಟಿಸಿದರು. ಅಲ್ಲದೆ ‘ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧದ ಆರೋಪವನ್ನು ಸಾಬೀತುಪಡಿಸುವಲ್ಲಿ ಸಿಬಿಐ ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ಅಭಿಪ್ರಾಯಪಟ್ಟಿದೆ. ನ್ಯಾಯಾಲಯದ ಈ ಹೇಳಿಕೆ ಪ್ರಕಾರ ಹಗರಣದ ಆರೋಪಿಗಳ ವಿರುದ್ಧದ ಆರೋಪವನ್ನು ಸಾಬೀತುಪಡಿಸಲು ಸಿಬಿಐ ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ.

  2014ರ ಚುನಾವಣೆಯಲ್ಲಿ ಯುಪಿಎ ಸರ್ಕಾರದ ವಿರುದ್ಧ ಈ ಹಗರಣವನ್ನು ಪ್ರಮುಖ ಅಸ್ತ್ರವನ್ನಾಗಿ ಬಿಜೆಪಿ ಬಳಸಿತ್ತು. ಅಲ್ಲದೆ ಚುನಾವಣೆಯಲ್ಲಿ ಭರ್ಜರಿ ಜಯದೊಂದಿಗೆ ಅಧಿಕಾರವನ್ನು ಸಾಧಿಸಿತ್ತು. ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿದೆ ಎನ್ನಲಾಗಿದ್ದ ಹಗರಣದಲ್ಲಿ ಆರೋಪಿಗಳು ದೋಷಮುಕ್ತವಾಗಿರುವುದರಿಂದ ಕಾಂಗ್ರೆಸ್ ನಾಯಕರು ಹಾಗೂ ಗಾಂಧಿ ಕುಟುಂಬ ನಾಯಕರು ನಿರಾಳರಾಗಿದ್ದಾರೆ.

  ಸಿಐಜಿ ತನಿಖೆಯಲ್ಲಿ ಹಗರಣ ನಡೆದಿರುವುದು ಸಾಬೀತಾಗಿದ್ದರೂ ಸಿಬಿಐ ಅದನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲು ವಿಫಲವಾಗಿರೋದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಒಟ್ಟಿನಲ್ಲಿ ದೇಶದಾದ್ಯಂತ ಭ್ರಷ್ಟಾಚಾರದ ವಿರುದ್ಧ ಎದ್ದಿದ್ದ ಹೋರಾಟಕ್ಕೆ ಸಿಬಿಐನ ವೈಫಲ್ಯ ದೊಡ್ಡ ಹಿನ್ನಡೆ ನೀಡಿದೆ.

  Leave a Reply