ಕರ್ನಾಟಕ ಚುನಾವಣೆಗೆ ಬಿಜೆಪಿ ತಂತ್ರಗಾರಿಕೆ ಸಿದ್ಧ, ಮೊದಲ ಅಸ್ತ್ರ ಪ್ರಯೋಗವೇ ಮಹದಾಯಿ ವಿಷಯ!

ಡಿಜಿಟಲ್ ಕನ್ನಡ ಟೀಮ್:

ಗುಜರಾತ್‌ನಲ್ಲಿ ಪ್ರಯಾಸದ ಗೆಲುವಿನ ಬಳಿಕ ಬಿಜೆಪಿ ಕರ್ನಾಟಕದ ಗೆಲುವಿಗೆ ಒಂದಷ್ಟು ಸ್ಟಾರ್ಟಜಿ ಸಿದ್ಧ ಮಾಡಿಕೊಂಡಿದೆ. ಅದರಲ್ಲಿ ಪ್ರಮುಖವಾಗಿರುವುದು ಮಹದಾಯಿ ವಿಚಾರ ಕೂಡ ಒಂದು.

ಹೌದು, ಕಳೆದ ಐದು ಬಾರಿ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರ ನಡೆಸಿ ಅಲ್ಲಿನ ಒಂದಷ್ಟು ಭಾಗದಲ್ಲಿ ಬಿಜೆಪಿ ಮತ ಗಟ್ಟಿಯಾಗಿತ್ತು. ಆದ್ರೆ ಕರ್ನಾಟಕದ ಚಿತ್ರಣ ಗುಜರಾತ್‌ಗಿಂತ ಸಂಪೂರ್ಣ ಭಿನ್ನವಾಗಿದೆ. ಇಲ್ಲಿ ಬೇರೆ ಪಕ್ಷಗಳ ಆರೋಪಕ್ಕಿಂತ ಬಿಜೆಪಿ ಆಂತರಿಕ ಜಗಳದ ಪಕ್ಷ ಎಂದೇ ಬಿಂಬಿತಗೊಂಡಿದೆ. ಆ ಭಾವನೆಯನ್ನು ಮತದಾರರ ತಲೆಯಿಂದ ತೆಗೆಯಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಒಂದಷ್ಟು ಯೋಜನೆ ಹಾಕಿಕೊಂಡಿದ್ದಾರೆ. ಅಂತೆಯೇ, ಇಲ್ಲಿನ‌ ನಾಯಕರಿಗೂ ಕೂಡ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಲೂಸ್‌ ಟಾಕಿಂಗ್‌ಗೆ ಕಡಿವಾಣ ಹಾಕಿಕೊಳ್ಳಬೇಕು ಎಂದು ಖಡಕ್ ಸೂಚನೆ ರವಾನಿಸಿದ್ದಾರೆ.

ಬಿಜೆಪಿಯ ಮೇಲೆ ಭರವಸೆ ಮೂಡಬೇಕಿದ್ದರೆ ಒಗ್ಗಟ್ಟಿನ ಮಂತ್ರ ಪಠಿಸುವುದು ಬಿಜೆಪಿಗೆ ಅವಶ್ಯಕ. ಹೀಗಾಗಿ ಮೊದಲ ಆದ್ಯತೆ ಒಳಜಗಳ, ಮನಸ್ತಾಪ, ತಮ್ಮ ಪಕ್ಷದ ನಾಯಕರ ವಿರುದ್ಧ ಹೇಳಿಕೆ ನೀಡುವುದಕ್ಕೆ ಬ್ರೇಕ್ ಹಾಕಬೇಕು ಎಂದು ಅಮಿತ್‌ ಷಾ ಮತ್ತೊಮ್ಮೆ ಬಿಜೆಪಿ ನಾಯಕರಿಗೆ ಸಂದೇಶ ಕಳುಹಿಸಿದ್ದಾರೆ.

ಬಿಜೆಪಿ‌ನಾಯಕರು ಒಗ್ಗಟ್ಟು ಪ್ರದರ್ಶಿಸಿದರೆ ಒಂದಷ್ಟು ಮತ ಗೆದ್ದಂತೆಯೇ. ಇದರ ಹೊರತಾಗಿ, ಚಾಣಾಕ್ಷ್ಯ ಅಮಿತ್‌ ಷಾ ಹಾಗೂ ಪ್ರಧಾನಿ ಮೋದಿ ಈಗಾಗಲೇ ಒಂದಷ್ಟು ಯೋಜನೆ ಹಾಕಿಕೊಂಡು ರಾಜ್ಯದತ್ತ ಹೆಜ್ಜೆ ಇಟ್ಟಾಗಿದೆ.

ಗುಜರಾತ್ ಚುನಾವಣೆ ಪ್ರಚಾರದಲ್ಲಿ ಇಡೀ ಕೇಂದ್ರ ಸರಕಾರವೇ ಬೀಡುಬಿಟ್ಟಿತ್ತು. 20ಕ್ಕೂ ಹೆಚ್ವು ಕೇಂದ್ರ ಸಚಿವರು, ಸಂಸದರು ಗುಜರಾತ್‌ ಮೂಲೆ ಮೂಲೆಯೂ ಪ್ರಚಾರ ನಡೆಸಿದ್ದರು. ಇದೀಗ ಕೇಂದ್ರ ಸಚಿವರುಗಳು ರಾಜ್ಯದತ್ತ ಮುಖ ಮಾಡಲಿದ್ದಾರೆ. ಕೇಂದ್ರ ಗೃಹ ಸಚಿವ ರಾಮನಾಥ ಸಿಂಗ್ ಮೊನ್ನೆಯಷ್ಟೇ ರಾಜ್ಯಕ್ಕೆ ಭೇಟಿ ನೀಡಿ ಬಿರುಸಿನ ಪ್ರಚಾರದಲ್ಲಿ ಪಾಲ್ಗೊಂಡು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರು. ಅದೇರೀತಿ ನಿತಿನ್ ಗಡ್ಕರಿ ಸೇರಿದಂತೆ ಇನ್ನಷ್ಟು ಸಚಿವರು ಬರುವ ನಿರೀಕ್ಷೆ ಇದೆ.

ಇನ್ನು, ಉತ್ತರ ಪ್ರದೇಶದಲ್ಲಿ ತಮ್ಮ ಆಡಳಿತದ ಮೂಲಕ ಚಲನ ಮೂಡಿಸುತ್ತಿರುವ ಸಿಎಂ ಯೋಗಿ ಆದಿತ್ಯನಾಥ ಕೂಡ ರಾಜ್ಯದಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನವೆಂಬರ್ ತಿಂಗಳಿನಿಂದ ಪ್ರಾರಂಭಗೊಂಡಿರುವ ನವಕರ್ನಾಟಕ ಪರಿವರ್ತನಾ ಯಾತ್ರೆಗೆ ನಿಜವಾದ ಬಲ ಬರುವುದೇ ಜನವರಿ ಬಳಿಕ. ಜನವರಿಯಲ್ಲಿ ಎರಡು ಬೃಹತ್ ಸಮಾವೇಶ ನಡೆಯಲಿದ್ದು ಇದರಲ್ಲಿ ಬಿಜೆಪಿಯ ಬಲಿಷ್ಠ ನಾಯಕರುಗಳ ದಂಡು ರಾಜ್ಯಕ್ಕೆ ಆಗಮಿಸಲಿದೆ. ಇದರಿಂದ ಬಿಜೆಪಿಯ ಆತ್ಮಬಲ ಮತ್ತಷ್ಟು ವೃದ್ದಿಯಾಗಲಿದೆ.

ಕರ್ನಾಟಕದ ಜನರನ್ನು ಭಾವನಾತ್ಮಕವಾಗಿ ಸೆಳೆಯಲು ಇದೀಗ ಮಹದಾಯಿ ನದಿ ನೀರು ಹಂಚಿಕೆ ಅಸ್ತ್ರವನ್ನು ಬಿಜೆಪಿ ಪ್ರಯೋಗಿಸಲು ಹೊರಟಿದೆ. ಇದು ರಾಜ್ಯ ರಾಜಕೀಯದ ಸಂಪೂರ್ಣ ಚಿತ್ರಣವನ್ನು ಬದಲಿಸುವುದರಲ್ಲಿ ಸಂಶಯವಿಲ್ಲ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜನರು ಮಹದಾಯಿ ಸಮಸ್ಯೆ‌ ನೀಗಿಸಿದರೆ ಅವರ ಸಂಪೂರ್ಣ ಮತ ಬಿಜೆಪಿಯ ಪಾಲಾಗುವುದರಲ್ಲಿ ಅನುಮಾನವಿಲ್ಲ. ಮೇನಲ್ಲಿ ನಡೆಯಲಿರುವ ಚುನಾವಣೆಯ ಮೊದಲ ಹೆಜ್ಜೆಯಾಗಿ ಬಿಜೆಪಿ‌ ಮಹದಾಯಿ ಬಾಣ ಬಿಟ್ಟಿದ್ದು, ಮುಂದಿನ ದಿನಗಳಲ್ಲಿ ಮತ ಸೆಳೆಯುವ ನಿಟ್ಟಿನಲ್ಲಿ ತಮ್ಮ ಬತ್ತಳಿಯಲ್ಲಿರುವ ಮತ್ತಷ್ಟು ಬಾಣ ಬಿಡಲು ಸಜ್ಜಾಗುತ್ತಿದೆ.

Leave a Reply