ಸನ್ನಿ ಲಿಯೋನ್ ಕಾರ್ಯಕ್ರಮ ಅನುಮತಿ ರದ್ದು ಮಾಡಿದ್ದನ್ನು ಪ್ರಶ್ನಿಸಿದ ಹೈ ಕೋರ್ಟ್, ಮತ್ತೆ ಅರ್ಜಿ ಸಲ್ಲಿಸುವಂತೆ ಆಯೋಜಕರಿಗೆ ಸೂಚನೆ

  ಡಿಜಿಟಲ್ ಕನ್ನಡ ಟೀಮ್:

  ಹೊಸ ವರ್ಷಾಚರಣೆ ವೇಳೆ ಬಾಲಿವುಡ್ ತಾರೆ ಸನ್ನಿ ಲಿಯೋನ್ ಅವರ ಕಾರ್ಯಕ್ರಮಕ್ಕೆ ಅನುಮತಿ ನೀಡದಿರುವ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕ್ರಮವನ್ನು ಹೈಕೋರ್ಟ್ ಪ್ರಶ್ನಿಸಿದೆ. ಅಲ್ಲದೆ ಕಾರ್ಯಕ್ರಮಕ್ಕೆ ಅನುಮತಿ ಕೋರಿ ಮತ್ತೆ ಅರ್ಜಿ ಸಲ್ಲಿಸುವಂತೆ ಆಯೋಜಕರಿಗೆ ಸೂಚನೆ ನೀಡಿದ್ದು, ಈ ಅರ್ಜಿಗೆ ಡಿ.25ರ ಒಳಗಾಗಿ ಪೊಲೀಸ್ ಆಯುಕ್ತರು ಅನುಮತಿ ನೀಡುವಂತೆ ಸೂಚನೆ ನೀಡಿದೆ.

  ನ್ಯಾಯಾಲಯದ ಈ ಆದೇಶ ಸನ್ನಿ ಲಿಯೋನ್ ಕಾರ್ಯಕ್ರಮ ರದ್ದಿನಿಂದ ನಿರಾಸೆಗೊಂಡಿದ್ದ ಅಭಿಮಾನಿಗಳಿಗೆ ಮತ್ತೆ ಸಂತೋಷ ತಂದಿದೆ.

  ಕೆಲ ದಿನಗಳ ಹಿಂದೆ ಸನ್ನಿ ಲಿಯೋನ್ ಕಾರ್ಯಕ್ರಮದ ಕುರಿತು ರಾಜ್ಯದಲ್ಲಿ ಸಾಕಷ್ಟು ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ, ನನಗೆ ಭದ್ರತೆ ಮುಖ್ಯವೇ ಹೊರತು ಕಾರ್ಯಕ್ರಮವಲ್ಲ. ಹೀಗಾಗಿ ನಾನು ಬೆಂಗಳೂರಿಗೆ ಬರುವುದಿಲ್ಲ ಎಂದು ಹೇಳಿದ ಸನ್ನಿ ತನ್ನ ಜವಾಬ್ದಾರಿಯನ್ನು ಮೆರೆದರು. ಇತ್ತ ಪೊಲೀಸ್ ಇಲಾಖೆ ನಿರ್ಧಾರವನ್ನು ಕಾರ್ಯಕ್ರಮದ ಆಯೋಜಕರಾದ ಟೈಮ್ಸ್ ಕ್ರಿಯೇಷನ್ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಇಂದು ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಕಾರ್ಯಕ್ರಮ ಅನುಮತಿ ನಿರಾಕರಣೆಗೆ ಕಾರಣ ನೀಡುವಂತೆ ಸರ್ಕಾರಕ್ಕೆ ತಾಕೀತು ಮಾಡಿದೆ.

  ಸನ್ನಿ ಕಾರ್ಯಕ್ರಮಕ್ಕೆ ಕೆಲವು ಸಂಘಟನೆ ವಿರೋಧ ವ್ಯಕ್ತಪಡಿಸಿದ ಪರಿಣಾಮ ಗೃಹ ಸಚಿವ ರಾಮಲಿಂಗಾ ರೆಡ್ಡಿ ನಾಡಿನ ಸಂಸ್ಕೃತಿಗೆ ಧಕ್ಕೆಯಾಗಲಿದೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದರೂ ರದ್ದುಗೊಳಿಸುವಂತೆ ನಿರ್ದೇಶನ ನೀಡುವುದಾಗಿ ತಿಳಿಸಿದರು. ಗೃಹ ಸಚಿವರ ಅಪ್ಪಣೆಯಂತೆ ಕೇರಳದ ಘಟನೆ ಮುಂದಿಟ್ಟುಕೊಂಡು ಕಾರ್ಯಕ್ರಮಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ತನ್ನ ಅಸಮರ್ತತೆಯನ್ನು ತೋರಿಸಿಕೊಂಡಿತ್ತು. ಈಗ ನ್ಯಾಯಾಲಯದಲ್ಲಿ ಅದ್ಯಾವ ಸಬೂಬು ಹೇಳಿ ತನ್ನ ನಿರ್ಧಾರವನ್ನು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಸಮರ್ಥಿಸಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.

  ಇಂದು ನಡೆದ ವಿಚಾರಣೆಯಲ್ಲಿ ‘ಕಾರ್ಯಕ್ರಮಕ್ಕೆ ಈಗಾಗಲೇ ಎರಡು ಕೋಟಿ ವೆಚ್ಚ ಮಾಡಲಾಗಿದೆ. ಸಾವಿರಾರು ಟಿಕೇಟ್ ಗಳು ಮಾರಾಟವಾಗಿವೆ’ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು. ಆಗ ಈ ಬಗ್ಗೆ ನಾನು ಪತ್ರಿಕೆಗಳಲ್ಲಿ ಓದಿದ್ದೇನೆ, ಆಕೆ ಬರೋದಿಲ್ಲವೆಂದು ಹೇಳಿದ್ದಾರೆ ಅಲ್ವಾ ಎಂದು ನ್ಯಾಯಮೂರ್ತಿಗಳು ಪ್ರತಿಕ್ರಿಯೆ ನೀಡಿದರು. ಇದಕ್ಕೆ ಉತ್ತರಿಸಿದ ವಕೀಲರು, ‘ಕೆಲವು ಸಂಘಟನೆಗಳು ಕಾರ್ಯಕ್ರಮಕ್ಕೆ ಅಡ್ಡಿಪಡಿಸುತ್ತಿವೆ, ನಾವು ಪೊಲೀಸ್ ಇಲಾಖೆಗೆ ಡಿಸೆಂಬರ್ 1 ರಂದೇ ಅರ್ಜಿ ಸಲ್ಲಿಸಿದ್ದೇವೆ ಇನ್ನೂ ಅನುಮತಿ ಸಿಕ್ಕಿಲ’ ಎಂದರು.

  ನಂತರ ಸರ್ಕಾರ ಪರ ವಕೀಲರನ್ನು ಪ್ರಶ್ನಿಸಿದ ನ್ಯಾಯಮೂರ್ತಿಗಳು, ‘ಆಯೋಜಕರು ಸಲ್ಲಿಸಿದ್ದ ಅರ್ಜಿ ಮೇಲೆ ಏನು ಕ್ರಮಕೈಗೊಂಡಿದ್ದೀರಿ, ಒಂದು ತಿಂಗಳಿನಿಂದ ಯಾಕೆ ಅವರ ಅರ್ಜಿ ವಿಲೇವಾರಿ ಮಾಡದೆ ಸುಮ್ಮನಿದ್ದೀರಿ. ಇದೇ ರೀತಿಯ ಬೇರೆ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ, ಆದರೆ ನಮಗೆ ಮಾತ್ರ ಅನುಮತಿ ನೀಡುತ್ತಿಲ್ಲ ಎಂದು ಆಯೋಜಕರ ಆರೋಪ. ಇತರೆ ಆಯೋಜಕರಿಗೆ ಅನುಮತಿ ನೀಡಿದ ಮೇಲೆ ಇವರಿಗೆ ಯಾಕೆ ಅನುಮತಿ ನೀಡುತ್ತಿಲ್ಲ? ಇಲ್ಲಿಯವರೆಗೆ ಎಷ್ಟು ಕ್ಲಬ್‌ಗಳಿಗೆ ಅನುಮತಿ ನೀಡಲಾಗಿದೆ..? ಇವರ ಅರ್ಜಿ ಮೇಲೆ ನೀವು ಕೈಗೊಂಡಿರುವ ಕ್ರಮದ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿ’ ಎಂದು ನ್ಯಾಯಾಲಯ ಸೂಚಿಸಿತು.

  ಮತ್ತೆ ವಿಚಾರಣೆ ಆರಂಭವಾದಾಗ ‘ನಮ್ಮ ಕಾರ್ಯಕ್ರಮದಿಂದ ಕಾನೂನು ಸಮಸ್ಯೆ ಎದುರಾಗಲ್ಲ’ ಎಂದು ಅರ್ಜಿದಾರರ ಪರ ವಕೀಲ ಉದಯ್ ಹೊಳ್ಳ ವಾದ ಮಾಡಿದರು. ನಂತರ ಡಿಸೆಂಬರ್ 31 ರಂದು ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ನೀಡಿಲ್ಲ ಎಂದು ಸರ್ಕಾರ ಪರ ವಕೀಲರು ಪ್ರಮಾಣ ಪತ್ರ ನೀಡಿದರು. ಆಗ ರಸಮಂಜರಿ ಕಾರ್ಯಕ್ರಮಕ್ಕೆ ಏಕೆ ಅಡ್ಡಿ ಮಾಡುತ್ತಿದ್ದೀರಿ ಎಂದು ಸರ್ಕಾರಕ್ಕೆ ಹೈಕೋರ್ಟ್ ತರಾಟೆ ತೆಗೆದುಕೊಂಡಿತಲ್ಲದೇ, ಕಾರ್ಯಕ್ರಮಕ್ಕೆ ಅನುಮತಿ ಕೋರಿ ಮತ್ತೆ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲು ಅರ್ಜಿದಾರರಿಗೆ ತಿಳಿಸಿತು. ಜತೆಗೆ ಪೊಲೀಸ್ ಆಯುಕ್ತರು 25 ರೊಳಗಾಗಿ ಅನುಮತಿ ಬಗ್ಗೆ ಕ್ರಮ ಕೈಗೊಳ್ಳಬೇಕು. ಅನುಮತಿ ಸಿಗದಿದ್ದರೆ ಮತ್ತೆ ಕೋರ್ಟ್ ಗೆ ಅರ್ಜಿ ಸಲ್ಲಿಸಿ ಎಂದು ನ್ಯಾಯಮೂರ್ತಿಗಳು ಸೂಚನೆ ಕೊಟ್ಟರು.

  Leave a Reply