ತಾನು ನಿಜವಾದ ಕಿರಿಕ್ ಪಾರ್ಟಿ ಎಂದು ಸಾಬೀತು ಮಾಡಿದ ಸಂಯುಕ್ತ!

ಡಿಜಿಟಲ್ ಕನ್ನಡ ಟೀಮ್:

ಸ್ಯಾಂಡಲ್ ವುಡ್ ನಲ್ಲಿ ಕಿರ್ಕ್ ಪಾರ್ಟಿ ಚಿತ್ರದ ಮೂಲಕ ಎಂಟ್ರಿ ಕೊಟ್ಟ ನಟಿ ಸಂಯುಕ್ತಾ ಹೆಗಡೆ, ತಮ್ಮ ನಿಜ ಜೀವನದಲ್ಲೂ ದೊಡ್ಡ ಕಿರಿಕ್ ಪಾರ್ಟಿ ಎಂಬುದನ್ನು ಸಾಬೀತು ಮಾಡಿದ್ದಾರೆ. ಕಾಲೇಜ್ ಕುಮಾರ ಚಿತ್ರದ ನಿರ್ಮಾಪಕರ ಜತೆಗಿನ ಜಗಳದಿಂದ ಹಿಡಿದು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿ ಸಮೀರ್ ಆಚಾರ್ಯ ಮೇಲೆ ಕೈ ಮಾಡುವವರೆಗೂ ತಾನು ನಿಜವಾದ ಕಿರಿಕ್ ಹುಡುಗಿ ಎಂಬುದನ್ನು ಸಾಬೀತು ಮಾಡಿದಿದ್ದಾರೆ.

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಿನಿಂದಲೂ ಎಲ್ಲಾ ಸ್ಪರ್ಧಿಗಳಿಗೂ ತಮ್ಮ ದರ್ಪದ ಮಾತುಗಳಿಂದ ಕೆಣಕುತ್ತಿದ್ದ ಸಂಯುಕ್ತಾ, ವಿನಾಕಾರಣ ಇತರೆ ಸ್ಪರ್ಧಿಗಳೊಂದಿಗೆ ಜಗಳಕ್ಕೆ ನಿಲ್ಲುತ್ತಿದ್ದರು. ತಮ್ಮ ಸ್ನೇಹಿತೆ ಎಂದು ಹೇಳಿಕೊಳ್ಳುವ ಲಾಸ್ಯ ಜತೆಗೂ ಈಕೆಯ ಜಗಳ ನೋಡಿ ಪ್ರೇಕ್ಷಕರು ಇವರಿಬ್ಬರೂ ಸ್ನೇಹಿತರೋ ದುಷ್ಮನ್ ಗಳೋ ಎಂಬ ಗೊಂದಲಕ್ಕೆ ಒಳಗಾದರು.

ಕಳೆದ ಶನಿವಾರ ವಾರದ ಕಥೆ ಕಿಚ್ನಿಚನ ಜತೆ ಸಂಚಿಕೆಯಲ್ಲಿ ಸುದೀಪ್ ಅವರಿಂದ ಬುದ್ಧಿವಾದ ಹೇಳಿಸಿಕೊಂಡಿದ್ದ ಸಂಯುಕ್ತಾ ಅದನ್ನು ಪಾಲಿಸುವುದನ್ನು ಸಂಪೂರ್ಣವಾಗಿ ಮರೆತಿದ್ದಾರೆ. ತಮ್ಮ ಕೋಪ, ದರ್ಪವನ್ನು ಮುಂದುವರಿಸಿದ್ದಾರೆ. ಪರಿಣಾಮ ಟಾಸ್ಕ್ ವೇಳೆ ಸಮೀರ್ ಆಚಾರ್ಯ ಮೇಲೆ ಕೈ ಮಾಡಿದ್ದಾರೆ. ತಮ್ಮ ಈ ವರ್ತನೆಗೆ ತಕ್ಕೆ ಬೆಲೆ ತೆತ್ತಿದ್ದು, ಸಂಯುಕ್ತಾ ಬಿಗ್ ಬಾಸ್ ಮನೆಯಿಂದ ಹೀನಾಯವಾಗಿ ಹೊರಬಂದಿದ್ದಾರೆ.

ಈ ವೇಳೆ ಸಮೀರ್ ಆಚಾರ್ಯ ಅವರ ನಡವಳಿಕೆ ಅಭಿಮಾನಿಗಳ ಪ್ರಶಂಸೆಗೆ ಪಾತ್ರವಾಗಿದೆ. ಸಂಯುಕ್ತಾ ತಮ್ಮ ಎಲ್ಲೆ ಮೀರಿದರೂ ಸಮೀರ್ ಆ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದರು. ಅಲ್ಲದೆ ಸಂಯುಕ್ತಾ ಹೊರಗೆ ಹೋಗುವಾಗ ಈ ರೀತಿ ಮತ್ತೆಂದೂ ಯಾರ ಮೇಲೂ ಕೈ ಮಾಡದಂತೆ ಮಾತು ಪಡೆದಿದ್ದು, ಸಮೀರ್ ಅವರ ಮೇಲಿನ ಅಭಿಮಾನ ಹೆಚ್ಚುವಂತೆ ಮಾಡಿದೆ. ಕಳೆದ ಮೂರು ಆವೃತ್ತಿಗಳಿಂದಲೂ ಸ್ಪರ್ಧಿಗಳ ಮೇಲೆ ಹಲ್ಲೆಯಾಗಿರೋದು ಕಾಕತಾಳಿಯವಾದರೂ ಅದೇ ವೇಳೆ ಇದು ಟಿಆರ್ ಪಿಯ ಗಿಮಿಕ್ ಇರಬಹುದಾ ಎಂಬ ಅನುಮಾನವನ್ನೂ ಹುಟ್ಟುಹಾಕಿದೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆಗೆ ಹೋಗಿ ಗೌರವ ಹಾಗೂ ಅಭಿಮಾನಿಗಳನ್ನು ಹೆಚ್ಚಿಸಿಕೊಳ್ಳುವ ಬದಲು ಕಳೆದುಕೊಂಡು ಬಂದಿದ್ದಾರೆ ಸಂಯುಕ್ತಾ.

Leave a Reply