ಮುಖ್ಯಮಂತ್ರಿಯಾಗಿ ಮುಂದುವರಿದ ವಿಜಯ್ ರುಪಾನಿ, ಉಪ ಮುಖ್ಯಮಂತ್ರಿಯಾದ್ರು ನಿತೀನ್ ಪಟೇಲ್

ಡಿಜಿಟಲ್ ಕನ್ನಡ ಟೀಮ್:

ಗುಜರಾತ್ ಮುಖ್ಯಮಂತ್ರಿ ಯಾರಾಗ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಗುಜರಾತಿನಲ್ಲಿ ಬಿಜೆಪಿ ಪ್ರಯಾಸದ ಜಯ ಸಾಧಿಸಿದ ಬಳಿಕ ಕಳೆದ ಮೂರ್ನಾಲ್ಕು ದಿನಗಳಿಂದ ಗುಜರಾತ್ ಮುಖ್ಯಮಂತ್ರಿ ಸ್ಥಾನವನ್ನು ಯಾರು ಅಲಂಕರಿಸಲಿದ್ದಾರೆ ಎಂಬ ಕುತೂಹಲ ಮೂಡಿತ್ತು. ಇಂದು ನಡೆದ ಶಾಸಕಾಂಗ ಸಭೆಯಲ್ಲಿ ವಿಜಯ್ ರುಪಾನಿ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮುಂದುವರಿಸಲು ನಿರ್ಧರಿಸಿದ್ದು, ಪಟೇಲ್ ಸಮುದಾಯದ ನಾಯಕ ನಿತೀನ್ ಪಟೇಲ್ ಅವರಿಗೆ ಉಪಮುಖ್ಯಮಂತ್ರಿ ಪಟ್ಟ ಕಟ್ಟಲಾಗಿದೆ.

ಈ ಬಾರಿಯ ಚುನಾವಣೆಯಲ್ಲಿ ಪಟೇಲ್ ಸಮುದಾಯ ಮಹತ್ವದ ಪಾತ್ರ ವಹಿಸಿತ್ತು. ಪಟೇಲ್ ಸಮುದಾಯ ಮೀಸಲಾತಿ ವಿಷಯದಲ್ಲಿ ತೋರಿದ ಆಕ್ರೋಶ ಬಿಜೆಪಿಗೆ ಮುಳುವಾಗುವ ನಿರೀಕ್ಷೆ ಮೂಡಿಸಿತ್ತು. ಆದರೆ ಪೂರ್ಣ ಪ್ರಮಾಣದ ಪಟೇಲ್ ಸಮುದಾಯ ಬಿಜೆಪಿ ವಿರುದ್ಧ ನಿಲ್ಲಲಿಲ್ಲ. ಪರಿಣಾಮ ಬಿಜೆಪಿ ಸರಳ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿತ್ತು.

ಇದಕ್ಕೂ ಮೊದಲು ಗುಜರಾತಿನಲ್ಲೂ ಉತ್ತರ ಪ್ರದೇಶ ಮಾದರಿಯಲ್ಲಿ ಇಬ್ಬರು ಉಪ ಮುಖ್ಯಮಂತ್ರಿ ಹೊಂದುವ ಚರ್ಚೆ ನಡೆದಿತತ್ತು. ಆ ಪ್ರಕಾರ ಪಟೇಲ್ ಸಮುದಾಯ ಹಾಗೂ ಆದಿವಾಸಿ ಸಮುದಾಯದ ನಾಯಕರಿಗೆ ಈ ಹುದ್ದೆ ನೀಡುವ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಆದರೆ ಅಂತಿಮವಾಗಿ ಒಂದೇ ಉಪ ಮುಖ್ಯಮಂತ್ರಿ ಸ್ಥಾನ ಕಲ್ಪಿಸಿ ಅದನ್ನು ನಿತೀನ್ ಪಟೇಲ್ ಅವರಿಗೆ ನೀಡಲಾಗಿದೆ.

ಮುಂದಿನ ಒಂದೂವರೆ ವರ್ಷದಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ರೈತರ ಸಮಸ್ಯೆ, ಪಾಟೀದಾರ್ ಸಮುದಾಯದ ಬಿಕ್ಕಟ್ಟು, ಹತ್ತಿ ಬೆಳೆಗಾರರ ಸಮಸ್ಯೆ ಹಾಗೂ ಉದ್ಯಮದಾರರ ಕುರಿತಾಗಿ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ಒಂದೂವರೆ ವರ್ಷದ ಅವಧಿಯಲ್ಲಿ ಈ ಚುನಾವಣೆಗಿಂತ ಉತ್ತಮ ರೀತಿಯಲ್ಲಿ ಜಯ ಸಾಧಿಸಬೇಕು ಎಂಬುದು ಬಿಜೆಪಿ ಗುರಿಯಾಗಿದೆ. ಗುಜರಾತ್ ನಿಂದಲೇ 26 ಲೋಕಸಭಾ ಸ್ಥಾನಗಳಿರುವುದರಿಂದ ಮುಂದಿನ 18 ತಿಂಗಳಲ್ಲಿ ಈ ರಾಜ್ಯದಲ್ಲಿ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಈ ಜವಾಬ್ದಾರಿಯನ್ನು ರುಪಾನಿ ಹಾಗೂ ನಿತೀನ್ ಪಟೇಲ್ ಅವರ ಹೆಗಲಿಗೆ ವಹಿಸಿದೆ.

Leave a Reply