‘ಅಧಿಕಾರದ ಸ್ವಾರ್ಥಕ್ಕೆ ಜನರಿಗೆ ಟೋಪಿ ಹಾಕ್ಬೇಡಿ’ ಮಹದಾಯಿ ವಿಚಾರವಾಗಿ ಯಡಿಯೂರಪ್ಪ ವಿರುದ್ಧ ಕುಮಾರಸ್ವಾಮಿ ಟೀಕೆ

ಡಿಜಿಟಲ್ ಕನ್ನಡ ಟೀಮ್:

ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಹದಾಯಿ ವಿಷಯವನ್ನು ಮುಂದಿಟ್ಟುಕೊಂಡು ಜನರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಈ ವಿಚಾರವಾಗಿ ಕಳೆದೆರಡು ದಿನಗಳಿಂದ ಕರ್ನಾಟಕ ಹಾಗೂ ಗೋವಾದಲ್ಲಿ ಕೆಲವು ನಾಟಕೀಯ ಬೆಳವಣಿಗೆಗಳೂ ನಡೆದಿವೆ. ಬಿಜೆಪಿಯ ಈ ಮೇಲಾಟದ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪನವರು ನಿನ್ನೆ ಹುಬ್ಬಳ್ಳಿಯಲ್ಲಿ ನಡೆದ ಪರಿವರ್ತನಾ ಸಮಾವೇಶದಲ್ಲಿ ಮಹದಾಯಿ ವಿಚಾರವಾಗಿ ಸಿಹಿ ಸುದ್ದಿ ಪ್ರಕಟಿಸುತ್ತೇವೆ ಎಂದು ತಿಳಿಸಿದ್ದರು. ಆದರೆ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕರ್ ಉಲ್ಟಾ ಹೊಡೆದ ಪರಿಣಾಮ ನಿನ್ನೆ ಈ ಬಗ್ಗೆ ಯಾವುದೇ ಅಧಿಕೃತ ನಿರ್ಧಾರ ಬರಲಿಲ್ಲ. ಹೀಗಾಗಿ ಮುಜುಗೊರದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ ಬಿಎಸ್ ಯಡಿಯೂರಪ್ಪ, ‘ಕಳಸಾ ಬಂಡೂರಿ ಯೋಜನೆಗೆ ನೂರು ಕೋಟಿ ರುಪಾಯಿ ಬಿಡುಗಡೆ ಮಾಡಿದ್ದು ನಾನು. ಆಗ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಅಡ್ಡಗಾಲು ಹಾಕಿದ್ದರು’ ಎಂದು ಆರೋಪಿಸಿದರು. ಯಡಿಯೂರಪ್ಪನವರ ಈ ಆರೋಪಕ್ಕೆ ಪ್ರತಿಯಾಗಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಮಹದಾಯಿ ವಿಚಾರದಲ್ಲಿ ಬಿಜೆಪಿ ನಡೆಸುತ್ತಿರುವ ನಾಟಕದ ಕುರಿತಾಗಿ ಟೀಕಾ ಪ್ರಹಾರ ನಡೆಸಿದರು. ಈ ವಿಚಾರವಾಗಿ ಕುಮಾರಸ್ವಾಮಿ ಮಾಡಿದ ಟೀಕೆ ಹೀಗಿದೆ…

‘ಕಳಸಾ ಬಂಡೂರಿ ಯೋಜನೆಗೆ ನಾನು ಅಡ್ಡಗಾಲು ಹಾಕಿದ್ದೆ ಎಂದು ಯಡಿಯೂರಪ್ಪನವರು ಆರೋಪಿಸುತ್ತಿದ್ದಾರೆ. ಆದರೆ ಆ ಯೋಜನೆಗೆ ಹಣ ಬಿಡುಗಡೆ ಮಾಡಿದ್ದು ನಾನು. ಆ ಸಂದರ್ಭದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಈಶ್ವರಪ್ಪ ಅವರು ಏನು ಹೇಳಿದ್ದರು ಎಂಬುದನ್ನು ಅವಲೋಕನ ಮಾಡಿಕೊಳ್ಳುವುದು ಉತ್ತಮ. ಈ ಯೋಜನೆಗೆ ಚಾಲನೆ ಕೊಟ್ಟಿದ್ದು ನಾನು. ಮುಖಯಮಂತ್ರಿಗಳ ಅನುಮತಿ ಇಲ್ಲದೆ ಯಾವುದೇ ವಿಷಯ ಕ್ಯಾಬಿನೆಟ್ ನಲ್ಲಿ ಚರ್ಚೆ ಆಗುವುದಿಲ್ಲ. ಈಗ ಈ ರೀತಿ ಹೇಳುತ್ತಿರುವ ಯಡಿಯೂರಪ್ಪನವರಿಗೆ ನಾಚಿಕೆಯಾಗಬೇಕು. ಜತೆಗೆ ಅವರು ಡಬಲ್ ಗೇಮ್ ಆಡುವುದನ್ನೂ ನಿಲ್ಲಿಸಬೇಕು. ಇನ್ನು ಎಷ್ಟು ವರ್ಷ ರಾಜ್ಯದ ಜನರ ದಾರಿ ತಪ್ಪಿಸುತ್ತೀರಿ?

ನಾಡು, ನುಡಿ, ಭಾಷೆ ವಿಚಾರದಲ್ಲಿ ನಾನು ಎಂದಿಗೂ ರಾಜಕೀಯ ಮಾಡಿಲ್ಲ. ಮಾಡುವುದೂ ಇಲ್ಲ. ಆದರೆ, ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಮಹದಾಯಿ ವಿಚಾರವನ್ನು ಮುಂದಿಟ್ಟುಕೊಂಡು, ಬಿಜೆಪಿ ನಾಯಕರು ಅಧಿಕಾರದ ಸ್ವಾರ್ಥಕ್ಕೆ ಜನರಿಗೆ ಟೋಪಿ ಹಾಕುವ ಯತ್ನದಲ್ಲಿದ್ದಾರೆ. ಈ ವಿಚಾರದಲ್ಲಿ ಪರಿಕರ್, ಅಮಿತ್ ಶಾ ಹಾಗೂ ಯಡಿಯೂರಪ್ಪನವರು ಆಟವಾಡುತ್ತಿದ್ದಾರೆ.

ಮಹದಾಯಿ ಪರಿಕರ್ ಅಥವಾ ಯಡಿಯೂರಪ್ಪನವರ ಆಸ್ತಿ ಅಲ್ಲ. ಪರಿಕರ್ ಅವರಿಗೆ ಸಿಎಂ ಸಿದ್ದರಾಮಯ್ಯ ಅವರ ಮೇಲೆ ನಂಬಿಕೆ ಇಲ್ಲವಂತೆ. ಆದರೆ ಸಿದ್ದರಾಮಯ್ಯ ಒಂದು ಪಕ್ಷದ ಮುಖ್ಯಮಂತ್ರಿ ಅಲ್ಲ. ಬದಲಿಗೆ ಆರೂವರೆ ಕೋಟಿ ಕನ್ನಡಿಗರ ಮುಖ್ಯಮಂತ್ರಿ ಎಂಬುದನ್ನು ಮರೆಯಬಾರದು. ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆಯುವ ಬದಲು ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ. ಇದರಿಂದ ಆಗುವ ಪ್ರಯೋಜನವೇನು. ಯಡಿಯೂರಪ್ಪ ರಕ್ತ ಸುರಿಸಿದರೂ ನಾಳೆ ಬೆಳಗ್ಗೆ ಮಹದಾಯಿ ನೀರನ್ನು ಬಿಡುವುದಿಲ್ಲ. ಯಡಿಯೂರಪ್ಪನವರು ಯಾವ ಆಧಾರದ ಮೇಲೆ ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ತಾವೇ ವೈಯಕ್ತಿಕವಾಗಿ ವಿಷಯ ಬಗೆಹರಿಸುವುದಾಗಿ ಹೊರಟಿದ್ದೀರಿ ಎಂಬುದು ಅರ್ಥವಾಗುತ್ತಿಲ್ಲ. ಒಂದು ವೇಳೆ ಪಾರಿಕರ್ ಅವರು ನೀರು ಬಿಡಲು ಒಪ್ಪಿದರೂ ನೀವು ಏನು ಮಾಡಲು ಸಾಧ್ಯ? ಈ ವಿಚಾರ ಸರ್ಕಾರಗಳ ನಡುವೆ ನಿರ್ಣಯವಾಗಬೇಕು. ನ್ಯಾಯಾಧಿಕರಣದ ಮೂಲಕ ಆದೇಶ ಬರಬೇಕು. ಅಮಿತ್ ಶಾ ಮನೆಯಲ್ಲಿ ಕೂತು ಏನು ಚರ್ಚಿಸಿದ್ದೀರಿ ಎಂಬುದು ನಮಗೇನು ಗೊತ್ತು? ನಿಮಗೆ ಬರೆದಿರುವ ಪತ್ರದಿಂದ ನೀರನ್ನು ನಿರೀಕ್ಷಿಸಲು ಸಾಧ್ಯವೇ?

ಉತ್ತರ ಕರ್ನಾಟಕದ ಜನ ಇದನ್ನೇ ನಂಬಿಕೊಂಡು ಹೋದರೆ ಮುಂದೆ ನೀವೇ ತೊಂದರೆ ಅನುಭವಿಸಬೇಕಾಗುತ್ತದೆ. ಬಿಜೆಪಿಯ 17 ಸಂಸದರು ದೆಹಲಿಗೆ ಹೋಗಿ ಕೈಕಟ್ಟಿಕೊಂಡು ನಿಲ್ಲೋದು ಬಿಟ್ಟರೆ, ಒಂದೇ ಒಂದು ಮಾತನ್ನೂ ಆಡುವುದಿಲ್ಲ. ಚುನಾವಣೆ ದೃಷ್ಟಿಯಿಂದ ಇಷ್ಟೇಲ್ಲಾ ನಾಟಕವಾಡುವುದನ್ನು ಬಿಜೆಪಿ ನಾಯಕರು ನಿಲ್ಲಿಸಬೇಕು.’

Leave a Reply