‘ಹನುಮ ವರ್ಸಸ್ ಟಿಪ್ಪು’ ಇದು ಪರಿವರ್ತನಾ ಯಾತ್ರೆಯಲ್ಲಿ ಯೋಗಿ ಆದಿತ್ಯನಾಥ ಬಳಸಿದ ಅಸ್ತ್ರ!

ಡಿಜಿಟಲ್ ಕನ್ನಡ ಟೀಮ್:

ಗುಜರಾತಿನಲ್ಲಿ ಪ್ರಯಾಸದ ಜಯ ಸಾಧಿಸಿರುವ ಬಿಜೆಪಿ ಈಗ ತನ್ನ ಚಿತ್ತವನ್ನು ಕರ್ನಾಟಕದತ್ತ ನೆಟ್ಟಿದೆ. ಈಗಾಗಲೇ ರಾಜ್ಯ ನಾಯಕರು ಪರಿವರ್ತನಾ ಯಾತ್ರೆ ಹೆಸರಲ್ಲಿ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡುತ್ತಿದ್ದಾರೆ. ರಾಜ್ಯ ನಾಯಕರಿಗೆ ಈಗ ಇತರೆ ರಾಷ್ಟ್ರ ನಾಯಕರು ಸಾಥ್ ನೀಡಲು ಒಬ್ಬೊಬ್ಬರಾಗಿಯೇ ಆಗಮಿಸುತ್ತಿದ್ದಾರೆ. ಆ ಪೈಕಿ ನಿನ್ನೆ ಹುಬ್ಬಳ್ಳಿಯಲ್ಲಿ ನಡೆದ ಯಾತ್ರೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸಿದ್ದು, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಮೇಲೆ ಟೀಕಾ ಪ್ರಹಾರ ನಡೆಸಿದರು.

ಯೋಗಿ ಆದಿತ್ಯನಾಥರು ಯಾತ್ರೆಯಲ್ಲಿ ಮಾಡಿದ ಭಾಷಣದಲ್ಲಿ ಹಿಂದುತ್ವ ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನೇ ಅಸ್ತ್ರವಾಗಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ರಾಜ್ಯದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಹಾಗೂ ಹನುಮ ಜಯಂತಿ ಆಚರಣೆಗೆ ಅಡ್ಡಿ ಪ್ರಕರಣಗಳನ್ನಿಟ್ಟುಕೊಂಡೇ ರಾಜ್ಯ ಸರ್ಕಾರದ ವಿರುದ್ಧ ದಾಳಿ ಆರಂಭಿಸಿದ ಯೋಗಿ ಅವರು ಹೇಳಿದಿಷ್ಟು…

‘ಕರ್ನಾಟಕ ಹನುಮ ಭಕ್ತರ ನಾಡು. ಈ ನಾಡನ್ನು ವಿಜಯನಗರ ಸಾಮ್ರಾಜ್ಯದವರು ಆಳಿದ್ದಾರೆ. ಆದರೆ ದುರಾದೃಷ್ಟಕರ ಕಾಂಗ್ರೆಸ್ ಸರ್ಕಾರ ಹನುಮ ಮತ್ತು ವಿಜಯನಗರವನ್ನು ಆರಾಧಿಸುವ ಬದಲು ಟಿಪ್ಪು ಸುಲ್ತಾನ್ ಆರಾಧನೆಯಲ್ಲಿ ಮಗ್ನವಾಗಿದೆ. ಜನರು ಒಂದೇ ಬಾರಿಗೆ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆದರೆ ಈ ರಾಜ್ಯದಲ್ಲಿ ಯಾರೊಬ್ಬರೂ ಟಿಪ್ಪು ಸುಲ್ತಾನನನ್ನು ಆರಾಧಿಸುವುದಿಲ್ಲ.

ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾನುನು ಸುವ್ಯವಸ್ಥೆ ಕಾಪಾಡುವುದನ್ನು ಸಂಪೂರ್ಣವಾಗಿ ಮರೆತಿದೆ. ಬಿಜೆಪಿ ಕಾರ್ಯಕರ್ತರನ್ನು ಬರ್ಬರವಾಗಿ ಹತ್ಯೆ ಮಾಡಲಾಗುತ್ತಿದೆ. ಇದು ರಾಜ್ಯ ಅರಾಜಕತೆಯಲ್ಲಿರುವುದಕ್ಕೆ ಸಾಕ್ಷಿ.’

ಹೀಗೆ ಹಿಂದು ಕಾರ್ಡ್ ಅನ್ನು ಪ್ರಯೋಗಿಸುವ ಮೂಲಕ ಯೋಗಿ ಆದಿತ್ಯನಾಥ್ ಅವರು ಹುಬ್ಬಳ್ಳಿಯ ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿಯ ಚುನಾವಣಾ ಹೋರಾಟಕ್ಕೆ ಹೆಚ್ಚಿನ ಹುರುಪು ತುಂಬುವ ಪ್ರಯತ್ನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕೇಂದ್ರ ನಾಯಕರು ಸಚಿವರುಗಳು, ಇತರೆ ರಾಜ್ಯದ ಬಿಜೆಪಿ ನಾಯಕರುಗಳು ಆಗಮಿಸಿ ಒಬ್ಬೊಬ್ಬರಾಗಿ ಪರಿವರ್ತನಾ ಯಾತ್ರೆಯಲ್ಲಿ ಭಾಗಹಿಸಿ ಕಾಂಗ್ರೆಸ್ ವಿರುದ್ಧ ಹರಿಹಾಯಲಿದ್ದಾರೆ.

Leave a Reply