ಮೇವು ಹಗರಣದಲ್ಲಿ ಲಾಲು ಅಪರಾಧಿ, ನಿರ್ದೋಷಿಯಾದ್ರು ಮಾಜಿ ಸಿಎಂ ಜಗನ್ನಾಥ್ ಮಿಶ್ರಾ, ಜ.3ಕ್ಕೆ ಶಿಕ್ಷೆ ಪ್ರಕಟ

ಡಿಜಿಟಲ್ ಕನ್ನಡ ಟೀಮ್:

ಮೊನ್ನೆಯಷ್ಟೇ 2ಜಿ ತರಂಗ ಹಂಚಿಕೆ ಪ್ರಕರಣದಲ್ಲಿ ಮಾಜಿ ಸಚಿವ ಎ.ರಾಜಾ ಹಾಗೂ ಕನಿಮೋಳಿ ಅವರು ನಿರ್ದೇಷಿಯಾಗಿದ್ದು ದೇಶದ ನಾಗರೀಕರಲ್ಲಿ ನಿರಾಸೆಗೆ ಕಾರಣವಾಗಿತ್ತು. ಹೀಗಾಗಿ ಇಂದು ಪ್ರಕಟಗೊಳ್ಳಲಿದ್ದ ಮೇವು ಹಗರಣದ ಮೇಲೆ ಜನರ ಗಮನ ನೆಟ್ಟಿತ್ತು. ಆದರೆ ರಾಂಚಿ ಸಿಬಿಐ ವಿಶೇಷ ನ್ಯಾಯಾಲಯ ಲಾಲು ಈ ಪ್ರಕರಣಗಲ್ಲಿ ದೋಷಿ ಎಂದು ಪ್ರಕಟಿಸಿದೆ.

ಮೇವು ಹಗರಣವಾಗಿ 21 ವರ್ಷಗಳು ಕಳೆದ ನಂತರ ಇಂದು ತೀರ್ಪು ಪ್ರಕಟವಾಗಿದ್ದು, ಬಿಹಾರದ ಮಾಜಿ ಮುಖ್ಯಮಂತ್ರಿ ದೋಷಿ ಎಂದು ನ್ಯಾಯಮೂರ್ತಿ ಶಿವಪಾಲ್ ಸಿಂಗ್ ತೀರ್ಪು ಪ್ರಕಟಿಸಿದ್ದಾರೆ. 22 ಆರೋಪಿಗಳ ಪೈಕಿ ಲಾಲು ಪ್ರಸಾದ್ ಸೇರಿ 15 ಮಂದಿ ತಪ್ಪಿತಸ್ಥರಾದರೆ, ಬಿಹಾರ ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರಾ ಸೇರಿ ಏಳು ಮಂದಿ ಸಾಕ್ಷಾಧಾರದ ಕೊರತೆಯಿಂದ ನಿರ್ದೋಷಿಗಳಾಗಿದ್ದಾರೆ. ನಾಳೆ ಭಾನುವಾರವಾಗಿದ್ದು, ನಂತರ ಕ್ರಿಸ್ ಮಸ್ ರಜೆ ಇರುವ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಪ್ರಮಾಣವನ್ನು ಜನವರಿ 3ರಂದು ಪ್ರಕಟಿಸಲಾಗುವುದು. ಸದ್ಯ ನ್ಯಾಯಾಲಯದಲ್ಲಿ ದೋಷಿ ಎಂದು ಪ್ರಕಟವಾಗಿರುವುದರಿಂದ ಲಾಲು ಪ್ರಸಾದ್ ರನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳಲಿದ್ದು, ಅದರೊಂದಿಗೆ ಲಾಲು ಜೈಲಿನಿಂದಲೇ ಹೊಸ ವರ್ಷವನ್ನು ಬರ ಮಾಡಿಕೊಳ್ಳಲಿದ್ದಾರೆ.

ಬಿಹಾರ ರಾಜಕಾರಣ ಮಾತ್ರವಲ್ಲದೇ ರಾಷ್ಟ್ರ ರಾಜಕಾರಣದಲ್ಲೂ ಸಾಕಷ್ಟು ಪ್ರಭಾವ ಹೊಂದಿದ್ದ ಲಾಲು ಪ್ರಸಾದ್ ಯಾದವ್, ದೇಶದ ರಾಜಕಾರಣಿಗಳ ಪೈಕಿ ಅತ್ಯಂತ ಭ್ರಷ್ಟ ರಾಜಕಾರಣಿ ಎಂಬ ಹಣೆ ಪಟ್ಟಿ ಹೊತ್ತುಕೊಂಡಿದ್ದವರು. ಈ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವ ಹಿನ್ನೆಲೆಯಲ್ಲಿ ಲಾಲು ಮೇಲಿನ ಕಳಂಕ ಮತ್ತಷ್ಟು ಗಟ್ಟಿಯಾಗುವಂತಾಗಿದೆ.

ಕಳೆದ ಒಂದು ವಾರದಲ್ಲಿ ಹಲವು ಹಗರಣಗಳ ತೀರ್ಪು ರಾಷ್ಟ್ರದಾದ್ಯಂತ ಸಂಚಲನ ಸೃಷ್ಟಿಮಾಡಿದ್ದು, ರಾಜಕಾರಣದ ಮೇಲೂ ಪರೋಕ್ಷವಾಗಿ ಪರಿಣಾಮ ಬೀರಿದ್ದಾರೆ. 2019ರ ಚುನಾವಣೆಗೆ ಕೆಲವೇ ತಿಂಗಳು ಬಾರಿ ಇರುವ ಹೊತ್ತಲ್ಲಿ ಲಾಲು ಪ್ರಸಾದ್ ಮೇಲಿನ ಈ ಪ್ರಕರಣದ ದೊಡ್ಡ ಮಟ್ಟದ ಗಮನ ಸೆಳೆದಿತ್ತು. ಬಿಹಾರದಲ್ಲಿ ಮಹಾಘಟ ಬಂಧನ್ ಮೂಲಕ ರಾಜಕೀಯದಲ್ಲಿ ಹೊಸ ಅಲೆ ಸೃಷ್ಟಿಸಿತ್ತು. ಆದರೆ ಆರ್ ಜೆಡಿ ಪಕ್ಷದ ನಾಯಕರ ಭ್ರಷ್ಟಾಚಾರದ ಕಾರಣದಿಂದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಬಿಜೆಪಿ ಜತೆ ಮತ್ತೆ ಮೈತ್ರಿ ಮಾಡಿಕೊಂಡಿತು. ಈಗ ಲಾಲು ಮೇವು ಹಗರಣದಲ್ಲಿ ಅಪರಾಧಿಯಾಗಿರುವುದರಿಂದ ಯಾವುದೇ ಪಕ್ಷ ಆರ್ ಜೆಡಿ ಜತೆ ಕೈ ಜೋಡಿಸಲು ಮುಂದಾಗುವುದಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಯಾವ ಬೆಳವಣಿಗೆಗಳು ನಡೆಯಲಿವೆ ಎಂಬುದು ಕುತೂಹಲ ಮೂಡಿಸಿದೆ.

Leave a Reply