ಮುಗಿಯಿತೇ ಅಶ್ವಿನ್ ಹಾಗೂ ಜಡೇಜಾರ ಏಕದಿನ- ಟಿ20 ಆಟ?

ಡಿಜಿಟಲ್ ಕನ್ನಡ ಟೀಮ್:

ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಕೇವಲ ಟೆಸ್ಟ್ ಕ್ರಿಕೆಟ್ ಗೆ ಮಾತ್ರ ಸೀಮಿತವೇ? ಹೀಗೊಂದು ಪ್ರಶ್ನೆ ಈಗ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಹುಟ್ಟುಕೊಂಡಿದೆ. ಕಾರಣ ಈ ಇಬ್ಬರು ಆಟಗಾರರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್ ಸರಣಿಯ ತಂಡದಿಂದ ಕೈ ಬಿಡಲಾಗಿದೆ.

ನಿನ್ನೆ ಬಿಸಿಸಿಐ ಆಯ್ಕೆ ಸಮಿತಿ  17 ಆಟಗಾರರ ಏಕದಿನ ತಂಡವನ್ನು ಆಯ್ಕೆ ಮಾಡಿದ್ದು, ಈ ತಂಡದಿಂದ ಸ್ಪಿನ್ ಜೋಡಿ ಹೊರಗುಳಿದಿದೆ. ಟೆಸ್ಟ್ ಸರಣಿಯಲ್ಲಿ ತಂಡದ ಪ್ರಮುಖ ಆಟಗಾರರಾಗಿರುವ ಇವರು ಏಕದಿನ ತಂಡದಲ್ಲಿ ಸ್ಥಾನ ಪಡೆಯದೇ ಇರುವುದು ನಿಜಕ್ಕೂ ಅಭಿಮಾನಿಗಳ ಹುಬ್ಬೇರಿಸಿದೆ. ತಂಡದ ಆಯ್ಕೆ ನಂತರ ಈ ಅನುಮಾನ ಕಾಡಲು ಕಾರಣವೂ ಇದೆ.

ಅದೇನೆಂದರೆ, ಈ ಇಬ್ಬರೂ ಆಟಗಾರರು ಸೀಮಿತ ಓವರ್ ಕ್ರಿಕೆಟ್ ಅಂದರೆ ಏಕದಿನ ಹಾಗೂ ಟಿ20 ಪಂದ್ಯಗಳನ್ನಾಡಿ ಐದು ತಿಂಗಳಿಗೂ ಹೆಚ್ಚು ಸಮಯವಾಗಿದೆ. ಅಶ್ವಿನ್ ಕಳೆದ ಜೂನ್ ತಿಂಗಳಲ್ಲಿ ಕಡೇಯ ಬಾರಿಗೆ ಏಕದಿನ ಪಂದ್ಯವನ್ನಾಡಿದರೆ, ಜಡೇಜಾ ಜುಲೈ ತಿಂಗಳಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ತಮ್ಮ ಏಕದಿನ ಪಂದ್ಯವಾಡಿದ್ದೇ ಕೊನೆ. ಇನ್ನು ಈ ಇಬ್ಬರು ಇದೇ ಪ್ರವಾಸದಲ್ಲಿ ನಡೆದ ಏಕೈಕ ಟಿ20 ಪಂದ್ಯದಲ್ಲಿ ಆಡಿದ ನಂತರ ಮತ್ತೆ ಈ ಇಬ್ಬರು ಆಡಿರುವುದು ಕೇವಲ ಟೆಸ್ಟ್ ಸರಣಿಗಳಲ್ಲಿ ಮಾತ್ರ.

ಶ್ರೀಲಂಕಾ ಪ್ರವಾಸದಲ್ಲಿ ನಡೆದ ಏಕದಿನ ಸರಣಿಯಲ್ಲಿ ಆಯ್ಕೆ ಸಮಿತಿ ಈ ಇಬ್ಬರನ್ನು ಹೊರತು ಪಡಿಸಿ ತಂಡವನ್ನು ಆಯ್ಕೆ ಮಾಡಿತ್ತು. ಆಗ ಈ ಇಬ್ಬರಿಗೂ ವಿಶ್ರಾಂತಿ ನೀಡಲಾಗಿದೆ ಎಂಬ ಕಾರಣವನ್ನು ನೀಡಿತ್ತು. ನಂತರ ಇತ್ತೀಚೆಗೆ ಮುಗಿದ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಡಿದ್ದರು. ಈಗ ಲಂಕಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಲ್ಲೂ ಈ ಇಬ್ಬರಿಗೆ ತಂಡದಲ್ಲಿ ಸ್ಥಾನವಿಲ್ಲ. ಈ ಬಾರಿಯೂ ಅವರನ್ನು ಹೊರಗಿಡಲು ಕೊಟ್ಟ ಕಾರಣ, ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ನೀಡಿರುವ ವಿಶ್ರಾಂತಿ ಎಂದು. ಈಗ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ತಂಡ ಫೆಬ್ರವರಿಯಲ್ಲಿ ಏಕದಿನ ಸರಣಿಯನ್ನಾಡಲಿದೆ. ಆ ಸರಣಿಗೂ ಅಶ್ವಿನ್ ಹಾಗೂ ಜಡೇಜಾಗೆ ವಿಶ್ರಾಂತಿ ಮುಂದುವರಿಸಲಾಗಿದೆ.

ಇತ್ತ ಸಿಕ್ಕ ಅವಕಾಶಗಳನ್ನು ಎರಡೂ ಕೈಗಳಿಂದ ಬಾಚಿಕೊಳ್ಳುತ್ತಿರುವ ಯುಜ್ವೇಂದ್ರ ಚಹಲ್ ಹಾಗೂ ಕುಲ್ದೀಪ್ ಯಾದವ್ ತಂಡದಿಂದ ತಮ್ಮನ್ನು ಹೊರಗಿಡಲು ಯಾವುದೇ ಅವಕಾಶ ನೀಡುತ್ತಿಲ್ಲ. ಈ ಇಬ್ಬರು ಇತ್ತೀಚೆಗೆ ಆಡಿರುವ ಪ್ರತಿ ಸರಣಿಯಲ್ಲೂ ಎದುರಾಳಿ ತಂಡದ ಬ್ಯಾಟ್ಸ್ ಮನ್ ಗಳಿಗೆ ಸಿಂಹಸ್ವಪ್ನವಾಗಿ ಕಾಡುತ್ತಿದ್ದಾರೆ.

ಕುಲ್ದೀಪ್ ಯಾದವ್ ಚೀನಾಮನ್ ಬೌಲಿಂಗ್ ಶೈಲಿ ಖ್ಯಾತಿ ಪಡೆದಿದ್ದು, ತಂಡಕ್ಕೆ ವಿಭಿನ್ನ ಅಸ್ತರವಾಗಿದ್ದಾರೆ. ಮತ್ತೊಂದೆಡೆ ಚಹಲ್ ಕೂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಧೋನಿ ನಾಯಕತ್ವದಲ್ಲಿ ಅಶ್ವಿನ್ ಹೇಗೆ ಹೊಸ ಚೆಂಡಿನಲ್ಲೂ ಬೌಲಿಂಗ್ ಮಾಡುತ್ತಿದ್ದರೋ ಅದೇ ರೀತಿ ಕೊಹ್ಲಿ ನಾಯಕತ್ವದಲ್ಲಿ ಚಹಲ್ ಹೊಸ ಚೆಂಡಿನೊಂದಿಗೆ ದಾಳಿ ಆರಂಭಿಸುವ ಉದಾಹರಣೆ ಸಾಕಷ್ಟು ನೋಡಿದ್ದೇವೆ. ಇನ್ನು ಮುಂಬರುವ ವಿಶ್ವಕಪ್ ಟೂರ್ನಿಗೆ ತಂಡ ಕಟ್ಟುವ ನಿಟ್ಟಿನಲ್ಲಿ ಟೀಂ ಇಂಡಿಯಾ ಅನೇಕ ಪ್ರಯತ್ನಗಳನ್ನು ಮಾಡುತ್ತಿದೆ. ಅದಕ್ಕೆ ಕಾರಣ, ಕೆ.ಎಲ್ ರಾಹುಲ್ ಗೆ ಏಕದಿನ ತಂಡದಲ್ಲಿ ಸ್ಥಾನ ನೀಡದೇ, ಶ್ರೇಯಸ್ ಐಯರ್, ಮನೀಶ್ ಪಾಂಡೆ ಹಾಗೂ ಕೇದಾರ್ ಜಾಧವ್ ಗೆ ಸ್ಥಾನ ನೀಡಲಾಗಿದೆ. ಉಮೇಶ್ ಯಾದವ್ ಬದಲಿಗೆ ಮುಂಬೈ ಆಟಗಾರ ಶಾರ್ದುಲ್ ಠಾಕೂರ್ ಗೆ ಅವಕಾಶ ನೀಡಲಾಗಿದೆ. ಒಟ್ಟಿನಲ್ಲಿ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾದ ಸ್ಪಿನ್ ಅವಳಿಗಳಾಗಿ ಮೆರೆದಿದ್ದ ಅಶ್ವಿನ್ ಹಾಗೂ ಜಡೇಜಾ ಅವರಿಗೆ ಫಾರ್ಮ್ ನಲ್ಲಿರುವಾಗಲೇ ಈ ರೀತಿಯ ದೀರ್ಘ ವಿಶ್ರಾಂತಿ ಸಿಗುತ್ತದೆ ಎಂದು ಯಾರು ನಿರೀಕ್ಷಿಸಿರಲಿಲ್ಲ.

Leave a Reply