ಪಾರದರ್ಶಕ ಆಡಳಿತಕ್ಕಾಗಿ ಉಪೇಂದ್ರರ ಕೆ.ಪಿ.ಜೆ.ಪಿ ಪ್ರಣಾಳಿಕೆ! ಏನೇನಿದೆ ನೀವೇ ನೋಡಿ…

ಡಿಜಿಟಲ್ ಕನ್ನಡ ಟೀಮ್:

ಹಳ್ಳ ಹಿಡಿದಿರುವ ರಾಜಕೀಯ ವ್ಯವಸ್ಥೆಯನ್ನು ಪ್ರಜಾಕೀಯವನ್ನಾಗಿ ಬದಲಿಸಿ, ಪ್ರಜೆಗಳನ್ನು ಪ್ರಭುಗಳನ್ನಾಗಿ ಮಾಡಿ ನಾಯಕರುಗಳನ್ನು ಕಾರ್ಮಿಕರನ್ನಾಗಿ ಮಾಡುವ ಆಶಯದೊಂದಿಗೆ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಕಟ್ಟಿಕೊಳ್ಳುತ್ತಿರುವ ಚಿತ್ರನಟ ಉಪೇಂದ್ರ ಅವರು ಇಂದು ತಮ್ಮ ಪಕ್ಷದ ಪ್ರಣಾಳಿಕೆಯ ಮೊದಲ ಭಾಗ ಬಿಡುಗಡೆ ಮಾಡಿದ್ದಾರೆ.

ತಮ್ಮ ಚಿತ್ರಗಳಲ್ಲಿ ವಿಭಿನ್ನ ಆಲೋಚನೆಗಳ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದ ಉಪೇಂದ್ರ ಅವರು ರಾಜಕೀಯದಲ್ಲಿ ತಮಗಿರುವ ಆಲೋಚನೆಗಳನ್ನು ಈ ಪ್ರಣಾಳಿಕೆ ಮೂಲಕ ಬಿಡುಗಡೆ ಮಾಡಿದ್ದಾರೆ. ಸದ್ಯ ವ್ಯವಸ್ಥೆಯಲ್ಲಿ ಕೊರತೆಯಾಗಿರುವ ಪಾರದರ್ಶಕತೆ ಹಾಗೂ ಚುನಾಯಿತ ಪ್ರತಿನಿಧಿಗಳ ಕರ್ತವ್ಯವನ್ನೇ ತಮ್ಮ ಪ್ರಣಾಳಿಕೆಯ ಪ್ರಮುಖ ಸಾರವನ್ನಾಗಿಟ್ಟುಕೊಂಡು ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಪ್ರಣಾಳಿಕೆ ಜಾರಿಯಾದರೆ ಇಡಿ ವ್ಯವಸ್ಥೆ ಅರ್ಧದಷ್ಟು ಬದಲಾಗುತ್ತದೆ ಎಂಬ ಭರವಸೆ ಈ ಪ್ರಣಾಳಿಕೆಯನ್ನು ನೋಡಿದ ಮೇಲೆ ಮೂಡುತ್ತದೆ. ಉಪೇಂದ್ರರ ಕೆ.ಪಿ.ಜೆ.ಪಿಯ ಈ ಪ್ರಣಾಳಿಕೆಯಲ್ಲಿ 24 ಪ್ರಮುಖ ಅಂಶಗಳಿದ್ದು, ಅವುಗಳು ಹೀಗಿವೆ…

ಸಂಪೂರ್ಣ ಪಾರದರ್ಶಕ ಆಡಳಿತ:

 1. ಸಂಪೂರ್ಣ ಪಾರದರ್ಶಕ, ಸರಳ, ಹೊಣೆಗಾರಿಕೆಯುಳ್ಳ, ಮಿತವ್ಯಯೀ ಹಾಗೂ ಪ್ರಜೆಗಳನ್ನೊಳಗೊಂಡ ಆಡಳಿತ.
 2. ಪ್ರಜೆಗಳ ನೇರ ಸಂಪರ್ಕಕ್ಕಾಗಿ, ಸರ್ಕಾರದಿಂದ ಸರ್ಕಾರದ್ದೇ ಆದ ಟೆಲಿವಿಷನ್ ಚಾನಲ್, ಪ್ರತಿಯೊಂದು ಇಲಾಖೆಗಳಲ್ಲಿ ಹಾಗೂ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಸಾಮಾಜಿಕ ಜಾಲತಾಣಗಳು (ಫೇಸ್‍ಬುಕ್, ಟ್ವಿಟರ್, ವೆಬ್‍ಸೈಟ್, ಯುಟ್ಯೂಬ್ ಚಾನಲ್) ಮತ್ತು ಮೊಬೈಲ್ ಅಪ್ಲಿಕೇಶನ್‍ಗಳನ್ನು ಪ್ರಾರಂಭಿಸಲಾಗುವುದು.
 3. ಪ್ರಜೆಗಳು ಮೊಬೈಲ್ ಅಪ್ಲಿಕೇಶನ್‍ನಲ್ಲಿ ತಮ್ಮ ಕ್ಷೇತ್ರದ/ ಪ್ರದೇಶದ ಸಮಸ್ಯೆ/ ದೂರುಗಳನ್ನು (ಲಿಖಿತ, ಫೋಟೊ, ವಿಡಿಯೋ, ಆಡಿಯೋ ಮೂಲಕ) ಸಂಬಂಧಪಟ್ಟ ಇಲಾಖೆಗಳ ನೌಕರರು, ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳಿಗೆ (ಗ್ರಾಮ ಪಂಚಾಯತಿ ಸದಸ್ಯರು, ಕಾರ್ಪೋರೇಟರ್) ಸಲ್ಲಿಸಬಹುದು. ಪ್ರಜೆಗಳ ದೂರನ್ನು ನಿರ್ಧಿಷ್ಟ ಕಾಲಾವಧಿಯೊಳಗೆ ಪರಿಹರಿಸಲು ಸಂಬಂಧಪಟ್ಟವರು ವಿಫಲರಾದಲ್ಲಿ (ವಿಫಲರಾದವರು ಈ ಹೊಣೆಗಾರಿಕೆಯನ್ನು ಹೊರಬೇಕು) ಆ ದೂರು ಕೂಡಲೇ ಮೇಲ್ಮಟ್ಟದ ಅಧಿಕಾರಿಗಳಿಗೆ ಮತ್ತು ಜನ ಪ್ರತಿನಿಧಿಗಳಿಗೆ (ಶಾಸಕರು) ವರ್ಗಾವಣೆಗೊಳ್ಳುವುದು ಅವರು ನಿರ್ಧಿಷ್ಟ ಕಾಲಾವಧಿಯೊಳಗೆ ಆ ದೂರನ್ನು ಪರಿಹರಿಸಬೇಕು. ಈ ಪ್ರಕ್ರಿಯೆ ರಾಜ್ಯದ ಮುಖ್ಯಮಂತ್ರಿಗಳ ಕಛೇರಿವರೆಗೂ ವಿಸ್ತರಿಸಲ್ಪಟ್ಟಿರುತ್ತದೆ ಮತ್ತು ಸಂಪೂರ್ಣ ಪ್ರಕ್ರಿಯೆಯು ಪಾರದರ್ಶಕವಾಗಿ ಸಾರ್ವಜನಿಕವಾಗಿ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುತ್ತದೆ.
 4. ಸಕಾಲಕ್ಕೆ ಸಮಸ್ಯೆಗಳು ಹಾಗೂ ದೂರುಗಳನ್ನು ಉತ್ತಮವಾಗಿ ಪರಿಹರಿಸಿದಂತಹ ಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಕಾರ್ಯಗಳನ್ನು ಪುರಸ್ಕರಿಸಲಾಗುವುದು ಮತ್ತು ಅಂಕಗಳನ್ನು ನೀಡಲಾಗುವುದು. ಈ ಅಂಕಗಳೇ ಚುನಾಯಿತ ಜನ ಪ್ರತಿನಿಧಿಗಳಿಗೆ ಮುಂಬರುವ ಚುನಾವಣೆಗಳಲ್ಲಿ ಸ್ಪರ್ಧಿಸಲು ಮುಖ್ಯ ಅರ್ಹತೆಗಳಾಗಿರುತ್ತವೆ ಮತ್ತು ಅಧಿಕಾರಿಗಳಿಗೆ ಈ ಅಂಕಗಳೇ ಬಡ್ತಿಗಳಿಗೆ ಮಾನದಂಡವಾಗಿರುತ್ತವೆ. (ಕಾರ್ಪೋರೇಟ್ ಟಿಕೆಟಿಂಗ್ ಟೈಮ್‍ಲೈನ್ ಟಾರ್ಗೆಟ್ಸ್ ರೀತಿ)
 5. ಕನಿಷ್ಟ ಹಾಗೂ ನಿಗದಿತ ಅಂಕಗಳನ್ನು ಉತ್ತಮ ಕಾರ್ಯರೀತಿಯಿಂದ ಪಡೆಯತಕ್ಕದ್ದು, ತಪ್ಪಿದಲ್ಲಿ ಶಿಸ್ತು ಕ್ರಮಗಳೊಂದಿಗೆ ವೇತನದಲ್ಲಿ ಕಡಿತ ಸಹಾ ಮಾಡಲಾಗುತ್ತದೆ.
 6. ಕಡ್ಡಾಯವಾಗಿ ಪ್ರತಿ ಸರ್ಕಾರಿ ನೌಕರರು ಪೂರ್ಣ ಹೆಸರು, ಹುದ್ದೆ, ಇಲಾಖೆಯ ಬ್ಯಾಡ್ಜ್‍ಗಳನ್ನು ಮತ್ತು ಸಚಿವಾಲಯಗಳ ಅನುಸಾರ ಏಕರೂಪದ ಬಣ್ಣದ ಸಮವಸ್ತ್ರವನ್ನು ಧರಿಸಿರುತ್ತಾರೆ. ಪ್ರಜೆಗಳು ಆಯಾ ಸರ್ಕಾರಿ ಇಲಾಖೆಗಳ ನೌಕರರನ್ನು ಗುರುತಿಸಲು ಈ ಪ್ರಕ್ರಿಯೆಯು ನೆರವಾಗುತ್ತದೆ.
 7. ಎಲ್ಲಾ ಸರ್ಕಾರೀ ಕಛೇರಿಗಳು ಹಾಗೂ ಇಲಾಖೆಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ (ರಿಜಿಸ್ಟರ್), ವೈಫೈ, ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಆಳವಡಿಸಲಾಗುತ್ತದೆ ಮತ್ತು ಸಾರ್ವಜನಿಕರಿಗೆ ಪ್ರದೇಶಗಳಿಗೆ ಅನುಸಾರವಾಗಿ ವೀಕ್ಷಣಾ ಸೌಲಭ್ಯ ಕಲ್ಪಿಸಲಾಗುವುದು.
 8. ವಿಧಾನಸೌಧದಲ್ಲಿ ನಡೆಯುವಂತಹ ಪ್ರತಿಯೊಂದು ಚಟುವಟಿಕೆಗಳು, ಯೋಜನೆಗಳು, ಕಾಮಗಾರಿಗಳು, ಚರ್ಚೆಗಳು ಹಾಗೂ ಅಧಿವೇಶನಗಳು ಅಧಿಕೃತ ದಾಖಲೆ, ಪುರಾವೆಗಳು ಹಾಗೂ ದೃಶ್ಯ ಮಾಧ್ಯಮಗಳ ಸಾಕ್ಷಿ & ದಾಖಲೆಗಳೊಂದಿಗೆ ದೊಡ್ಡ ಪರದೆಯ ಮೇಲೆ ಬಿತ್ತರಿಸಿ ಅದರ ಆಧಾರದ ಮೇಲೆಯೇ ಚರ್ಚೆ ನಡೆಸಬೇಕು.
 9. ಎಲ್ಲಾ ಮಂತ್ರಿಗಳು, ಶಾಸಕರು, ಕಾರ್ಪೊರೇಟರ್‍ಗಳು, ತಾಲೂಕು ಮತ್ತು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಎಲ್ಲಾ ಸರ್ಕಾರಿ ಅಧಿಕಾರಿಗಳು ಯೋಜನೆಗಳ ಅಧಿಕೃತ ದಾಖಲೆ-ಪುರಾವೆಗಳೊಂದಿಗೆ ದೃಶ್ಯ ಮಾಧ್ಯಮಗಳ ಮುಖಾಂತರ ನೇರಪ್ರಸಾರದೊಂದಿಗೆ ಅಧಿವೇಶನದಲ್ಲಿ ಭಾಗವಹಿಸಬೇಕು. ಹಾಗೂ ಈ ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ನೇರ ಪ್ರಸಾರದಲ್ಲಿ ಟಿ.ವಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಪ್ರಜಾ ಪ್ರಭುಗಳು ವೀಕ್ಷಿಸುವಂತೆ ಬಿತ್ತರಿಸಬೇಕು ಹಾಗೂ ಸದನದ ಪ್ರಕ್ರಿಯೆಗಳಲ್ಲಿ ಪ್ರಜೆಗಳು ದೂರವಾಣಿ ಮುಖಾಂತರ ನೇರವಾಗಿ ಚರ್ಚೆಯಲ್ಲಿ ಭಾಗವಹಿಸಬಹುದು.
 10. ಪ್ರತಿಯೊಂದು ಸರ್ಕಾರಿ ಯೋಜನೆಗಳು ಮತ್ತು ಅದರ ಪ್ರತಿಯೊಂದು ಟೆಂಡರ್ ಪ್ರಕ್ರಿಯೆಗಳ ಭಾಗವಹಿಸುವಿಕೆಯು ಸಂಪೂರ್ಣವಾಗಿ ಆನ್‍ಲೈನ್‍ನಲ್ಲೇ ಚರ್ಚೆ ಮತ್ತು ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಅಧಿಕಾರಿಗಳು ಮತ್ತು ಟೆಂಡರ್ ಪಡೆದವರ ಮಧ್ಯೆ ವೈಯಕ್ತಿಕ ಸಂಪರ್ಕಗಳನ್ನು ನಿರ್ಬಂಧಿಸಲಾಗುವುದು ಹಾಗೂ ಟೆಂಡರ್ ಪ್ರಕ್ರಿಯೆಗಳ ಪ್ರತಿ ಹಂತಗಳ ನೇರ ಪ್ರಸಾರವನ್ನು ಪಾರದರ್ಶಕವಾಗಿ ಟಿ.ವಿ ಹಾಗೂ ಸಾಮಾಜಿಕ ಜಾಲತಾಣಗಳೊಂದಿಗೆ ಅಂತರ್ಜಾಲದ ಮುಖಾಂತರ ಎಲ್ಲರಿಗೂ ಬಹಿರಂಗ ವೀಕ್ಷಣೆಗೆ ಅವಕಾಶವಿರುತ್ತದೆ.
 11. ಯಾವುದೇ ಕಂಟ್ರಾಕ್ಟರ್‍ಗಳಿಗೆ ಕೊಡಲಾಗುವ ಯೋಜನೆಗಳ ಖರ್ಚು- ವೆಚ್ಚಗಳನ್ನು ಅಧಿಕೃತ ದೃಶ್ಯ ದಾಖಲೆಗಳ(ಬಿಲ್) ಮತ್ತು ಹಾಜರಾತಿ ವಿವರಣೆಗಳ ಆಧಾರದ ಮೇಲೆಯೇ ಕೊಡಲಾಗುವುದು. ಪ್ರತಿಯೊಬ್ಬ ಕಾರ್ಮಿಕರ ಹಾಜರಾತಿ ದಾಖಲೆಗಳ(ಬಯೋಮೆಟ್ರಿಕ್, ಸಿಸಿ ಟಿವಿ ಕ್ಯಾಮೆರಾ, ಆರ್.ಎಫ್ ಐಡಿ) ಮೂಲಕ ಜಾಲತಾಣಗಳಲ್ಲಿ ಸಾರ್ವಜನಿಕರಿಗೆ ಬಹಿರಂಗಪಡಿಸತಕ್ಕದ್ದು. ಯೊಜನೆಗಳ ಪಾವತಿ ಹಣಕ್ಕಾಗಿ ಸರ್ಕಾರದ ಯಾವುದೇ ಅಧಿಕಾರಿಗಳನ್ನು ನೇರವಾಗಿ ಭೇಟಿ ಮಾಡುವ ಅವಶ್ಯಕತೆ ಇರುವುದಿಲ್ಲ.
 12. ಪ್ರತಿಯೊಂದು ಸರ್ಕಾರಿ ಯೋಜನೆಗಳು ಹಾಗೂ ಕಾಮಗಾರಿಗಳನ್ನು ಮಾಡುವ ಅಧಿಕಾರಿಗಳು, ಕಂಟ್ರಾಕ್ಟರ್‍ಗಳು ಅದರ ಖರ್ಚು-ವೆಚ್ಚ, ಕಾಲಾವಧಿ ಹಾಗೂ ಹಂತ ಹಂತವಾದ ಬೆಳವಣಿಗೆಗಳ ದಾಖಲೆಗಳೊಂದಿಗೆ ಪ್ರತಿ ಹಂತಗಳ ನೇರ ಪ್ರಸಾರವನ್ನು ಪಾರದರ್ಶಕವಾಗಿ ಟಿ.ವಿ ಹಾಗೂ ಸಾಮಾಜಿಕ ಜಾಲತಾಣಗಳೊಂದಿಗೆ ಅಂತರ್ಜಾಲದ ಮುಖಾಂತರ ಎಲ್ಲರಿಗೂ ಬಹಿರಂಗ ವೀಕ್ಷಣೆಗೆ ಅವಕಾಶವಿರುತ್ತದೆ.
 13. ಕಡ್ಡಾಯವಾಗಿ ಎಲ್ಲಾ ಜನ ಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಅವರವರ ಧೈನಂದಿನ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಮುಂಗಡವಾಗಿ ಅವರವರ ಸಾಮಾಜಿಕ ಜಾಲತಾಣಗಳಲ್ಲಿ, ಅವರವರ ಕ್ಷೇತ್ರದ ಮೊಬೈಲ್ ಅಪ್ಲಿಕೇಶನ್‍ಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸಬೇಕು.
 14. ಪ್ರಜೆಗಳು ಹಾಗೂ ಚುನಾಯಿತ ಸದಸ್ಯರ, ಸರ್ಕಾರೀ ಅಧಿಕಾರಿಗಳ ನಡುವಿನ ನೇರ ಸಂವಾದಗಳು ತಿಂಗಳಿಗೊಮ್ಮೆ ಅವರವರ ಕ್ಷೇತ್ರಗಳಲ್ಲಿ ಟಿವಿ ಚಾನಲ್‍ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತ ದೃಶ್ಯ ದಾಖಲೆಗಳೊಂದಿಗೆ ಪ್ರಸಾರಗೊಳ್ಳುತ್ತವೆ.
 15. ನಿರಂತರವಾದ ನಿಗ್ರಹಣೆ ಮತ್ತು ಅನಿರೀಕ್ಷಿತ ದಾಳಿಗಳನ್ನು ಕಾಲಕಾಲಕ್ಕೆ ಸಂಬಂಧಿಸಿದ ಸಚಿವರು, ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ನಡೆಸುತ್ತಿರುತ್ತಾರೆ, ಈ ಪ್ರಕ್ರಿಯೆಗಳು ವಿಡಿಯೋ ರೆಕಾರ್ಡಿಂಗ್ ಆಗುತ್ತದೆ ಹಾಗೂ ಪ್ರಜೆಗಳಿಗೆ ನೇರ ಪ್ರಸಾರದ ವ್ಯವಸ್ಥೆ ಇರುತ್ತದೆ.
 16. ಆಡಳಿತ ಸರ್ಕಾರವು ಯಾವುದೇ ಸರ್ಕಾರೀ ವರ್ಗಾವಣೆಗಳನ್ನು ಮಾಡುವಾಗ ಸರಿಯಾದ ಕಾರಣ, ದಾಖಲೆಗಳು ಮತ್ತು ಸಾಕ್ಷಿಗಳನ್ನು ಕೊಟ್ಟು ನೇರ ಪ್ರಸಾರದೊಂದಿಗೆ ವರ್ಗಾವಣೆಗಳನ್ನು ಮಾಡಬೇಕು.
 17. ಎಲ್ಲಾ ಸರ್ಕಾರೀ ಇಲಾಖೆಗಳ ಸಂದರ್ಶನಗಳು ಹಾಗೂ ಆಯ್ಕೆಗಳ ಪ್ರಕ್ರಿಯೆಗಳನ್ನು ನೇರ ಪ್ರಸಾರದೊಂದಿಗೆ ಪ್ರಜೆಗಳಿಗೆ ತೆರೆದಿಡಲಾಗುವುದು.
 18. ಎಲ್ಲಾ ಸರ್ಕಾರೀ ತೆರಿಗೆ ಸಂಗ್ರಹಗಳು ಮತ್ತು ಆದಾಯಗಳು ದಾಖಲೆ ಸಹಿತವಾಗಿ ಪ್ರದೇಶಗಳಿಗೆ ಅನುಸಾರವಾಗಿ ತಿಂಗಳಿಗೊಮ್ಮೆ ಸಾರ್ವಜನಿಕರಿಗೆ ತೆರೆದಿಡಲಾಗುವುದು.
 19. ಚುನಾಯಿತ ಪ್ರತಿನಿಧಿಗಳಿಗೆ, ಸರ್ಕಾರೀ ಅಧಿಕಾರಿಗಳಿಗೆ ನೀಡುವ ವೇತನಗಳು, ಸೌಲಭ್ಯಗಳು ಮತ್ತು ಎಲ್ಲಾ ಸರ್ಕಾರೀ ವಸತಿ, ಪ್ರಯಾಣ, ವೈದ್ಯಕೀಯ ಮತ್ತು ಎಲ್ಲಾ ಇತರ ಭತ್ಯೆ, ವೆಚ್ಚ ಹಾಗೂ ಪ್ರಯೋಜನಗಳು ಸರಿಯಾದ ಕಾರಣ ಮತ್ತು ದಾಖಲೆಗಳೊಂದಿಗೆ ಸಾರ್ವಜನಿಕರಿಗೆ ಜಾಲತಾಣಗಳಲ್ಲಿ ತೆರೆದಿಟ್ಟಿದ್ದರೆ ಮಾತ್ರ ದೊರೆಯುತ್ತದೆ.
 20. ಪ್ರಜೆಗಳು ಗ್ಯಾಸ್ ಸಬ್ಸಿಡಿ ಬಿಟ್ಟು ಕೊಡುವಂತೆ ನಿವೃತ್ತರಾಗಿರುವ ಚುನಾಯಿತ ಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳು ತಮಗೆ ದೊರೆಯುವ ಪಿಂಚಣಿಗಳನ್ನು ಸ್ವಯಂಪ್ರೇರಿತವಾಗಿ ಬಿಟ್ಟುಕೊಡಬಹುದು.
 21. ಸ್ವಯಂಪ್ರೇರಿತರಾಗಿ ಬಿಟ್ಟುಕೊಡಲಾದ ಪಿಂಚಣಿಗಳಿಂದ ಸಂಗ್ರಹಗೊಳ್ಳುವ ಹಣವನ್ನು ವೃದ್ದಾಶ್ರಮಗಳು ಹಾಗೂ ವಸತಿ ರಹಿತರ ಅಭಿವೃಧ್ಧಿಗಳಿಗಾಗಿ ಬಳಸಲಾಗುವುದು.
 22. ಎಲ್ಲಾ ಸರ್ಕಾರೀ ಯೋಜನೆಗಳು ಸಂಪೂರ್ಣಗೊಂಡು ಸಂಬಂಧಪಟ್ಟ ಅಧಿಕಾರಿಗಳ ಪರಿಕ್ಷೆ-ಅನುಮತಿ ನಂತರ ಸಾರ್ವಜನಿಕರ ಬಳಕೆಗೆ ನೇರವಾಗಿ ತೆರೆದಿಡಲಾಗುವುದು, ಯಾವುದೇ ರೀತಿಯ ಲೋಕಾರ್ಪಣಾ ಸಮಾರಂಭ, ಸಂಭ್ರಮ, ಉದ್ಗಾಟನೆಗಳನ್ನು ನಡೆಸುವುದು ಹಾಗೂ ಜನಪ್ರತಿನಿಧಿಗಳು/ ಅಧಿಕಾರಿಗಳು ಭಾಗವಹಿಸುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗುತ್ತದೆ.
 23. ಕರ್ನಾಟಕ ಶಾಸಕಾಂಗ ವೇತನಗಳು: “ಪಿಂಚಣಿ ಮತ್ತು ಭತ್ಯೆ ಆಕ್ಟ್ 1952” ಅನ್ನು ಸರಳಗೊಳಿಸುವಂತೆ ಕಾನೂನು ತಿದ್ದುಪಡಿ ಮಾಡಲಾಗುವುದು.
 24. ಈ ಮೇಲ್ಕಂಡ ಅಂಶಗಳನ್ನು ಜಾರಿಗೆ ತರಲು ಬೇಕಾಗುವಂತಹ ಅವಶ್ಯಕ ಕಾನೂನು-ತಿದ್ದುಪಡಿಗಳನ್ನು ಮಾಡಲಾಗುವುದು.

Leave a Reply