ಮತರಾಜಕೀಯದ ಮಹಾದಾಳ, ಮಹದಾಯಿ!

ಉತ್ತರ ಕರ್ನಾಟಕ ಜನರ ಹಣೆಬರಹ ಸರಿ ಇಲ್ಲ. ರಾಜಕೀಯ ಪಕ್ಷಗಳಿಗೆ ಆ ಭಾಗದ ಜನರು ಬೇಕು, ಅವರ ಮುಗ್ಧತೆ ಬೇಕು, ಅವರ ವೋಟುಗಳು ಬೇಕು, ಆದರೆ ಅವರ ಸಂಕಷ್ಟಗಳು ಬೇಡ, ಅವುಗಳಿಗೆ ಪರಿಹಾರ ಕಲ್ಪಿಸುವುದು ಬೇಡ. ಬದಲಿಗೆ ಅವರ ನೋವು, ಸಂಕಷ್ಟ, ದುಃಖ-ದುಮ್ಮಾನಗಳನ್ನು ಹಾಗೆಯೇ ಉಳಿಸಿ, ಅವುಗಳ ಮೇಲೆ ಹುಸಿ ಭರವಸೆಯ ಬೀಜ ಬಿತ್ತಿ, ಅದರಲ್ಲಿ ವೋಟುಗಳನ್ನು ಬೆಳೆದುಕೊಳ್ಳುವುದು ಮೊದಲಿಂದಲೂ ಬೆಳೆದು ಬಂದ ಪರಿಪಾಠ. ಯಾವುದೇ ರಾಜಕೀಯ ಪಕ್ಷವೂ ಇದಕ್ಕೆ ಹೊರತಾಗಿಲ್ಲ. ಎಲ್ಲರ ‘ಮತಬರಹ’ವೂ ಇದೇ ಆಗಿದೆ. ಈಗದು ಮಹದಾಯಿ ನದಿ ವಿವಾದದಲ್ಲೂ ಪ್ರತಿಬಿಂಬಿತವಾಗುತ್ತಿದೆ.

ಇನ್ನೈದು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಇದೆ. ಮೊದಲಿಂದಲೂ ಗೋವಾ ಮತ್ತು ಕರ್ನಾಟಕದ ನಡುವೆ ರಾಜಕೀಯ ದಾಳವಾಗಿಯೇ ಬಳಕೆ ಆಗುತ್ತಿರುವ ಈ ವಿವಾದವನ್ನು ತಾವೇ ಬಗೆಹರಿಸುವುದಾಗಿ ಪ್ರತಿಪಕ್ಷ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಇತ್ತೀಚೆಗೆ ಘೋಷಿಸಿದ್ದರು. ಅದರಂತೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಜತೆ ವರಿಷ್ಠರ ಸಮ್ಮುಖದಲ್ಲಿ ಮಾತುಕತೆಯನ್ನೂ ನಡೆಸಿದ್ದರು. ಮಾನವೀಯ ದೃಷ್ಟಿಯಿಂದ ಕುಡಿಯುವ ಉದ್ದೇಶಕ್ಕೆ ಏಳೂವರೇ ಟಿಎಂಸಿ ನೀರು ಬಿಡುಗಡೆ ಮಾಡುವುದಾಗಿ ಪರಿಕ್ಕರ್ ಅವರು ಯಡಿಯೂರಪ್ಪನವರಿಗೆ ಪತ್ರ ಬರೆದು ತಿಳಿಸಿದ್ದಾರೆ. ಇಲ್ಲಿರುವುದು ರಾಜಕೀಯ ಮ್ಯಾಚ್ ಫಿಕ್ಸಿಂಗ್. ಯಡಿಯೂರಪ್ಪ ಹೇಳಿದರು, ಅದಕ್ಕೆ ಪರಿಕ್ಕರ್ ನೀರು ಬಿಡುಗಡೆ ಮಾಡಲು ಒಪ್ಪಿದರು ಎಂಬ ಸಂದೇಶ ರವಾನೆ ಮಾಡುವುದು, ಆ ಮೂಲಕ ಮುಂದಿನ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಭಾಗದ ಜನರ ಮತಗಳನ್ನು ಸೆಳೆಯುವುದು ಬಿಜೆಪಿಯ ಒಳಮರ್ಮ. ಕೇಂದ್ರ ಹಾಗೂ ಗೋವಾದಲ್ಲಿ ಬಿಜೆಪಿ ಸರಕಾರ ಇರುವುದನ್ನು ಸಾಂದರ್ಭಿಕ ದಾಳವಾಗಿ ಬಳಸಿಕೊಂಡಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಆಗುತ್ತಿರುವ ಇಂಥ ಬೆಳವಣಿಗೆ ಹಿಂದಿನ ಉದ್ದೇಶ ಏನೆಂಬುದು ಜನರಿಗೆ ಅರ್ಥವಾಗದೇ ಇರುವುದೇ. ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ಮಹದಾಯಿ ಯೋಜನೆಗೆ 2006 ರಲ್ಲೇ ಅಡಿಗಲ್ಲು ಹಾಕಿದ್ದ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸುಮ್ಮನೆ ಇದ್ದಾವೆಯೇ? ಸೇರಿಗೆ ಸವ್ವಾಸೇರು ಎಂಬಂತೆ ಅವು ಕೂಡ ಮನೋಹರ್ ಪರಿಕ್ಕರ್ ಮತ್ತು ಯಡಿಯೂರಪ್ಪ ನಡುವಣ ಶಿಷ್ಟಾಚಾರ ರಹಿತ ಆಡಳಿತಾತ್ಮಕಯೇತರ ವ್ಯವಹಾರವನ್ನು ರಾಜಕೀಯ ಹಿಡಿದು, ಬಡಿದು ಬಿಸಾಡುತ್ತಿವೆ. ಹೀಗಾಗಿಯೇ ಮಹದಾಯಿ ಎಂಬುದು ಮತರಾಜಕೀಯ ಪ್ರಹಸನವಾಗಿ ಮಾರ್ಪಟ್ಟಿದೆ.

ಈಗಿನಂತೆ 2002 ರಲ್ಲೂ ಕೇಂದ್ರದಲ್ಲಿ ಬಿಜೆಪಿ ಸರಕಾರವಿತ್ತು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನ ಮಂತ್ರಿ ಆಗಿದ್ದರು. ಗೋವಾದಲ್ಲೂ ಮನೋಹರ್ ಪರಿಕ್ಕರ್ ಮುಖ್ಯಮಂತ್ರಿ. ಕರ್ನಾಟಕದಲ್ಲಿ ಬಿಜೆಪಿ ಪ್ರತಿಪಕ್ಷ ಸ್ಥಾನದಲ್ಲಿತ್ತು. ಆಗ ಬಿಜೆಪಿ ಇದೇ ರೀತಿ ಪರಿಕ್ಕರ್ ಮೇಲೆ ಒತ್ತಡ ತಂದು ಮಹದಾಯಿ ನೀರು ಬಿಡಿಸಿಕೊಳ್ಳಬಹುದಿತ್ತು. ಪರಿಕ್ಕರ್ ಕೂಡ ಹೃದಯವೈಶಾಲ್ಯ ಮೆರೆಯಬಹುದಿತ್ತು. ಆದರೆ ಪರಿಕ್ಕರ್ ನೀರು ಬಿಡುವುದಿರಲಿ, 2002 ರಲ್ಲಿ ಕೇಂದ್ರ ಸರಕಾರಕ್ಕೆ ಪತ್ರ ಬರೆದು ನ್ಯಾಯಾಧೀಕರಣ ರಚನೆ ಮಾಡುವಂತೆ ಮನವಿ ಮಾಡಿದ್ದರು. ಆಗ ಗೋವಾದಲ್ಲಿ ಚುನಾವಣೆ ಸಮೀಪಿಸಿತ್ತು. ಕರ್ನಾಟಕದಲ್ಲಿ ಈಗಿನಂತೆ ಚುನಾವಣೆ ಹತ್ತಿರ ಬಂದಿರಲಿಲ್ಲ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆದದ್ದು 2004 ರಲ್ಲಿ. ಹೀಗಾಗಿ ಅವತ್ತಿನ ತಮ್ಮ ರಾಜಕೀಯ ಅನುಕೂಲಕ್ಕೆ ತಕ್ಕ ನಿಲುವನ್ನು ಪರಿಕ್ಕರ್ ತೆಗೆದುಕೊಂಡಿದ್ದರು. ಇವತ್ತು ಕರ್ನಾಟಕದಲ್ಲಿ ಬಿಜೆಪಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಯಡಿಯೂರಪ್ಪ ಮಾತಿಗೆ ಕಟ್ಟು ಬಿದ್ದು ನೀರು ಬಿಡುವ ನಾಟಕವಾಡುತ್ತಿದ್ದಾರೆ. ಜನಕ್ಕೆ ಇದೆಲ್ಲ ಅರ್ಥವಾಗುವುದಿಲ್ಲವೇ?

ಇಷ್ಟಕ್ಕೂ ಮನೋಹರ್ ಪರಿಕ್ಕರ್ ಅವರು ಅದ್ಯಾವ ನಿಯಮದ ಮೇಲೆ ಯಡಿಯೂರಪ್ಪನವರಿಗೆ ಪತ್ರ ಬರೆದರೆಂಬುದೇ ಗೊತ್ತಾಗುತ್ತಿಲ್ಲ. ಅವರ ಈ ನಡೆ ಹಾಸ್ಯಾಸ್ಪದವಾಗಿದೆ. ನಿಯಮ, ಶಿಷ್ಟಾಚಾರದ ಪ್ರಕಾರ ಅಂತಾರಾಜ್ಯ ವಿವಾದ ಸಂಬಂಧ ಒಂದು ರಾಜ್ಯದ ಮುಖ್ಯಮಂತ್ರಿ ಮತ್ತೊಂದು ರಾಜ್ಯದ ಮುಖ್ಯಮಂತ್ರಿಗೋ ಅಥವಾ ಪ್ರಧಾನಿಗೋ ಪತ್ರ ಬರೆದು ವ್ಯವಹರಿಸುವುದು ವಾಡಿಕೆ. ಅದಕ್ಕೆ ಆಡಳಿತಾತ್ಮಕ ಮಾನ್ಯತೆ ಇದೆ. ಅದನ್ನು ಬಿಟ್ಟು ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ ಅಂದರೆ ಹೇಗೆ? ನಾಳೆ ಗೋವಾ ಕನ್ನಡಿಗರ ಸಮಸ್ಯೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲ್ಲಿನ ಪ್ರತಿಪಕ್ಷ ನಾಯಕನಿಗೆ ಪತ್ರ ಬರೆದು ಪರಿಹಾರ ಕಂಡುಕೊಂಡರೆ ಅದಕ್ಕೆ ಪರಿಕ್ಕರ್ ಮಾನ್ಯತೆ ಕೊಡುತ್ತಾರೆಯೇ? ಹಾಗೆಲ್ಲ ಒಂದು ರಾಜ್ಯದ ಮುಖ್ಯಮಂತ್ರಿ ಮತ್ತೊಂದು ರಾಜ್ಯದ ಬೀದಿಬದಿ ಗುಂಡಣ್ಣ ನಿಗೆ ಪತ್ರ ಬರೆದು ಸಮಸ್ಯೆ ಇತ್ಯರ್ಥ ಮಾಡಲು ಆಗುತ್ತದೆಯೇ? ಅದಕ್ಕೊಂದು ರೀತಿ ರಿವಾಜು ಬೇಡವೇ? ಮನೋಹರ್ ಪರಿಕ್ಕರ್ ಅವರು ಸಿದ್ದರಾಮಯ್ಯನವರಿಗೆ ಪತ್ರ ಬರೆದು ಮಾನವೀಯತೆ ಆಧಾರದ ಮೇಲೆ ಕುಡಿಯಲು ನೀರು ಬಿಡುಗಡೆ ಮಾಡುತ್ತಿದ್ದೇವೆ ಎಂದು ಹೇಳಿದ್ದರೆ ಖಂಡಿತವಾಗಿಯೂ ಅದರ ಶ್ರೇಯಸ್ಸು ಬಿಜೆಪಿಗೇ ದಕ್ಕುತ್ತಿತ್ತು. ಇದು ಯಡಿಯೂರಪ್ಪನವರ ಶ್ರಮಕ್ಕೆ ಸಂದ ಫಲ ಎಂದೇ ಜನ ಅರ್ಥ ಮಾಡಿಕೊಳ್ಳುತ್ತಿದ್ದರು. ಹಾಗೆ ಅರ್ಥ ಮಾಡಿಕೊಳ್ಳದಿರುವಷ್ಟು ದಡ್ಡ ಜನರಲ್ಲ ಕನ್ನಡಿಗರು. ಅದೇ ರೀತಿ ಪರಿಕ್ಕರ್ ಅವರು ಸಿದ್ದರಾಮಯ್ಯನವರ ಬದಲು ಯಡಿಯೂರಪ್ಪನವರಿಗೆ ಪತ್ರ ಬರೆದಿರುವುದರ ಹಿಂದೆ ಅಡಗಿರುವುದು ಮತ ರಾಜಕೀಯವೇ ಎಂಬುದನ್ನೂ!

ಒಮ್ಮೊಮ್ಮೆ ಅತಿಯಾದ ಆತ್ಮವಿಶ್ವಾಸ ಈ ರೀತಿ ಎಡವಟ್ಟುಗಳನ್ನು ಮಾಡಿಬಿಡುತ್ತದೆ. ಈಗ ಕಾಂಗ್ರೆಸ್, ಜೆಡಿಎಸ್ ಎತ್ತುತ್ತಿರುವ ಪ್ರಶ್ನೆಗಳಿಗೆ ಬಿಜೆಪಿ ಬಳಿ ಉತ್ತರವಿಲ್ಲ. ಇದೇ ಮಹದಾಯಿ ವಿಚಾರ ಇಟ್ಟುಕೊಂಡು 2016 ರ ಆಗಸ್ಟ್ ‌ನಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ವಪಕ್ಷ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಹೋಗಿತ್ತು. ಆಗಲೂ ಮೋದಿ ಅವರು ಇದೇ ರೀತಿ ಪರಿಕ್ಕರ್ ಅವರಿಗೆ ಸೂಚನೆ ಕೊಟ್ಟು ವಿವಾದ ಬಗೆಹರಿಸಬಹುದಿತ್ತು. ಬದಲಿಗೆ ಅವತ್ತು ಅವರು ಹೇಳಿದ್ದು – ‘ನಾವು ಗೋವಾ ಬಿಜೆಪಿ ಮುಖಂಡರ ಮನವೊಲಿಸುತ್ತೇವೆ, ನೀವು ಅಲ್ಲಿನ ಕಾಂಗ್ರೆಸ್ ಮುಖಂಡರ ಮನವೊಲಿಸಿ’ ಎಂದು. ಆದರೆ ಇವತ್ತು ಸಿದ್ದರಾಮಯ್ಯ ಅವರು ಗೋವಾ ಕಾಂಗ್ರೆಸ್ ಮುಖಂಡರ ಮನವೊಲಿಸಿದರೋ, ಬಿಟ್ಟರೋ ಎಂಬುದನ್ನೂ ನೋಡದೇ ಪರಿಕ್ಕರ್ ಅವರಿಗೆ ನೀರು ಬಿಡಲು ಸೂಚನೆ ಕೊಟ್ಟಿದ್ದಾರೆ. ಏಕೆಂದರೆ ಗುಜರಾತ, ಹಿಮಾಚಲ ಪ್ರದೇಶ ಚುನಾವಣೆ ಮುಗಿಯಿತು. ಅವರ ಮುಂದಿನ ಟಾರ್ಗೆಟ್ ಕರ್ನಾಟಕ!

ಆದರೆ ಸಿದ್ದರಾಮಯ್ಯ ಸುಮ್ಮನಿದ್ದಾರೆಯೇ? ನಾನು ಅವತ್ತಿಂದ ಅನೇಕ ಪತ್ರ ಬರೆದರೂ ಪರಿಕ್ಕರ್ ಕ್ಯಾರೇ ಅಂದಿರಲಿಲ್ಲ. ಇವತ್ತು ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ನೀರು ಬಿಡುಗಡೆ ನಾಟಕ ಆಡುತ್ತಿದ್ದಾರೆ. ಅದ್ಯಾವ ಅಧಿಕಾರ ಸ್ಥಾನ ಗುರುತಿಸಿ ಯಡಿಯೂರಪ್ಪನವರಿಗೆ ಪತ್ರ ಬರೆದರು? ಬಿಜೆಪಿಯವರದು ಯಾವಾಗಲೂ ಎರಡು ನಾಲಿಗೆ, ಎರಡು ಮುಖ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅದಷ್ಟೇ ಅಲ್ಲದೆ ಮುಖ್ಯಮಂತ್ರಿ ಸ್ಥಾನದಿಂದ ಪರಿಕ್ಕರ್ ಅವರಿಗೆ ಪತ್ರ ಬರೆದು ಮಹದಾಯಿ ವಿವಾದ ಬಗೆಹರಿಸಲು ಸಭೆ ಕರೆಯುವಂತೆ ಆಗ್ರಹಿಸಿದ್ದಾರೆ. ಈಗಾಗಲೇ ಯಡಿಯೂರಪ್ಪನವರಗೆ ಪತ್ರ ಬರೆದು ನೀರು ಬಿಡುಗಡೆಗೆ ಸಮ್ಮತಿಸಿರುವ ಪರಿಕ್ಕರ್ ಸಭೆ ಕರೆಯುವಂತಿಲ್ಲ, ಹಾಗೆ ಬಿಡುವಂತೆಯೂ ಇಲ್ಲ. ಸಭೆ ಕರೆದರೆ ಸಿದ್ದರಾಮಯ್ಯನವರ ಮಾತಿಗೆ ಸಮ್ಮತಿಸಿದಂತೆ ಆಗುತ್ತದೆ. ಬಿಟ್ಟರೆ ಟೀಕೆ ಮುಂದುವರಿಯುತ್ತದೆ. ಅಂಥ ಇಕ್ಕಟ್ಟಿನ ಸ್ಥಿತಿಗೆ ಸಿಕ್ಕಿಕೊಂಡಿದ್ದಾರೆ. ಮೂರು ಬಾರಿ ಮುಖ್ಯಮಂತ್ರಿ ಹಾಗೂ ಕೇಂದ್ರದ ರಕ್ಷಣಾ ಖಾತೆ ಸಚಿವರೂ ಆಗಿದ್ದ ಪರಿಕ್ಕರ್ ಅವರಿಗೆ ಈ ರಾಜಕೀಯ ಸೂಕ್ಷ್ಮ ನಿಲುಕದೇ ಹೋದದ್ದು ಆಶ್ಚರ್ಯ ಮೂಡಿಸಿದೆ.

ಅತ್ತ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಕ್ಕೂ ಬಾರಿಸುತ್ತಿದ್ದಾರೆ. 2006 ರಲ್ಲಿ ಮುಖ್ಯಮಂತ್ರಿ ಆಗಿದ್ದ ಅವರು ಕಳಸಾ ಬಂಡೂರಿ ಯೋಜನೆ ಕಾಮಗಾರಿಗೆ ಅಡಿಗಲ್ಲು ಹಾಕಿದಾಗ ಗೋವಾದ ಕಾಂಗ್ರೆಸ್ ಸರಕಾರ ನ್ಯಾಯಾಧೀಕರಣ ರಚನೆ ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಕರ್ನಾಟಕದಲ್ಲಿ ಬಿಜೆಪಿಯ ಈಶ್ವರಪ್ಪ ಜಲ ಸಂಪನ್ಮೂಲ ಸಚಿವರಾಗಿದ್ದರು. ಗೋವಾದಲ್ಲಿ ಆಗಲೂ ಚುನಾವಣೆ ಸಮೀಪಿಸಿತ್ತು. 2007 ರಲ್ಲಿ ಗೋವಾ ಚುನಾವಣೆ ಪ್ರಚಾರ ಭಾಷಣದಲ್ಲಿ ಅಂದಿನ ಏಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಯಾವುದೇ ಕಾರಣಕ್ಕೂ ಕರ್ನಾಟಕಕ್ಕೆ ಮಹದಾಯಿ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಯಾಕೆಂದರೆ ಆಗ ಕರ್ನಾಟಕದಲ್ಲಿದ್ದುದು ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರ. ಹೀಗಾಗಿ ಸೋನಿಯಾ ರಾಜಕೀಯ ದಾಳ ಉರುಳಿಸಿದ್ದರು. ಗೋವಾದಲ್ಲಿ ಮತ್ತೆ ಕಾಂಗ್ರೆಸ್ ಗೆದ್ದು ಸರಕಾರ ರಚಿಸಿತ್ತು. ಇವತ್ತು ಪರಿಕ್ಕರ್ ಹಾಗೂ ಯಡಿಯೂರಪ್ಪನವರನ್ನು ಜರಿಯುತ್ತಿರುವ ಕಾಂಗ್ರೆಸ್ ಮುಖಂಡರು ಇದನ್ನು ಮರೆಯುವಂತಿಲ್ಲ. ಅಂದರೆ ಎಲ್ಲ ಕಾಲದಲ್ಲೂ ಮಿಂಚಿದ್ದು ರಾಜಕೀಯವೇ ಹೊರತು ಯಾರಿಗೂ ಮಹದಾಯಿ ಸಮಸ್ಯೆ ಬಗೆಹರಿಯುವುದು ಬೇಕಿರಲಿಲ್ಲ. ಈಗ ಆಗುತ್ತಿರುವುದೂ ಅಷ್ಟೇ.

ಹೌದು, ಮೂರೂವರೇ ದಶಕಕ್ಕಿಂತಲೂ ಹೆಚ್ಚು ಕಾಲದಿಂದಲೂ ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟ ಜಿಲ್ಲೆ ಜನರ ಕುಡಿಯುವ ನೀರಿನ ಬವಣೆ ಜತೆ ಗೋವಾ ರಾಜಕೀಯ ಚೆಲ್ಲಾಟವಾಡುತ್ತಾ ಬಂದಿದೆ. ನಮ್ಮ ರಾಜ್ಯದಲ್ಲಿ ಹುಟ್ಟಿದ್ದರೂ ತಮಿಳುನಾಡಿನ ಹಕ್ಕಾಗಿ ಪರಿವರ್ತಿತವಾಗಿರುವ ಕಾವೇರಿಯಂತೆಯೇ ಮಹದಾಯಿ ಕೂಡ ಕರ್ನಾಟಕದ ಮಟ್ಟಿಗೆ ಮಲತಾಯಿಯೇ ಆಗಿ ಪರಿಣಮಿಸಿದ್ದಾಳೆ. ಕರ್ನಾಟಕದಲ್ಲಿ ಹುಟ್ಟಿ, ಇಲ್ಲಿನ ನೆಲದಲ್ಲಿ 25 ಕಿ.ಮೀ. ಹರಿಯುವ ಮಹದಾಯಿ ಗೋವಾದಲ್ಲಿ 82 ಕಿ.ಮೀ. ಹರಿದು ಅರಬ್ಬಿ ಸಮುದ್ರ ಸೇರುತ್ತದೆ. ಅದರ ಒಟ್ಟಾರೆ ವ್ಯಾಪ್ತಿ 2032 ಚದರ ಕಿ.ಮೀ. ಆ ಪೈಕಿ ಕರ್ನಾಟಕದ್ದು 375, ಮಹಾರಾಷ್ಟ್ರದ್ದು 77 ಹಾಗೂ ಗೋವಾದ್ದು 1580 ಚದರ ಕಿ.ಮೀ. ಕರ್ನಾಟಕದಲ್ಲಿ ಹುಟ್ಟಿದ್ದರೂ ಹೆಚ್ಚಿನ ಲಾಭ ಗೋವಾಕ್ಕೆ. ಸಮುದ್ರಕ್ಕೆ ವ್ಯರ್ಥವಾಗಿ ಸೇರುತ್ತಿರುವ ನೀರಿನ ಪ್ರಮಾಣ 210 ಟಿಎಂಸಿ. ಈ ಪೈಕಿ ಒಂದಷ್ಟು ನೀರನ್ನು ಉತ್ತರ ಕರ್ನಾಟಕ ಭಾಗದ ಜನರ ಕುಡಿಯುವ ಉದ್ದೇಶಕ್ಕೆ ಮಲಪ್ರಭಾ ನದಿಗೆ ತಿರುಗಿಸಬೇಕು. ಇದರಿಂದ ಕರ್ನಾಟಕದ ಮಹದಾಯಿ, ಕಳಸಾ ಬಂಡೂರಿ ನಾಲಾ ತಿರುವು ಯೋಜನೆ ಅನುಷ್ಠಾನಕ್ಕೆ ಬಂದು ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂಬುದು 1980 ರಿಂದಲೂ ಇರುವ ಬೇಡಿಕೆ.

ಆದರೆ ಕೇಂದ್ರ, ಗೋವಾದಲ್ಲಿ ಬಂದ ನಾನಾ ಸರಕಾರಗಳು ಇದಕ್ಕೆ ಸೊಪ್ಪು ಹಾಕಲಿಲ್ಲ. ಬದಲಿಗೆ ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಶಕ್ತಿ ಮೀರಿ ಶ್ರಮಿಸಿವೆ. 1989 ರಲ್ಲಿ ಮಹದಾಯಿ ಯೋಜನೆಗೆ ಗೋವಾ ಮುಖ್ಯಮಂತ್ರಿ ಪ್ರತಾಪ ಸಿಂಹ ರಾಣೆ ಸರಕಾರ ಒಪ್ಪಿಗೆ ಕೊಟ್ಟದ್ದೊಂದು ಬಿಟ್ಟರೆ ಉಳಿದ ಎಲ್ಲ ಸರಕಾರಗಳು ಕರ್ನಾಟಕ ಜನರ ನೀರಡಿಕೆ ಜತೆ ಆಟವಾಟುತ್ತಾ ಬಂದಿವೆ. ಅದೇ ರೀತಿ ಕರ್ನಾಟಕದಲ್ಲೂ ಆಳ್ವಿಕೆ ನಡೆಸಿದ ಬೇರೆ ಬೇರೆ ಸರಕಾರಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಇದಕ್ಕೆ ತಾಳ-ತಂಬೂರಿ ಮೀಟುತ್ತಾ ಬಂದಿವೆ. ಹಿಂದೆ ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವರ ಸರಕಾರವಿದ್ದಾಗ ಗೋವಾದಲ್ಲೂ ಕಾಂಗ್ರೆಸ್ ಸರಕಾರವಿತ್ತು. ರಾಜ್ಯದ ಕಾಂಗ್ರೆಸ್ ಮುಖಂಡರು ಇಬ್ಬರ ಮೇಲೂ ಒತ್ತಡ ತಂದು ಸಮಸ್ಯೆ ಬಗೆಹರಿಸಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ಪರಿಹಾರ ಸಿಗುವಾಗ ಅದು ಅವರಿಗೆ ಬೇಕಿರುವುದಿಲ್ಲ. ಸಿಗುವುದಿಲ್ಲ ಎಂದು ಗೊತ್ತಾದಾಗ ಗಲಾಟೆ ಎಬ್ಬಿಸುತ್ತವೆ. ಈ ಗಲಾಟೆ ಕೂಡ ಮತ್ತದೇ ಮತ ರಾಜಕೀಯದ ಸುತ್ತಲೇ ಸುತ್ತುತ್ತಿರುತ್ತದೆ.

ಇದು ಮಹದಾಯಿಗಷ್ಟೇ ಸೀಮಿತವಲ್ಲ. ಉತ್ತರ ಕರ್ನಾಟಕ ಜನರ ಬಹುತೇಕ ಸಮಸ್ಯೆಗಳ ಗತಿಯೂ ಇದೇ ರೀತಿ ಸಾಗಿದೆ. ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಕಟ್ಟಿದಾಗ ಉತ್ತರ ಕರ್ನಾಟಕದ ಜನ ತಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಂಡು ದುಡ್ಡುಕಾಸು ಖರ್ಚು ಮಾಡಿಕೊಂಡು ದೂರದ ಬೆಂಗಳೂರಿಗೆ ಬರುವುದು ಬೇಡ. ನಾವೇ ಅವರ ಮನೆಬಾಗಿಲಿಗೆ ವಿಧಾನಸೌಧ ತರುತ್ತೇವೆ. ಅಲ್ಲಿಯೇ ಕುಳಿತು ಆ ಭಾಗದ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತೇವೆ ಎಂಬುದು ಜನ ನಾಯಕರ ಭರವಸೆ ಆಗಿತ್ತು. 2007 ರಲ್ಲಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅಡಿಗಲ್ಲು ಹಾಕಿದರು, 2012 ರಲ್ಲಿ ಆ ಸ್ಥಾನದಲ್ಲಿದ್ದ ಜಗದೀಶ ಶೆಟ್ಟರು ಉದ್ಘಾಟನೆ ಮಾಡಿದರು. ಸುವರ್ಣ ವಿಧಾನಸೌಧದಲ್ಲಿ ವಿಧಾನ ಮಂಡಲದ ವಿಶೇಷ ಅಧಿವೇಶನ ಪ್ರಕ್ರಿಯೆ ಆರಂಭವಾಗಿ ಐದು ವರ್ಷ ಆಯಿತು. ಹೆಚ್ಚು ಅಧಿವೇಶನ ನಡೆಸಿದ ಹೆಗ್ಗಳಿಕೆ ಸಿದ್ದರಾಮಯ್ಯನವರ ಸರಕಾರದ್ದು. ಆದರೆ ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆಗಳು ಸಮರ್ಪಕ ಚರ್ಚೆ ಆದವೇ? ಸಮಸ್ಯೆಗಳು ಬಗೆಹರಿದು ಹೋದವೇ? ಬಿಲ್ ಕುಲ್ ಇಲ್ಲ. ಅಲ್ಲಿನ ಜನ ಹಿಂದೆಯೂ ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು. ಇವತ್ತೂ ಅದೇ ಶೈಲಿಯಲ್ಲಿ ಕುಳಿತಿದ್ದಾರೆ. ಸುವರ್ಣ ವಿಧಾನಸೌಧ ನಿರ್ವಹಣೆ, ವಿಧಾನ ಮಂಡಲ ಅಧಿವೇಶನ ಖರ್ಚು ಬಿಳಿ ಆನೆ ಆಗಿರುವುದೊಂದು ಬಿಟ್ಟರೆ ಬೇರೇನೂ ಅಗಿಲ್ಲ. ಅವರ ಸಮಸ್ಯೆಗಳು ಅಟ್ಟ ಹತ್ತುತ್ತಿವೆ. ಇತ್ತೀಚೆಗೆ ನಡೆದ ಅಧಿವೇಶನವನ್ನಂತೂ ಜನಪ್ರತಿನಿಧಿಗಳ ಗೈರು ಎಂದು ಅಣಕಿಸಿ ಬಿಸಾಕಿದೆ. ಕಾರ್ಯಕ್ಷಮತೆ, ಬದ್ಧತೆ, ಪ್ರಾಮಾಣಿಕ ಕಾಳಜಿ ಇಲ್ಲದಿದ್ದರೆ ಒಂದು ಉದ್ದೇಶ ಹೇಗೆ ಸಾಯುತ್ತದೆ ಎಂಬುದಕ್ಕೆ ಸುವರ್ಣ ವಿಧಾನಸೌಧವೇ ಸಾಕ್ಷಿ.

ಸುವರ್ಣ ವಿಧಾನಸೌಧ ಎಂಬುದು ಉತ್ತರ ಕರ್ನಾಟಕ ಜನರ ದುರಾದೃಷ್ಟಕ್ಕೊಂದು ಸಂಕೇತ ಮಾತ್ರ. ನಾಡು, ನುಡಿ, ಗಡಿ, ಅಭಿವೃದ್ಧಿ ಯಾವುದೇ ವಿಚಾರ ತೆಗೆದುಕೊಂಡರೂ ಅವರ ಹಣೆಬರಹ ಇಷ್ಟೇ ಎಂಬಂತಾಗಿದೆ. ಈಗ ಅದಕ್ಕೊಂದು ಹೊಸ ಸೇರ್ಪಡೆ ಮಹದಾಯಿ ವಿಚಾರದಲ್ಲಿ ನಾನಾ ಪಕ್ಷಗಳು ಮಾಡುತ್ತಿರುವ ಮತ ರಾಜಕೀಯ!

ಲಗೋರಿ: ರಾಜಕೀಯ ಮನೆಯಲ್ಲಿ ದಾಳ ಒಬ್ಬರ ಸೊತ್ತಾಗಿರದು!

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply