ಭಾರತೀಯ ಸೇನೆಯಿಂದ ಮತ್ತೆ ಸರ್ಜಿಕಲ್ ಸ್ಟ್ರೈಕ್? ಪಾಕ್ ಸೇನಾ ತುಕಡಿಗಳು ಧ್ವಂಸ, ಕಾಶ್ಮೀರದಲ್ಲಿ ಜೆಇಎಂ ಉಗ್ರ ಹತ್ಯೆ

ಡಿಜಿಟಲ್ ಕನ್ನಡ ಟೀಮ್:

ಗಡಿ ನಿಯಂತ್ರಣ ರೇಖೆಯಲ್ಲಿ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸುತ್ತಿದ್ದ ಪಾಕಿಸ್ತಾನ ಸೇನೆಗೆ ಭಾರತೀಯ ಸೇನೆ ಸರಿಯಾದ ಪಾಠ ಕಲಿಸಿದೆ. ಸೋಮವಾರ ರಾತ್ರಿ ಪಾಕಿಸ್ತಾನದ ಗಡಿಯೊಳಗೆ ನುಗ್ಗಿದ ಭಾರತೀಯ ಸೇನೆ ಅಲ್ಲಿದ್ದ ಪಾಕ್ ಸೇನಾ ತುಕಡಿಗಳನ್ನು ಉಡಾಯಿಸಿವೆ. ಭಾರತೀಯ ಸೇನೆಯ ಈ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಮೂವರು ಸೈನಿಕರು ಸತ್ತಿದ್ದಾರೆ.

ಕಳೆದ ಶನಿವಾರ ರಾಜೌರಿ ಜಿಲ್ಲೆಯ ಕೇರಿ ಪ್ರದೇಶದಲ್ಲಿ ಪಾಕಿಸ್ತಾನ ಸೇನೆ ಅನಗತ್ಯವಾಗಿ ಗುಂಡಿನ ದಾಳಿ ಮಾಡಿ ಕದನ ವಿರಾಮ ಉಲ್ಲಂಘನೆ ಮಾಡಿತ್ತು. ಪಾಕಿಸ್ತಾನದ ಈ ದಾಳಿ ವೇಳೆ ಭಾರತದ ಮಬವರು ಯೋಧರು ಹಾಗೂ ಒಬ್ಬ ಸೇನಾಧಿಕಾರಿ ಹುತಾತ್ಮರಾಗಿದ್ದರು. ಎರಡು ದಿನಗಳ ನಂತರ ಪಾಕಿಸ್ತಾನ ಸೇನೆಯ ಪುಂಡಾಟಕ್ಕೆ ಸೇಡು ತೀರಿಸಿಕೊಂಡಿರುವ ಭಾರತೀಯ ಸೇನೆ ನಿನ್ನೆ ರಾತ್ರಿ ಪಾಕ್ ಗಡಿಯಲ್ಲಿದ್ದ ಸೇನಾ ತುಕಡಿಗಳನ್ನು ಧ್ವಂಸ ಮಾಡಿದೆ. ಆ ಮೂಲಕ ಪಾಕಿಸ್ತಾನ ಸೇನೆಗೆ ಬಿಸಿ ಮುಟ್ಟಿಸಿದೆ.

ಮತ್ತೊಂದೆಡೆ ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕರಿಗೆ ನೆರವು ನೀಡುತ್ತಿರುವವರನ್ನು ಹತ್ಯೆ ಮಾಡಿದ್ದು, ಆ ಮೂಲಕ ಜಮ್ಮು ಕಾಶ್ಮೀರದಲ್ಲಿ ಜೈಶ್ ಇ ಮೊಹಮದ್ ಸಂಘಟನೆಯ ಪ್ರಮುಖ ಉಗ್ರರನನ್ನು ಅತಂತ್ರ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ.

ಜಮ್ಮು ಕಾಶ್ಮೀರ ಪೊಲೀಸರು ಪುಲ್ವಾಮಾ ಜಿಲ್ಲೆಯ ಸಂಬೂರಾ ಪ್ರದೇಶದಲ್ಲಿ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಜೆಇಎಂ ಸಂಘಟನೆಯ ಕಾರ್ಯಚಾರಣೆ ಮಾಡುವ ಮುಖ್ಯ ಸದಸ್ಯನನ್ನು ಹೊಡೆದು ಹಾಕಿದೆ. 2015ರಲ್ಲಿ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ಜೆಇಎಂ ಉಗ್ರ ನೂರ್ ಮೊಹಮದ್ ತಂತ್ರಿ ನಂತರ ತಪ್ಪಿಸಿಕೊಂಡು ಭಯೋತ್ಪಾದಕ ಚಟುವಟಿಕೆಯಲ್ಲಿ ನಿರತರನಾಗಿದ್ದ. ಇದೇ ವರ್ಷ ಶ್ರೀನಗರ ವಿಮಾನ ನಿಲ್ದಾಣದಲ್ಲಿ ನಡೆದ ಆತ್ಮಹುತಿ ಬಾಂಬ್ ದಾಳಿಯ ರೂವಾರಿಯಾಗಿದ್ದು ಇದೇ ನೂರ್ ಮೊಹಮದ್. ಈತನ ಹತ್ಯೆಯಿಂದ ಜೆಇಎಂ ಸಂಘಟನೆಗೆ ದೊಡ್ಡ ಪೆಟ್ಟು ಬಿದ್ದಂತಾಗಿದೆ. ಈತನ ಸಾವಿನಿಂದ ಜೆಇಎಂ ಉಗ್ರ ಸಂಘಟನೆ ಕೇಂದ್ರ ಕಾಶ್ಮೀರದಲ್ಲಿ ತನ್ನ ಕಾರ್ಯಾಚರಣೆಯ ಕೊಂಡಿ ಕಳಚಿ ಬಿದ್ದಂತಾಗಿದೆ.

Leave a Reply