ಬಿಜೆಪಿಗೆ ಚುನಾವಣಾ ಅಸ್ತ್ರವಾಗಬೇಕಿದ್ದ ಮಹದಾಯಿ ವಿಷಯ ಈಗ ಉರುಳಾಗುತ್ತಿದೆ!

ಡಿಜಿಟಲ್ ಕನ್ನಡ ಟೀಮ್:

ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಮಹದಾಯಿ ವಿವಾದವನ್ನು ಅಸ್ತ್ರವಾಗಿ ಬಳಸಿಕೊಳ್ಳುವ ತಂತ್ರ ರೂಪಿಸಿದ್ದ ಬಿಜೆಪಿಗೆ ಈಗ ಅದೇ ಉರುಳಾಗಿ ಪರಿಣಮಿಸುತ್ತಿದೆ. ಮಹದಾಯಿ ಭಾಗದ ರೈತರು ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನ ಬಿಜೆಪಿ ಕಚೇರಿ ಮುಂದೆ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದು, ಇದರ ಬಿಸಿ ಬಿಜೆಪಿ ಹೈ ಕಮಾಂಡ್ ಅಮಿತ್ ಶಾಗೂ ಮುಟ್ಟಿದೆ. ಪರಿಣಾಮ ಅಮಿತ್ ಶಾ ರಾಜ್ಯ ನಾಯಕರಿಂದ ಹಿಡಿದು ಚುನಾವಣೆ ಉಸ್ತುವಾರಿ ಹೊತ್ತಿರುವ ಕೇಂದ್ರ ನಾಯಕರಾದ ಪ್ರಕಾಶ್ ಜಾವ್ಡೇಕರ್ ಹಾಗೂ ಪಿಯೂಷ್ ಗೋಯಲ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಹಗಲು ರಾತ್ರಿ ಎನ್ನದೇ ಕುಡಿಯುವ ನೀರಿಗಾಗಿ ಹೋರಾಡುತ್ತಿರುವ ಉತ್ತರ ಕರ್ನಾಟಕ ಭಾಗದ ರೈತರು ರಾತ್ರಿಯ ಚಳಿಗೂ ಬಗ್ಗುದೇ ಹೋರಾಟ ಮಾಡುತ್ತಿದ್ದಾರೆ. ಈ ರೈತರ ಹೋರಾಟಕ್ಕೆ ಇಂದು ಮತ್ತಷ್ಟು ಬಲ ಬಂದಿದೆ. ಕಾರಣ ಕನ್ನಡ ಪರ ಹಾಗೂ ವಿವಿಧ ಸಂಘಟನೆಗಳು ಈ ರೈತರ ಹೋರಾಟಕ್ಕೆ ಸಾಥ್ ನೀಡಿದ್ದು, ನಾಳೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಬಂದ್ ಗೆ ಕರೆ ನೀಡಲಾಗಿದೆ. ಇನ್ನು ಕನ್ನಡ ಚಿತ್ರರಂಗ ಕೂಡ ರೈತರ ನೆರವಿಗೆ ನಿಲ್ಲುವುದಾಗಿ ಘೋಷಿಸಿದ್ದು, ವಕೀಲರು ಹಾಗೂ ವೈದ್ಯರಿಂದಲೂ ಬೆಂಬಲ ವ್ಯಕ್ತವಾದ ಪರಿಣಾಮ ಇಂದು ಈ ಪ್ರತಿಭಟನೆ ಕಾವು ಹೆಚ್ಚಿದೆ.

ಚುನಾವಣೆ ಹೊತ್ತಲ್ಲಿ ಈ ವಿವಾದವನ್ನು ಬಗೆಹರಿಸಿ ಅದರ ಶ್ರೇಯವನ್ನು ತಾವೇ ಪಡೆದು ಮುಂದಿನ ಚುನಾವಣೆಯಲ್ಲಿ ರಣಕಹಳೆ ಊದಲು ಸಿದ್ಧವಾಗಿದ್ದ ಬಿಜೆಪಿ ಲೆಕ್ಕಾಚಾರ ಸಂಪೂರ್ಣ ಉಲ್ಟಾ ಹೊಡೆಯುತ್ತಿದೆ. ಕಳೆದ ವಾರ ಅಮಿತ್ ಶಾ ಮನೆಯಲ್ಲಿ ಸಭೆ ನಡೆದ ಬಳಿಕೆ ಮಹದಾಯಿ ವಿವಾದ ಬಗೆಹರಿದೇ ಬಿಟ್ಟಿತು ಎಂಬ ಮಟ್ಟಿಗೆ ರಾಜ್ಯ ಬಿಜೆಪಿ ನಾಯಕರು ಸಂಭ್ರಮಿಸಿದ್ದರು. ಆದರೆ ಯಾವಾಗ ಗೋವಾ ಮುಖ್ಯಮಂತ್ರಿ ಪರಿಕ್ಕರ್ ತಮ್ಮ ನಿರ್ಧಾರಕ್ಕೆ ಹಿಂದೇಟು ಹಾಕಿದರೋ ಅಲ್ಲಿಂದ ಬಿಜೆಪಿಗೆ ಈ ತಂತ್ರ ಮುಳುವಾಗಲಾರಂಭಿಸಿತು. ಇನ್ನು ಗೋವಾ ಸಿಎಂ ಪರಿಕ್ಕರ್ ಅವರು ಯಾವಾಗ ಮುಖ್ಯಮಂತ್ರಿಯವರಿಗೆ ಪತ್ರ ಬರೆಯದೇ ಯಡಿಯೂರಪ್ಪನವರಿಗೆ ಪತ್ರ ಬರೆದರೋ ಆಗ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಎಚ್ಚೆತ್ತುಕೊಂಡವು.

ಬಿಜೆಪಿ ನಾಯಕರ ನಡೆಯನ್ನು ಎಚ್ಚರಿಕೆಯಿಂದಲೇ ಗಮನಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣವೇ ಗೋವಾ ಮುಖ್ಯಮಂತ್ರಿ ಪರಿಕ್ಕರ್ ಅವರಿಗೆ ಪತ್ರ ಬರೆದು ಈ ವಿವಾದದ ಬಗ್ಗೆ ಚರ್ಚೆಗೆ ನಾವು ಸಿದ್ಧ, ಸಮಯ ಮತ್ತು ಸ್ಥಳ ನೀವೇ ನಿರ್ಧರಿಸಿ ಅಂತಾ ಈ ವಿವಾದದ ಚೆಂಡನ್ನು ತಮ್ಮ ಅಂಗಳದಿಂದ ಗೋವಾ ಬಿಜೆಪಿ ಅಂಗಳಕ್ಕೆ ಕಳುಹಿಸಿಯೇ ಬಿಟ್ಟರು. ಸಿದ್ದರಾಮಯ್ಯರ ಈ ತಂತ್ರ ರಾಜಕೀಯ ಚದುರಂಗದಾಟದಲ್ಲಿ ಬಿಜೆಪಿಗೆ ಚೆಕ್ ಮೇಟ್ ಆಗಿ ಪರಿಣಮಿಸಿದೆ.

ಒಂದು ತಿಂಗಳಲ್ಲಿ ವಿವಾದ ಬಗೆ ಹರಿಸುತ್ತೇನೆ ಎಂದು ಭರವಸೆ ಕೊಟ್ಟ ಯಡಿಯೂರಪ್ಪನವರಿಗೆ ಪರಿಕ್ಕರ್ ಉಲ್ಟಾ ಹೊಡೆದದ್ದು ದೊಡ್ಡ ಮುಖಭಂಗವಾಯಿತು. ಉತ್ತರ ಕರ್ನಾಟಕದ ಭಾಗದ ಜನರು ಬಿಎಸ್ ವೈ ಅವರನ್ನು ಅನುಮಾನದ ದೃಷ್ಟಿಯಿಂದ ನೋಡಲಾರಂಭಿಸಿದ್ದಾರೆ. ಬಿಜೆಪಿ ನಾಯಕರ ಈ ಪರದಾಟ ನೋಡಿದ ಉತ್ತರ ಭಾಗದ ರೈತರಿಗೆ ಮಹದಾಯಿ ನೀರು ನಿಜವಾಗಿಯೂ ನಮಗೆ ಸಿಗುತ್ತದೆಯೇ ಎಂಬ ಆತಂಕ ಉಂಟಾಗಿದೆ. ಇದೇ ಕಾರಣಕ್ಕೆ ಕಳೆದ ನಾಲ್ಕು ದಿನಗಳ ಹಿಂದೆಯೇ ಉತ್ತರ ಕರ್ನಾಟಕ ರೈತರು ಈ ಬಗ್ಗೆ ನಮಗೆ ಸ್ಪಷ್ಟ ಮಾಹಿತಿ ಪಡೆಯಲು ಬೆಂಗಳೂರಿನ ಬಿಜೆಪಿ ಕಚೇರಿ ಮುಂದೆ ಕಾಯುತ್ತಾ ಕುಳಿತಿದ್ದಾರೆ. ಆದರೆ ಇವರ ಬಗ್ಗೆ ಗಮನ ಕೊಡದೇ ಪರಿವರ್ತನಾ ಯಾತ್ರೆಯಲ್ಲಿ ನಾಯಕರು ಮಗ್ನರಾಗಿದ್ದು, ಇದೊಂದು ಕಾಂಗ್ರೆಸ್, ಜೆಡಿಎಸ್ ಪ್ರೇರಿತ ಪ್ರತಿಭಟನೆ ಎಂಬ ಹೇಳಿಕೆಗಳನ್ನು ನೀಡಿದರು. ಇದು ಸಹಜವಾಗಿಯೇ ರೈತರಿಗೆ ನಿರಾಸೆಯಾಗಿ ಬಿಜೆಪಿ ನಾಯಕ ಯಡಿಯೂರಪ್ಪನವರು ನಮ್ಮನ್ನು ಭೇಟಿ ಮಾಡಲೇ ಬೇಕು ಎಂದು ಪಟ್ಟು ಹಿಡಿದರು.

ಈ ವಿಚಾರ ಇಷ್ಟು ದೊಡ್ಡದಾಗಿ ಬೆಳೆಯಲು ಅವಕಾಶ ನೀಡಿರುವುದು ರಾಜ್ಯ ಬಿಜೆಪಿ ನಾಯಕರ ನಡುವೆ ಇರುವ ಒಗ್ಗಟ್ಟಿ ಕೊರತೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ರೈತರು ಬೆಂಗಳೂರಿಗೆ ಆಗಮಿಸಿದ ಮೊದಲ ದಿನವೇ ಅವರ ಮನವೊಲಿಸುವ ಪ್ರಯತ್ನ ಮಾಡಬಹುದಿತ್ತು. ಸಂಸದೆ ಶೋಭಾ ಕರಂದ್ಲಾಜೆ ಹೊರತುಪಡಿಸಿ ಇನ್ಯಾವುದೇ ನಾಯಕರು ಈ ರೈತರ ಕಡೆ ತಿರುಗಿಯೂ ನೋಡಿಲ್ಲ. ಇದೇನಿದ್ದರು ಯಡಿಯೂರಪ್ಪನವರ ಉಸಾಬರಿ ತಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂಬ ರೀತಿಯಲ್ಲಿ ಜಾಣ ಕುರುಡಾದರು.

ಇಂದು ಪಕ್ಷದ ಕಚೇರಿಯಲ್ಲಿ ನಡೆಯಬೇಕಿದ್ದ ಕೋರ್ ಕಮಿಟಿ ಸಭೆ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪನವರ ಮನೆಗೆ ಸ್ಥಳಾಂತರವಾಯಿತು. ಈ ಸಭೆಯಲ್ಲಿ ತಮ್ಮ ಪಕ್ಷದ ನಾಯಕರ ಮೇಲೆ ಬಿಎಸ್ ವೈ ಅಸಮಾಧಾನ ವ್ಯಕ್ತಪಡಿಸಿದರು. ಈ ವಿಷಯದಲ್ಲಿ ಬಿಜೆಪಿಗಾಗುತ್ತಿರುವ ನಷ್ಟವನ್ನು ಕೂಡಲೇ ತಡೆಯಬೇಕು. ಈ ವಿಷಯದಲ್ಲಿ ಪಕ್ಷ ಎಡವಿರುವುದು ಎಲ್ಲಿ ಎಂದು ಪರಾಮರ್ಶಿಸಬೇಕು. ಈ ಕೂಡಲೇ ಪ್ರತಿಭಟನಾಕಾರರ ಮನವೊಲಿಸಬೇಕು ಎಂದು ರಾಜ್ಯ ಬಿಜೆಪಿ ನಾಯಕರಿಗೆ ಕೇಂದ್ರದಿಂದ ಖಡಕ್ ಸೂಚನೆ ಬಂದಿದೆ.

ಈ ಎಲ್ಲಾ ಬೆಳವಣಿಗೆಗಳು ಬಿಜೆಪಿಗೆ ಚುನಾವಣಾ ಅಸ್ತ್ರವಾಗಬೇಕಿದ್ದ ಮಹದಾಯಿ ವಿವಾದ ಉರುಳಾಗಿ ಪರಿಣಮಿಸುತ್ತಿರುವುದಕ್ಕೆ ಸಾಕ್ಷಿಯಾಗಿವೆ. ಬಿಜೆಪಿ ತಕ್ಷಣವೇ ಎಚ್ಚೆತ್ತು ಉರುಳಿನಿಂದ ಪಾರಾಗುತ್ತದೆಯೇ ಎಂಬ ಕುತೂಹಲ ಮೂಡಿದೆ.

Leave a Reply