ನಾಲಾಯಕ್ ನಾಯಕರು ನಮಗೆ ಬೇಡ! ಜವಾಬ್ದಾರಿ ಮರೆತ ರಾಜಕಾರಣಿಗಳಿಗೆ ರೈತರಿಂದ ಶಾಕ್!

ಡಿಜಿಟಲ್ ಕನ್ನಡ ಟೀಮ್:

ಜನರ ಸಮಸ್ಯೆಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳ ವಿರುದ್ಧ ಮಹದಾರಿ ಹೋರಾಟಗಾರರು ತಿರುಗಿ ಬಿದ್ದಿದ್ದಾರೆ. ನಾಡು ನುಡಿ ನೆಲ ವಿಷಯದಲ್ಲಿ ಒಗ್ಗಟಾಗುವ ಬದಲಾಗಿ ರಾಜಕೀಯ ಕಚ್ಚಾಟ ನಡೆಸುವ ನಾಯಕರು ನಮಗೆ ಬೇಡ ಅವರನ್ನು ಅನರ್ಹಗೊಳಿಸಿ ಎಂದು ಮಹದಾಯಿ ಹೋರಾಟಗಾರರು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ನೆರೆಯ ತಮಿಳುನಾಡು, ಆಂಧ್ರ ಪ್ರದೇಶ, ಗೋವಾ ರಾಜ್ಯಗಳಲ್ಲಿ ನೆಲ ಜಲ ಭಾಷೆ ವಿಚಾರ ಬಂದರೆ ಎಲ್ಲ ನಾಯಕರು ಪಕ್ಷಭೇದ ಮರೆತು ಒಟ್ಟಾಗಿ ಹೋರಾಟ ಮಾಡುತ್ತಾರೆ. ಆದರೆ ಕನ್ನಡಿಗರ ದುರಾದೃಷ್ಟ ನಮ್ಮ ಸಮಸ್ಯೆಗಳೇ ನಮ್ಮ ನಾಯಕರ ಬಂಡವಾಳವಾಗುತ್ತಿದೆ. ನಮ್ಮ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳದೇ ಅದನ್ನೇ ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಪದೇ ಪದೇ ಇಂತಹ ನಾಯಕರ ವರ್ತನೆ ಕಂಡು ಬೇಸತ್ತಿರುವ ಮಹದಾಯಿ ಹೋರಾಟಗಾರರು ಚುನಾವಣಾ ಆಯೋಗದ ಮೊರೆ ಹೋಗಿದ್ದಾರೆ.

ನಮ್ಮ ಸಮಸ್ಯೆ ಬಗೆ ಹರಿಸದ ನಾಯಕರನ್ನು ಅನರ್ಹಗೊಳಿಸುವುದಷ್ಟೇ ಅಲ್ಲದೆ, ಈ ಸಮಸ್ಯೆ ಬಗೆಹರಿಯುವವರೆಗೂ ಚುನಾವಣೆ ಮಾಡಬಾರದು. ಈ ನಾಯಕರನ್ನು ಕನಿಷ್ಠ ಆರು ವರ್ಷ ವಜಾಗೊಳಿಸಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ಹೇರಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮಹದಾಯಿ ವಿಚಾರದಲ್ಲಿ ರಾಜ್ಯದ ಜನರಿಗೆ ಅನ್ಯಾಯಾವಾಗುತ್ತಿದೆ. ನಮ್ಮ ಜನರಿಗಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಬೇಕಾದ ನಾಯಕರು, ಗೋವಾ ರಾಜ್ಯದ ವಿರುದ್ಧ ಹೋರಾಡುವ ಬದಲಿಗೆ ತಮ್ಮ ತಮ್ಮಲ್ಲಿಯೇ ಕಿತ್ತಾಟ ನಡೆಸುತ್ತಿರುವುದು ನಮ್ಮ ದೌರ್ಭಾಗ್ಯ. ಇಂತಹ ನಾಯಕರು ಇದ್ದರೆಷ್ಟು ಬಿಟ್ಟರೆಷ್ಟು. ಜನರ ಸಮಸ್ಯೆಗಳನ್ನು ಚುನಾವಣಾ ಪ್ರಣಾಳಿಕೆಯಲ್ಲಿ ತೋರಿಸಿ ಮತ ಪಡೆದು ಗೆದ್ದ ನಾಯಕರು, ಆನಂತರ ತಮ್ಮತ್ತ ತಿರುಗಿ ನೋಡದ ನಾಯಕರ ವಿರುದ್ಧ ಈಗ ಜನರು ತಿರುಗಿ ಬಿದ್ದಿದ್ದಾರೆ.

ನಮ್ಮ ರೈತರ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ ತಮ್ಮ ಸಮಸ್ಯೆ ಬಗೆಹರಿಸಿ ಎಂದು ಮನವಿ ಸಲ್ಲಿಸಲು ರಾಜಭವನಕ್ಕೆ ಹೋದರೆ, ರಾಜ್ಯಪಾಲರು ಭೇಟಿಗೆ ಅವಕಾಶ ನೀಡದೇ ಅಪಮಾನ ಮಾಡಿ ಕಳುಹಿಸಿದ್ದಾರೆ. ರೈತರು ತಮ್ಮ ಮನವಿಯನ್ನು ಅಧಿಕಾರಿಗಳಿಗೆ ನೀಡಿ ಮರಳಿದ್ದಾರೆ. ನಂತರ ಚುನಾವಣಾ ಆಯೋಗಕ್ಕೆ ಭೇಟಿ ನೀಡಿ ತಮ್ಮ ಮನವಿ ಸಲ್ಲಿಸಿದ್ದಾರೆ. ಇದಾದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದು. ಆನಂತರ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರೈತರ ಪ್ರತಿಭಟನೆಯ ನಡುವೆಯೂ ತಮ್ಮ ರಾಜ್ಯ ಪ್ರವಾಸ ಮುಂದುವರಿಸಿದ್ದಾರೆ. ಹೀಗಾಗಿ ಪ್ರತಿಭಟನಾನಿರತ ರೈತರು ಸಿಎಂ ನಿವಾಸ ಕಾವೇರಿ ಬಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ. ಇನ್ನು ದೇವೇಗೌಡರು ಅಧಿವೇಶನದ ಹಿನ್ನೆಲೆಯಲ್ಲಿ ದೆಹಲಿಯಲ್ಲಿರುವ ಕಾರಣ, ರೈತರು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಿಗೆ ಸಲ್ಲಿಸಲು ದೇವೇಗೌಡರ ನಿವಾಸದಿಂದ ಸಲಹೆ ಮಾಡಲಾಗಿದೆ. ಹೀಗಾಗಿ ಪ್ರತಿಭಟನಾ ನಿರತ ರೈತರು ಜೆ.ಪಿ ನಗರದ ಕುಮಾರಸ್ವಾಮಿ ನಿವಾಸಕ್ಕೆ ಭೇಟಿ ನೀಡಿ ಮನವಿ ಸಲ್ಲಿಸುವ ಸಾಧ್ಯತೆ ಇದೆ.

ರಾಜ್ಯಪಾಲರಿಗೆ ಈ ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸಿ ಎಂದು ಮನವಿ ಮಾಡಿದರೆ, ಮುಖ್ಯಮಂತ್ರಿಗಳಿಗೆ ಗೋವಾ ಸರ್ಕಾರದ ಜತೆ ಮಾತುಕತೆ ನಡೆಸಿ ನಮ್ಮ ಕೂಗನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸಿ ಎಂದು ಮನವಿ ಮಾಡಿದ್ದಾರೆ. ಇನ್ನು ದೇವೇಗೌಡರು ಮಾಜಿ ಪ್ರಧಾನಿಯಾಗಿದ್ದು, ಮೋದಿ ಅವರ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಲಿದ್ದಾರೆ. ಒಟ್ಟಿನಲ್ಲಿ ರಾಜ್ಯದ ಎಲ್ಲ ನಾಯಕರು ತಮ್ಮ ಜವಾಬ್ದಾರಿಗೆ ತಕ್ಕಂತೆ ಜನರ ಸಮಸ್ಯೆ ಬಗೆಹರಿಸಬೇಕು ಎಂಬುದು ಈ ಮನವಿಯ ಒಟ್ಟಾರೆ ಸಾರಾಂಶ. ರೈತರ ಈ ಮನವಿಗೆ ನಮ್ಮ ನಾಯಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಈಗ ಗಮನ ಸೆಳೆದಿದೆ.

Leave a Reply