ಕೇವಲ ನಾಲ್ಕು ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ ಮಹದಾಯಿ ಹೋರಾಟ, ಉತ್ತರ ಭಾಗದ ರೈತರ ಕೂಗಿಗೆ ಧ್ವನಿಗೂಡಿಸುತ್ತಿದೆ ಇಡೀ ಕರ್ನಾಟಕ

ಡಿಜಿಟಲ್ ಕನ್ನಡ ಟೀಮ್:

ಕೇವಲ ಉತ್ತರ ಕರ್ನಾಟಕದ ನಾಲ್ಕೈದು ಜಿಲ್ಲೆಗೆ ಸೀಮಿತವಾಗಿದ್ದ ಮಹದಾಯಿ ಹೋರಾಟ ಈಗ ಇಡೀ ರಾಜ್ಯದ ಹೋರಾಟವಾಗಿ ಪರಿವರ್ತನೆಗೊಳ್ಳುತ್ತಿದೆ. ನಾಲ್ಕು ದಿನಗಳ ಕಾಲ ಬೆಂಗಳೂರಿನ ಬಿಜೆಪಿ ಕಚೇರಿ ಮುಂದೆ ಮಹದಾಯಿ ಭಾಗದ ರೈತರ ಪ್ರತಿಭಟನೆಗೆ ಕನ್ನಡ ಚಿತ್ರರಂಗ, ಕನ್ನಡ ಪರ ಸಂಘಟನೆ, ವಕೀಲರು, ಖಾಸಗಿ ವೈದ್ಯರು ಸೇರಿದಂತೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಪ್ರತಿಭಟನೆಯ ಐದನೇ ದಿನವಾದ ಇಂದು ಉತ್ತರ ಕರ್ನಾಟಕ ಜಿಲ್ಲೆಗಳ ಬಂದ್ ಗೆ ಕರೆ ನೀಡಲಾಗಿದೆ.

ಈ ನಾಲ್ಕು ಜಿಲ್ಲೆಗಳಲ್ಲಿ ಇಂದು ಪ್ರತಿಭಟನೆಗಳು ಜೋರಾಗುತ್ತಿರುವ ಬೆನ್ನಲ್ಲೇ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ಹೋರಾಟದ ಕಾವು ಹೆಚ್ಚುತ್ತಿದೆ. ಹುಬ್ಬಳ್ಳಿ ಧಾರವಾಡ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ರಸ್ತೆಗಳಲ್ಲಿ ಬೆಂಕಿ ಹಾಕಿ ಅಂಗಡಿ ಮುಂಗಟ್ಟು ಮುಚ್ಚಿ, ಶಾಲಾ ಮಕ್ಕಳು ಸೇರಿದಂತೆ ಎಲ್ಲಾ ವರ್ಗದ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.

ಇತ್ತ ಬೆಂಗಳೂರಿನಲ್ಲಿ ಮಹದಾಯಿ ಭಾಗದ ರೈತರು ರಾಜಭವನಕ್ಕೆ ಹೋಗಿ ಈ ವಿಚಾರ ಬಗೆಹರಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಇನ್ನು ವಿವಿಧ ಜಿಲ್ಲೆಗಳಲ್ಲಿ ಸಂಘ ಸಂಸ್ಥೆಗಳು ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದಾರೆ.

ಕಾವೇರಿ ಹೋರಾಟ ಕೇವಲ ದಕ್ಷಿಣ ಕರ್ನಾಟಕಕ್ಕೆ, ಮಹದಾಯಿ ಉತ್ತರ ಕರ್ನಾಟಕಕ್ಕೆ, ಎತ್ತಿನಹೊಳೆ ಕೇವಲ ಕರಾವಳಿ ಭಾಗದ ಕರ್ನಾಟಕದ ಹೋರಾಟ ಎಂದೇ ಬಿಂಬಿತವಾಗುತ್ತಿತ್ತು. ಆದರೆ ಈಗ ಮಹದಾಯಿ ಹೋರಾಟ ಕೇವಲ ನಾಲ್ಕು ಜಿಲ್ಲೆಗೆ ಮಾತ್ರ ಸೀಮಿತವಾಗದೇ ಎಲ್ಲಾ ಜಿಲ್ಲೆಗಳಿಂದಲೂ ಉತ್ತರ ಕರ್ನಾಟಕದ ರೈತರ ಕೂಗಿಗೆ ಧ್ವನಿಗೂಡಿಸುತ್ತಿರೋದು ರಾಜ್ಯದ ಒಗ್ಗಟ್ಟಿಗೆ ಸಾಕ್ಷಿಯಾಗುತ್ತಿದೆ. ಉತ್ತರ ಕರ್ನಾಟಕ ಜಿಲ್ಲೆಯಂತೆ ಇತರೆ ಜಿಲ್ಲೆಗಳಲ್ಲೂ ಪ್ರತಿಭಟನೆಗಳು ತೀವ್ರಗೊಂಡು ಉತ್ತರ ಭಾಗದ ಜನರಿಗೆ ಬೆಂಬಲ ಸೂಚಿಸಬೇಕಿದೆ. ಆಗ ಮಾತ್ರ ಭಾಷೆ ನೆಲ ಜಲದ ವಿಷಯದಲ್ಲಿ ಕನ್ನಡಿಗರ ಒಗ್ಗಟ್ಟಿನ ತಾಕತ್ತು ದೆಹಲಿಗೂ ಮನವರಿಕೆಯಾಗುತ್ತದೆ. ಇಲ್ಲವಾದರೆ ಈ ಹೋರಾಟಗಳೆಲ್ಲಾ ರಾಜಕಾರಣಿಗಳ ರಾಜಕೀಯ ಕೃಷಿಗೆ ಸೀಮಿತವಾಗುತ್ತದೆ.

Leave a Reply