ಮಹದಾಯಿ ಹೋರಾಟ ನೀರಿಗಾಗಿಯೋ ರಾಜಕೀಯಕ್ಕಾಗಿಯೋ?

ಡಿಜಿಟಲ್ ಕನ್ನಡ ಟೀಮ್:

ಸದ್ಯ ಇಡೀ ರಾಜ್ಯವ್ಯಾಪಿ ಪಸರಿಸುತ್ತಿರುವ ಮಹದಾಯಿ ಹೋರಾಟ ಉತ್ತರ ಕರ್ನಾಟಕ ಭಾಗದ ಜನರಿಗೆ ಕುಡಿಯುವ ನೀರು ಸಿಗುವಂತೆ ಮಾಡಲೋ ಅಥವಾ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಬೆಳೆ ತೆಗೆಯಲೋ ಎಂಬ ಅನುಮಾನ ಹುಟ್ಟುಕೊಳ್ಳುತ್ತಿದೆ.

ಇದಕ್ಕೆ ಸಾಕ್ಷಿ ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಣ ರಾಜಕೀಯ ಕಿತ್ತಾಟವೇ ಸಾಕ್ಷಿ. ಮಹದಾಯಿ ಭಾಗದ ರೈತರು ಯಡಿಯೂರಪ್ಪನವರಿಂದ ಸ್ಪಷ್ಟನೆ ಬೇಕು ಎಂದು ನಡೆಸುತ್ತಿರುವ ಹೋರಾಟ ಕಾಂಗ್ರೆಸ್ ಪ್ರಾಯೋಜಕತ್ವ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ರೈತ ಮೋರ್ಚಾ ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ರೈತರ ಸಮೇತ ಹೋರಾಟಕ್ಕಿಳಿಯಲು ಮುಂದಾಗಿದ್ದಾರೆ. ಬಿಜೆಪಿಯವರ ವಿರುದ್ಧ ಪ್ರತಿ ಹೋರಾಟಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಸಜ್ಜಾಗಿದ್ದಾರೆ. ಈ ಇಬ್ಬರ ರಾಜಕೀಯ ಕಚ್ಚಾಟದಲ್ಲಿ ನಿಜವಾಗಿಯೂ ಬಳಲುತ್ತಿರುವುದು ಉತ್ತರ ಕರ್ನಾಟಕ ಭಾಗದ ಜನರು.

ಮಹದಾಯಿ ನೀರಿಗಾಗಿ ಕರ್ನಾಟಕ ಹಾಗೂ ಗೋವಾ ರಾಜ್ಯದ ನಡುವಣ ಬಿಕ್ಕಟ್ಟು ಕಳೆದ 3 ದಶಕಗಳಿಂದಲೂ ಇದೆಯಾದರೂ ಉತ್ತರ ಕರ್ನಾಟಕದ ಜನರು ಮಹದಾಯಿ ನೀರಿಗಾಗಿ ಆರಂಭಿಸಿರುವ ನಿರಂತರ ಹೋರಾಟ ಇಂದು 867ನೇ ದಿನಕ್ಕೆ ಕಾಲಿಟ್ಟಿದೆ. ಅಲ್ಲಿಗೆ ಸುಮಾರು ಎರಡುವರೆ ವರ್ಷದಿಂದ ಈ ಹೋರಾಟ ನಡೆಯುತ್ತಲೇ ಇದೆ. ಆದರೆ ಈ ಜನರ ಹೋರಾಟಕ್ಕೆ ರಾಜಕೀಯ ನಾಯಕರು ಸ್ಪಂದಿಸಿರುವ ರೀತಿ ನಿಜಕ್ಕೂ ದುರಾದೃಷ್ಟಕರ. ಈ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ಜವಾಬ್ದಾರಿಯನ್ನು ಮರೆತು ಸ್ವಾರ್ಥಕ್ಕೆ ಜೋತು ಬಿದ್ದಿರುವುದು ಢಾಳಾಗಿ ಕಾಣಿಸುತ್ತಿದೆ. ಗೋವಾ ಚುನಾವಣೆ ಸಂದರ್ಭದಲ್ಲಿ ಕರ್ನಾಟಕಕ್ಕೆ ಮಹದಾಯಿಯ ಒಂದು ಹನಿ ನೀರನ್ನು ಬಿಡುವುದಿಲ್ಲ ಎಂದು ಆಗಿನ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದನ್ನು ಮರೆತಿದ್ದಾರೆ. ಇನ್ನು ಬಿಜೆಪಿ ಅವರು ದೆಹಲಿಯಲ್ಲಿ ಅಮಿತ್ ಶಾ ಹಾಗೂ ಮೋದಿ ಮುಂದೆ ಹೋಂ ವರ್ಕ್ ಮಾಡದ ವಿದ್ಯಾರ್ಥಿಗಳು ಶಾಲೆಯಲ್ಲಿ ತಲೆ ತಗ್ಗಿಸಿ ನಿಲ್ಲುವಂತೆ ನಿಲ್ಲುತ್ತಾರೆ. ಕರ್ನಾಟಕದ ಜನರ ಕೂಗು ಏನಿದೆ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ನಾಯಕರ ಮೇಲೆ ಒತ್ತಡ ಹಾಕಲು ಇವರಿಗೆ ಗುಂಡಿಗೆ ಇಲ್ಲವಾಗಿದೆ.

ಅಮಿತ್ ಶಾ ಮನೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಗೋವಾ ಮುಖ್ಯಮಂತ್ರಿ ಪರಿಕ್ಕರ್ ಜತೆ ಸಂಧಾನ ಸಭೆ ನಡೆಸಿ ರಾಜ್ಯ ಸರ್ಕಾರವನ್ನು ಕಡೆಗಣಿಸಿ ಏಕಪಕ್ಷೀಯವಾಗಿ ಇದರ ಲಾಭ ಪಡೆಯಲು ಮುಂದಾಗಿತ್ತು. ಈಗ ಬಿಜೆಪಿ ನಾಯಕರು ತಮ್ಮ ಮಾತಿಗೆ ವಿಫಲರಾಗಿದ್ದಾರೆ. ಬಿಜೆಪಿ ನಾಯಕರ ವಿಫಲವನ್ನೇ ಬಂಡವಾಳ ಮಾಡಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ಸಿದ್ಧವಾಗಿ ನಿಂತಿದೆ. ಗೋವಾ ಕಾಂಗ್ರೆಸ್ ಅಧ್ಯಕ್ಷರು ಪರಿಕ್ಕರ್ ಕರ್ನಾಟಕಕ್ಕೆ ನೀರು ಬಿಡಬಾರದು ಎಂಬ ಒತ್ತಡ ಹೇರುತ್ತಿರುವುದನ್ನು ತಡೆಯಲು ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗಿಲ್ಲ.

ಬಿಜೆಪಿ ನಾಯಕರು ತಮ್ಮ ಮಾತನ್ನು ತಪ್ಪಿದ್ದಾರೆ ಎಂದು ಹೇಳಿಕೊಂಡು ತಿರುಗುವುದರಲ್ಲೇ ಸಿದ್ದರಾಮಯ್ಯನವರು ನಿರತರಾಗಿದ್ದಾರೆ. ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಮುಖ್ಯಮಂತ್ರಿಗಳು ಜನರ ಕೂಗಿಗೆ ಸ್ಪಂದಿಸಿ ಸರ್ವ ಪಕ್ಷ ಸಭೆಯನ್ನು ಕರೆದು ಮುಂದಿನ ಹೆಜ್ಜೆ ಹೇಗೆ ಇಡಬೇಕು ಎಂಬುದನ್ನು ಚರ್ಚಿಸುವುದನ್ನು ಬಿಟ್ಟು ಬಿಜೆಪಿ ವಿರುದ್ಧ ಜನರನ್ನು ಎತ್ತಿಕಟ್ಟುವುದರಲ್ಲೇ ಮಗ್ನರಾಗಿದ್ದಾರೆ.

ಇತ್ತ ಜೆಡಿಎಸ್ ನಾಯಕರು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಲ ವಿರುದ್ಧದ ಟೀಕಿಸುತ್ತಿದೆ. ಈ ವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಅವರನ್ನು ಕರೆಸಿ ಕಿವಿಮಾತು ಹೇಳಬಹುದಿತ್ತು. ಕಾವೇರಿ ಹೋರಾಟದಲ್ಲಿ ಹೇಗೆ ಉಪವಾಸ ಕೂತು ಪ್ರಧಾನಿ ಮೋದಿಗೆ ಬಿಸಿ ಮುಟ್ಟಿಸಿದ್ದರೋ ಅದೇ ರೀತಿ ಮೋದಿ ಮೇಲೆ ಒತ್ತಡ ಹೇರಬಹುದು. ಜತೆಗೆ ಕಾಂಗ್ರೆಸ್ ಮುಖಂಡರೊಂದಿಗೂ ಚರ್ಚಿಸಿ ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬಹುದಿತ್ತು.

ರಾಜ್ಯದಲ್ಲಿರುವ ಮೂರು ಪ್ರಮುಖ ಪಕ್ಷಗಳು ತಮ್ಮ ಜವಾಬ್ದಾರಿಯನ್ನು ಮರೆತಿವೆ. ಅದಕ್ಕೆ ಕಾರಣ ಚುನಾವಣೆ ಸಮೀಪಿಸುತ್ತಿರುವುದು. ಮಹದಾಯಿಯನ್ನು ಚುನಾವಣ ಅಸ್ತ್ರವಾಗಿ ಬಳಸಲು ಬಿಜೆಪಿ ಪ್ರಯತ್ನಿಸಿದ್ದು, ಈಗ ಅದೇ ವಿಚಾರದಲ್ಲಿ ಬಿಜೆಪಿ ವಿರುದ್ಧದ ಅಲೆ ಎಬ್ಬಿಸಲು ಕಾಂಗ್ರೆಸ್ ಸುಮ್ಮನಿರುವುದು, ಈ ಎರಡು ರಾಷ್ಟ್ರೀಯ ಪಕ್ಷಗಳು ಯಾವ ಮಟ್ಟಕ್ಕೆ ಸಾಗುತ್ತದೆ ಎಂದು ಜೆಡಿಎಸ್ ನೋಡಿ ಕುಳಿತಿದೆ. ಈ ಮೂರು ಪಕ್ಷಗಳ ತಲೆಯಲ್ಲಿ ಚುನಾವಣ ರಾಜಕೀಯವೇ ತುಂಬಿರುವಾಗ ಉತ್ತರ ಕರ್ನಾಟಕ ಜನರ ದಾಹದ ಕೂಗು ಕೇಳಿಸದಂತಾಗಿದೆ.

Leave a Reply