ಜಾತ್ಯಾತೀತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಲೋಕಸಭೆಯಲ್ಲಿ ಕ್ಷಮೆ ಕೇಳಿದ್ರು ಅನಂತಕುಮಾರ ಹೆಗಡೆ

ಡಿಜಿಟಲ್ ಕನ್ನಡ ಟೀಮ್:

ಜಾತ್ಯಾತೀತರು ಮತ್ತು ಸಂವಿಧಾನ ಕುರಿತು ತಾವು ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸಂಸತ್ತಿನ ಒಳಗೆ ಮತ್ತು ಹೊರಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಕ್ಷಮೆ ಯಾಚಿಸಿದ್ದಾರೆ.

ಸಂವಿಧಾನದ ಬಗ್ಗೆ ನನಗೆ ಗೌರವವಿದೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಲೋಕಸಭೆಯಲ್ಲಿ ಗುರುವಾರ ಹೇಳಿದ್ದಾರೆ. ಜಾತ್ಯಾತೀತರಿಗೆ ಅಪ್ಪ-ಅಮ್ಮನ ರಕ್ತದ ಪರಿಚಯ ಇರುವುದಿಲ್ಲ. ಅವರಿಗೆ ಅಪ್ಪ-ಅಮ್ಮ ಯಾರೆಂಬುದೇ ಗೊತ್ತಿರುವುದಿಲ್ಲ. ನಾವು ಸಂವಿಧಾನವನ್ನೇ ಬದಲಿಸುತ್ತೇವೆ. ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸಲು ಎಂದು ಹೆಗಡೆ ಹೇಳಿದ್ದರು.

ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಅನಂತ ಕುಮಾರ ಹೆಗಡೆ ಅವರ ಹೇಳಿಕೆ ಬಗ್ಗೆ ಪ್ರಸ್ತಾಪಿಸಿ, ಈ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಸ್ಪೀಕರ್ ಅವರನ್ನು ಆಗ್ರಹಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹೆಗಡೆ, ತಮಗೆ ಸಂವಿಧಾನ ಮತ್ತು ಅಂಬೇಡ್ಕರ್ ಅವರ ಬಗ್ಗೆ ಗೌರವವಿದೆ. ತಾವೇನೂ ಅಗೌರವ ತೋರಿಲ್ಲ ಎಂದು ಸಮರ್ಥಿಸಿಕೊಂಡರಾದರೂ ಮಧ್ಯಪ್ರವೇಶಿಸಿದ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು, ಅಂಬೇಡ್ಕರ್ ಬಗ್ಗೆ ಅಗೌರವ ತೋರಿಲ್ಲ ಎಂದು ತಮಗೂ ಅನಿಸುತ್ತಿದೆ. ಆದರೆ ಅನ್ಯರ ಭಾವನೆಗಳಿಗೆ ನೋವುಂಟಾಗಿದ್ದರೆ ಕ್ಷಮೆ ಯಾಚಿಸುವುದರಲ್ಲಿ ತಪ್ಪೇನೂ ಇಲ್ಲ ಎಂದರು. ಇದಕ್ಕೆ ಮಣಿದ ಅನಂತಕುಮಾರ ಹೆಗಡೆ ತಮ್ಮ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದರು.

ನಿನ್ನೆಯೂ ಸಂಸತ್ತಿನ ಉಭಯ ಸದನಗಳಲ್ಲಿ ಹೆಗಡೆ ಹೇಳಿಕೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಆಡಳಿತ ಪಕ್ಷದ ಸಚಿವರಾಗಲಿ, ಸದಸ್ಯರಾಗಲಿ ಯಾರೊಬ್ಬರೂ ಅನಂತಕುಮಾರ ಹೆಗಡೆ ಅವರನ್ನು ಬೆಂಬಲಕ್ಕೆ ಬರಲಿಲ್ಲ. ಅವರ ಹೇಳಿಕೆಯನ್ನೂ ಸಮರ್ಥಿಸಿಕೊಂಡಿರಲಿಲ್ಲ. ಇನ್ನು ಅನಂತಕುಮಾರ್ ಅವರ ಈ ವಿವಾದಾತ್ಮಕ ಹೇಳಿಕೆ ಕುರಿತಾಗಿ ಡಿಜಿಟಲ್ ಕನ್ನಡದ ವಿಶ್ಲೇಷಣಾ ಕಾರ್ಯಕ್ರಮ ‘ಡಿಕ ಡಿಚ್ಚಿ’ಯಲ್ಲೂ ಚರ್ಚಿಸಲಾಗಿದ್ದು, ಈ ಕಾರ್ಯಕ್ರಮ ಈ ಕೆಳಗೆ ವೀಕ್ಷಿಸಿ.

Leave a Reply