ಲೋಕಸಭೆಯಲ್ಲಿ ತ್ರಿವಳಿ ತಲಾಕ್ ಮಸೂದೆ ಮಂಡನೆ, ಸಚಿವ ರವಿಶಂಕರ್ ಪ್ರಸಾದ್ ಮಾತಿನಂತೆ ಈ ಮಸೂದೆ ಲಿಂಗ ಸಮಾನತೆ ತಂದುಕೊಡುತ್ತಾ?

ಡಿಜಿಟಲ್ ಕನ್ನಡ ಟೀಮ್:

ದೇಶದ ಗಮನವನ್ನೇ ಸೆಳೆದಿರುವ ತ್ರಿವಳಿ ತಲಾಕ್ ಮಸೂದೆ ಇಂದು ಲೋಕಸಭೆಯಲ್ಲಿ ಮಂಡನೆಯಾಗಿದೆ. ಈ ಮಸೂದೆ ಮಂಡನೆ ವೇಳೆ ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ‘ಈ ಮಸೂದೆ ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಬದಲಾಗಿ ಲಿಂಗ ಸಮಾನತೆಗೆ ಸಂಬಂಧಿಸಿರುವುದು’ ಎಂದು ವಾದ ಮಂಡಿಸಿದ್ದಾರೆ.

ಮುಸ್ಲಿಂ ಮಹಿಳೆಯರು ಧರ್ಮದ ಹೆಸರಿನಲ್ಲಿ ನಡೆದುಕೊಂಡು ಬರುತ್ತಿರುವ ತ್ರಿವಳಿ ತಲಾಕ್ ನಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂಬ ಕೂಗು ಇತ್ತು. ಆದರೆ ಈ ವಿರುದ್ಧ ಧ್ವನಿ ಎತ್ತುವರರಿರಲಿಲ್ಲ. ಆದರೆ ಕೆಲ ವರ್ಷಗಳ ಹಿಂದೆ ಈ ತಲಾಕ್ ಪದ್ಧತಿಯಿಂದ ಅನ್ಯಾಯಕ್ಕೊಳಗಾದ ಮಹಿಳೆಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇ ತಡ ಕೇಂದ್ರ ಸರ್ಕಾರ ಸಹ ಈ ಪದ್ಧತಿ ವಿರುದ್ಧ ಧ್ವನಿಗೂಡಿಸಿತು. ನಂತರ ಸುಪ್ರೀಂ ಕೋರ್ಟ್ ತ್ರಿವಳಿ ತಲಾಕ್ ಪದ್ಧತಿಗೆ ನಿಷೇಧ ಹೇರಿತು. ಅದರ ಪರಿಣಾಮವೇ ಇಂದು ತ್ರಿವಳಿ ತಲಾಕ್ ಮಸೂದೆ ಮಂಡನೆಯಾಗಿದೆ.

ರವಿಶಂಕರ್ ಪ್ರಸಾದ್ ಈ ಮಸೂದೆಯನ್ನು ಮಂಡಿಸಿದ್ದು, ಇದೊಂದು ಐತಿಹಾಸಿಕ ಮಸೂದೆ ಎಂದೇ ಕೇಂದ್ರ ನಾಯಕರು ಬಣ್ಣಿಸಿಕೊಳ್ಳುತ್ತಿದ್ದಾರೆ. ಲೋಕಸಭೆಯಲ್ಲಿ ಈ ಮಸೂದೆ ಮಂಡನೆಗೆ ಅಸಾವುದ್ದೀನ್ ಓವೈಸಿ ಸೇರಿದಂತೆ ಕಾಂಗ್ರೆಸ್ ಹಾಗೂ ಇತರೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದವು. ಇತ್ತ ತ್ರಿವಳಿ ತಲಾಕ್ ಸಂತ್ರಸ್ತ ಮಹಿಳೆಯರು ‘ಈ ದಿನ ನಮ್ಮ ಪಾಲಿಗೆ ಈದ್ ಗಿಂತಲೂ ಶ್ರೇಷ್ಠ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಈ ಮಸೂದೆ ಮಂಡಿಸಿ ಮಾತನಾಡಿದ ರವಿಶಂಕರ್ ಪ್ರಸಾದ್ ಹೇಳಿದಿಷ್ಟು…

‘ಇದೊಂದು ಐತಿಹಾಸಿಕ ಮಸೂದೆ. ಈ ಮಸೂದೆ ಧರ್ಮಕ್ಕೆ ಅಥವಾ ಪ್ರಾರ್ಥನೆಗೆ ಸೇರಿದ್ದಲ್ಲ. ಬದಲಿಗೆ ಲಿಂಗ ಸಮಾನತೆಗಾಗಿ ಮಹಿಳೆಯರಿಗೆ ನೀಡುತ್ತಿರುವ ಕಾನೂನಿನ ನೆರವು. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಈ ವಿಚಾರದಲ್ಲಿ ಪರಿಸ್ಥಿತಿ ಸುಧಾರಿಸಲಿದೆ. ಈ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿತ್ತು. ಈ ಮಂಡಳಿಗೆ ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಲಾಗಿದ್ದು, ಅದು ತನ್ನ ವೆಬ್ ಸೈಟ್ ಹಾಗೂ ಮುದ್ರಣ ಮಾಧ್ಯಮದ ಮೂಲಕ ಇನ್ನು ಮುಂದೆ ತ್ರಿವಳಿ ತಲಾಕ್ ಮೂಲಕ ತಮ್ಮ ವಿವಾಹ ಮುರಿದುಕೊಳ್ಳುವಂತಿಲ್ಲ ಎಂಬ ಸಂದೇಶವನ್ನು ನವ ವಿವಾಹಿತರಿಗೆ ತಲುಪಿಸಲಿದೆ. ಈ ವರ್ಷ ಒಟ್ಟು 300 ತ್ರಿವಳಿ ತಲಾಕ್ ಪ್ರಕರಣಗಳು ದಾಖಲಾಗಿವೆ. ಆ ಪೈಕಿ 100 ಪ್ರಕರಣಗಳು ಸುಪ್ರೀಂ ಕೋರ್ಟ್ ಆದೇಶದ ನಂತರ ದಾಖಲಾಗಿರುವುದು ಗಂಭೀರವಾದ ವಿಷಯ. ಹೀಗಾಗಿ ಮಹಿಳೆಯರಿಗೆ ನ್ಯಾಯ ಒದಗಿಸಲು ಈ ಕಾನೂನು ಅಗತ್ಯವಾಗಿದೆ. ನಾವು ಯಾವುದೇ ಶರಿಯಾ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಸುಪ್ರೀಂ ಕೋರ್ಟ್ ತ್ರಿವಳಿ ತಲಾಕ್ ಕಾನೂನು ಬಾಹೀರ ಎಂದಿರುವ ಕಾರಣ ಇದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿದೆ. ಈ ಪದ್ಧತಿಯನ್ನು ಅನೇಕ ಇಸ್ಲಾಂ ರಾಷ್ಟ್ರಗಳಲ್ಲೇ ನಿಷೇಧಿಸಲಾಗಿದೆ. ಭಾರತ ಜಾತ್ಯಾತೀತ ರಾಷ್ಟ್ರವಾಗಿದ್ದು ಮಹಿಳೆಯರಿಗೆ ಇದರಿಂದಾಗುವ ಅನ್ಯಾಯವನ್ನು ಕಂಡು ಸುಮ್ಮನಿರಬೇಕೆ.’

ಇ ಮೇಲ್, ಮೊಬೈಲ್ ಸಂದೇಶ, ವಾಟ್ಸಪ್ ಸಂದೇಶಗಳ ಮೂಲಕ ತ್ರಿವಳಿ ತಲಾಕ್ ಹೇಳಿ ತನ್ನ ಪತ್ನಿಯರಿಗೆ ಅನ್ಯಾಯ ಎಸಗುತ್ತಿದ್ದ ಪುರುಷರಿಗೆ ಈ ಕಾನೂನು ಅಂಕುಶವಾಗಲಿದೆ. ಇನ್ನು ಮುಂದೆ ಹೀಗೆ ಕಾನೂನು ಬಾಹೀರವಾಗಿ ತಲಾಕ್ ನೀಡಿದರೆ ಆ ವ್ಯಕ್ತಿ ಜೈಲಿಗೆ ಸೇರಬೇಕಾದ ಪರಿಸ್ಥಿತಿ ಬರುತ್ತದೆ. ಯಾವುದೇ ಕಾರಣ ತಿಳಿಯದೇ ತನ್ನ ಪತಿಯಿಂದ ದೂರವಾಗುವ ಆತಂಕದಲ್ಲಿದ್ದ ಮಹಿಳೆಗೆ ಈ ಮಸೂದೆ ಕೊಂಚ ನೆಮ್ಮದಿ ತಂದಿದೆ. ಆದರೆ ಇದರಿಂದ ಮುಸ್ಲಿಂ ಮಹಿಳೆಯರ ಸಮಸ್ಯೆ ಸಂಪೂರ್ಣವಾಗಿ ಬದಲಾಗುತ್ತದೆಯೇ ಎಂಬ ಪ್ರಶ್ನೆಗೆ ನಮ್ಮಲ್ಲಿ ಉತ್ತರ ಇಲ್ಲ. ಕಾರಣ, ಈಗಲೂ ಅನೇಕ ಕುಟುಂಬಗಳಲ್ಲಿ ಹೆಣ್ಣು ಮಕ್ಕಳು ಹಾಡುವಂತಿಲ್ಲ. ಹೆಣ್ಣು ಮಕ್ಕಳು ಯೋಗ ಕಲಿಯುವಂತಿಲ್ಲ ಕಲಿಸುವಂತಿಲ್ಲ. ಈ ರೀತಿಯ ಚಟುವಟಿಕೆಯಲ್ಲಿ ತೊಡಗಿಕೊಂಡರೆ ಪ್ರಾಣ ಬೆದರಿಕೆ ಬರುವ ಪ್ರಕರಣಗಳನ್ನು ನಾವು ನೋಡುತ್ತಲೇ ಇದ್ದೇವೆ. ಕೆಲ ವರ್ಗದ ಜನರು ಈ ರೀತಿಯ ಚಟುವಟಿಕೆಗಳಿಂದ ಹೆಣ್ಣು ಮಕ್ಕಳನ್ನು ದೂರವಿಟ್ಟರೆ, ಮತ್ತೆ ಕೆಲವು ತಂದೆ ತಾಯಂದಿರು ತಮ್ಮ ಚಿಕ್ಕ ಹೆಣ್ಣು ಮಗುವನ್ನು ಸಂಗೀತದ ರಿಯಾಲಿಟಿ ಶೋ ಗಳಿಗೆ ಕಳುಹಿಸಿ ಪ್ರೋತ್ಸಾಹ ನೀಡುತ್ತಿದ್ದಾರೆ.

ಈ ಎಲ್ಲ ಅಂಶಗಳಿಂದ ಈ ಮಸೂದೆ ವಿವಾಹ ವಿಚ್ಛೇಧನ ವಿಷಯದಲ್ಲಿ ಮುಸ್ಲಿಂ ಮಹಿಳೆಯರಿಗಾಗುತ್ತಿರುವ ಅನ್ಯಾಯ ತಪ್ಪಿಸಲಿದೆಯಾದರೂ ಪೂರ್ಣ ಪ್ರಮಾಣದಲ್ಲಿ ಲಿಂಗ ಸಮಾನತೆ ನೀಡುವುದಿಲ್ಲ. ಇದು ಸಾಧ್ಯವಾಗಬೇಕಾದರೆ ಎಲ್ಲರೂ ಮುಕ್ತ ಮನಸ್ಸಿನಿಂದ ತಮ್ಮ ಹೆಣ್ಣು ಮಕ್ಕಳ ಕನಸನ್ನು ಗೌರವಿಸಿ ಪ್ರೋತ್ಸಾಹಿಸಬೇಕು. ಇಲ್ಲವಾದರೆ ಕೇವಲ ಕಾನೂನಿನಿಂದ ಕೇವಲ ಮುಸ್ಲಿಂ ಹೆಣ್ಣು ಮಕ್ಕಳಿಗೆ ಮಾತ್ರವಲ್ಲ, ಎಲ್ಲಾ ಸಮುದಾಯದ ಹೆಣ್ಣು ಮಕ್ಕಳಿಗೆ ಲಿಂಗ ಸಮಾನತೆ ಸಾಧ್ಯವಾಗುವುದಿಲ್ಲ.

Leave a Reply