‘ಗೋವಾ ಕಾಂಗ್ರೆಸಿಗರನ್ನು ಸೋನಿಯಾ ಗಾಂಧಿ ಒಪ್ಪಿಸಲಿ’ ಮಹದಾಯಿ ವಿಚಾರದಲ್ಲಿ ಬಿಎಸ್ ವೈ ಹೊಸ ರಾಗ!

ಡಿಜಿಟಲ್ ಕನ್ನಡ ಟೀಮ್:

‘ಮಹದಾಯಿ ನೀರನ್ನು ಬಿಡುವ ವಿಚಾರದಲ್ಲಿ ಸೋನಿಯಾ ಗಾಂಧಿ ಅವರು ಗೋವಾ ಕಾಂಗ್ರೆಸ್ ನಾಯಕರ ಮನವೊಲಿಸಲಿ…’ ಇದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಹೊಸ ವಾದ.

ಕಳೆದ ಒಂದು ವಾರದಿಂದ ಮಹದಾಯಿ ವಿಚಾರವಾಗಿ ಆದ ರಾಜಕೀಯ ಬೆಳವಣಿಗೆಗಳು ಜನರನ್ನು ಸಿಟ್ಟಿಗೆಬ್ಬಿಸಿದ್ದವು. ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದ ರೈತರು ಜನವರಿ ಅಂತ್ಯದವರೆಗೂ ಸರ್ಕಾರಕ್ಕೆ ಡೆಡ್ ಲೈನ್ ಕೊಟ್ಟು ವಾಪಸ್ಸಾಗಿದ್ದು ಉಂಟು. ಆದರೆ ರಾಜಕೀಯ ನಾಯಕರ ವಾದ ಪ್ರತಿವಾದ ಮಾತ್ರ ನಿಂತಿಲ್ಲ. ಮಹದಾಯಿ ವಿಚಾರವಾಗಿ ಹೊಸ ರಾಗ ಎತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಗೋವಾದಲ್ಲಿರುವು ಬಿಜೆಪಿ ಸರ್ಕಾರ ಮಹದಾಯಿ ನೀರು ನೀಡಲು ಒಪ್ಪಿಗೆ ನೀಡಿದ್ದರೂ ಆದರೆಗೋವಾ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದಿದ್ದಾರೆ.

ಸದ್ಯ ಸೋನಿಯಾ ಗಾಂಧಿ ಅವರು ಗೋವಾದಲ್ಲೇ ವಿಶ್ರಾಂತಿ ಪಡೆಯುತ್ತಿದ್ದು, ಸೋನಿಯಾ ಅವರು ಈ ವಿಚಾರವಾಗಿ ಅಲ್ಲಿನ ಕಾಂಗ್ರೆಸ್ ನಾಯಕರನ್ನು ಒಪ್ಪಿಸಲಿ ಎಂದು ಶಿವಮೊಗ್ಗದಲ್ಲಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಅವರು ಹೇಳಿರುವುದಿಷ್ಟು…

‘ಮನೋಹರ್ ಪರಿಕ್ಕರ್ ನೇತೃತ್ವದ ಗೋವಾ ಸರ್ಕಾರ ಕರ್ನಾಟಕಕ್ಕೆ ಮಹದಾಯಿ ನೀರು ಬಿಡಲು ಸಿದ್ಧವಿದೆ. ಆದರೆ ಗೋವಾ ಕಾಂಗ್ರೆಸ್ ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸದ್ಯ ಗೋವಾದಲ್ಲೇ ಇದ್ದಾರೆ. ಹೀಗಾಗಿ ಅವರು ಗೋವಾ ಕಾಂಗ್ರೆಸ್ ನಾಯಕರ ಮನವೊಲಿಸಿ, ಕರ್ನಾಟಕ್ಕೆ ಮಹದಾಯಿ ನೀರು ಸಿಗುವಂತೆ ಮಾಡಬೇಕು.’

ಗೋವಾ ಚುನಾವಣೆ ಸಂದರ್ಭದಲ್ಲಿ ಕರ್ನಾಟಕ್ಕೆ ಮಹದಾಯಿಯ ಒಂದು ಹನಿ ನೀರನ್ನೂ ಬಿಡುವುದಿಲ್ಲ ಎಂದು ಸ್ವತಃ ಸೋನಿಯಾ ಗಾಂಧಿ ಅವರೆ ಭರವಸೆ ನೀಡಿದ್ದರು. ಹೀಗಾಗಿ ಈಗ ಸೋನಿಯಾ ಗಾಂಧಿ ಅವರೇ ಕಾಂಗ್ರೆಸ್ ನಾಯಕರ ಮನವೊಲಿಸಿ ಮನೋಹರ್ ಪರಿಕ್ಕರ್ ಸರ್ಕಾರಕ್ಕೆ ನೆರವು ನೀಡಬೇಕು ಎಂಬುದು ಬಿಎಸ್ ವೈ ಆಗ್ರಹ. ಈ ವಾದದಿಂದ ತಮ್ಮ ಮೇಲೆ ಮುನಿಸಿಕೊಂಡಿರುವ ಉತ್ತರ ಭಾಗದ ಜನರ ಸಿಟ್ಟನ್ನು ಕಾಂಗ್ರೆಸ್ ನತ್ತ ವರ್ಗಾಯಿಸುವ ಪ್ರಯತ್ನ ನಡೆಸಿದ್ದಾರೆ.

Leave a Reply