ಉತ್ತರ ಕೊರಿಯಾಗೆ ನೆರವು- ಅಮೆರಿಕ ಕೈಗೆ ಸಿಕ್ಕಿಬಿತ್ತು ಚೀನಾ! ಟ್ರಂಪ್ ಆಕ್ರೋಶ

ಡಿಜಿಟಲ್ ಕನ್ನಡ ಟೀಮ್:

ಅಮೆರಿಕದ ವಿರುದ್ಧ ಅಣ್ವಸ್ತ್ರ ಪ್ರಯೋಗ ಮಾಡಿ ಸೆಡ್ಡು ಹೊಡೆಯುತ್ತಿರುವ ಉತ್ತರ ಕೊರಿಯಾಗೆ ಚೀನಾ ಬೆಂಬಲ ನೀಡುತ್ತಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈಗ ಉತ್ತರ ಕೊರಿಯಾ ಜತೆ ತೈಲ ವ್ಯಾಪಾರ ಮಾಡುತ್ತಾ ಸಹಾಯ ಮಾಡುತ್ತಿರುವ ಚೀನಾ, ಅಮೆರಿಕ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದೆ.

ಕಳೆದ ಒಂದು ವರ್ಷದಿಂದ ಅದರಲ್ಲೂ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಉತ್ತರ ಕೊರಿಯಾ ಅಮೆರಿಕದ ಮೇಲೆ ಕೆಂಡಕಾರುತ್ತಿದೆ. ಕಳೆದ ಆರು ತಿಂಗಳಲ್ಲಿ ನಿತಂರವಾಗಿ ವಿಶ್ವಸಂಸ್ಥೆಯ ನಿರ್ದೇಶನವನ್ನು ಗಾಳಿಗೆ ತೂರಿ ಅಣ್ವಸ್ತ್ರ ಕ್ಷಿಪಣಿ ಪ್ರಯೋಗಿಸುತ್ತಲೇ ಇದೆ. ಅಮೆರಿಕವನ್ನು ಉಡಾಯಿಸುವ ಬೆದರಿಕೆ ಜತೆಗೆ ಅಮೆರಿಕ ಸ್ನೇಹ ರಾಷ್ಟ್ರ ಜಪಾನ್ ಮೇಲೆ ಅಣ್ವಸ್ತ್ರ ಕ್ಷಿಪಣಿ ಹಾರಿಸಿದೆ. ಉತ್ತರ ಕೊರಿಯಾದ ಈ ಉದ್ದಟತನವನ್ನು ಕಂಡ ಅಮೆರಿಕ, ತನ್ನ ವಿದೇಶಾಂಗ ನೀತಿಯಲ್ಲಿ ಉತ್ತರ ಕೊರಿಯಾಗೆ ಸರ್ವ ರೀತಿಯಲ್ಲೂ ನಿರ್ಬಂಧ ಹೇರಿದೆ. ಅಲ್ಲದೆ ಚೀನಾ ಸೇರಿದಂತೆ ಇತರೆ ರಾಷ್ಟ್ರಗಳಿಗೂ ಉತ್ತರ ಕೊರಿಯಾ ಜತೆಗಿನ ವ್ಯಾಪಾರವನ್ನು ನಿಷೇಧಿಸುವಂತೆ ಸೂಚನೆ ನೀಡಿತ್ತು.

ಆರಂಭದಲ್ಲಿ ಉತ್ತರ ಕೊರಿಯಾ ವಿರುದ್ಧ ತುಟಿ ಬಿಚ್ಚದ ಚೀನಾ ವಿರುದ್ಧ ಡೊನಾಲ್ಡಾ ಟ್ರಂಪ್ ಕಿಡಿ ಕಾರಿದ್ದರು. ಆಗ ಎಚ್ಚೆತ್ತ ಚೀನಾ, ಅಮೆರಿಕವನ್ನು ಎದುರುಹಾಕಿಕೊಂಡ ನಂತರದ ಪರಿಣಾಮಕ್ಕೆ ನಾವು ಜವಾಬ್ದಾರರಲ್ಲ ಎಂದು ಉತ್ತರ ಕೊರಿಯಾಗೆ ಎಚ್ಚರಿಕೆ ರವಾನಿಸಿತ್ತು. ಈಗ ಚೀನಾ ಉತ್ತರ ಕೊರಿಯಾ ಜತೆ ಇಂಧನ ತೈಲ ವ್ಯಾಪಾರದಲ್ಲಿ ಭಾಗಿಯಾಗಿದ್ದು, ಆ ಮಲಕ ಅಮೆರಿಕದ ಮಾತನ್ನು ಮೀರಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿರುವುದು ಹೀಗೆ…

‘ನಾನು ಅಧಿಕಾರಕ್ಕೆ ಬಂದ ನಂತರ ಚೀನಾ ವಿಚಾರದಲ್ಲಿ ಮೃದು ನಿರ್ಧಾರ ತೆಗೆದುಕೊಂಡಿದ್ದೇನೆ. ಕಾರಣ ನನಗೆ ಯುದ್ಧಕ್ಕಿಂತ ವ್ಯಾಪಾರ ಮುಖ್ಯ. ಆದರೆ ಚೀನಾ ತಮ್ಮ ಮಾತನ್ನು ಉಲ್ಲಂಘಿಸಿ ಉತ್ತರ ಕೊರಿಯಾಗೆ ತೈಲ ಸರಬರಾಜು ಮಾಡಿರುವುದು ಖಂಡನೀಯ. ಉತ್ತರ ಕೊರಿಯಾ ವಿರುದ್ಧ ತಿಕ್ಕಾಟ ನಡೆಸುತ್ತಿರುವ ಸಂದರ್ಭದಲ್ಲಿ ಚೀನಾದ ಈ ನಿರ್ಧಾರ ನಮ್ಮ ಸ್ನೇಹ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ತೈಲ ಸರಬರಾಜು ವಿಷಯದಲ್ಲಿ ಚೀನಾ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದೆ. ಇದು ಅಮೆರಿಕಕ್ಕೆ ತೀವ್ರ ಬೇಸರ ತಂದಿದೆ.

ಕಳೆದ ವರ್ಷ ನಾನು ಪ್ರಚಾರ ನಡೆಸಿದಾಗ ಚೀನಾ ಜತೆಗಿನ ವ್ಯಾಪಾರದ ವಿಷಯದಲ್ಲಿ ಕಠಿಣ ನಿಲುವು ತೋರಿದ್ದೆ. ಆದರೆ ನಂತರ ಅಧಿಕಾರಕ್ಕೆ ಬಂದ ಮೇಲೆ ವ್ಯಾಪಾರದ ವಿಷಯದಲ್ಲಿ ಚೀನಾಗೆ ಸಾಕಷ್ಟು ಸಹಾಯ ಮಾಡಿದ್ದೇವೆ. ಉತ್ತರ ಕೊರಿಯಾ ವಿಚಾರದಲ್ಲಿ ಚೀನಾ ನಮಗೆ ಬೆಂಬಲ ನೀಡಿದರೆ, ಈ ವಿಚಾರದಲ್ಲಿ ಮತ್ತೆ ಇನ್ನಷ್ಟು ನೆರವು ನೀಡಬಹುದಿತ್ತು. ಆದರೆ ಚೀನಾ ತೈಲ ಸರಬರಾಜು ನಿರ್ಧಾರ ನಮಗೆ ಸಂತೋಷ ತಂದಿಲ್ಲ.’

Leave a Reply