‘ಸಿದ್ರಾಮಯ್ಯನೇ ಮುಂದಿನ ಸಿಎಂ ಎಂದು ಘೋಷಿಸಿ ರಾಹುಲ್ ಚುನಾವಣೆ ಗೆಲ್ಲಲಿ ನೋಡೋಣ’ ಇದು ದೇವೇಗೌಡ್ರ ಸವಾಲ್!

ಡಿಜಿಟಲ್ ಕನ್ನಡ ಟೀಮ್:

ಪದೇ ಪದೇ ತಮ್ಮ ವಿರುದ್ಧ ಆರೋಪ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಕಿಡಿಕಾರಿದ್ದಾರೆ. ‘ರಾಹುಲ್ ಗಾಂಧಿ ಅವರು ಬಂದು ಸಿದ್ರಾಮಯ್ಯನೇ ಮುಂದಿನ ಸಿಎಂ ಎಂದು ಘೋಷಿಸಲಿ ನೋಡೋಣ, ಅಭಿವೃದ್ಧಿ ವಿಷಯವಾಗಿ ನನ್ನೊಂದಿಗೆ ಸಾರ್ವಜನಿಕವಾಗಿ ಚರ್ಚೆಗೆ ಬರಲಿ’ ಎಂದು ಸಿದ್ದರಾಮಯ್ಯನವರಿಗೆ ದೇವೇಗೌಡರು ನೇರ ಸವಾಲು ಹಾಕಿದ್ದಾರೆ.

ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರ ಪ್ರತ್ಯೇಕ ಯಾತ್ರೆ, ಪ್ರಧಾನಿ ಮೋದಿ ವಿರುದ್ಧ ದೇವೇಗೌಡ್ರು ಮೃದು ಸ್ವಭಾವ ತೋರಿದ್ದಾರೆ ಎಂಬ ಆರೋಪ, ಮುಂದಿನ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದಿಲ್ಲ ಎಂಬ ಸಿದ್ರಾಮಯ್ಯನವರ ಹೇಳಿಕೆಗಳಿಗೆ ದೇವೇಗೌಡರು ನೀಡಿದ ಪ್ರತ್ಯುತ್ತರ ಹೀಗಿತ್ತು…

‘ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ತರಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯೇ ಪ್ರಚಾರ ನಡೆಸಲಿ. ಕಳೆದ ಚುನಾವಣೆಯಲ್ಲಿ ಬೇರೆ, ಬೇರೆ ಕಾರಣಗಳಿಂದ ಕಾಂಗ್ರೆಸ್ 122 ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬಂದಿತ್ತು. ಆದರೆ ಈ ಬಾರಿ ಹೇಗೆ ಅಧಿಕಾರಕ್ಕೆ ಬರುತ್ತದೆ ನೋಡೋಣ. ರಾಜ್ಯಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿ ಸಿದ್ದರಾಮಯ್ಯನವರೇ ಮುಂದಿನ ಸಿಎಂ ಎಂದು ಘೋಷಿಸಿ ಚುನಾವಣೆಯಲ್ಲಿ ಗೆಲ್ಲಲಿ ನೋಡೋಣ.

ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡೆಸಿದ ಹೋರಾಟದ ಪ್ರತಿಫಲವನ್ನು ಕಾಂಗ್ರೆಸ್ ಲಾಭವಾಗಿ ಪಡೆದುಕೊಂಡಿತ್ತು. ಜತೆಗೆ ಅಂದಿನ ಆಡಳಿತ ಪಕ್ಷದ ಆಂತರಿಕ ಕಚ್ಚಾಟದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತೇ ಹೊರತು ತನ್ನ ಸ್ವಂತ ಶಕ್ತಿಯಿಂದಲ್ಲ. ನವ ಕರ್ನಾಟಕ ನಿರ್ಮಾಣ ಮಾಡಲಿಕ್ಕೆ ಸಿದ್ದರಾಮಯ್ಯ ಒಬ್ಬರೇ ಹುಟ್ಟಿರೋದಾ? ನಿಜಲಿಂಗಪ್ಪ, ದೇವರಾಜ ಅರಸು ಸೇರಿದಂತೆ ಬೇರಾರು ಏನೂ ಮಾಡಿಲ್ಲವೇ? ಇವರೊಬ್ಬರೇನಾ ಆಡಳಿತ ಮಾಡಿರೋದು. ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳುವ ಭರದಲ್ಲಿ ಹಿಂದಿನವರು ಸಾಧನೆ ಮಾಡಿಲ್ಲ ಎಂದು ಸಿಎಂ ಹೇಳುತ್ತಿದ್ದಾರೆ. ಹಾಗೆ ಹೇಳುವಾಗ ನನ್ನ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದಾಗ ಎಷ್ಟು ಕೆಲಸ ಮಾಡಿದ್ದಾರೆ ಎಂಬುದು ಗೊತ್ತು. ಈ ಬಗ್ಗೆ ನನ್ನೊಂದಿಗೆ ಸಾರ್ವಜನಿಕ ಚರ್ಚೆಗೆ ಬರಲಿ ನೋಡೋಣ.

ಸಿದ್ರಾಮಯ್ಯನವರು ಬಿರುಸಿನ ಮಾತು ಕಡಿಮೆ ಮಾಡಲಿ. ಅವರ ಮಾತಿಗೆ ಬಿರುಸಿನ ಪ್ರತಿಕ್ರಿಯೆ ಕೊಡೋ ಶಕ್ತಿ ದೇವೇಗೌಡನಿಗೆ ಇದೆ. ಹೋದಕಡೆಯಲ್ಲೆಲ್ಲಾ ಬೆಳ್ಳಿ ಗದೆ, ಚಿನ್ನದ ವಸ್ತು ತೆಗೆದುಕೊಳ್ಳುತ್ತಿದ್ದಾರೆ. ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಪ್ರತ್ಯೇಕ ಸಮಾವೇಶ ನಡೆಸುತ್ತಿದ್ದಾರೆ. ಆದರೆ ಈ ಸಮಾವೇಶಗಳಿಗೆ ಸರಿಯಾಗಿ ಜನ ಬರುತ್ತಿಲ್ಲ. ಆಮಿಷ ತೋರಿ ಜನರನ್ನು ಕರೆದುಕೊಂಡು ಬರಲಾಗುತ್ತಿದೆ. ಇದೇನು ಸರ್ಕಾರಿ ಕಾರ್ಯಕ್ರಮವೋ? ಪಕ್ಷದ ಪ್ರಚಾರ ಕಾರ್ಯಕ್ರಮವೋ? ಸಿದ್ದರಾಮಯ್ಯ ಅಹಂನಿಂದ ಮಾತನಾಡುತ್ತಿದ್ದಾರೆ. ಬೇಲ್ ತೆಗೆದುಕೊಂಡವರೆಲ್ಲಾ ಮುಖ್ಯಮಂತ್ರಿ ಆಗೋಕೆ ಸಾಧ್ಯ ಏನ್ರಿ ಅಂತಾ ಹೇಳಿಕೊಂಡು ತಿರುಗುತ್ತಿದ್ದಾರೆ. ಸ್ವಲ್ಪದಿನ ಚಡೆದುಕೊಳ್ಳಿ. ಎಲ್ಲವನ್ನು ಗಮನಿಸುತ್ತಿದ್ದೇನೆ. ನನಗೆ ತಾಳ್ಮೆ ಇದೆ. ತಾಳ್ಮೆ ಮೀರಿದಾಗ ಏನಾಗುತ್ತೆ ನೋಡೋಣ. ಬಿಜೆಪಿ ಬಗ್ಗೆ ಮಾತನಾಡಿಕೊಳ್ಳಲಿ. ಅದರ ಬಗ್ಗೆ ತಕರಾರಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ಪ್ರತಿಪಕ್ಷ ಸ್ಥಾನದಲ್ಲಿದ್ದ ಸಿದ್ದರಾಮಯ್ಯ ಏನು ಮಾಡಿದ್ದರು?

ಬಿಎಸ್ ವೈ ಸರ್ಕಾರದ ಹಗರಣ ಎಳೆ ಎಳೆಯಾಗಿ ಬಹಿರಂಗಗೊಳಿಸಿದ್ದು ಕುಮಾರಸ್ವಾಮಿ. ಕುಮಾರಸ್ವಾಮಿ ಸಿಎಂ ಆಗಲ್ಲ ಅಂತಾರೆ. ಸಿದ್ದರಾಮಯ್ಯ ಏನು ಹಣೆ ಮೇಲೆ ಬರೆದಿದ್ದಾರಾ? ನಾನು ಎಲ್ಲಿಯೂ ರಾಹುಲ್ ಗಾಂಧಿ ಅವರ ಬಗ್ಗೆಯಾಗಲಿ ಸೋನಿಯಾ ಗಾಂಧಿ ಅವರ ಬಗ್ಗೆಯಾಗಲಿ ಲಘುವಾಗಿ ಮಾತನಾಡಿಲ್ಲ. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆಯೂ ಮಾತನಾಡಿಲ್ಲ. ನಮ್ಮ ಕೆಲಸ ಬೇರೆಯದ್ದೇ ಇದೆ. ಅದನ್ನು ನಾವು ಮಾಡುತ್ತಿದ್ದೇವೆ.’

Leave a Reply