ತಮಿಳುನಾಡು ರಾಜಕೀಯಕ್ಕೆ ತಲೈವಾ ಅಧಿಕೃತ ಎಂಟ್ರಿ!

ಡಿಜಿಟಲ್ ಕನ್ನಡ ಟೀಮ್:

ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಬರ್ತಾರೆ ಎಂದು ಅನೇಕ ತಿಂಗಳುಗಳಿಂದ ಕಾದು ಕುಳಿತಿದ್ದ ಅಭಿಮಾನಿಗಳಿಗೆ ರಜನಿ ಸಿಹಿ ಸುದ್ದಿ ಕೊಟ್ಟಿದ್ದಾರೆ.

ಅನೇಕ ದಿನಗಳಿಂದ ಸುದ್ದಿ ಇದ್ದಂತೆ ವರ್ಷಾಂತ್ಯವಾದ ಇಂದು ಬೆಳಗ್ಗೆಯೇ ತಮ್ಮ ರಾಜಕೀಯ ಪ್ರವೇಶವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ತಮಿಳುನಾಡಿನ ಎಲ್ಲಾ ವಿಧಾನಸಭಾ ಹಾಗೂ ಲೋಕಸಭಾ ಕ್ಷೇತ್ರಗಳಲ್ಲೂ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. 2019ರ ಲೋಕಸಭಾ ಚುನಾವಣೆ ವೇಳೆಗೆ ತಮ್ಮದೇ ಆದ ಪಕ್ಷ ಸ್ಥಾಪಿಸಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ರಜನಿ ಘೋಷಿಸಿದ್ದಾರೆ. ಭಾನುವಾರ ರಾಘವೇಂದ್ರ ಕಲ್ಯಾಣ ಮಂಟಪಂನಲ್ಲಿ ಈ ವಿಷಯ ಘೋಷಿಸಿದ ರಜನಿಕಾಂತ್ ಹೇಳಿದಿಷ್ಟು…

‘ರಾಜಕೀಯಕ್ಕೆ ನನ್ನ ಎಂಟ್ರಿ ನಿಶ್ಚಿತವಾಗಿದೆ. ಇದಕ್ಕಾಗಿ ಸೂಕ್ತ ಸಮಯಬೇಕಿದೆ.ನಾನು ನನ್ನದೇ ಆದ ಪಕ್ಷವನ್ನು ಕಟ್ಟಿ ತಮಿಳುನಾಡಿನ ಎಲ್ಲಾ ಕ್ಷೇತ್ರಗಳಿಂದಲೂ ಸ್ಪರ್ಧಿಸುತ್ತೇನೆ. ನನಗೆ 45ನೇ ವರ್ಷವಾಗಿದ್ದಾಗ ರಾಜಕೀಯ ಗುರಿ ಇಲ್ಲ. ಆದರೆ 68ನೇ ವಯಸ್ಸಿನಲ್ಲಿ ಇದೆ. ಯಾವುದೇ ಹುದ್ದೆಗೆ ಆಸೆಪಟ್ಟು ನಾನು ರಾಜಕೀಯಕ್ಕೆ ಪ್ರವೇಶಿಸುತ್ತಿಲ್ಲ. ಹಣ ಹಾಗೂ ಹೆಸರು ಮಾಡುವ ಆಸೆಯೂ ನನಗಿಲ್ಲ. ಅವೆರಡೂ ಈಗಾಗಲೇ ನನ್ನ ಬಳಿ ಇದೆ.

ಕಳೆದ ಒಂದು ವರ್ಷದಿಂದ ನಡೆದಿರುವ ರಾಜಕೀಯ ಬೆಳವಣಿಗೆಗಳು ತಮಿಳುನಾಡಿನ ಘನತೆ ಕುಂದುವಂತೆ ಮಾಡಿದೆ. ಇವು ಜನರನ್ನು ತಲೆ ತಗ್ಗಿಸುವಂತೆ ಮಾಡಿದೆ. ಹೀಗಾಗಿ ಸರ್ಕಾರ ಬದಲಾಗಬೇಕು. ವ್ಯವಸ್ಥೆ ಬದಲಾಗಬೇಕು. ಇದು ಸುಲಭದ ಹಾದಿಯಲ್ಲ ಎಂಬುದು ನನಗೆ ಗೊತ್ತಿದೆ. ಆದರೂ ನಾನು ಕೇವಲ ಜನರ ಪ್ರೀತಿ ಹಾಗೂ ಬೆಂಬಲದೊಂದಿಗೆ ರಾಜಕೀಯ ಮಾಡುತ್ತೇನೆ. ನಮ್ಮ ರಾಜಕೀಯ ಎಷ್ಟು ಹದಗೆಟ್ಟಿದೆ ಎಂದರೆ, ಇಡೀ ಪ್ರಪಂಚವೇ ನಮ್ಮನ್ನು ನೋಡಿ ನಗುವಂತೆ ಮಾಡಿದೆ. ನನ್ನ ರಾಜಕೀಯ ಹಾದಿಯಲ್ಲಿ ನನಗೆ ಸ್ವಸಹಾಯಕರು ಬೇಕಾಗಿಲ್ಲ. ತಮ್ಮ ವೈಯಕ್ತಿಕ ಕೆಲಸಕ್ಕಾಗಿ ರಾಜಕಾರಣಿಗಳನ್ನು ಬಳಸಿಕೊಳ್ಳದ ಮಾರ್ಗದರ್ಶಕರು ಬೇಕಾಗಿದ್ದಾರೆ. ಜನರ ಹಕ್ಕಿಗಾಗಿ ಹೋರಾಡುವ ಮಾರ್ಗದರ್ಶಕರು ಬೇಕಾಗಿದ್ದಾರೆ. ಸರ್ಕಾರವನ್ನು ಯಾವುದೇ ಮುಲಾಜಿಲ್ಲದೆ ಪ್ರಶ್ನಿಸುವ ಮಾರ್ಗದರ್ಶಕರು ಬೇಕಾಗಿದ್ದಾರೆ.

ಪ್ರಜಾಪ್ರಭುತ್ವದ ಹೆಸರಿನಲ್ಲಿ ರಾಜಕಾರಣಿಗಳು ನಮ್ಮ ನೆಲ ಮತ್ತು ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ಹೀಗಾಗಿ ಬದಲಾವಣೆಯನ್ನು ತಳ ಮಟ್ಟದಿಂದಲೇ ತರಬೇಕು. ಹೀಗಾಗಿ ಸತ್ಯ, ಕೆಲಸ ಮತ್ತು ಬೆಳವಣಿಗೆ ನಮ್ಮ ಪಕ್ಷದ ಮೂಲ ಮಂತ್ರವಾಗಿವೆ.’

ರಜನಿಕಾಂತ್ ತಮ್ಮ ಅಭಿಮಾನಿಗಳೊಂದಿಗಿನ ಸಂವಾದ ಹಾಗೂ ಫೋಟೋ ಕಾರ್ಯಕ್ರಮದ ವೇಳೆ ತಮ್ಮ ಹಿಂದಿನ ಪರದೆ ಮೇಲೆ ಕಮಲದ ಹೂವಿನ ಮೇಲೆ ತಮ್ಮ ಬಾಬಾ ಚಿತ್ರದಲ್ಲಿ ತಾವು ನೀಡಿದ್ದ ಹಸ್ತದ ಫೋಸ್ ಇರುವ ಚಿತ್ರವಿತ್ತು. ಇದೇ ಅವರ ಪಕ್ಷವಾಗುತ್ತದೆಯೇ ಎಂಬ ಕುತೂಹಲ ಮೂಡಿದೆ. ರಜನಿ ರಾಜಕೀಯ ಪ್ರವೇಶ ಘೋಷಿಸುತ್ತದ್ದಂತೆ ಅವರ ಅಭಿಮಾನಿಗಳಲ್ಲಿ ಸಂಭ್ರಮಾಚರಣೆ ಮೂಡಿದ್ದು, ಇಡೀ ತಮಿಳಿನಾಡಿನಲ್ಲಿ ಅವರ ಅಭಿಮಾನಿಗಳಿಗೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ರಜನಿ ಅವರು ರಾಜಕೀಯಕ್ಕೆ ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಇನ್ನು ಮುಂದೆ ಬಣ್ಣ ಹಚ್ಚುವುದಿಲ್ಲ ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ. ಅವರ ಮುಂದಿನ ಚಿತ್ರ ರೋಬೊ 2.0 ಚಿತ್ರ ವಿಶ್ವದಾದ್ಯಂತ ರಜನಿ ಅಭಿಮಾನಿಗಳ ಗಮನ ಸೆಳೆದಿದೆ.

ಇನ್ನು ನಿನ್ನೆಯಷ್ಟೇ ತಾನೊಬ್ಬ ಕನ್ನಡಿಗ ಎಂದು ರಜನಿ ಹೇಳಿಕೊಂಡಿದ್ದರು. ಈ ಹೇಳಿಕೆ ಕುರಿತಾಗಿ ಡಿಜಿಟಲ್ ಕನ್ನಡದಲ್ಲಿ ಲೇಖನವೂ ಪ್ರಕಟವಾಗಿತ್ತು.

Leave a Reply