ಬಿಜೆಪಿ ಒಳೇಟಿಗೆ ಮುರುಟಿದ ಯಡಿಯೂರಪ್ಪ, ಹೆಗಡೆ!

ವೈರಿಗಳ ಜತೆ ಕಾದಾಡುವುದು ಸುಲಭ. ಏಕೆಂದರೆ ವೈರಿ ಯಾರೆಂಬುದು ಗೊತ್ತಿರುತ್ತದೆ. ಅವರ ಶಕ್ತಿ, ಸಾಮರ್ಥ್ಯದ ಪರಿಚಯವಿರುತ್ತದೆ. ಹೀಗಾಗಿ ಅವರು ಹೆಣೆಯಬಹುದಾದ ವ್ಯೂಹಗಳನ್ನೂ ಊಹಿಸಿಕೊಳ್ಳಬಹುದು. ಅದಕ್ಕೆ ಪ್ರತಿಯಾಗಿ ತಂತ್ರವನ್ನೂ ರಚಿಸಬಹುದು. ಆದರೆ ಮನೆಯೊಳಗಿನ ವೈರಿಗಳಿದ್ದಾರಲ್ಲ, ಅವರ ಜತೆ  ಕಷ್ಟ. ಅವರನ್ನು ಪತ್ತೆ ಮಾಡುವುದಾಗಲಿ, ಅವರು ಇಡುವ ಒಳಬತ್ತಿಗಳನ್ನು ಕಲ್ಪಿಸಿಕೊಳ್ಳುವುದಾಗಲಿ ಅಷ್ಟು ಸುಲಭವಲ್ಲ. ಜತೆಯಲ್ಲಿದ್ದುಕೊಂಡು, ನಗುನಗುತ್ತಲೇ ಬತ್ತಿ ಇಟ್ಟರೆ ಅದನ್ನು ಜೀರ್ಣಿಸಿಕೊಳ್ಳುವುದಾದರೂ ಹೇಗೆ?
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಪರಿಸ್ಥಿತಿಯೂ ಈಗ ಅದೇ ಆಗಿದೆ. ಕರ್ನಾಟಕಕ್ಕೆ ಮಹದಾಯಿ ನೀರು ತರುವ ವಿಚಾರದಲ್ಲಿ ಸಲ್ಲದ ಆಶ್ವಾಸನೆ ಕೊಟ್ಟು ಇನ್ನಿಲ್ಲದಂತೆ ಎಡವಿ ಬಿದ್ದಿರುವ ಯಡಿಯೂರಪ್ಪನವರು ತಮ್ಮ ವಿರುದ್ಧ ತಮ್ಮ ಪಕ್ಷದವರೇ ಪಿತೂರಿ ಮಾಡುತ್ತಿದ್ದಾರೆ ಎಂದು  ಅಲವತ್ತುಕೊಂಡಿದ್ದಾರೆ. ಅದೇ ರೀತಿ ಫೈರ್‌ಬ್ರಾಂಡ್ ಖ್ಯಾತಿಯಿಂದ ಎಲ್ಲರ ಊಹೆಗಳನ್ನು ತಲೆಕೆಳಗು ಮಾಡಿ ಕೇಂದ್ರ ಸಚಿವ ಸ್ಥಾನಕ್ಕೇರಿದ್ದ ಅನಂತಕುಮಾರ ಹೆಗಡೆ ಅವರನ್ನು ವರಿಷ್ಠರೇ ಚುನಾವಣೆ ಪ್ರಮುಖ ಪ್ರಚಾರಕನ್ನಾಗಿ ಮುಂದಕ್ಕೆ ಬಿಟ್ಟಿದ್ದರು. ಆದರೆ ಜಾತ್ಯತೀತರು ಮತ್ತು ಸಂವಿಧಾನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಹೆಗಡೆ ಅವರಿಗೆ ಅದೇ ವರಿಷ್ಠರು ಮೂಗುದಾರ ಹಾಕಿ ಗೂಟಕ್ಕೆ ಕಟ್ಟಿ ಹಾಕಿದ್ದಾರೆ. ಈ ಎರಡು ಬೆಳವಣಿಗೆಗಳಿಗೆ ಯಡಿಯೂರಪ್ಪ ಮತ್ತು ಅನಂತಕುಮಾರ ಹೆಗಡೆ ಅವರ ಹೇಳಿಕೆಗಳು ನೀಡಿರುವಷ್ಟೇ ಕೊಡುಗೆಯನ್ನು  ಹಿತಶತ್ರುಗಳೂ ಕೊಟ್ಟಿದ್ದಾರೆ. ಹೀಗಾಗಿಯೇ ಯಡಿಯೂರಪ್ಪ ಮತ್ತು ಅನಂತಕುಮಾರ ಹೆಗಡೆ ರಾತ್ರಿ ಕಳೆದು ಬೆಳಕು ಹರಿಯುವುದರೊಳಗೆ ಮಂಕು ಬಡಿದವರಂತಾಗಿದ್ದಾರೆ.
ಯಡಿಯೂರಪ್ಪ ಅವರು ಕರ್ನಾಟಕಕ್ಕೆ 2017 ರ ಡಿಸೆಂಬರ್ 15 ರೊಳಗೆ  ಮಹದಾಯಿ ನೀರು ತರುವುದಾಗಿ ಹೇಳಿ ತಿಂಗಳ ಮೇಲಾಗಿತ್ತು. ಅವರು ಆ ಹೇಳಿಕೆ ನೀಡಿದಾಗ ವರಿಷ್ಠರು ಆಕ್ಷೇಪ ವ್ಯಕ್ತಪಡಿಸಲು ಹೋಗಿರಲಿಲ್ಲ. ಯಾಕೆ ಈ ರೀತಿ ಹೇಳಿಕೆ ಕೊಟ್ಟಿರಿ ಎಂದೂ ಕೇಳಲಿಲ್ಲ. ಬದಲಿಗೆ ತಮ್ಮ ಬಳಿ ಈ ವಿಷಯ ಪ್ರಸ್ತಾಪಿಸಿದ ಯಡಿಯೂರಪ್ಪ  ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಉತ್ತಮ ರಾಜಕೀಯ ನಡೆ ಎಂದೇ ಪ್ರಶಂಸಿಸಿದ್ದರು. ಅದರ ಬೆನ್ನಲ್ಲೇ ಬಿಜೆಪಿ ಸಂಸದರು ಮತ್ತಿತರ ನಾಯಕರ ನಿಯೋಗ ಕೂಡ ಅಮಿತ್ ಶಾ ಹಾಗೂ ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನೂ ಭೇಟಿ ಮಾಡಿತ್ತು. ಇದಾದ ನಂತರ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಯಡಿಯೂರಪ್ಪ ಹಾಗೂ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ಕರೆದು ಮಾತಾಡಿದ್ದರು. ಚುನಾವಣೆ ರಾಜಕೀಯಕ್ಕೆ  ಪರಿಸ್ಥಿತಿ ನಿರ್ವಹಿಸುವಂತೆ ತಾಕೀತು ಸಹ ಮಾಡಿದ್ದರು.
ವಾಸ್ತವವಾಗಿ ಪರಿಕ್ಕರ್ ಅವರಿಗೆ ಕರ್ನಾಟಕಕ್ಕೆ ಮಹದಾಯಿ ನೀರು ಬಿಡುಗಡೆ ಹೇಳಿಕೆ ನೀಡುವ ಇಷ್ಟವಿರಲಿಲ್ಲ. ಯಾಕೆಂದರೆ ಮಹದಾಯಿ ಮೊದಲಿಂದಲೂ ರಾಜಕೀಯ ಅಸ್ತ್ರವಾಗಿಯೇ ಬಳಕೆ ಆಗುತ್ತಿದೆ. ಗೋವಾ ಕಾಂಗ್ರೆಸ್ ಆಗಲಿ, ಬಿಜೆಪಿಯಾಗಲಿ ಅಥವಾ ಇನ್ನಿತರ ಯಾವುದೇ ಪಕ್ಷವಾಗಲಿ ಕೈಗೆ ಸಿಕ್ಕಿರುವ ದಾಳವನ್ನು ಕೋಲಾಗಿ ಪರಿವರ್ತಿಸಿ ಮತ್ತೊಬ್ಬರ ಕೈಗೆ ಕೊಟ್ಟು ಹೊಡೆಸಿಕೊಳ್ಳಲು ಇಚ್ಛಿಸುವುದಿಲ್ಲ. ಅದು ರಾಜಕೀಯ ಸುಳಿಧರ್ಮ. ಹೀಗಾಗಿ ಸ್ಥಳೀಯ ರಾಜಕೀಯ ಹಿತಾಸಕ್ತಿ ಕಾಪಾಡಿಕೊಳ್ಳುವುದು ಆಯಾ  ಮುಖಂಡರ ಆದ್ಯತೆ ಆಗಿರುತ್ತದೆ. ತಮ್ಮ ವರ್ಚಸ್ಸು ಕಳೆದುಕೊಂಡು ಮತ್ತೊಬ್ಬರ, ಅದರಲ್ಲೂ ಅನೇಕ ಸಾಮಾಜಿಕ ವಿಚಾರಗಳಲ್ಲಿ ಬದ್ಧ ವೈರತ್ವ ಸಾಧಿಸಿಕೊಂಡು ಬಂದಿರುವ ಕರ್ನಾಟಕಕ್ಕೆ ಗೋವಾದಿಂದ ಉಪಕಾರ ನಿರೀಕ್ಷಿಸುವುದು ಮೂರ್ಖತನವಾಗುತ್ತದೆ. ಆದರೂ ಪರಿಕ್ಕರ್ ಅವರು ಅಮಿತ್ ಶಾ ಅವರ ಸೂಚನೆಗೆ ಕಟ್ಟುಬಿದ್ದು ಮಾನವೀಯತೆ ದೃಷ್ಟಿಯಿಂದ ಕರ್ನಾಟಕಕ್ಕೆ ಏಳೂವರೇ ಟಎಂಸಿ ನೀರು ಬಿಡುಗಡೆ ಮಾಡುವುದಾಗಿ ಹೇಳಿಕೆ ನೀಡಿದರು. ಬರೀ ಹೇಳಿಕೆ ನೀಡಿದ್ದಷ್ಟೇ ಅಲ್ಲ ಆ ಬಗ್ಗೆ ಯಡಿಯೂರಪ್ಪನವರಿಗೂ ಪತ್ರ ಬರೆದರು. ಅಲ್ಲಿಗೆ ಮುಗಿದೇ  ಯಡಿಯೂರಪ್ಪ ನವರಂತೂ ಕರ್ನಾಟಕಕ್ಕೆ ನೀರು ಬಂದೇ ಬಿಟ್ಟಿತು ಎಂಬಂತೆ ಬೀಗಿದರು. ಆದರೆ ಆ ಬೀಗುವಿಕೆ ಹೆಚ್ಚು ಕಾಲ ಬಾಳಲಿಲ್ಲ.
ಶಿಷ್ಟಾಚಾರ ಬದಿಗಿಟ್ಟು ಒಂದೇ ಪಕ್ಷದವರು ಎಂಬ ಕಾರಣಕ್ಕೆ ಒಂದು ರಾಜ್ಯದ ಮುಖ್ಯಮಂತ್ರಿ ಮತ್ತೊಂದು ರಾಜ್ಯದ ಪ್ರತಿಪಕ್ಷ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದದ್ದು ಅಸಂವಿಧಾನಿಕ ನಡೆ ಎಂಬಂತಾಯಿತು. ಅದಕ್ಕೆ ಕಾನೂನಾತ್ಮಕವಾಗಲಿ, ಆಡಳಿತಾತ್ಮಕವಾಗಲಿ ಯಾವುದೇ ಮಾನ್ಯತೆ ಇಲ್ಲ. ಇದನ್ನೇ ಮುಂದಿಟ್ಟುಕೊಂಡು ಕರ್ನಾಟಕದ ಆಡಳಿತರೂಢ ಕಾಂಗ್ರೆಸ್ ರಾಜ್ಯ, ಗೋವಾ, ಕೇಂದ್ರ ಎನ್ನದೆ ಬಿಜೆಪಿ ಮುಖಂಡರ  ಹರಿಹಾಯಲು ಶುರುಮಾಡಿತು. ಚುನಾವಣೆ ಸಂದರ್ಭದಲ್ಲಿ ತಾನಾಗಿಯೇ ಒದಗಿ ಬಂದ ಅಸ್ತ್ರವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿತು. ಬಿಜೆಪಿ ಮುಜುಗರಕ್ಕೆ ಸಿಕ್ಕಿಕೊಂಡಿತು. ಗೋವಾ ಮತ್ತು ಕರ್ನಾಟಕ ಎರಡೂ ಕಡೆ. ಗೋವಾದಲ್ಲಿ ಪರಿಕ್ಕರ್ ಸರಕಾರಕ್ಕೆ ಬೆಂಬಲ ಕೊಟ್ಟಿರುವ ಮಿತ್ರಪಕ್ಷಗಳು ಪರಿಕ್ಕರ್ ಬರೆದ ಪತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದವು. ಯಾಕೋ ಸಮಸ್ಯೆ ತಮ್ಮ ಬುಡಕ್ಕೆ ಬರುತ್ತಿದೆ ಎಂದು ಅರಿತ  ಪರಿಕ್ಕರ್ ಗೋವಾ ನೀರಾವರಿ ಸಚಿವ ವಿನೋದ್ ಪಳನೇಕರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿನಯ್ ತೆಂಡೂಲ್ಕರ್ ಅವರಿಂದ  ಕಾರಣಕ್ಕೂ ಕರ್ನಾಟಕಕ್ಕೆ ಮಹದಾಯಿಯ ಒಂದೇ ಒಂದು ತೊಟ್ಟು ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಪರಿಕ್ಕರ್ ಅವರು ಯಡಿಯೂರಪ್ಪನವರಿಗೆ ಬರೆದ ಪತ್ರ ಕೇವಲ ರಾಜಕೀಯ ಸ್ಟಂಟ್‌‘ ಎಂದು ಹೇಳಿಕೆ ಕೊಡಿಸಿದರು. ಯಡಿಯೂರಪ್ಪ ಭೂಮಿಗಿಳಿದು ಹೋದರು.
ಇಲ್ಲಿ ಒಂದು ಅಂಶ ಗಮನಿಸಬೇಕು. ಒಂದು ರಾಜ್ಯದ ಮುಖ್ಯಮಂತ್ರಿ ತೆಗೆದುಕೊಂಡ ನಿಲುವನ್ನು ಅದೇ ರಾಜ್ಯದ ಅವರ ಸಂಪುಟ ಸದಸ್ಯರು ವಿರೋಧಿಸುವುದು ತೀರಾ ಅಪರೂಪ. ಮುಖ್ಯಮಂತ್ರಿ ವಿರುದ್ಧ ಸರಕಾರ ಮತ್ತು ಪಕ್ಷದಲ್ಲಿ ಬಂಡಾಯ ಚಟುವಟಿಕೆಗಳು  ಅಂಥದ್ದು ನಡೆಯುತ್ತದೆ. ಆದರೆ ಗೋವಾ ನೀರಾವರಿ ಸಚಿವ ಹಾಗೂ ಬಿಜೆಪಿ ಮುಖಂಡ ಪರಿಕ್ಕರ್ ಅವರಿಗೆ ಗಳಸ್ಯ-ಕಂಠಸ್ಯ. ಅಲ್ಲಿ ಯಾವುದೇ ಭಿನ್ನಮತೀಯ ಚಟುವಟಿಕೆ ಇರಲಿಲ್ಲ. ಮೇಲಾಗಿ ಪರಿಕ್ಕರ್ ನೀಡಿದ ಹೇಳಿಕೆ ಹಿಂದೆ ವರಿಷ್ಠರ ಅಣತಿ ಇತ್ತು ಎಂಬುದು ಅವರಿಬ್ಬರಿಗೂ ಗೊತ್ತಿತ್ತು. ಆದರೂ ಅವರು ಪರಿಕ್ಕರ್ ಪತ್ರದ ವಿರುದ್ಧ ಹೇಳಿಕೆ ನೀಡುತ್ತಾರೆಂದರೆ ಅಲ್ಲೊಂದು ರಾಜಕೀಯ ತಂತ್ರವಿದೆ ಎಂದಷ್ಟೇ ಅರ್ಥ. ಇತ್ತ ಯಡಿಯೂರಪ್ಪನವರಿಗೆ ಪತ್ರ ಬರೆದ ಪರಿಕ್ಕರ್ ಅತ್ತ ಸಂಪುಟ ಸದಸ್ಯ ಹಾಗೂ  ಮುಖಂಡರ ಕೈಲಿ ಹೇಳಿಕೆ ಕೊಡಿಸಿ ನಿರ್ಲಿಪ್ತರಾದರು.
ಈಗ ಅಮಿತ್ ಶಾ ಅವರು ಹದಿನೈದು ದಿನದೊಳಗೇ ಮಹದಾಯಿ ನೀರು ತರುವುದಾಗಿ ಯಾರನ್ನು ಕೇಳಿ ಹೇಳಿಕೆ ಕೊಟ್ಟಿರಿ. ನಿಮ್ಮಿಂದಲೇ ಇಷ್ಟೆಲ್ಲ ಅವಾಂತರ ಆದದ್ದು ಎಂದು ಕರ್ನಾಟಕದಲ್ಲಿ ಭಾನುವಾರ ನಡೆದ ಬಿಜೆಪಿ ಪ್ರಮುಖರ ಸಮಿತಿ ಸಭೆಯಲ್ಲಿ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಹಾಗೆ ತರಾಟೆಗೆ ತೆಗೆದುಕೊಳ್ಳುವಾಗ ಯಡಿಯೂರಪ್ಪ ಮತ್ತು ಪರಿಕ್ಕರ್ ಅವರನ್ನು ಮುಂದಿಟ್ಟುಕೊಂಡು ಮಹದಾಯಿ ಕುರಿತು ಸಭೆ ನಡೆಸಿದ್ದು, ನೀರು ಬಿಡುಗಡೆ  ಯಡಿಯೂರಪ್ಪನವರಿಗೆ ಪತ್ರ ಬರೆಯುವಂತೆ ಪರಿಕ್ಕರ್ ಅವರಿಗೆ ಸೂಚನೆ ಕೊಟ್ಟದನ್ನು ಮರೆತು ಹೋಗಿದ್ದಾರೆ. ಯಡಿಯೂರಪ್ಪನವರ ಹೇಳಿಕೆ ಸರಿ ಇಲ್ಲ ಎಂದಾಗಿದ್ದರೆ ಅವತ್ತೇ ಅವರನ್ನು ಈ ಬಗ್ಗೆ ಪ್ರಶ್ನೆ ಮಾಡಬಹುದಿತ್ತು. ಅದಕ್ಕೆ ಸ್ಪಷ್ಟನೆ ಕೊಡಿಸಬಹುದಿತ್ತು. ಬದಲಿಗೆ ಉತ್ತಮ ರಾಜಕೀಯ ನಡೆ ಎಂದ ಅಮಿತ್ ಶಾ ಇವತ್ತು ಪರಿಸ್ಥಿತಿ ಪ್ರತಿಕೂಲ ಅಗುತ್ತಿದೆ, ಕಾಂಗ್ರೆಸ್ ವಿಷಯವನ್ನು ಚೆನ್ನಾಗಿ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಗೊತ್ತಾದ ಮೇಲೆ ಉಲ್ಟಾ ಹೊಡೆದಿದ್ದಾರೆ. ಅವತ್ತೆ ಅವರು ಈ ಕೆಲಸ ಮಾಡಿದ್ದರೆ  ತಾವು ಮತ್ತು ಯಡಿಯೂರಪ್ಪನವರು ಮುಜುಗರಕ್ಕೆ ಸಿಕ್ಕಿಕೊಳ್ಳುವುದನ್ನು ತಪ್ಪಿಸಿಕೊಳ್ಳಬಹುದಿತ್ತು.
ಇಲ್ಲಿ ಇನ್ನೂ ಒಂದು ಅಂಶವಿದೆ. ಯಡಿಯೂರಪ್ಪನವರಿಗೆ ಪರಿಕ್ಕರ್ ಪತ್ರ ಬರೆದದ್ದು ಕರ್ನಾಟಕದಲ್ಲಿ ಯಡಿಯೂರಪ್ಪ ಅವರನ್ನು ಕಂಡರಾಗದ ಬಿಜೆಪಿ ಅನ್ಯ ಮುಖಂಡರಲ್ಲಿ ಸಂಕಟ ತಂದಿತ್ತು. ಎಲ್ಲ ಶ್ರೇಯಸ್ಸು ಅವರಿಗೇ ಸಲ್ಲುತ್ತದಲ್ಲ ಎಂಬ ಹೊಟ್ಟೆಕಿಚ್ಚದು. ಹೀಗಾಗಿ ಕೆಲವರು ಕಾಂಗ್ರೆಸ್ ಮುಖಂಡರನ್ನು ಯಡಿಯೂರಪ್ಪನವರ ವಿರುದ್ಧ ಎತ್ತಿಕಟ್ಟಿದರು. ಅವರು ವಾಗ್ದಾಳಿಗೆ ಇಳಿದ ನಂತರ ಇದಕ್ಕೆಲ್ಲ ಯಡಿಯೂರಪ್ಪನವರೇ ಕಾರಣ ಎಂದು ಅದೇ ಕಾಲಕ್ಕೆ ವರಿಷ್ಠರ ಕಿವಿಯೂದಿದರು. ಇಷ್ಟೇ  ಪರವಾಗಿರಲಿಲ್ಲ. ಪರಿಕ್ಕರ್ ಹಾಗೂ ವರಿಷ್ಠರ ದ್ವಂದ್ವ ನಿಲುವಿನಿಂದ ಇಕ್ಕಟ್ಟಿಗೆ ಸಿಕ್ಕಿಬಿದ್ದಿದ್ದ ಯಡಿಯೂರಪ್ಪನವರು ಎರಡು ದಿನಗಳ ಮೊದಲು ಬೆಂಗಳೂರಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ರಾಷ್ಟ್ರೀಯ ಮುಖಂಡರು ತಮಗೆ ಕರ್ನಾಟಕ ಹಾಗೂ ಗೋವಾ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲಿ. ತಾವಂತೂ ರೈತರ ಪರವಾಗಿಯೇ ನಿಲ್ಲುವುದಾಗಿ ಗುಡುಗಿದ್ದರು. ಇದನ್ನೂ ಕೂಡ ಯಡಿಯೂರಪ್ಪ ವಿರೋಧಿಗಳು ಉಪ್ಪು-ಖಾರ ಸೇರಿಸಿ ವರಿಷ್ಠರ ಮಿದುಳಿಗೆ ಸುರಿದಿದ್ದರು. ಅಮಿತ್ ಶಾ ಅವರು ಯಡಿಯೂರಪ್ಪನವರನ್ನು ಕ್ಲಾಸ್ ತೆಗೆದುಕೊಂಡದ್ದಕ್ಕೆ ಇರುವ ಕಾರಣಗಳಲ್ಲಿ  ಕೂಡ ಒಂದು. ಅಲ್ಲಿಗೆ ಯಡಿಯೂರಪ್ಪ ಯಪರಾ-ತಪರಾರಾದರು. ಅವರ ವಿರೋಧಿಗಳು ಒಳಗೊಳಗೇ ಸಿಳ್ಳೇ ಹಾಕಿ ಸಂಭ್ರಮಿಸಿದರು.
ಇನ್ನೊಂದೆಡೆ ಅನಂತಕುಮಾರ ಹೆಗಡೆ ಅವರ ವಿಚಾರದಲ್ಲಿಯೂ ಇದೇ ಆಗಿದೆ. ಆದರೆ ಸ್ವರೂಪ ಮತ್ತು ಪ್ರಮಾಣದಲ್ಲಿ ವ್ಯತ್ಯಾಸವಿದೆ. ಅನಂತಕುಮಾರ ಹೆಗಡೆ ಅವರ ‘ಸ್ವಯಂಕೃತ ಅಪರಾಧ’ದ ಪಾಲು ಸ್ವಲ್ಪ ಹೆಚ್ಚೇ ಇದೆ. ಇತ್ತೀಚಿಗೆ ಸಂಪುಟ ವಿಸ್ತರಣೆಯಲ್ಲಿ ವರಿಷ್ಠರು ತಮಗೆ ಕೊಟ್ಟ ಆದ್ಯತೆಯನ್ನು ಬಾಯಿಗೆ ಬಂದಂತೆ ಮಾತನಾಡಲು ಪರವಾನಗಿ ಎಂದು ಭಾವಿಸಿದ್ದು ಯಡವಟ್ಟಾಗಿ ಹೋಗಿದೆ. ಜತೆಗೆ ಕೆಲವು  ನಾಯಕರ ತಾಳ-ತಂಬೂರಿ ಕೂಡ ಕೆಲಸ ಮಾಡಿದೆ.
ಅನಂತಕುಮಾರ ಹೆಗಡೆ ಅವರು ಎಲ್ಲರ ನಿರೀಕ್ಷೆ ಪೊಳ್ಳು ಮಾಡಿ ಕೇಂದ್ರ ಸಂಪುಟ ಸೇರಿದ ನಂತರ ಪಕ್ಷ ಹಾಗೂ ಜನಮಾನ್ಯರ ವಲಯದಲ್ಲಿ ‘ಸ್ಟಾರ್ ವ್ಯಾಲ್ಯೂ’ ಪಡೆದುಕೊಂಡರು. ಅದೇ ರೀತಿ ಪಕ್ಷದೊಳಗೆ ಶತ್ರುಗಳನ್ನೂ ಸಹ. ಕೇಂದ್ರ ಸಚಿವರಾದ ನಂತರ ರಾಜ್ಯ ಕಾಂಗ್ರೆಸ್ ಸರಕಾರ ಹಾಗೂ ಅದರ ಮುಖಂಡರನ್ನು ವಾಚಾಮ ಗೋಚರ ನಿಂದಿಸಲು ಶುರು ಮಾಡಿದರು. ಟಿಪ್ಪು ಜಯಂತಿ ಕಾರ್ಯಕ್ರಮ ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರದ ಹೆಸರೇಳಿ  ಹೆಸರು ಮುದ್ರಿಸಿದರೆ ವೇದಿಕೆ ಮೇಲೆ ಟಿಪ್ಪುವನ್ನು ಬಾಯಿಗೆ ಬಂದಂತೆ ನಿಂದಿಸುವುದಾಗಿ ಸವಾಲು ಹಾಕಿದ ನಂತರ ಹಿಂದುತ್ವವಾದಿಗಳಿಗೆ ಅವರೊಬ್ಬ ಆರಾಧ್ಯದೈವದಂತಾದರು. ಸರಕಾರ ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರು ಹಾಕಲಿಲ್ಲ. ವಿವಾದ ಮುಂದುವರಿಯಲಿಲ್ಲ. ಆದರೆ ಅನಂತಕುಮಾರ ಹೆಗಡೆ ಅವರ ವಾಗ್ಬಾಣಗಳು ಮಾತ್ರ ಮುಂದುವರಿದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪಾಪದ ಪಿಂಡ ಎಂದರು, ರಾಕ್ಷಸ ಎಂದರು. ಇನ್ನೂ ಏನೇನೋ ಅಂದರು. ಜನ ಚಪ್ಪಾಳೆ ತಟ್ಟಿದರು. ಸಿಳ್ಳೆ ಹಾಕಿದರು. ವರಿಷ್ಠರೂ ಶಹಬ್ಬಾಸ್ ಎಂದರು. ವಿಧಾನಸಭೆ  ಸಂದರ್ಭದಲ್ಲಿ ಇಂಥ ಫೈರ್‌ಬ್ರಾಂಡ್ ಪ್ರಚಾರಕನ ಅಗತ್ಯವಿತ್ತು ಎಂದು ಬೆನ್ನತಟ್ಟಿದರು.  ಅನಂತಕುಮಾರ ಹೆಗಡೆ ತಲೆ ಭುಜದ ಮೇಲೆ ನಿಲ್ಲಲಿಲ್ಲ. ವಾಗ್ಪ್ರಹಾರ ಓತಪ್ರೋತವಾಗಿ ಹರಿಯಿತು.
ಜನ ಹೆಗಡೆ ಅವರನ್ನು ಯಡಿಯೂರಪ್ಪನವರ ಜತೆ ಹೋಲಿಸಿ ನೋಡಲು ಶುರು ಮಾಡಿದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಅವರೇ ಮುಂದಿನ ಮುಖ್ಯಮಂತ್ರಿ ಎಂದರು. ಯಡಿಯೂರಪ್ಪ ಸೇರಿದಂತೆ ಪಕ್ಷದ ಅನ್ಯ ನಾಯಕರ ಹೊಟ್ಟೆಯಲ್ಲಿ ಕಳ್ಳಿಹಾಲು ಸುರುವಿದಂತಾಯಿತು. ಅನಂತಕುಮಾರ ಹೆಗಡೆ ಅವರ ಹರಕು ನಾಲಗೆ ಹರಿಸುತ್ತಿರುವ ವಾಗ್ಬಾಣಗಳಿಂದ ಚುನಾವಣೆಯಲ್ಲಿ ಬಿಜೆಪಿಗೆ  ಮತದಾರರು ತಿರುಗಿ ಬೀಳುತ್ತಾರೆ. ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಇದರ ಲಾಭ ಸಿಗುತ್ತದೆ ಎಂದೆಲ್ಲ ವರಿಷ್ಠರಿಗೆ ದೂರಲು ಶುರು ಮಾಡಿದರು. ಅದೇ ಕಾಲಕ್ಕೆ ಅನಂತ ಕುಮಾರ ಹೆಗಡೆ ಕೊಪ್ಪಳದಲ್ಲಿ ಜಾತ್ಯತೀತರನ್ನು ಅಪ್ಪ-ಅಮ್ಮ ಗೊತ್ತಿಲ್ಲದವರು, ಸಂವಿಧಾನ ಬದಲಿಸುತ್ತೇವೆ ಎಂದು ಜೀರ್ಣಿಸಿಕೊಳ್ಳಲಾಗದ ಹೇಳಿಕೆ ಕೊಟ್ಟರು. ಎದುರಾಳಿಗಳು ಸೇರಿದಂತೆ ನಾನಾ ವಲಯಗಳಿಂದ ತೀವ್ರ ಟೀಕೆಗಳು ಎದುರಾದವು. ರಾಜ್ಯದಲ್ಲಾಗಲಿ, ಕೇಂದ್ರದಲ್ಲಾಗಲಿ ಪಕ್ಷದ ಯಾರೊಬ್ಬರೂ ಹೆಗಡೆ ಪರ ನಿಲ್ಲಲಿಲ್ಲ. ಬದಲಿಗೆ ಹೆಗಡೆ ಹೇಳಿಕೆಯಿಂದ ಬಿಜೆಪಿ ಮುಳುಗಿಯೇ ಹೋಯಿತು  ವರಿಷ್ಠರಿಗೆ ಫಿಟ್ಟಿಂಗ್ ಇಟ್ಟರು. ಸಂಸತ್‌ನಲ್ಲೂ ಹೆಗಡೆ ಹೇಳಿಕೆ ಪ್ರತಿಧ್ವನಿಸಿತು. ಅಲ್ಲೂ ವರಿಷ್ಠರು ಸಮರ್ಥನೆಗೆ ನಿಲ್ಲಲಿಲ್ಲ. ಬದಲಿಗೆ ಹೆಗಡೆ ಹೇಳಿಕೆ ಪರಿಣಾಮಗಳನ್ನು ಅವಲೋಕಿಸುವ ಜವಾಬ್ದಾರಿಯನ್ನು ಅನ್ಯ ನಾಯಕರಿಗೆ ವಹಿಸಿದರು. ಆ ಗುಂಪಿನಲ್ಲಿ ಹೆಗಡೆ ಬೆಳವಣಿಗೆ ಕಂಡರಾಗದವರೇ ಇದ್ದರು. ಹೆಗಡೆ ಕ್ಷಮೆ ಕೇಳದೆ ವಿಧಿಯಿಲ್ಲ. ಕ್ಷಮೆ ಕೇಳದಿದ್ದರೆ ಪಕ್ಷ ಮಗುಚಿ ಬೀಳುತ್ತದೆ ಎಂದು ವರದಿ ಕೊಟ್ಟರು. ತಕ್ಷಣವೇ ವರಿಷ್ಠರು ಕೊಟ್ಟ ಸೂಚನೆ ಮೇರೆಗೆ ಹೆಗಡೆ ಕ್ಷಮೆ ಯಾಚಿಸಿದರು. ಮೌನಕ್ಕೂ ಜಾರಿದರು!
ರಾಜಕೀಯದಲ್ಲಿ  ಇದ್ದದ್ದೆ. ಹೊಡೆತ ತಿನ್ನಬೇಕು, ಕೊಡಬೇಕು. ಕೊಟ್ಟು, ತಿನ್ನುತ್ತಲೇ ಬೆಳೆಯಬೇಕು. ಅದು ರಾಜಕೀಯ ಗುಣಧರ್ಮವೂ ಹೌದು. ಆದರೆ ಪಕ್ಷದೊಳಗೇ ಬೀಳುವ ಒಳೇಟುಗಳ ವಿರುದ್ಧ ಈಸಿ, ಜೈಸುವುದು ಅಷ್ಟು ಸುಲಭವಲ್ಲ. ಸದ್ಯಕ್ಕೆ ಯಡಿಯೂರಪ್ಪ ಮತ್ತು ಹೆಗಡೆ ಈ ಪರಿಸ್ಥಿತಿಯ ಪಾಲುದಾರರಾಗಿದ್ದಾರೆ!
ಲಗೋರಿ : ಬೆನ್ನು ಸವರುವವರೆಲ್ಲ ಹಿತೈಷಿಗಳಲ್ಲ !
(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply