ಪಾಕ್ ಸೇನೆಗೆ ನೀಡಬೇಕಿದ್ದ 1600 ಕೋಟಿಗೆ ಬ್ರೇಕ್! ಉಗ್ರರ ವಿಚಾರದಲ್ಲಿ ಗೊಸುಂಬೆ ಬುದ್ದಿ ತೋರುತ್ತಿರುವ ಪಾಕಿಸ್ತಾನಕ್ಕೆ ಅಮೆರಿಕ ಶಾಕ್!

ಡಿಜಿಟಲ್ ಕನ್ನಡ ಟೀಮ್:

ಉಗ್ರರ ವಿಚಾರದಲ್ಲಿ ಗೊಸುಂಬೆಯಂತೆ ಬಣ್ಣ ಬದಲಿಸುತ್ತಿರುವ ಪಾಕಿಸ್ತಾನದ ವಿರುದ್ಧ ನಿನ್ನೆಯಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ. ಟ್ರಂಪ್ ಆಕ್ರೋಶ ಭರಿತ ಟ್ವೀಟ್ ಬೆನ್ನಲ್ಲೇ ಅಮೆರಿಕ ಪಾಕ್ ಸೇನೆಗೆ ನೀಡಲು ಮುಂದಾಗಿದ್ದ 255 ಮಿಲಿಯನ್ ಅಮೆರಿಕನ್ ಡಾಲರ್ (₹ 1600 ಕೋಟಿ) ಆರ್ಥಿಕ ನೆರವಿಗೆ ಬ್ರೇಕ್ ಹಾಕಿದೆ.

ಅಮೆರಿಕ ಕಳೆದ 15 ವರ್ಷಗಳಿಂದ ಉಗ್ರರ ವಿರುದ್ಧ ಹೋರಾಡಲು ಪಾಕಿಸ್ತಾನಕ್ಕೆ ಕೋಟ್ಯಂತರ ಹಣದ ನೆರವು ನೀಡಲಾಗಿದೆ. ಅದಕ್ಕೆ ಪ್ರತಿಫಲವಾಗಿ ಪಾಕಿಸ್ತಾನದಿಂದ ನಮಗೆ ಸಿಕ್ಕಿದ್ದು ಕೇವಲ ಸುಳ್ಳು ಮಾತ್ರ. ಉಗ್ರರ ವಿರುದ್ಧ ಹೋರಾಡುತ್ತೇವೆ ಎಂದು ಸುಳ್ಳು ಹೇಳಿ ಆರ್ಥಿಕ ನೆರವು ಪಡೆದುಕೊಂಡ ಪಾಕಿಸ್ತಾನ ತನ್ನ ನೆಲದಲ್ಲಿ ಉಗ್ರರಿಗೆ ಆಶ್ರಯ ನೀಡುತ್ತಿದೆ. ಉಗ್ರರಿಗೆ ರಕ್ಷಣೆ ನೀಡಿ ಅವುಗಳನ್ನು ತನ್ನ ನೆರೆ ರಾಷ್ಟ್ರಗಳ ಮೇಲೆ ದಾಳಿಗೆ ಕುಮ್ಮಕ್ಕು ನೀಡುತ್ತಿದೆ. ಹೀಗಾಗಿ ಇಷ್ಟು ವರ್ಷಗಳ ಕಾಲ ಪಾಕಿಸ್ತಾನವನ್ನು ಮೂರ್ಖರಾದ ಅಮೆರಿಕ ಈಗ ಎಚ್ಚೆತ್ತುಕೊಳ್ಳುತ್ತಿದೆ. ಹೀಗಾಗಿ ನೆರವಿನ ರೂಪದಲ್ಲಿ ಪಾಕಿಸ್ತಾನಕ್ಕೆ ನೀಡಲು ಇಚ್ಛಿಸಿದ್ದ ಸಾವಿರಾರು ಕೋಟಿ ಹಣವನ್ನು ತಡೆ ಹಿಡಿದಿದೆ.

ಭಾರತದ ಒತ್ತಡದಿಂದಾಗಿ ಅಮೆರಿಕ ನಮ್ಮ ವಿರುದ್ಧ ಕಿಡಿಕಾರುತ್ತಿದೆ ಎಂಬ ಆರೋಪ ಪಾಕಿಸ್ತಾನದ್ದು. ಹೌದು ಒಂದು ರೀತಿಯಲ್ಲಿ ಅದು ನಿಜವೇ. ಪಾಕಿಸ್ತಾನ ಉಗ್ರರ ತವರೂರು ಎಂದು ಜಾಗತಿಕ ಮಟ್ಟದಲ್ಲಿ ಸಾರಿದ್ದು, ಭಾರತವೇ. ಅನೇಕ ವರ್ಷಗಳಿಂದ ಭಾರತ ಪಾಕಿಸ್ತಾನ ಉಗ್ರರಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಭಾರತ ಎಷ್ಟೇ ಕೂಗಿದರೂ ಅದನ್ನು ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಉಗ್ರರ ದಾಳಿ ಯಾವಾಗ ತಮ್ಮ ನೆಲದಲ್ಲಿ ಆರಂಭವಾಯಿತೋ ಆನಂತರವೇ ವಿಶ್ವದ ಬಲಿಷ್ಠ ರಾಷ್ಟ್ರಗಳು ಉಗ್ರವಾದವನ್ನು ಗಂಭೀರವಾಗಿ ಪರಿಗಣಿಸಲಾರಂಭಿಸಿತು. ನಂತರ ಆ ರಾಷ್ಟ್ರಗಳಿಗೆ ಪಾಕಿಸ್ತಾನದ ನಿಜವಾದ ಬಣ್ಣ ತಿಳಿಯಲಾರಂಭಿಸಿದೆ.

ಕೇವಲ ಭಾರತದ ಒತ್ತಡಕ್ಕೆ ಅಮೆರಿಕ ಈ ಪರಿಯಾಗಿ ಪಾಕಿಸ್ತಾನದ ವಿರುದ್ಧ ಬೆಂಕಿ ಕಾರುತ್ತಿದೆ ಎಂಬದು ಸುಳ್ಳು. ಪಾಕಿಸ್ತಾನ ಹೇಗೆ ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಉಗ್ರರಿಗೆ ಬೆಂಬಲ ಸೂಚಿಸಿ ಪರೋಕ್ಷ ದಾಳಿ ಮಾಡುತ್ತಿದೆಯೋ ಅದೇ ರೀತಿ ಅಫ್ಘಾನಿಸ್ತಾನದ ಗಡಿಯಲ್ಲೂ ಉಗ್ರರ ಉಪಟಳ ಹೆಚ್ಚಾಗಿದೆ. ಅಲ್ಲಿನ ಉಗ್ರ ಕೃತ್ಯಗಳನ್ನು ಎಸಗುತ್ತಿರುವ ಭಯೋತ್ಪಾದಕರು ಅಡಗಿ ಕೂತಿರೋದು ಪಾಕಿಸ್ತಾನದ ಬಿಲಗಳಲ್ಲಿ. ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆಯನ್ನು ನಿಯಂತ್ರಿಸುವ ಪ್ರಯತ್ನದಲ್ಲಿದೆ. ಆದರೆ ಇದಕ್ಕೆ ಉಗ್ರ ಸಂಘಟನೆಗಳು ತಲೆ ನೋವಾಗಿ ಪರಿಣಮಿಸಿದೆ. ಹೀಗಾಗಿ ತನ್ನ ನೆರವನ್ನು ಪಡೆದು ತನ್ನ ದಾರಿಗೆ ಅಡ್ಡವಾಗುತ್ತಿರುವ ಉಗ್ರರಿಗೆ ಆಶ್ರಯ ನೀಡುತ್ತಿರುವುದು ಪಾಕಿಸ್ತಾನದ ವಿರುದ್ಧ ಅಮೆರಿಕ ಕಣ್ಣು ಕೆಂಪಾಗುವಂತೆ ಮಾಡಿದೆ.

ಇನ್ನು ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಗೃಹ ಬಂಧನದಿಂದ ಬಿಡುಗಡೆಯಾಗಿರುವುದು, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ತನ್ನದೇ ಪಕ್ಷ ರಚನೆ ಮಾಡಿ ಪಾಕಿಸ್ತಾನದಲ್ಲಿ ಅಧಿಕಾರಕ್ಕೆ ಬರಲು ಪ್ರಯತ್ನ ನಡೆಸುತ್ತಿರುವುದಕ್ಕೂ ಅಮೆರಿಕ ಈ ಹಿಂದೆ ಅಸಮಾಧಾನ ವ್ಯಕ್ತಪಡಿಸಿತ್ತು. ಹೀಗೆ ಉಗ್ರರನ್ನು ಪೋಷಿಸುತ್ತಿರುವ ಕಾರಣಕ್ಕಾಗಿ ಪಾಕಿಸ್ತಾನದ ವಿರುದ್ಧ ಅಮೆರಿಕ ಗರಂ ಆಗಿದೆ.

ಅಮೆರಿಕ ಹೀಗೆ ಪಾಕಿಸ್ತಾನಕ್ಕೆ ನೀಡುವ ಆರ್ಥಿಕ ನೆರವನ್ನು ತಡೆ ಹಿಡಿದಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಪಾಕಿಸ್ತಾನ ಹಕ್ಕಾನಿ ಉಗ್ರ ಸಂಪರ್ಕ ಜಾಲವನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲವಾಗಿದೆ ಎಂಬ ಕಾರಣದಿಂದ ಟ್ರಂಪ್ ಸರ್ಕಾರ ಪಾಕಿಸ್ತಾನಕ್ಕೆ ನೀಡಬೇಕಿದ್ದ 350 ಮಿಲಿಯನ್ ಅಮೆರಿಕನ್ ಡಾಲರ್ (₹ 2234 ಕೋಟಿ) ನಷ್ಟು ಹಣವನ್ನು ತಡೆ ಹಿಡಿದಿತ್ತು. 2016ರಲ್ಲಿ ಪಾಕಿಸ್ತಾನಕ್ಕೆ 1.1 ಬಿಲಿಯನ್ ಡಾಲರ್ ಮೊತ್ತವನ್ನು ಆರ್ಥಿಕ ನೆರವಾಗಿ ನೀಡಲು ಅಮೆರಿಕ ಸರ್ಕಾರ ನೀರ್ಧರಿಸಿತ್ತು. ಆ ಮೊತ್ತದ ಬಾಕಿ 1600 ಕೊಟಿ ಹಣ ಸಹಾಯಕ್ಕೆ ಅಮೆರಿಕ ಈಗ ತಡೆ ಹಿಡಿದಿದೆ.

ಅಮೆರಿಕದ ಈ ನಿರ್ಧಾರಕ್ಕೆ ಪಾಕಿಸ್ತಾನ ತಿರುಗೇಟು ನೀಡಿದೆ. ‘ಅಫ್ಘಾನಿಸ್ತಾನದಲ್ಲಿ ವೈಫಲ್ಯ ಅನುಭವಿಸಿರುವ ಅಮೆರಿಕ ಅದನ್ನು ಮರೆ ಮಾಚಲು ಪಾಕಿಸ್ತಾನದ ಮೇಲೆ ಆರೋಪ ಮಾಡುತ್ತಿದೆ. ಅಮೆರಿಕ ಸುಮ್ಮನೆ ಆರ್ಥಿಕ ಸಹಾಯ ನೀಡಿಲ್ಲ. ಅದಕ್ಕೆ ಪ್ರತಿಯಾಗಿ ಅಲ್ ಖೈದಾ ಸಂಘಟನೆ ವಿರುದ್ಧ ಹೋರಾಟಕ್ಕೆ ಪಾಕಿಸ್ತಾನ ನೆರವು ನೀಡಿದೆ’ ಎಂದು ಪಾಕಿಸ್ತಾನ ಸೇನಾಧಿಕಾರಿ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರು ಸಮರ್ಥಿಸಿಕೊಂಡಿದ್ದಾರೆ.

Leave a Reply