ಲೋಕಸಭೆಯಲ್ಲಿ ಪ್ರತಿಧ್ವನಿಸಿದ ಮಹದಾಯಿ! ಅಲ್ಲಿಯೂ ನಡೆದಿದ್ದು ಆರೋಪ ಪ್ರತ್ಯಾರೋಪ ಮಾತ್ರ

ಡಿಜಿಟಲ್ ಕನ್ನಡ ಟೀಮ್:

ಮಹದಾಯಿ ನೀರು ಹಂಚಿಕೆ ವಿಚಾರ ಇಂದು ಲೋಕಸಭೆಯಲ್ಲಿ ಚರ್ಚೆಯಾಯಿತು. ತುಮಕೂರು ಸಂಸದ ಮುದ್ದಹನುಮೇಗೌಡ ಅವರು ಮಹದಾಯಿ ವಿಚಾರವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದರು. ಈ ವೇಳೆ ಅವರು ಹೇಳಿದಿಷ್ಟು..

‘ಕರ್ನಾಟಕ ಹಾಗೂ ಗೋವಾ ರಾಜ್ಯಗಳ ನಡುವೆ ಮಹದಾಯಿ ನೀರು ಹಂಚಿಕೆ ವಿಚಾರವಾಗಿ ಬಿಕ್ಕಟ್ಟು ಉದ್ಭವಿಸಿದೆ. ಉತ್ತರ ಕರ್ನಾಟಕದ ಜನರು ಕುಡಿಯುವ ನೀರಿಗಾಗಿ ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಕುಡಿಯಲು ನೀರಿಲ್ಲದೇ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಉತ್ತರ ಕರ್ನಾಟಕದ ಜನರಿಗೆ ಮಹದಾಯಿ ಹಾಗೂ ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ಮೇಕೆದಾಟು ಯೋಜನೆ ಅತ್ಯಗತ್ಯವಾಗಿದೆ.

ಈ ವಿಚಾರದಲ್ಲಿ ಪ್ರಧಾನ ಮಂತ್ರಿಗಳು ಮಧ್ಯ ಪ್ರವೇಶಿಸಬೇಕು. ಅಂತಾರಾಜ್ಯ ಬಿಕ್ಕಟ್ಟನ್ನು ಬಗೆಹರಿಸಿ ಜನರಿಗೆ ನೆರವಾಗಬೇಕು. ಈ ಹಿಂದೆ ಇಂತಹುದೇ ಅಂತಾರಾಜ್ಯಗಳ ನಡುವೆ ನೀರಿನ ವಿಚಾರದಲ್ಲಿ ಬಿಕ್ಕಟ್ಟು ಉದ್ಭವಿಸಿದಾಗ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹಿರಿಸಿದ್ದರು. ಅದೇ ರೀತಿ ಈಗಲೂ ಪ್ರಧಾನಿಗಳ ಮಧ್ಯ ಪ್ರವೇಶ ಅಗತ್ಯವಿದೆ.’

ಈ ವಿಚಾರಕ್ಕೆ ಕೇಂದ್ರ ಸರ್ಕಾರದ ಪರವಾಗಿ ಕೇಂದ್ರ ಸಚಿವ ಅನಂತ ಕುಮಾಕ್ ಉತ್ತರಿಸಿದರು. ಇವರ ಉತ್ತರಕ್ಕೆ ಪ್ರತಿಪಕ್ಷಗಳ ನಾಯಕರಿದಂದ ತೀವ್ರ ವಿರೋಧವೂ ವ್ಯಕ್ತವಾಯಿತು. ಹಾಗಾದರೆ ಅನಂತ ಕುಮಾರ್ ಕೊಟ್ಟ ಉತ್ತರ ಏನು ನೋಡಣ ಬನ್ನಿ…

‘ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರು ಈ ವಿವಾದವನ್ನು ನ್ಯಾಯಾಧಿಕರಣದ ಹೊರಗಡೆ ಬಗೆಹರಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಹೀಗಾಗಿ ಕರ್ನಾಟಕ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಜವಾಬ್ದಾರಿ ನಿರ್ವಹಿಸಬೇಕಿದೆ.’

ಅನಂತ ಕುಮಾರ್ ಅವರು ಹೀಗೆ ಮಹದಾಯಿ ವಿಚಾರವನ್ನು ರಾಜ್ಯ ಸರ್ಕಾರದ ಮೇಲೆ ಹಾಕಿ ಕೈತೊಳೆದುಕೊಳ್ಳುವ ಪ್ರಯತ್ನ ನಡೆಸಿದರೇ ಹೊರತು ಪ್ರಧಾನಿ ಮಧ್ಯ ಪ್ರವೇಶದ ಬಗ್ಗೆ ಯಾವುದೇ ಭರವಸೆ ನೀಡಲಿಲ್ಲ. ಅದರೊಂದಿಗೆ ಲೋಕಸಭೆಯಲ್ಲಿ ಚರ್ಚೆಯಾದ ಮಹದಾಯಿ ವಿಷಯ ಆರೋಪ ಪ್ರತ್ಯಾರೋಪಕ್ಕೆ ಸೀಮಿತವಾಯಿತು.

Leave a Reply