ಪ್ರತಾಪ್ ಸಿಂಹ ವಿರುದ್ಧ ಸ್ಪರ್ಧೆಗೆ ನಟಿ ರಮ್ಯಾ ಒಲವು!

ಡಿಜಿಟಲ್ ಕನ್ನಡ ಟೀಮ್:

ಖ್ಯಾತ ನಟಿ, ಮಾಜಿ ಸಂಸದೆ ರಮ್ಯಾ 2019 ರ ಲೋಕಸಭೆ ಚುನಾವಣೆಯಲ್ಲಿ ಮೈಸೂರು ರ್ಕ್ಷೇತ್ರದಿಂದ ಹಾಲಿ ಸಂಸದ ಬಿಜೆಪಿಯ ಪ್ರತಾಪ್ ಸಿಂಹ ವಿರುದ್ಧ ಸ್ಪರ್ಧಿಸಲು ಒಲವು ತೋರಿದ್ದಾರೆ.

ಹಿಂದೆ ಮಂಡ್ಯ ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿದ್ದ ರಮ್ಯಾ ಅವರು ಇದೀಗ ಜಿಲ್ಲಾ ಕಾಂಗ್ರೆಸ್ ನಲ್ಲಿ ನಡೆದಿರುವ ಬಣ ರಾಜಕೀಯದಿಂದ ಬೇಸತ್ತಿದ್ದಾರೆ. ಹೀಗಾಗಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮುಂದಿನ ಸಂಸತ್ ಚುನಾವಣೆಯಲ್ಲಿ ತಾವು ಮೈಸೂರು ಕ್ಷೇತ್ರದಿಂದ ಸ್ಪರ್ಧಿಸುವ ಬಯಕೆ ಹೊಂದಿದ್ದು, ಅಗತ್ಯ ನೆರವು ನೀಡುವಂತೆ ಕೋರಿದ್ದಾರೆ. ಸಿದ್ದರಾಮಯ್ಯನವರು ಕೂಡ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಮೈಸೂರು ಲೋಕಸಭೆ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದವರು ಹೆಚ್ಚಾಗಿ ಇದ್ದಾರೆ. ಹಾಲಿ ಸಂಸದ ಪ್ರತಾಪ್ ಸಿಂಹ ಹಾಗೂ ರಮ್ಯಾ ಇಬ್ಬರೂ ಒಕ್ಕಲಿಗ ಸಮುದಾಯಕ್ಕೇ ಸೇರಿದವರು. ಹಿಂದೆ ಕಾಂಗ್ರೆಸ್ ನ ಎಚ್. ವಿಶ್ವನಾಥ್ ಅವರನ್ನು ಹಣಿಯಲು ದುರ್ಬಲ ಅಭ್ಯರ್ಥಿ ಕಣಕ್ಕಿಳಿಸುವ ಮೂಲಕ ಪ್ರತಾಪ್ ಸಿಂಹ ಅವರಿಗೆ ದೇವೇಗೌಡರು ಪರೋಕ್ಷ ಬೆಂಬಲ ನೀಡಿದ್ದರು. ಇದೀಗ ವಿಶ್ವನಾಥ್ ಜೆಡಿಎಸ್ ಸೇರಿದ್ದಾರೆ. ಜತೆಗೆ ಇದು ಸಿದ್ದರಾಮಯ್ಯನವರ ತವರು ಜಿಲ್ಲೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಇವು ತಮಗೆ ಅನುಕೂಲ ಆಗಬಹುದು ಎಂಬ ಲೆಕ್ಕಾಚಾರದೊಂದಿಗೆ ರಮ್ಯಾ ಮೈಸೂರು ಲೋಕಸಬೆ ಕ್ಷೇತ್ರದಿಂದ ಸ್ಪರ್ಧಿಸಲು ಚಿಂತನೆ ನಡೆಸಿದ್ದಾರೆ.

ರಮ್ಯಾ ಹಿಂದೆ ಮಂಡ್ಯ ಮರುಚುನಾವಣೆಯಲ್ಲಿ ಒಮ್ಮೆ ಗೆದ್ದು, ಮತ್ತೊಮ್ಮೆ ಅಲ್ಪ ಮತಗಳ ಅಂತರದಿಂದ ಸೋತಿದ್ದರು. ಆದರೆ ಮಂಡ್ಯದಲ್ಲಿ ಈಗಿನ ರಾಜಕೀಯ ಪರಿಸ್ಥಿತಿ ಮೊದಲಿನಂತಿಲ್ಲ. ರಮ್ಯಾ ಅವರ ಬೆನ್ನಿಗೆ ನಿಂತಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಬಿಜೆಪಿ ಸೇರಿದ್ದಾರೆ. ಜಿಲ್ಲೆಯಲ್ಲಿ ಪ್ರಬಲ ನಾಯಕರಾಗಿದ್ದ ಎಲ್.ಆರ್. ಶಿವರಾಮೇಗೌಡ ಮತ್ತು ರವೀಂದ್ರ ಶ್ರೀಕಂಠಯ್ಯ ಜೆಡಿಎಸ್ ಸೇರಿದ್ದಾರೆ. ಜತೆಗೆ ನಟ ಅಂಬರೀಶ್ ಜತೆಗೆ ಬದ್ಧ ವೈರತ್ವ ಬೇರೆ. ಈ ಎಲ್ಲವೂ ಜೆಡಿಎಸ್ ಗೆ ವರದಾನವಾಗಿದ್ದು, ರಮ್ಯಾ ಅವರಿಗೆ ಪ್ರತಿಕೂಲ ಪರಿಸ್ಥಿತಿ ನಿರ್ಮಾಣ ಮಾಡಿಟ್ಟಿದೆ. ಹೀಗಾಗಿ ರಮ್ಯಾ ಅವರು ಕ್ಷೇತ್ರ ಬದಲಿಸಲು ನಿರ್ಣಯಿಸಿದ್ದು, ಇದರ ಮೊದಲ ಹೆಜ್ಜೆಯಾಗಿ ಸಿದ್ದರಾಮಯ್ಯ ಅವರ ಜತೆ ರಹಸ್ಯ ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ಅವರು ಆಗಲಿ, ನೋಡೋಣ ಎಂಬ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೈದು ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸಿನಿಮಾ ರಂಗದ ಖ್ಯಾತರ ಒಡಗೂಡಿ ಪ್ರಚಾರ ನಡೆಸುವುದಾಗಿ ರಮ್ಯಾ ಇದೇ ಸಂದರ್ಭದಲ್ಲಿ ರಮ್ಯಾ ಹೇಳಿದರು. ನಟಿ ಖುಷ್ಬೂ,ನಗ್ಮಾ,ಸೇರಿದಂತೆ ಸಿನಿಮಾ ರಂಗದ ದಿಗ್ಗಜರನ್ನು ಕರೆ ತರುವ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದಾರೆ. ಸಿದ್ದರಾಮಯ್ಯನವರು ಸ್ಪರ್ಧಿಸಲಿರುವ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಪ್ರಚಾರದ ಹೊಣೆಯನ್ನು ತಾವೇ ಹೊತ್ತುಕೊಳ್ಳುವುದಾಗಿಯೂ ತಿಳಿಸಿದ್ದಾರೆಂದು ಗೊತ್ತಾಗಿದೆ.

Leave a Reply