ಯೋಗೀಶ್ವರ್ ಗೆ ಏಳು ಕೆರೆ ನೀರು ಕುಡಿಸಲು ಡಿಕೆಶಿ ರಣಪಣ!

ಡಿಜಿಟಲ್ ಕನ್ನಡ ಟೀಮ್:

ಚನ್ನಪಟ್ಟಣದ ಹತ್ತಾರು ಕೆರೆಗಳಿಗೆ ನೀರು ತುಂಬಿಸಿ ‘ಆಧುನಿಕ ಭಗಿರಥ’ ಎನಿಸಿರುವ ಶಾಸಕ ಸಿ.ಪಿ. ಯೋಗೀಶ್ವರ್ ಅವರಿಗೆ ಏಳು ಕೆರೆ ನೀರು ಕುಡಿಸಲು ಸಚಿವ ಡಿ.ಕೆ. ಶಿವಕುಮಾರ್ ಮತ್ತವರ ಸಹೋದರ ಡಿ.ಕೆ. ಸುರೇಶ್ ತೊಡೆ ತಟ್ಟಿ ನಿಂತಿದ್ದಾರೆ.

ಚುನಾವಣೆಗೊಂದು ಪಕ್ಷ ಬದಲಿಸುತ್ತಾ, ಅದನ್ನೇ ರಾಜಕೀಯ ಏಳ್ಗೆಗೆ ಸೋಪಾನ ಮಾಡಿಕೊಂಡಿರುವ ಯೋಗೀಶ್ವರ್ ತಂತ್ರಗಾರಿಕೆಯನ್ನೇ ಅವರಿಗೆ ಮುಳುಗು ನೀರು ಮಾಡಲು ಡಿ.ಕೆ. ಸಹೋದರರು ಪ್ರತಿತಂತ್ರ ಹೆಣೆದಿದ್ದು, ತಮ್ಮ ಕಡುವಿರೋಧಿ ಬಗ್ಗುಬಡಿಯಲು ಮತ್ತೊಬ್ಬ ಕಡುವಿರೋಧಿ ದೇವೇಗೌಡರ ಕುಟುಂಬದ ಜತೆ ‘ಕೈ’ ಮಿಲಾಯಿಸಿದ್ದಾರೆ.

ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಆಗಲಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನೇ ಬೆಂಬಲಿಸುವ ಮೂಲಕ ಯೋಗೀಶ್ವರ್ ಮಣಿಸಲು ಡಿಕೆ ಸಹೋದರರು ನಿರ್ಧರಿಸಿದ್ದಾರೆ. ‘ಅನಿತಾ ತಮ್ಮ ಸಹೋದರಿ ಇದ್ದಂತೆ, ಎಷ್ಟು ಬೇಕಾದರೂ ಬೆಟ್ ಕಟ್ಟುತ್ತೇನೆ. ಚನ್ನಪಟ್ಟಣದಲ್ಲಿ ಬಿಜೆಪಿ ಗೆಲ್ಲಲ್ಲ’ ಎಂದು ಶಿವಕುಮಾರ್ ನೀಡಿರುವ ಹೇಳಿಕೆ ಹಿಂದೆ ಈ ನಿರ್ಧಾರ ಅಡಗಿದೆ. ಯೋಗೀಶ್ವರ್ ಕೂಡ ಅಷ್ಟೇ, ‘ಡಿಕೆ ಸಹೋದರರ ಬೇಳೆ ಚನ್ನಪಟ್ಟಣದಲ್ಲಿ ಬೇಯೋದಿಲ್ಲ. ಅವರೇನೂ ಮಾಡಕ್ಕಾಗಲ್ಲ, ಅದೇನು ಮಾಡ್ತಾರೋ ನಾನೂ ನೋಡ್ತೀನಿ’ ಎಂದು ತಿರುಗೇಟು ನೀಡುವ ಮೂಲಕ ಪಂಥಾಹ್ವಾನ ಕೊಟ್ಟಿದ್ದಾರೆ.

1999 ರಲ್ಲಿ ಯೋಗೀಶ್ವರ್ ಚುನಾವಣೆ ರಾಜಕೀಯಕ್ಕೆ ಇಳಿದ ದಿನದಿಂದಲೂ ಶಿವಕುಮಾರ್ ಮತ್ತು ಅವರ ನಡುವೆ ಬದ್ಧ ವೈರತ್ವ. ಅಲ್ಲಿಂದ ಇಲ್ಲಿಯವರೆಗೂ ಪಕ್ಷೇತರ, ಬಿಜೆಪಿ, ಸಮಾಜವಾದಿ ಪಕ್ಷ, ಕಾಂಗ್ರೆಸ್ ನಿಂದ ಗೆದ್ದು, ಮತ್ತೀಗ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಯೋಗೀಶ್ವರ್ ಮೊದಲಿಂದಲೂ ಶಿವಕುಮಾರ್ ವಿರುದ್ಧ ನಿಂದನಾ ರಾಜಕೀಯ ಮಾಡುತ್ತಲೇ ಬಂದವರು. ಅದೀಗ ಉತ್ತುಂಗ ಸ್ಥಿತಿ ತಲುಪಿದ್ದು ಯೋಗೀಶ್ವರ್ ಅವರಿಗೆ ಮಣ್ಣು ಮುಕ್ಕಿಸಲೇಬೇಕೆಂದು ಮಣ್ಣಿನ ಮಗ ದೇವೇಗೌಡರ ಜೆಡಿಎಸ್ ಜತೆ ಶಾಮೀಲಾಗಿದ್ದಾರೆ.

ಬರೀ ಇದೊಂದಕ್ಕೆ ಅಲ್ಲ. ಭವಿಷ್ಯ ರಾಜಕೀಯ ದೃಷ್ಟಿಯಲ್ಲಿಟ್ಟುಕೊಂಡು ಹಳೇ ದ್ವೇಷ ಬದಿಗೊತ್ತಿ ದೇವೇಗೌಡರು, ಕುಮಾರಸ್ವಾಮಿ ಜತೆ ಸಂಬಂಧ ಸುಧಾರಣೆಗೆ ಶಿವಕುಮಾರ್ ನಿರಂತರ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ದೇವೇಗೌಡರ ಪಾದಕ್ಕೆ ಎರಗಿದ್ದು, ಕಾವೇರಿ ವಿವಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೌಡರ ಮನೆಗೆ ಹೋಗುವಂತೆ ಮಾಡಿದ್ದು, ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದ ಕುಮಾರಸ್ವಾಮಿ ಅವರನ್ನು ಬೇಟಿ ಮಾಡಿದ್ದು, ಎಲ್ಲಕ್ಕಿಂತ ಮಿಗಿಲಾಗಿ ಚನ್ನಪಟ್ಟಣದಲ್ಲಿ ಸ್ಪರ್ಧಿಸಲಿರುವ ಅನಿತಾ ಅವರನ್ನು ಸಹೋದರಿ, ಅವರಿಗೆ ಚುನಾವಣೆಯಲ್ಲಿ ಎಲ್ಲ ರೀತಿಯ ನೆರವು ನೀಡುವುದಾಗಿ ಬಹಿರಂಗವಾಗಿಯೇ ಹೇಳಿದ್ದು ಗೌಡರ ಕುಟುಂಬದ ಬಗ್ಗೆ ಶಿವಕುಮಾರ್ ದೃಷ್ಟಿಕೋನ ಬದಲಾಗಿರುವುದರ ಸಂಕೇತ.

ಚನ್ನಪಟ್ಟಣದಲ್ಲಿ ಸುಮಾರು 2.10 ಲಕ್ಷ ಮತದಾರರಿದ್ದು, ಯೋಗೀಶ್ವರ್ ಇಲ್ಲಿ ಪಾರುಪತ್ಯೆ ಸ್ಧಾಪಿಸಿದ ನಂತರ ಅವರಿಗೆ 55 ರಿಂದ 60 ಸಾವಿರ, ಜೆಡಿಎಸ್ ಗೆ 52 ರಿಂದ 60 ಸಾವಿರ, ಕಾಂಗ್ರೆಸ್ ಗೆ 15 ಸಾವಿರ, ಬಿಜೆಪಿಗೆ ಐದಾರು ಸಾವಿರ ಮತಗಳು ಬೀಳುತ್ತಿವೆ. ಯೋಗೀಶ್ವರ್ ಮತ್ತು ಜೆಡಿಎಸ್ ನಡುವೆ ನೇರ ಸ್ಪರ್ಧೆ. ಕಾಂಗ್ರೆಸ್ ಮತಗಳು ನಿರ್ಣಾಯಕ. ಸುಮಾರು 30 ಸಾವಿರ ಮತಗಳನ್ನು ಸೆಳೆಯುವ ಪ್ರಬಲ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಅಧವಾ ಸಾರಾಸಗಟು ಕಾಂಗ್ರೆಸ್ ಮತಗಳು ಜೆಡಿಎಸ್ ಗೆ ಬೀಳುವಂತೆ ನೋಡಿಕೊಳ್ಳುವುದು ಸದ್ಯಕ್ಕೆ ಶಿವಕುಮಾರ್ ಮುಂದಿರುವ ಆಯ್ಕೆಗಳು. ಏಕೆಂದರೆ ಕಾಂಗ್ರೆಸ್ಸಿಗೆ ಬೀಳುವ ಹೆಚ್ಚುವರಿ ಮತಗಳು ಯೋಗೀಶ್ವರ್ ಅವರದೇ ಆಗಿರುತ್ತದೆ. ಯೋಗೀಶ್ವರ್ ಬಿಜೆಪಿ ಸೇರಿರುವುದರಿಂದ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿರುವ ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್ ಅಥವಾ ಜೆಡಿಎಸ್ ಪಾಲಾಗುತ್ತವೆ. ಇವನ್ನು ಅನಿತಾ ಕುಮಾರಸ್ವಾಮಿ ಪರ ಕ್ರೋಡೀಕರಿಸುವ ಚಿಂತನೆಯೂ ಅವರಲ್ಲಿದೆ. ಮೊದಲಿಂದಲೂ ಜೆಡಿಎಸ್ ಮತ್ತು ಕಾಂಗ್ರೆಸ್ ಸ್ಥಳೀಯ ನಾಯಕರನ್ನು ಬುಟ್ಟಿಗೆ ಹಾಕಿಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದ ಯೋಗೀಶ್ವರ್ ಈ ಬಾರಿ ಮಾಡಬಹುದಾದ ಒಳತಂತ್ರಗಳನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. ಮಾಡು ಇಲ್ಲವೇ ಮಡಿ ಎಂಬ ಜಿದ್ದಾಜಿದ್ದಿಗೆ ಬಿದ್ದಿರುವ ಡಿಕೆ ಸಹೋದರರು ಮತ್ತು ಯೋಗೀಶ್ವರ್ ಸಂಘರ್ಷದ ನಡುವೆ ಅನಿತಾ ಕುಮಾರಸ್ವಾಮಿ ಸದ್ದಿಲ್ಲದೆ ವಿಧಾನಸಭೆಯತ್ತ ನಡೆದುಹೋಗುತ್ತಾರೆಯೇ? ನೋಡಬೇಕು!

Leave a Reply