ಪಾಕಿಸ್ತಾನಕ್ಕಷ್ಟೇ ಅಲ್ಲ, ಭಾರತಕ್ಕೂ ಟ್ರಂಪ್ ಗುನ್ನ!

ಡಿಜಿಟಲ್ ಕನ್ನಡ ಟೀಮ್:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಗ್ರರ ವಿಷಯವಾಗಿ ಪಾಕಿಸ್ತಾನದ ವಿರುದ್ಧ ಗುಡುಗುತ್ತಿರೋದು ಗೊತ್ತೇ ಇದೆ. ಆದರೆ ಟ್ರಂಪ್ ಸದ್ದಿಲ್ಲದೇ ಭಾರತಕ್ಕೂ ಗುನ್ನಾ ಕೊಡುತ್ತಿರೋದು ಎಷ್ಟೋ ಜನರಿಗೆ ಗೊತ್ತೇ ಆಗುತ್ತಿಲ್ಲ.

ಹೌದು, ಟ್ರಂಪ್ ಅಧಿಕಾರಕ್ಕೆ ಬಂದ ಮೇಲೆ ‘ಬಯ್ ಅಮೆರಿಕನ್, ಹೈರ್ ಅಮೆರಿಕನ್’ (ಅಮೆರಿಕ ವಸ್ತು ಕೊಳ್ಳಿ, ಅಮೆರಿಕನ್ನರನ್ನೇ ಕೆಲಸಕ್ಕೆ ತೆಗೆದುಕೊಳ್ಳಿ) ಎಂದು ಸೂತ್ರ ಅಳವಡಿಸಿಕೊಳ್ಳಲು ಕರೆ ನೀಡಿದ್ದಾರೆ. ಅದರ ಭಾಗವಾಗಿ ಎಚ್-1ಬಿ ವಿಸಾಗೆ ಸಂಬಂಧಿಸಿದಂತೆ ಕೆಲವು ಮಹತ್ವದ ಬದಲಾವಣೆ ತರಲು ನಿರ್ಧರಿಸಿದ್ದಾರೆ. ಟ್ರಂಪ್ ಅವರ ಈ ನೂತನ ವೀಸಾ ನೀತಿ ಅಮೆರಿಕದಲ್ಲಿರುವ ವಿದೇಶಿಗರಿಗೆ ಗೇಟ್ ಪಾಸ್ ನೀಡಲಿದೆ. ಪರಿಣಾಮ ಸುಮಾರು 5 ಲಕ್ಷದಿಂದ 7.5 ಲಕ್ಷದ ಭಾರತೀಯರು ಗಂಟೂ ಮೂಟೆ ಕಟ್ಟಿಕೊಂಡು ತವರಿಗೆ ಮರಳಬೇಕಾದ ಸಾಧ್ಯತೆ ಹೆಚ್ಚಾಗಿದೆ.

ಟ್ರಂಪ್ ಈ ನಿರ್ಧಾರ ಅಮೆರಿಕದ ಐಟಿ ಕಂಪನಿಗಳ ಕಾರ್ಯಾಚರಣೆ ಸ್ವರೂಪವನ್ನೇ ಬದಲಿಸಲಿದೆ. ಸದ್ಯಕ್ಕೆ ಈ ವೀಸಾ ನೀತಿ ಬದಲಾವಣೆ ಪ್ರಸ್ತಾವನೆ ಹಂತದಲ್ಲಿದ್ದು, ಇದು ಅಮೆರಿಕದ ಗೃಹ ಹಾಗೂ ಭದ್ರತಾ ಸಚಿವಾಲಗಳಲ್ಲಿ ಚರ್ಚೆಯಾಗುತ್ತಿದೆ. ಈ ಪ್ರಸ್ತಾವನೆಯಲ್ಲಿ ವಿದೇಶಿಗರಿಗೆ ಹಾಗೂ ವಲಸಿಗರಿಗೆ ನೀಡುತ್ತಿರುವ ಪೌರತ್ವದ ವ್ಯಾಪ್ತಿಯನ್ನು ಸಂಕುಚಿತಗೊಳಿಸಲಿದೆ. ಇದರಿಂದ ಎಚ್-1ಬಿ ವಿಸಾ ಇಟ್ಟುಕೊಂಡು ಅಮೆರಿಕದಲ್ಲಿ ಶಾಶ್ವತ ನೆಲೆ (ಗ್ರೀನ್ ಕಾರ್ಡ್) ಪಡೆದುಕೊಳ್ಳುವ ಅವಕಾಶಕ್ಕೆ ಬ್ರೇಕ್ ಬೀಳಲಿದೆ. ಹೀಗಾಗಿ ಎಚ್-1ಬಿ ವಿಸಾ ಇಟ್ಟುಕೊಂಡು ಗ್ರೀನ್ ಕಾರ್ಡ್ ಪಡೆಯಲು ಪ್ರಯತ್ನಿಸುತ್ತಿರುವ ಎಲ್ಲಾ ಭಾರತೀಯರು ಹಾಗೂ ಇತರೆ ರಾಷ್ಟ್ರದವರು ಈಗ ಅಮೆರಿಕದಿಂದ ಜಾಗ ಖಾಲಿ ಮಾಡಬೇಕಾಗುವ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದೆ.

ಸದ್ಯ ಎಚ್-1ಬಿ ವಿಸಾ ಮೂಲಕ ಭಾರತೀಯರು ಸೇರಿದಂತೆ ವಿದೇಶಿಗರು ಮೂರು ವರ್ಷಗಳ ಕಾಲ ಅಮೆರಿಕದಲ್ಲಿ ನೆಲಸಬಹುದು. ಆನಂತರ ಈ ವಿಸಾದಲ್ಲಿ ಮತ್ತೆ ಮೂರು ವರ್ಷಗಳ ವಿಸ್ತರಣೆಗೆ ಅವಕಾಶವಿದೆ. ಒಂದು ವೇಳೆ ಈ ವಿಸಾ ಹೊಂದಿರುವವರು ಗ್ರೀನ್ ಕಾರ್ಡ್ ಪಡೆಯಲು ಅನುಮತಿ ಸಿಕ್ಕರೆ ಮತ್ತಷ್ಟು ವರ್ಷ ಅಲ್ಲ ವಿಸ್ತರಣೆಯಾಗಲಿದೆ. ಆದರೆ ಈಗ ಎಚ್-1ಬಿ ವಿಸಾ ಮೂಲಕ ಗ್ರೀನ್ ಕಾರ್ಡ್ ಪಡೆಯುವ ಅವಕಾಶವನ್ನು ಹಿಂಪಡೆಯಲು ಟ್ರಂಪ್ ಆಡಳಿತ ನಿರ್ಧರಿಸಿದೆ.

ಅಮೆರಿಕದ ನಿರ್ಧಾರದ ಕುರಿತಾಗಿ ಮಾತನಾಡಿರುವ ಅಮೆರಿಕ ಸರ್ಕಾರದ ಸಲಹಾ ಸಮಿತಿ ಸದಸ್ಯ ಸ್ಯಾನ್ ಜೋಸ್ ಹೇಳಿರುವುದಿಷ್ಟು… ‘ಸದ್ಯ ಪ್ರಸ್ತಾವನೆ ಹಂತದಲ್ಲಿರುವ ವಿಸಾ ನೀತಿ ಜಾರಿಗೊಂಡರೆ ದೊಡ್ಡ ಮಟ್ಟದಲ್ಲಿ ವಿದೇಶಿಗರನ್ನು ವಾಪಸ್ ಕಳುಹಿಸುವ ಕಾರ್ಯ ನಡೆಯಲಿದೆ. ಅದರಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ.’

Leave a Reply