ಹತ್ಯೆಗಳೇ ರಾಜಕೀಯ ಅಸ್ತ್ರ- ತುಕ್ಕು ಹಿಡಿದ ಕಾನೂನು ಸುವ್ಯವಸ್ಥೆ! ಇದುವೇ ಕರ್ನಾಟಕದ ಪರಿಸ್ಥಿತಿ

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯಾ? ಹೀಗೊಂದು ಪ್ರಶ್ನೆ ಕಾಡುತ್ತಿದೆ. ಈ ಪ್ರಶ್ನೆ ಇದೇ ಮೊದಲ ಬಾರಿಗೆ ಕಾಡುತ್ತಿಲ್ಲ. ಎಂಎಂ ಕಲಬುರಗಿ ಹತ್ಯೆಯಿಂದ ಹಿಡಿದು ಗೌರಿ ಲಂಕೇಶ್ ಹತ್ಯೆವರೆಗು ಮತ್ತು ಕಳೆದ ವಿಜಯಪುರದಲ್ಲಿ ಅತ್ಯಾಚಾರ ಹಾಗೂ ಕೊಲೆಯಾದ ದಾನಮ್ಮನಿಂದ ಸರಣಿ ಹಿಂದೂ ಕಾರ್ಯಕರ್ತರ ಹತ್ಯೆವರೆಗೂ ಪ್ರತಿ ಪ್ರಕರಣದಲ್ಲಿ ಈ ಪ್ರಶ್ನೆ ನಮ್ಮನ್ನು ಕಾಡುತ್ತಲೇ ಇದೆ.

ರಾಜ್ಯದಲ್ಲಿ ಪ್ರತಿ ಬಾರಿ ಇಂತಹ ಪ್ರಕರಣಗಳು ನಡೆದಾಗ ಆರಂಭದಲ್ಲಿ ಕಾನೂನು ಸುವ್ಯವಸ್ಥೆ ಪ್ರಶ್ನೆ ಬರುತ್ತದೆಯಾದರೂ ನಂತರ ಪ್ರತಿ ಪ್ರಕರಣಗಳು ರಾಜಕೀಯ ಬಣ್ಣ ಪಡೆದು ಪಕ್ಷಗಳ ನಡುವಣ ಸಮರಕ್ಕೆ ಅಸ್ತ್ರವಾಗುತ್ತಿವೆ. ಆದರೆ ಈ ಪ್ರಕರಣಗಳಲ್ಲಿ ಎರಡು ರೀತಿಯ ವ್ಯತ್ಯಾಸ ಕಾಣುತ್ತದೆ. ಬುದ್ಧಿಜೀವಿಗಳು ಅಲ್ಪಸಂಖ್ಯಾತರ ಹತ್ಯೆಗಳು ಬಿಜೆಪಿ ವಿರುದ್ಧದ ಸಮರಕ್ಕೆ ಅಸ್ತ್ರವಾಗುತ್ತದೆ. ಕರಾವಳಿ ಭಾಗದಲ್ಲಿ ಹಿಂದೂ ಕಾರ್ಯಕರ್ತರ ಕೊಲೆಯಾದರೆ ಕಾಂಗ್ರೆಸ್ ವಿರುದ್ಧದ ಸಮರಕ್ಕೆ ಆಯುಧವಾಗುತ್ತದೆ. ಇದರೊಂದಿಗೆ ಪ್ರತಿ ಪ್ರಕರಣದಲ್ಲೂ ಒಂದಲ್ಲ ಒಂದು ರೀತಿ ರಾಜಕೀಯ ಬೆಂಕಿ ಹಚ್ಚಿ ಚಳಿ ಕಾಯಿಸಿಕೊಳ್ಳುವ ಪರಿಪಾಠ ನಡೆದುಕೊಂಡು ಬಂದಿರುವುದು ಸ್ಪಷ್ಟವಾಗಿದೆ.

ನಿನ್ನೆಯಷ್ಟೇ ಕರಾವಳಿ ಭಾಗದಲ್ಲಿ ಕೊಲೆಯಾದ ದೀಪಕ್ ರಾವ್ ಹತ್ಯೆ ಕೂಡ ಈಗ ಕಾಂಗ್ರೆಸ್ ಹಾಗೂ ಪಿಎಫ್ಐ ವಿರುದ್ಧದ ಬಿಜೆಪಿ ಹೋರಾಟಕ್ಕೆ ಕತ್ತಿಯಾಗಿ ಬಳಕೆಯಾಗುತ್ತಿದೆ. ರಾಜ್ಯದಲ್ಲಿ ಇಂತಹ ಪ್ರಕರಣಗಳನ್ನು ಜರುಗದಂತೆ ನೋಡಿಕೊಳ್ಳಬೇಕಾದ ಸರ್ಕಾರದ ಪ್ರತಿನಿಧಿಗಳು ಪ್ರತಿ ಬಾರಿಯೂ ‘ಬಿಜೆಪಿಯವರು ಸಾವಿನಲ್ಲೂ ರಾಜಕೀಯ ಮಾಡ್ತಾರೆ’ ಎಂದು ಮಾಧ್ಯಮಗಳ ಮುಂದೆ ಹೇಳಿಕೆಕೊಡುವುದರಲ್ಲೇ ಮುಳುಗಿದ್ದಾರೆ. ಇಲ್ಲಿ ಒಂದು ವಿಷಯ ಗಮನಿಸಬೇಕು. ರಾಜ್ಯದಲ್ಲಿ ಕಲಬುರಗಿ ಹತ್ಯೆಯಿಂದ ಹಿಡಿದು ದೀಪಕ್ ರಾವ್ ಕೊಲೆವರೆಗೂ ಪ್ರತಿ ಪ್ರಕರಣವೂ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದೆ. ಕಳೆದ ಎರಡೂವರೆ ಮೂರು ವರ್ಷಗಳಿಂದ ನಡೆಯುತ್ತಿರುವ ಸರಣಿ ಹತ್ಯೆಗಳ ಪೈಕಿ ಪೊಲೀಸ್ ಇಲಾಖೆ ಎಷ್ಟು ಪ್ರಕರಣಗಳ ತನಿಖೆಯನ್ನು ಮುಗಿಸಿವೆ? ಎಂಬ ಪ್ರಶ್ನೆಗೆ ಸಿಗುವ ಉತ್ತರ ಶೂನ್ಯ.

ದೀಪಕ್ ಹತ್ಯೆಗೆ ಜಿಲ್ಲಾಡಳಿತ 5 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಈ ಹಿಂದೆ ದಾನಮ್ಮ ಪ್ರಕರಣದಲ್ಲೂ ಇದೇ ರೀತಿಯ ಪರಿಹಾರ ಘೋಷಣೆಯಾಗಿತ್ತು. ಯಾವುದೇ ಪ್ರಕರಣಗಳನ್ನು ಪರಿಹಾರ ಘೋಷಣೆಗಳಿಂದ ಮುಚ್ಚಿಹಾಕಲು ಸಾಧ್ಯವಿಲ್ಲ. ಪ್ರಕರಣಗಳಲ್ಲಿನ ತಪ್ಪಿತಸ್ಥರನ್ನು ಹಿಡಿದು ಶಿಕ್ಷೆ ನೀಡಿದರಷ್ಟೇ ಸಂಸ್ತ್ರಸ್ತರ ಕುಟುಂಬಸ್ಥರಿಗೆ ನೆಮ್ಮದಿ. ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಗಳೂರು ಹಾಗೂ ಕರಾವಳಿ ಭಾಗದ ಜನಪ್ರತಿನಿಧಿಗಳ ಜತೆ ಸಭೆ ನಡೆಸಿದ್ದು, ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಹತ್ಯೆಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿ ಕೂತಿರುವ ಸಿದ್ದರಾಮಯ್ಯನವರು ಒಂದು ವಿಷಯ ಅರ್ಥ ಮಾಡಿಕೊಳ್ಳಬೇಕು. ತಮ್ಮ ಸರ್ಕಾರದ ಬಳಿ ಗುಪ್ತಚರ ಇಲಾಖೆ ಇದೆ. ಪೊಲೀಸ್ ಇಲಾಖೆ ಇದೆ. ಅಧಿಕಾರ ಕೂಡ ತಮ್ಮ ಕೈಯಲ್ಲಿಯೇ ಇದೆ ಇಷ್ಟಾದರೂ ಈ ಸರಣಿ ಹತ್ಯೆ ಪ್ರಕರಣಗಳನ್ನು ಸರಿಯಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಹಿಡಿಯಲು ಸಾಧ್ಯವಗದಿರುವುದು ತಮ್ಮ ವೈಫಲ್ಯ ಎಂದು ಅವರು ಒಪ್ಪಿಕೊಳ್ಳಬೇಕು. ಜತೆಗೆ ಇನ್ನು ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಬೇಕು. ರಾಜ್ಯದಲ್ಲಿ ಧರ್ಮ, ಸೈದ್ಧಾಂತಿಕ ದ್ವೇಷದಿಂದ ಹತ್ಯೆ ನಡೆಯುತ್ತಿದ್ದರೆ, ಕೇವಲ ತಮ್ಮ ನಾಯಕರ ಮುಂದೆ ಆತಂಕ ವ್ಯಕ್ತಪಡಿಸಿದರೆ ಏನೂ ಲಾಭವಿಲ್ಲ.

Leave a Reply