ಡಿಕೆಶಿಗೆ ಪೊರಕೆಯಲ್ಲಿ ಹೊಡೆಸುವೆ; ಯೋಗೀಶ್ವರ್ ಗುಡುಗು

ಡಿಜಿಟಲ್ ಕನ್ನಡ ಟೀಮ್:

ಡಿ.ಕೆ. ಶಿವಕುಮಾರ್ ಗೆ ತಾಕತ್ತಿದ್ದರೆ ಚನ್ನಪಟ್ಟಣದಲ್ಲಿ ಬಂದು ಸ್ಪರ್ಧಿಸಲಿ. ಅವರೆದರು ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ, ಸೋಲಿಸುತ್ತೇನೆ ಎಂದು ಶಾಸಕ ಸಿ.ಪಿ. ಯೋಗೀಶ್ವರ್ ಪಂಥಾಹ್ವಾನ ನೀಡುವುದರೊಂದಿಗೆ ಅವರ ಮತ್ತು ಡಿ.ಕೆ. ಸಹೋದರರ ನಡುವಣ ವಿರಸ ಮುಗಿಲು ಮುಟ್ಟಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಸಹೋದರರು ಚನ್ನಪಟ್ಟಣಕ್ಕೆ ಬಾಡಿಗೆ ಜನರನ್ನು ಕರೆಸಿಕೊಂಡು ನನ್ನ ವಿರುದ್ಧ ದ್ವೇಷ ಕಾರಿದ್ದಾರೆ. ಆ ಮೂಲಕ ಹತಾಶೆ ಪ್ರದರ್ಶಿಸಿದ್ದಾರೆ. ನನ್ನನ್ನು ಹೆದರಿಸುವ, ಕಟ್ಟಿ ಹಾಕುವ ಅವರ ಯಾವುದೇ ಪ್ರಯತ್ನ ಫಲ ನೀಡುವುದಿಲ್ಲ. ಅವರಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಗುಡುಗಿದ್ದಾರೆ.
ಚನ್ನಪಟ್ಟಣವನ್ನು ಮದ್ವೆ ಆಗಿದ್ದೇನೆ ಎನ್ನುವ ಮೂಲಕ ಶಿವಕುಮಾರ್ ಅವರು ನಮ್ಮ ತಾಲೂಕಿನ ಸ್ವಾಭಿಮಾನ, ಆತ್ಮಾಭಿಮಾನ ಕೆಣಕಿದ್ದಾಾರೆ. ಅದಕ್ಕೆ ಕ್ಷಮೆಯಾಚಿಸದಿದ್ದಲ್ಲಿ ನಮ್ಮ ಕ್ಷೇತ್ರದ ಹೆಣ್ಣು ಮಕ್ಕಳಿಂದ ಅವರ ಕುತ್ತಿಗೆ ಪಟ್ಟಿ ಹಿಡಿಸಿ, ಪೊರಕೆಯಲ್ಲಿ ಹೊಡೆಸುವೆ ಎಂದು ಎಚ್ಚರಿಕೆ ನೀಡಿದರು. ನಿಜಕ್ಕೂ ಶಿವಕುಮಾರ್ ಅವರು ಯಾರನ್ನಾದರೂ ಚನ್ನಪಟ್ಟಣದಲ್ಲಿ ಮದುವೆ ಆಗಿದ್ದಾರೆಯೇ? ಅವರನ್ನೇ ಚುನಾವಣೆ ಕಣಕ್ಕೆ ಇಳಿಸಲು ಉದ್ದೇಶಿಸಿದ್ದಾರೆಯೇ? ಅವರು ಯಾರೆನ್ನುವುದನ್ನು ತಕ್ಷಣವೇ ಬಹಿರಂಗಪಡಿಸಿ ಗೊಂದಲಕ್ಕೆೆ ತೆರೆ ಎಳೆಯಲಿ ಎಂದು ಕೆಣಕಿದರು.
ಕೊಲೆ, ದರೋಡೆ, ಅತ್ಯಾಚಾರ, ವಂಚನೆ ಮಾಡಿದರೂ ಕ್ಷಮೆ ನೀಡಬಹುದು ಎಂದು ಬಹಿರಂಗ ವೇದಿಕೆಯಲ್ಲಿ ಹೇಳುವ ಮೂಲಕ ತಾವೇನು ಮತ್ತು ತಮ್ಮತನವೇನು ಎನ್ನುವುದನ್ನು ಶಿವಕುಮಾರ್ ಜಗಜ್ಜಾಹೀರುಗೊಳಿಸಿದ್ದಾರೆ. ಸಚಿವರಾಗಲು ಅವರು ನಾಲಾಯಕ್. ನಾನೇನು ಕಾಂಗ್ರೆಸ್‌ನಿಂದ ಗೆದ್ದವನಲ್ಲ. ನನ್ನ ಪಕ್ಷಾಂತರದ ಬಗ್ಗೆ ಮಾತನಾಡುವ ಶಿವಕುಮಾರ್ ಏನು ಅಪ್ಪಟ ಕಾಂಗ್ರೆಸಿಗನೇ? 2004ರಲ್ಲಿ ಪಕ್ಷೇತರನಾಗಿ ಗೆದ್ದು, ತಿವಾರಿ ಕಾಂಗ್ರೆೆಸ್ ಸೇರಿರಲಿಲ್ಲವೇ? ಸಿಎಂ ಸಿದ್ದರಾಮಯ್ಯ ಮೂಲ ಕಾಂಗ್ರೆೆಸಿಗರೇ ಎಂದು ಅವರು ಪ್ರಶ್ನಿಸಿದರು. ರಾಮನಗರದಲ್ಲಿ ದುರ್ಬಲ ಅಧಿಕಾರಿಗಳನ್ನು ನೇಮಿಸಿ, ಅವರನ್ನು ಗದರಿಸಿಕೊಂಡು ಡಿಕೆಎಸ್ ಸಹೋದರರು ದರ್ಬಾರ್ ಮಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಮಮತಾ ಅವರ ಹೆಸರನ್ನು ಹೇಳದೆ ಕಿಚಾಯಿಸಿದರು.

Leave a Reply