ಜೈಲಲ್ಲಿ ತಬಲ ಬಾರಿಸಿ; ಲಾಲುಗೆ ಜಡ್ಜ್ ಟಾಂಗ್!

ಡಿಜಿಟಲ್ ಕನ್ನಡ ಟೀಮ್:

ಮೇವು ಹಗರಣದಲ್ಲಿ ಜೈಲು ಸೇರಿದ್ದರೂ ಲಾಲು ಪ್ರಸಾದ್ ಯಾದವ್ ಗೆ ಬುದ್ಧಿ ಬಂದಿಲ್ಲ. ಸುಖಾಸುಮ್ಮನೆ ಜಡ್ಜ್ ಅವರನ್ನು ಕೆಣಕಿ, ಜೈಲಲ್ಲಿ ತಬಲ ಬಾರಿಸುವಂತೆ ತಿರುಗೇಟು ತಿಂದಿದ್ದಾರೆ.

ನ್ಯಾಯಾಯಾಧೀಶರು ಈ ಸಲಹೆ ಕೊಡಲು ಕಾರಣ ಲಾಲು ಪ್ರಸಾದ್ ಅವರ ಹಾಸ್ಯ. ಲಾಲು ಹೇಳಿ ಕೇಳಿ ಹಾಸ್ಯಪಜ್ಞೆ ಇರುವ ವ್ಯಕ್ತಿ. ಅನೇಕ ಬಾರಿ ಸಂಸತ್ತಿನಲ್ಲಿ, ಮಾಧ್ಯಮಗಳ ಮುಂದೆ ತಮ್ಮ ಒನ್ ಲೈನ್ ಹಾಸ್ಯಗಳೊಂದಿಗೆ ಸಾಕಷ್ಟು ಸುದ್ದಿಯಾದವರು. ಅದೇ ರೀತಿ ಗುರುವಾರ ಸಿಬಿಐ ವಿಶೇಷ ನ್ಯಾಯಾಲಯದ ವಿಚಾರಣೆ ವೇಳೆ ಲಾಲು ‘ಜೈಲಲ್ಲಿ ತುಂಬಾ ಚಳಿ ಇದೆ’ ಅಂತ ನ್ಯಾಯಾಧೀಶರ ಮುಂದೆ ಜೋಕ್ ಮಾಡಿದರು. ಇದಕ್ಕೆ ತಕ್ಷಣವೇ ತಿರುಗೇಟು ಕೊಟ್ಟ ನ್ಯಾಯಮೂರ್ತಿ ಶಿವ್ ಪಾಲ್ ಸಿಂಗ್ ‘ಹಾಗಾದ್ರೆ ಜೈಲಲ್ಲಿ ತಬಲ ಬಾರಿಸಿ’ ಎಂದರು.

ಕಳೆದ ತಿಂಗಳು ಲಾಲು ಹಾಗೂ ಇತರೆ 15 ಮಂದಿ ಮೇವು ಹಗರಣದಲ್ಲಿ ದೋಷಿಗಳೆಂದು ಸಾಬೀತಾಗಿದ್ದು, ಇಂದು ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಬೇಕಿತ್ತು. ಆದ್ರೆ ಕಾರಣಾಂತರಗಳಿಂದ ಅದನ್ನು ನಾಳೆಗೆ ಮುಂದೂಡಲಾಗಿದೆ.

ಲಾಲು ಇಷ್ಟಕ್ಕೆ ಸುಮ್ಮನಾಗಲಿಲ್ಲ. ‘ನಾನು ಕೂಡ ವಕೀಲನೇ’ ಎಂದು ನ್ಯಾಯಮೂರ್ತಿಗಳಿಗೆ ಪ್ರತಿಹೇಳಿದರು. ಈ ಬಾರಿ ಲಾಲು ಹಾಸ್ಯಕ್ಕೆ ಬ್ರೇಕ್ ಹಾಕಿದ ನ್ಯಾಯಮೂರ್ತಿಗಳು, ಆರ್ಜೆಡಿ ನಾಯಕ ರಘುವಂಶ್ ಪ್ರಸಾದ್ ಸಿಂಗ್, ಅವರ ಪುತ್ರ ತೇಜಸ್ವಿ ಯಾದವ್ ಅವರಿಗೆ ಮುಲಾಜಿಲ್ಲದೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಿರುವುದಾಗಿ ಹೇಳಿ ಲಾಲುಗೆ ಪರೋಕ್ಷ ಎಚ್ಚರಿಕೆ ನೀಡಿದರು. ಆಗ ಲಾಲು ನೋಟಿಸ್ ಹಿಂಪಡೆಯುವಂತೆ ಗೋಗರೆದರು. ಆದರೆ ನ್ಯಾಯಮೂರ್ತಿಗಳು ಲಾಲು ಮನವಿಗೆ ಸ್ಪಂದಿಸಲಿಲ್ಲ. ಆಗ ಲಾಲು, ‘ಕೋಪ ಬಿಟ್ಟು ಶಾಂತವಾಗಿರಿ’ ಎಂದು ಅಲವತ್ತುಕೊಂಡರು.

ಇದಕ್ಕೂ ಮುನ್ನ ‘ಲಾಲು ಪ್ರಸಾದ್ ಕಡೆಯ ವ್ಯಕ್ತಿಯೋಬ್ಬ ತಮಗೆ ಕರೆ ಮಾಡಿದ್ದ’ ಎಂದು ನ್ಯಾಯಮೂರ್ತಿಗಳು ಹೇಳಿದರು. ನಂತರ ಸಿಬಿಐ ಪರ ವಕೀಲರು ಲಾಲು ಅವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು

Leave a Reply