ಭಾರತಕ್ಕಿಂತ ಅಮೆರಿಕಕ್ಕೆ ಹೆಚ್ಚು ಅಪಾಯ ಟ್ರಂಪ್ ವೀಸಾ ನೀತಿ!

ಡಿಜಿಟಲ್ ಕನ್ನಡ ಟೀಮ್:

ಎಚ್ 1ಬಿ ವೀಸಾ ನೀತಿ ಮತ್ತಷ್ಟು ಬಿಗಿಗೊಳಿಸುವ ಟ್ರಂಪ್ ನಿರ್ಧಾರ ಸಾಕಷ್ಟು ಚರ್ಚೆಯಾಗುತ್ತಿದೆ. ಜತೆಗೆ ಲಕ್ಷಾಂತರ ಭಾರತೀಯರಲ್ಲೂ ಆತಂಕ ಮೂಡಿಸಿದೆ.

ಇನ್ನು ಪ್ರಸ್ತಾವನೆ ಹಂತದಲ್ಲಿರುವ ನೂತನ ವೀಸಾ ನೀತಿ ಬಗ್ಗೆ ಅಮೆರಿಕ ನಾಯಕರೇ ಅಪಸ್ವರ ಎತ್ತುತ್ತಿದ್ದಾರೆ. ಅದಕ್ಕೆ ಕಾರಣ ವೀಸಾ ನೀತಿ ಭಾರತಕ್ಕಿಂತ ಅಮೆರಿಕಕ್ಕೆ ಹೆಚ್ಚು ಹೊಡೆತ ಬೀಳುತ್ತದೆ ಎಂದು ಡೆಮಕ್ರಾಟಿಕ್ ಸಂಸತ್ ಸದಸ್ಯೆ ತುಳಸಿ ಗಬರ್ಡ್ ಹಾಗೂ ನಾಸ್ಕಾಮ್ ಮುಖ್ಯಸ್ಥ ಆರ್.ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.

ಟ್ರಂಪ್ ಆಡಳಿತದ ಈ ನಿರ್ಧಾರ ವಿದೇಶಿಯರಿಗೆ ಉದ್ಯೋಗ ಅವಕಾಶ ಕಡಿಮೆ ಮಾಡಿ ಮೂಲ ಅಮೆರಿಕನ್ನರಿಗೆ ಹೆಚ್ಚಿನ ಉದ್ಯೋಗ ಅವಕಾಶ ನೀಡುವಂತೆ ಮಾಡುತ್ತದೆ. ಇದರಿಂದ 5 ಲಕ್ಷದಿಂದ 7.5 ಲಕ್ಷ ಭಾರತೀಯರು ಕೆಲಸ ಕಳೆದುಕೊಂಡು ತವರಿಗೆ ಮರಳಬೇಕಾದ ಆತಂಕ ಎದುರಾಗಿದೆ. ಅತ್ತ ಟ್ರಂಪ್ ಅವರ ‘ಬೈ ಅಮೆರಿಕನ್ ಹಾಗೂ ಹೈರ್ ಅಮೆರಿಕನ್’ ನೀತಿಗೆ ಈ ಪ್ರಸ್ತಾವನೆ ಪೂರಕವಾಗಿದೆ. ಆದರೂ ಅಮೆರಿಕ ಸಂಸದರು ಈ ನಿರ್ಧಾರ ಸರಿಯಲ್ಲ ಎಂದು ಎಚ್ಚರಿಗೆ ನೀಡುತ್ತಿದ್ದಾರೆ.

ಈ ಪ್ರಸ್ತಾವನೆ ಜಾರಿಯಾದ್ರೆ ಲಕ್ಷಾಂತರ ವಿದೇಶಿಗರು ತಮ್ಮ ದೇಶಕ್ಕೆ ಮರಳಬೇಕಾಗುತ್ತದೆ. ಅದರಲ್ಲೂ ಭಾರತೀಯರು ಮರಳುವುದು ಅಮೆರಿಕಕ್ಕೆ ಉತ್ತಮ ಬೆಳವಣಿಗೆಯಲ್ಲ ಎಂಬುದು ಈ ನಾಯಕರ ವಾದ. ಹಾಗಾದ್ರೆ ಈ ಪ್ರಸ್ತಾವನೆ ಜಾರಿಯಾದ್ರೆ ಅಮೆರಿಕಕ್ಕೆ ಆಗುವ ನಷ್ಟವೇನು ನೋಡೋಣ ಬನ್ನಿ…

  • ಐಟಿ ಕ್ಷೇತ್ರ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ವಿದೇಶಿಯರು ಅದರಲ್ಲೂ ಭಾರತೀಯರೇ ಹೆಚ್ಚು ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಈಗ ಲಕ್ಷಾಂತರ ಸಂಖ್ಯೆಯಲ್ಲಿ ಭಾರತೀಯರು ವಾಪಸ್ಸಾದರೆ, ಅಮೆರಿಕದ ಐಟಿ ಕ್ಷೇತ್ರದ ಸಂಪೂರ್ಣ ಚಿತ್ರಣವೇ ಬದಲಾಗುತ್ತದೆ. ಅಲ್ಲದೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ಪರ್ಯಾಯವಾಗಿ ಪಡೆಯಲು ಅಮೆರಿಕ ಶಕ್ತವಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
  • ಈಗಾಗಲೇ ಭಾರತೀಯರು ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ್ದು, ಈ ನೀತಿಯಿಂದ ಏಕಾಏಕಿ ಪರಿಣಿತರು ಹಾಗೂ ಕೌಶಲ್ಯಗಾರರನ್ನು ಕಳೆದುಕೊಂಡರೆ ಅಮೆರಿಕ ಇವರ ಕೊರತೆ ಎದುರಿಸಲಿದೆ.
  • ಮಾನವ ಸಂಪನ್ಮೂಲ ಕೊರತೆ ಹಾಗೂ ಪರಿಣತಿ ಮತ್ತು ಕೌಶಲ್ಯದಾರರ ಕೊರತೆಯಿಂದ ಅಮೆರಿಕದ ಐಟಿ ಕ್ಷೇತ್ರ ದಿಢೀರನೆ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ. 21ನೇ ಶತಮಾನದಲ್ಲಿ ಜಾಗತಿಕ ಶಕ್ತಿಶಾಲಿ ರಾಷ್ಟ್ರ ಎಂಬ ಸ್ಥಾನ ಉಳಿಸಿಕೊಳ್ಳುವ ವಿಚಾರದಲ್ಲಿ ಚೀನಾ, ಜಪಾನ್ ದೇಶಗಳಿಂದ ಪ್ರತಿಸ್ಪರ್ಧೆ ಎದುರಿಸುತ್ತಿರುವ ಅಮೆರಿಕ ಇಂತಹ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವೆ? ಒಂದು ವೇಳೆ ತೆಗೆದುಕೊಂಡರೂ ಬೇರೆ ರಾಷ್ಟ್ರಗಳಿಗೆ ಲಾಭದಾಯಕವಾಗಲಿದೆ.
  • ಇನ್ನು ಅಮೆರಿಕದಲ್ಲಿ ಭಾರತೀಯರು ದೊಡ್ಡ ಸಂಖ್ಯೆಯಲ್ಲಿ ಸಣ್ಣ ಉದ್ಯಮಗಳನ್ನು ಆರಂಭಿಸಿದ್ದಾರೆ. ಈಗ ಇವರೆಲ್ಲರು ಅಮೆರಿಕದಿಂದ ಜಾಗ ಖಾಲಿ ಮಾಡಿದರೆ ಅಲ್ಲಿನ ಉದ್ಯೋಗ ಸಂಖ್ಯೆಯೂ ಕುಸಿಯಲಿದೆ.
  • ಇನ್ನು ಅಮೆರಿಕದ ಆರ್ಥಿಕತೆಯಲ್ಲಿ ವಿದೇಶಿಯರ ಕೊಡುಗೆ ಪ್ರಮುಖವಾಗಿದೆ. 2015-16ನೇ ಸಾಲಿನಲ್ಲಿ ಅಮೆರಿಕಕ್ಕೆ ವಿದೇಶಿಗರಿಂದಲೇ 2 ಟ್ರಿಲಿಯನ್ ಡಾಲರ್ ನಷ್ಟು ಕೊಡುಗೆ ಇದೆ. ಇಷ್ಟು ದೊಡ್ಡ ಕೊಡುಗೆಯಲ್ಲಿ ಭಾರತೀಯ ಉದ್ದಿಮೆದಾರರದ್ದೇ ಸಿಂಹಪಾಲು.
  • ಅಮೆರಿಕಕ್ಕೆ ಕೇವಲ ವಿದೇಶಿ ಉದ್ಯೋಗದವರಿಂದ ಮಾತ್ರ ಆರ್ಥಿಕ ಲಾಭವಾಗುತ್ತಿಲ್ಲ. ವಿದೇಶಿ ವಿದ್ಯಾರ್ಥಿಗಳಿಂದ ಲಾಭವಿದೆ. ಅದರಲ್ಲೂ ಭಾರತೀಯ ವಿದ್ಯಾರ್ಥಿಗಳು ಅಮೆರಿಕದ ಆರ್ಥಿಕತೆಗೆ ನೆರವಾಗಿದ್ದಾರೆ. 2014-15ನೇ ಸಾಲಿನಲ್ಲಿ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡಲು ಭಾರತದಿಂದ 1.33 ಲಕ್ಷ ವಿದ್ಯಾರ್ಥಿಗಳು ತೆರಳಿದ್ದರು. ಇವರಿಂದ ಅಮೆರಿಕ ಆರ್ಥಿಕತೆಗೆ 3.6 ಬಿಲಿಯನ್ ಡಾಲರ್ ಕಾಣಿಕೆ ಇದೆ. ಇನ್ನು 2015-16ನೇ ಸಾಲಿನಲ್ಲಿ ಭಾರತೀಯ ವಿದ್ಯಾರ್ಥಿಗಳಿಂದ ಅಮೆರಿಕ ಆರ್ಥಿಕತೆಗೆ 5 ಬಿಲಿಯನ್ ಡಾಲರ್ ನಷ್ಟು ಕೊಡುಗೆಯಾಗಿದೆ.

Leave a Reply