ಅಮಿತ್ ಶಾ, ಯೋಗಿ ಚುಂಚನಗಿರಿ ಮಠ ಭೇಟಿ ಹಿಂದಿದೆ ಒಕ್ಕಲಿಗ ಮತಬೇಟೆ ತಂತ್ರ!

ಡಿಜಿಟಲ್ ಕನ್ನಡ ವಿಶೇಷ:
ಮೂರು ತಿಂಗಳ ಹಿಂದೆ ರಾಜ್ಯ ಮುಖಂಡರಿಗೆ ಪಾಠ ಮಾಡಲು ಬಂದಿದ್ದ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅದಿಚುಂಚನಗಿರಿ ಶ್ರೀ ನಿರ್ಮಲಾನಂದ ಶ್ರೀಗಳನ್ನು ಭೇಟಿ ಮಾಡಿದ್ದರು. ಇದೀಗ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಲು ಬಂದಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಶ್ರೀಗಳನ್ನು ಭೇಟಿ ಮಾಡಿದ್ದಾರೆ. ಈ ಎರಡೂ ಭೇಟಿಗಳ ಹಿಂದೆ ನಿರ್ಮಲಾನಂದ ಶ್ರೀಗಳು ಪ್ರತಿನಿಧಿಸುವ ರಾಜ್ಯದ ಎರಡನೇ ಪ್ರಬಲ ಸಮುದಾಯ ಒಕ್ಕಲಿಗರ ಮತ ಸೆಳೆವ ತಂತ್ರ ಅಡಗಿದೆ.
ಮುಂಬರುವ ವಿಧಾನಸಭೆ ಚುನಾವಣೆಯನ್ನು ಶತಾಯ-ಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಜಾತಿ, ಪ್ರಾಂತ್ಯ, ಧರ್ಮ ಸೇರಿದಂತೆ ಎಲ್ಲ ಆಯಾಮಗಳಿಂದಲೂ ಮತಕ್ರೋಡೀಕರಣ ಪ್ರಕ್ರಿಯೆಯಲ್ಲಿ ತೊಡಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಮೂರನೇ ಅತಿದೊಡ್ಡ ಕುರುಬ ಸಮುದಾಯದ ಪ್ರತಿನಿಧಿ. ಆ ಜಾತಿಯೂ ಸೇರಿದಂತೆ ಅಹಿಂದ ಮತಗಳನ್ನು ಒಂದು ಹಂತಕ್ಕೆ ಹಿಡಿದಿಟ್ಟುಕೊಂಡಿದ್ದಾರೆ. ಆದರೆ ಮೇಲ್ವರ್ಗದ ಲಿಂಗಾಯತ, ಒಕ್ಕಲಿಗ ಹಾಗೂ ಬ್ರಾಹ್ಮಣರ ಬಗ್ಗೆ ಮೊದಲಿಂದಲೂ ಅವರಿಗೆ ಒಲವು ಇಲ್ಲ. ಆದರೆ ಇತ್ತೀಚೆಗೆ ಸಿದ್ದರಾಮಯ್ಯ ಸಂಪುಟ ಸದಸ್ಯರಾದ ಎಂ.ಬಿ. ಪಾಟೀಲ್ ಮತ್ತು ವಿನಯ್ ಕುಲಕರ್ಣಿ ಪ್ರೇರಣೆಯಿಂದ  ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ತಾರಕ ಮುಟ್ಟಿದ್ದು, ಇದರಿಂದಾಗಿ ಲಿಂಗಾಯತ ಮತ್ತು ವೀರಶೈವರ ನಡುವೆ ಬಿರುಕು ಉಂಟಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಾಗಲಿ, ಅವರು ಪ್ರತಿನಿಧಿಸರುವ ಬಿಜೆಪಿಯಾಗಲಿ ಈ ಸ್ವತಂತ್ರ ಧರ್ಮ ಹೋರಾಟದ ಬಗ್ಗೆ ಸ್ಪಷ್ಟ ನಿಲುವು ತಳೆಯದಿರುವುದು ಸಮುದಾಯದ ಅಸಮಧಾನಕ್ಕೆ ಕಾರಣವಾಗಿದೆ. ಈವರೆಗೂ ಬಿಜೆಪಿ ಜತೆ ಗುರುತಿಸಿಕೊಂಡಿದ್ದ ಲಿಂಗಾಯತ ಸಮುದಾಯವನ್ನು ವಿಭಜಿಸುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ಸರಕಾರವು ಸಹಜವಾಗಿಯೇ ಒಂದಷ್ಟು ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ.
ಒಕ್ಕಲಿಗ ಸಮುದಾಯ ಈವರೆಗೂ ಹೆಚ್ಚು ಪ್ರಮಾಣದಲ್ಲಿ ಜೆಡಿಎಸ್ ಜತೆ ಗುರುತಿಸಿಕೊಂಡಿದೆ. ಕಾಂಗ್ರೆಸ್ ಮತ್ತು ಬಿಜೆಪಿಯೆಡೆ ಅದರ ಒಲವು ಇಲ್ಲವೇ ಇಲ್ಲ ಎಂದೇನೂ ಇಲ್ಲ. ಆದರೆ ಪ್ರಮಾಣ ಕಡಿಮೆ.  ಈಗ ಅದನ್ನು ಬಿಜೆಪಿಯೆಡೆಗೆ ಸೆಳೆಯುವ ಅಮಿತ್ ಶಾ ತಂತ್ರಗಾರಿಕೆ ಭಾಗವಾಗಿ ಬಿಜೆಪಿ ರಾಷ್ಟ್ರೀಯ ಮುಖಂಡರು ಆದಿಚುಂಚನಗಿರಿ ಮಠಕ್ಕೆ ಎಡತಾಕುತ್ತಿದ್ದಾರೆ.
ಅಮಿತ್ ಶಾ ಅವರು ಸುಖಾಸುಮ್ಮನೆ ಆದಿಚುಂಚನಗಿರಿ ಮಠಕ್ಕೆ ಭೇಟಿ ಕೊಟ್ಟಿಲ್ಲ. ನಿರ್ದಿಷ್ಟ ಉದ್ದೇಶ ಇಟ್ಟುಕೊಂಡೇ ಅಲ್ಲಿಗೆ ಹೋಗಿದ್ದಾರೆ. ಅಮಿತ್ ಶಾ ಪ್ರತಿನಿಧಿಸುವ ಜೈನ ಧರ್ಮದ ಉತ್ಥಾನಮೂರ್ತಿ ಗೊಮ್ಮಟೇಶ್ವರ ಇರುವ ಶ್ರವಣ ಬೆಳಗೊಳ ನಾಗಮಂಗಲದ ಅಧಿಚುಂಚನಗಿರಿ ಮಠಕ್ಕೆ ಕೇವಲ 25 ಕಿ.ಮಿ. ದೂರದಲ್ಲಿದ್ದರೂ ಅವರು ಅಲ್ಲಿಗೆ ಹೋಗಿಲ್ಲ. ತಮ್ಮ ಪಕ್ಷ  ಮಠ ರಾಜಕೀಯ ಮಾಡುವುದಿಲ್ಲ. ಮಠಕ್ಕೆ ಅಮಿತ್ ಶಾ ಬೇಟಿ ಕೇವಲ ಸೌಜನ್ಯಯುತ ಎಂದು ಬಿಜೆಪಿ ನಾಯಕರು ಎಷ್ಟೇ  ಹೇಳಿಕೊಂಡರೂ ಅಲ್ಲಿರುವುದು ‘ಮತ ರಾಜಕೀಯವೇ!’
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕರ್ಮ ಭೂಮಿ ಗೋರಖ್ ಪುರದ ಮಠ ಹಾಗೂ ಆದಿಚುಂಚನಗಿರಿ ಮಠಗಳು ನಾಥ ಸಂಪ್ರದಾಯಕ್ಕೆ ಸೇರಿದ ಮಠಗಳಾಗಿದ್ದು, ಯೋಗಿ ಆದಿತ್ಯನಾಥ್ ಅವರ ಗುರುಗಳು ಆದಿಚುಂಚನಗಿರಿ ಬೆಟ್ಟದಲ್ಲಿ ತಪಸ್ಸು ಮಾಡಿದ್ದರು ಅನ್ನೋ ಮಾತುಗಳೂ ಇವೆ. ಮೊದಲಿನಿಂದಲೂ ಎರಡೂ ಮಠಗಳ ನಡುವೆ ಉತ್ತಮ ಬಾಂಧವ್ಯ ಇದೆ. ನಾಥ ಸಂಪ್ರದಾಯದ ಬೆಸುಗೆ ಮುಂದಿಟ್ಟುಕೊಂಡು ಯೋಗಿ ಆದಿತ್ಯನಾಥ ಅವರುಆದಿಚುಂಚನಗಿರಿ ಮಠಕ್ಕೆ ಬೇಟಿ ಕೊಟ್ಟಿದ್ದರ ಹಿಂದೆಯೂ ಒಕ್ಕಲಿಗರ ಮತಬೇಟೆ ಉದ್ದೇಶ ಅಡಗಿದೆ. ಒಕ್ಕಲಿಗರಿಗೆ ಆದಿಚುಂಚನಗಿರಿ ಏಕೈಕ ಮಠವಾಗಿದ್ದು, ಮಠದ ಮೇಲೆ ಅಪಾರ ಪ್ರೀತಿ, ಗೌರವ, ವಿಶ್ವಾಸ ಇರಿಸಿಕೊಂಡಿದ್ದಾರೆ. ನಿರ್ಮಲಾ ಶ್ರೀಗಳನ್ನು ಓಲೈಸಿದರೆ ಒಕ್ಕಲಿಗರನ್ನು ಓಲೈಸಿದಂತೆ ಎಂಬುದು ಬಿಜೆಪಿ ಮುಖಂಡರ ಎಣಿಕೆ. ಆದರೆ ಧರ್ಮ ರಾಜಕೀಯದಿಂದ ದೂರ ಉಳಿದಿರುವ ನಿರ್ಮಲಾನಂದ ಶ್ರೀಗಳು ಸ್ಥಿತಪ್ರಜ್ಞತೆ  ಕಾಯ್ದುಕೊಂಡಿರುವುದರಿಂದ ರಾಜಕೀಯ ಲೆಕ್ಕಾಚಾರಗಳು ಮಠದ ಮುಂಬಾಗಿಲಲ್ಲೇ ಮಲಗುವ ಸಾಧ್ಯತೆ ಹೆಚ್ಚು.

Leave a Reply