ಯೋಗಿಯದು ರಾಕ್ಷಸೀ ಹಿಂದುತ್ವ, ನಮ್ಮದು ಮನುಷ್ಯತ್ವದ ಹಿಂದುತ್ವ; ಸಿದ್ದರಾಮಯ್ಯ ತಿರುಗೇಟು

ಡಿಜಿಟಲ್ ಕನ್ನಡ ಟೀಮ್:
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರದು ರಾಕ್ಷಸೀ ಪ್ರವೃತ್ತಿ ಹಿಂದುತ್ವ. ನಮ್ಮದು ಮನುಷ್ಯತ್ವದ ಹಿಂದುತ್ವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಯೋಗಿ ಅವರು ಹೇಳಿದಂತೆ ಚುನಾವಣೆ ಹತ್ತಿರ ಬಂತು ಅಂತಾ ನಾನು ಹಿಂದುತ್ವ ಪ್ರತಿಪಾದಿಸುತ್ತಿಲ್ಲ. ಅದು ನಮ್ಮ ರಕ್ತದಲ್ಲೇ ಇದೆ. ಹಿಂದುತ್ವ ಬಿಜೆಪಿ ಸ್ವತ್ತಲ್ಲ. ಗಾಂಧಿ ಕೊಂದ ಗೋಡ್ಸೆ ಅನುಯಾಯಿ ಯೋಗಿ ಅವರಿಂದ ನಾನು ಪಾಠ ಕಲಿಯಬೇಕಿಲ್ಲ ಎಂದು ಉಡುಪಿಯಲ್ಲಿ ಸೋಮವಾರ ಗುಡುಗಿದ್ದಾರೆ.
ಅವರು ಹೇಳಿದ್ದಿಷ್ಟು: ‘ಸಿದ್ದರಾಮಯ್ಯ ಹಿಂದೂವಾದರೆ ಗೋಹತ್ಯೆ ನಿಷೇಧ ಮಾಡಲಿ ಎನ್ನುವ ಆದಿತ್ಯನಾಥರು ಒಮ್ಮೆ ಸ್ವಾಮಿ ವಿವೇಕಾನಂದರ ಮಾತುಗಳನ್ನು ಪರಾಮರ್ಶಿಸಬೇಕು. ತಿನ್ನುವ ಆಹಾರದಿಂದ ಹಿಂದುತ್ವ ಬರುವುದಿಲ್ಲ. ಮನಸ್ಸಿನಲ್ಲಿ ಹಿಂದುತ್ವ ಇರಬೇಕು. ವ್ಯವಹಾರದಲ್ಲಿ ಹಿಂದುತ್ವ ಪ್ರತಿಪಾದನೆ ಆಗಬೇಕು. ಹಿಂದುತ್ವದಲ್ಲಿ ಮನುಷ್ಯತ್ವ ಇರಬೇಕು ಎಂದು ವಿವೇಕಾನಂದರು ಹೇಳಿದ್ದಾರೆ. ಇದು ಯೋಗಿ ಅವರಿಗೆ ಗೊತ್ತಿಲ್ಲ.’
‘ಹಿಂದೆ ಹುಬ್ಬಳ್ಳಿಗೆ ಬಂದಿದ್ದಾಗ ಇದೇ ಆದಿತ್ಯನಾಥರು ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡುತ್ತಾರೆ. ಹನುಮ ಜಯಂತಿ ಮಾಡುವುದಿಲ್ಲ ಎಂದಿದ್ದರು. ನಾವು 26 ಮಹಾಪುರುಷರು, ಮಹಾಮಾತೆಯರ ಜಯಂತಿ ಆಚರಿಸುತ್ತೇವೆ. ಮಹಾವೀರ, ನಾರಾಯಣ ಗುರು. ಕೇಂಪೇಗೌಡ, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಕೃಷ್ಣ ಜಯಂತಿ ಶುರು ಮಾಡಿದವರು ನಾವು. ಟಿಪ್ಪು ಜಯಂತಿ ಕೂಡ ಅದರಲ್ಲಿ ಒಂದು.’
ಯೋಗಿ ಅವರು ಸಿಎಂ ಆಗಿರುವ ಉತ್ತರ ಪ್ರದೇಶದಲ್ಲಿ ಜಂಗಲ್ ರಾಜ್ ಇದೆ. ಅಲ್ಲಿನ ಮಕ್ಕಳು ಅಪೌಷ್ಠಿಕತೆಯಿಂದ ಸಾಯುತ್ತಿದ್ದಾರೆ. ನಮ್ಮ ಅನ್ನಭಾಗ್ಯ, ಕ್ಷೀರಭಾಗ್ಯ ಮಾತೃಪೂರ್ಣ ಯೋಜನೆ ನೋಡಿಯಾದರೂ ಅವರು ಕಲಿತುಕೊಳ್ಳಲಿ. ತಮ್ಮ ರಾಜ್ಯದಲ್ಲಿ ಸಾಯುತ್ತಿರುವ ಮಕ್ಕಳನ್ನು ಉಳಿಸಿಕೊಳ್ಳಲಿ.’

Leave a Reply