ಸಮೀಕ್ಷೆ ಪ್ರತಿಬಿಂಬಕ್ಕೆ ಸಿದ್ದರಾಮಯ್ಯ ‘ಆಕಾಶಬುಟ್ಟಿ’!

ಮುಖ್ಯಮಂತ್ರಿ ಸಿದ್ದರಾಮಯ್ಯ ‘ಆಕಾಶಬುಟ್ಟಿ’ ಆಗಿದ್ದಾರೆ!
ನಿಜ, ಕರ್ನಾಟಕ ವಿಧಾನಸಭೆ ಚುನಚಾವಣೆಗೆ ಐದು ತಿಂಗಳು ಮಾತ್ರ ಬಾಕಿ ಉಳಿದಿರುವಾಗ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು ನಡೆಸಿರುವ ಸಮೀಕ್ಷೆಗಳಲ್ಲಿ ಉಳಿದೆಲ್ಲ ಪಕ್ಷಗಳಿಗಿಂತ ಕಾಂಗ್ರೆಸ್ ಮುಂದಿರುವುದು ಅವರನ್ನು ಆಕಾಶದಲ್ಲಿ ತೇಲಿಸುತ್ತಿದೆ. ಈ ಕ್ಷಣಕ್ಕೆ ಅನ್ವಯ ಆಗುವ ಬಹುತೇಕ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರವುದು ಇಲ್ಲವೇ ಅಧಿಕಾರಕ್ಕೆ ಸಮೀಪವಿರುವುದು ಪ್ರತಿಬಿಂಬಿತವಾಗಿದೆ. ಇದು ಸಹಜವಾಗಿಯೇ ಕಾಂಗ್ರೆಸ್ ಸರಕಾರದ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯನವರಿಗೆ ಹತ್ತು ತಲೆ, ಇಪ್ಪತ್ತು ಭುಜ ತಂದಿದೆ.
ವಿಶ್ವವಾಣಿ, ಕನ್ನಡಪ್ರಭ ದೈನಿಕ, ಸುವರ್ಣ ಟಿವಿ, ಪಬ್ಲಿಕ್ ಟಿವಿ, ಬಿಟಿವಿ, ಟಿವಿ 9 ಸೇರಿದಂತೆ ಮಾಧ್ಯಮ ಸಂಸ್ಥೆಗಳು ನಡೆಸಿರುವ ಬಹುತೇಕ ಚುನಾವಣೆ ಪೂರ್ವ ಸಮೀಕ್ಷೆಗಳು ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತಬೇಟೆಯಲ್ಲಿ ಮುಂದಿರುವುದನ್ನು ಸಾರಿವೆ. ಅಂಕಿ-ಅಂಶಗಳಲ್ಲಿ ವ್ಯತ್ಯಾಸವಿರಬಹುದು. ಆದರೆ ಈ ಎಲ್ಲ ಸಮೀಕ್ಷೆಗಳ ಒಟ್ಟಾರೆ ಸಾರಾಂಶ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಅಥವಾ ಅಧಿಕಾರಕ್ಕೆ ಸಮೀಪದಲ್ಲಿದೆ. ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಏಕಾಂಗಿಯಾಗಿ ಅಧಿಕಾರಕ್ಕೆ ಬಂದರೆ ಅನ್ಯ ಅವಕಾಶಗಳ ಪ್ರಸ್ತಾಪವೇ ಉದ್ಭವಿಸುವುದಿಲ್ಲ. ಒಂದೊಮ್ಮೆ ಅಧಿಕಾರದ ಸಮೀಪದಲ್ಲಿ ನಿಂತರೆ ಇದೇ ಮಾತನ್ನು ಹೇಳಲು ಆಗುವುದಿಲ್ಲ. ಏಕೆಂದರೆ ಅಧಿಕಾರಕ್ಕೆ ಸಮೀಪದಲ್ಲಿರುವ ಪಕ್ಷ ಅಧಿಕಾರಕ್ಕೆ ಬಂದಂತೇ ಎನ್ನಲು ಸಾಧ್ಯವಿಲ್ಲ.ಅಂಕಿ- ಸಂಖ್ಯೆಗಳೇ ಪ್ರಧಾನವಾಗಿರುವ ರಾಜಕೀಯದಲ್ಲಿ ಏನು  ಬೇಕಾದರೂ ಆಗಬಹುದು. 2004 ರ ಚುನಾವಣೆಯಲ್ಲಿ ಬಿಜೆಪಿ 79 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ 65 ಸೀಟು ಪಡೆದಿದ್ದ ಕಾಂಗ್ರೆಸ್ ಮತ್ತು 58 ಸ್ಥಾನ ಗಳಿಸಿದ್ದ ಜೆಡಿಎಸ್ ಒಗ್ಗೂಡಿ ಸಮ್ಮಿಶ್ರ ಸರಕಾರ ರಚನೆ ಮಾಡಿ ಧರ್ಮಸಿಂಗ್ ಮುಖ್ಯಮಂತ್ರಿ ಆದರು. ಇಪ್ಪತ್ತು ತಿಂಗಳ ನಂತರ ಜೆಡಿಎಸ್ ಮತ್ತು ಬಿಜೆಪಿ ಒಗ್ಗೂಡಿ ಸರಕಾರ ಮಾಡಿದ್ದು ಬೇರೆ ಮಾತು. ಸ್ಪಷ್ಟ ಬಹುಮತ ಇಲ್ಲದಿದ್ದಾಗ ಅತಿದೊಡ್ಡ ಪಕ್ಷ ಕೂಡ ಪ್ರತಿಪಕ್ಷ ಸ್ಥಾನದಲ್ಲಿ ಕೂರಬೇಕಾಗುತ್ತದೆ ಎಂಬುದನ್ನು ರಾಜಕೀಯ ರಂಗದ ಇಂಥ ಅನೇಕ ಬೆಳವಣಿಗೆಗಳು ಶೃತಪಡಿಸಿರುವುದರಿಂದ ಈ ರಾಜಕೀಯ ಸಮೀಕ್ಷೆಗಳನ್ನು ಒಂದು ದಿಕ್ಸೂಚಿ ಎಂದಷ್ಟೇ ಪರಿಗಣಿಸಲು ಸಾಧ್ಯ. ಆದರೆ ಇದೇ ಅಂತಿಮವಲ್ಲ.
ಏಕೆಂದರೆ ಇವತ್ತಿನ ಸಮೀಕ್ಷೆ ಪ್ರತಿಬಿಂಬ ಐದು ತಿಂಗಳು ಬಾಕಿ ಇರುವ ಚುನಾವಣೆವರೆಗೂ ಚಾಲ್ತಿಯಲ್ಲಿರುತ್ತದೆ ಎಂದು ಹೇಳಲು ಬರುವುದಿಲ್ಲ. ಈ ಕೊನೆಯ ಐದು ತಿಂಗಳು 20:20 ಕ್ರಿಕೆಟ್ ಮ್ಯಾಚ್‌ನ ಕೊನೆಯ ಐದು ಓವರ್‌ಗಳು ಇದ್ದಂತೆ. ಯಾವ ಓವರ್‌ನಲ್ಲಿ ಎಷ್ಟು ರನ್ ಬರುತ್ತದೆ ಎಂದು ಹೇಳಲು ಆಗುವುದಿಲ್ಲ. ಒಂದು ಓವರ್‌ನಲ್ಲಿ ಮೂವತ್ತು ರನ್ ಬರಬಹುದು. ಮತ್ತೊಂದು ಓವರ್‌ನಲ್ಲಿ  ಐದೇ ರನ್ ಬರಬಹುದು. ಬೌಲರ್ ಮತ್ತು ಬ್ಯಾಟ್ಸ್ ಮನ್ ಮೇಲೆ ಅದು ಅವಲಂಬಿತ. ಚುನಾವಣೆ ಕೂಡ ಅದೇ ರೀತಿ. ರಾಜಕೀಯ ಪಕ್ಷಗಳ ಚುನಾವಣೆ ತಂತ್ರಗಾರಿಕೆ, ತಂತ್ರಗಾರಿಕೆ ನೈಪುಣ್ಯ, ನಾಯಕರ ಸಾಮರ್ಥ್ಯ, ಪರಿವರ್ತಿತ ಸಮಯ-ಸಂದರ್ಭ ಚುನಾವಣೆ ಸ್ಥಿತಿಗತಿಗಳನ್ನೂ ಬದಲಿಸುತ್ತಾ ಹೋಗಬಹುದು ಇಲ್ಲವೇ ಯಥಾಸ್ಥಿತಿ ಕಾಯ್ದುಕೊಳ್ಳಬಹುದು. ಹೀಗಾಗಿ ಈಗ ಉಳಿದಿರುವ ಅವಧಿಯಲ್ಲಿ ಒಂದೊಂದು ತಿಂಗಳು ಬಹುಮುಖ್ಯ. ಸದ್ಯಕ್ಕೆ ಕಾಂಗ್ರೆಸ್ ಮುಂದಿದೆ. ಸಿದ್ದರಾಮಯ್ಯ ಅವರನ್ನು ಬೀಗುವಂತೆ ಮಾಡಿದೆ. ನಾಳೆ ಏನೋ, ಎತ್ತೋ ಗೊತ್ತಿಲ್ಲ!
ಜನರ ನಾಡಿಮಿಡಿತದ ಸಂಕೇತವಾಗಿರುವ ಚುನಾವಣೆಪೂರ್ವ ಸಮೀಕ್ಷೆಗಳು ಐದು ತಿಂಗಳ ಮೊದಲೇ ಹೊಮ್ಮಿಸಿರುವ ಅಂಶಗಳು ರಾಜಕೀಯ ಪಕ್ಷಗಳು ಚುರುಕಾಗಲು, ಎಚ್ಚೆತ್ತುಕೊಳ್ಳಲು, ತಮ್ಮ ಸ್ಥಿತಿಗೆ ಅನುಗುಣವಾಗಿ ತಂತ್ರ-ಪ್ರತಿತಂತ್ರ ರೂಪಿಸಿಕೊಳ್ಳಲು ಸಹಕಾರಿ ಆಗಿರುವುದು ಸುಳ್ಳಲ್ಲ. ಕಾಂಗ್ರೆಸ್ಸಿಗೆ ತಮ್ಮ ಪರ ಇರುವ ಜನರ ಒಲವನ್ನು ಚುನಾವಣೆ ಮುಗಿಯುವವರೆಗೂ ಹಿಡಿದಿಟ್ಟುಕೊಳ್ಳುವ ತಂತ್ರ ಹೆಣೆಯಲು ಅವಕಾಶ ಮಾಡಿಕೊಟ್ಟಿದೆ. ಹಾಗೆಯೇ ಕೆಲವು ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಸಮೀಪದಲ್ಲಿರುವುದನ್ನು ಬಿಂಬಿಸಿರುವುದರಿಂದ ಸ್ಪಷ್ಟ ಬಹುಮತಕ್ಕೆ ಅಗತ್ಯವಿರುವ ಸ್ಥಾನಗಳ ವೃದ್ಧಿ ದಿಕ್ಕಿನಲ್ಲೂ ಯೋಚಿಸುವಂತೆ ಮಾಡಿದೆ. ಅದೇ ರೀತಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ಗೆ ತಮ್ಮ ನಡೆ-ನುಡಿ, ತಂತ್ರ, ಪ್ರತಿತಂತ್ರ ಬದಲಿಸಿಕೊಳ್ಳಲು ಆಸ್ಪದ ಮಾಡಿಕೊಟ್ಟಿದೆ. ಅಧಿಕಾರಕ್ಕೆ ಕೊರತೆ ಇರುವ ಸ್ಥಾನಗಳನ್ನು ಪಡೆಯುವುದು ಹೇಗೆ, ಎಂತು ಎನ್ನುವುದರತ್ತ ಚಿಂತನೆಗೆ ಹಚ್ಚಿದೆ.
ಅದೇನೇ ಇರಲಿ ಈಗಿನ ಸಮೀಕ್ಷೆಗಳು ಸಾರಿರುವ ಅಂಶಗಳು ಎದುರಾಳಿ ಪಕ್ಷಗಳ ಮಾತು ಪಕ್ಕಕ್ಕಿರಲಿ ಸ್ವತಃ ಸಿದ್ದರಾಮಯ್ಯನವರು ಪ್ರತಿನಿಧಿಸುತ್ತಿರುವ ಕಾಂಗ್ರೆಸ್‌ನಲ್ಲಿಯೇ ಹಲವರ ಹೊಟ್ಟೆಯಲ್ಲಿ ಕಳ್ಳಿಹಾಲು ಸುರುವಿದಂತೆ ಮಾಡಿದೆ. ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಐದು ದಶಕಗಳ ನಂತರ ಐದು ವರ್ಷಗಳ ಅಧಿಕಾರ ಪೂರೈಸುತ್ತಿರುವ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಸಿದ್ದರಾಮಯ್ಯನವರದು. ದೇವರಾಜ ಅರಸು ಅವರು 1972 ರಿಂದ 77 ರವರೆಗೆ ಐದು ವರ್ಷ ಮುಖ್ಯಮಂತ್ರಿ ಆಗಿದ್ದು ಬಿಟ್ಟರೆ ಅವತ್ತಿಂದ ಇವತ್ತಿನವರೆಗೆ ಬೇರಾರಿಗೂ ಐದು ವರ್ಷ ಪೂರೈಸಲು ಸಾಧ್ಯವಾಗಿರಲಿಲ್ಲ. ಹಾಗೇ ನೋಡಿದರೆ ಮೈಸೂರು ಸಂಸ್ಥಾಾನ ಹಾಗೂ ಏಕೀಕೃತ ಕರ್ನಾಟಕ ರಾಜ್ಯದ ಆಳ್ವಿಕೆಯಲ್ಲಿ ಬಂದ 22 ಮುಖ್ಯಮಂತ್ರಿಿಗಳ ಪೈಕಿ ಈ ಮೊದಲು ಎಸ್. ನಿಜಲಿಂಗಪ್ಪ ಮತ್ತು ದೇವರಾಜ ಅರಸು ಅವರಿಗೆ ಮಾತ್ರ ಐದು ವರ್ಷ ಪೂರ್ಣಾವಧಿ ಪೂರೈಸಲು ಸಾಧ್ಯವಾಗಿತ್ತು. ನಿಜಲಿಂಗಪ್ಪನವರು 1962 ರಿಂದ 1968 ರವರೆಗೆ ಆಳ್ವಿಕೆ ನಡೆಸಿದ್ದರು. ಮೊದಲ ಮುಖ್ಯಮಂತ್ರಿ ಚೆಂಗಲ್ ರಾಯರೆಡ್ಡಿ ಅವರಿಂದ ಹಿಡಿದು ಕೆಂಗಲ್ ಹನುಮಂತಯ್ಯ, ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ, ದೇವೇಗೌಡ, ಎಸ್.ಎಂ. ಕೃಷ್ಣ, ಯಡಿಯೂರಪ್ಪನವರವರೆಗೂ ಎಲ್ಲರೂ ಅವಧಿಗೆ ಮೊದಲೇ ಸಿಎಂ ಸ್ಥಾನದಿಂದ ಕೆಳಗಿಳಿದವರೇ ಆಗಿದ್ದಾರೆ. ರಾಜಕೀಯ ಇತಿಹಾಸ ಹೀಗಿರುವಾಗ ಸಿದ್ದರಾಮಯ್ಯನವರು ಪೂರ್ಣಾಧಿಕಾರ ಹಿಡಿದದ್ದು ಕಡಿಮೆ ಸಾಧನೆಯೇನಲ್ಲ. ಅಂಥ ಸಿದ್ದರಾಮಯ್ಯ ಚುನಾವಣೆಪೂರ್ವ ಸಮೀಕ್ಷೆಗಳ ಪ್ರಕಾರ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಲಕ್ಷಣಗಳು ಕಂಡು ಬರುತ್ತಿರುವುದು ಸಹಜ ರಾಜಕೀಯ ಈರ್ಷೆಗೆ ಕಾರಣವಾಗಿದೆ. ಈ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಾ. ಜಿ. ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್ ಯಾವ ತಂತ್ರ ಹೆಣೆಯುತ್ತಾರೋ ಗೊತ್ತಿಲ್ಲ. ಆದರೆ ಸ್ಪಷ್ಟ ಬಹುಮತ ಬಂದರೆ ಹೈಕಮಾಂಡ್ ಆಯ್ಕೆ ಸಿದ್ದರಾಮಯ್ಯನವರೇ ಆಗಿರುತ್ತಾರೆ.
ಹಾಗೇ ನೋಡಿದರೆ ಸಿದ್ದರಾಮಯ್ಯನವರ ಸರಕಾರ ಅಭಿವೃದ್ಧಿ ಪಥದಲ್ಲಿ ಅಮೋಘವಾದುದನ್ನು ಸಾಧಿಸಿದೆ ಎಂದೇನೂ ಇಲ್ಲ. ಆದರೆ ರಾಜಕೀಯ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ತೀರಾ ಇತ್ತೀಚಿನ ವರ್ಷಗಳಲ್ಲಿ ಈ ತೆರನ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಾಗಿದ್ದುದು 1999 ರಿಂದ 2004ರವರೆಗೆ ಅಂದರೆ ನಾಲ್ಕೂವರೇ ವರ್ಷ ಅಧಿಕಾರ ನಡೆಸಿದ ಎಸ್.ಎಂ. ಕೃಷ್ಣ ಅವರ ಸರಕಾರಕ್ಕೆ ಮಾತ್ರ. ಅವರ ಸರಕಾರಕ್ಕೆ ಹಿಂದಿನ ಮತ್ತು ಮುಂದಿನ ಸರಕಾರಗಳು ರಾಜಕೀಯ ಅಸ್ಥಿರತೆ ಮತ್ತು ಭಿನ್ನಮತದಿಂದಾಗಿ ಒಬ್ಬರಿಗಿಂಥ ಹೆಚ್ಚು ಮುಖ್ಯಮಂತ್ರಿಗಳನ್ನು ಕಂಡಿದ್ದವು. ಆದರೆ ಕೃಷ್ಣ ಸರಕಾರದಲ್ಲಿ ಭಿನ್ನಮತಕ್ಕೆ ಆಸ್ಪದವಿರಲಿಲ್ಲ. ಅದೇ ಚಿತ್ರಣ ಈಗಿನ ಸಿದ್ದರಾಮಯ್ಯನವರ ಸರಕಾರದಲ್ಲೂ ಪ್ರತಿಬಿಂಬಿತವಾಗಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ, ಇಂದಿರಾ ಕ್ಯಾಂಟೀನ್ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳು ಒಂದೆಡೆಯಾದರೆ ಇನ್ನೊಂದೆಡೆ ಆಂತರಿಕ ರಾಜಕೀಯ ಅಪಸ್ವರಕ್ಕೆ ಬೆಲೆ ಸಿಗದಂತೆ ಆಳ್ವಿಕೆಯನ್ನು ಸಮರ್ಥವಾಗಿ ನಿಭಾಯಿಸಿದ್ದು ಸಿದ್ದರಾಮಯ್ಯನವರ ಚಾಣಾಕ್ಷ್ಯತನಕ್ಕೆ ಹಿಡಿದ ಕನ್ನಡಿ. ಆಂತರಿಕ ಕಚ್ಚಾಟ ನಿರತ ದುರ್ಬಲ ಪ್ರತಿಪಕ್ಷಗಳು ಹಾಗೂ ದೇಶದೆಲ್ಲೆಡೆ ನೆಲೆ ಕಳೆದುಕೊಂಡು ಆಂತರಿಕವಾಗಿಯೂ ಸೊರಗಿರುವ ಹೈಕಮಾಂಡ್ ಸಿದ್ದರಾಮಯ್ಯನವರಿಗೆ ಮತ್ತೊಂದು ವರದಾನವಾಗಿ ಪರಿಣಮಿಸಿದೆ.
ಹೌದು, ದೇಶದೆಲ್ಲೆಡೆ ಬೀಸಿದ ನರೇಂದ್ರ ಮೋದಿ ಅವರ ಅಲೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಚುನಾವಣೆ ರಣತಂತ್ರಗಾರಿಕೆ ಕರ್ನಾಟಕದಲ್ಲಿ ಮಾತ್ರ ಈವರೆಗೂ ಯಾವುದೇ ಮೋಡಿ ಮಾಡಲು ಸಾಧ್ಯವಾಗಿಲ್ಲ. ರಾಷ್ಟ್ರೀಯ ನಾಯಕರ ಶಕ್ತಿ-ಸಾಮರ್ಥ್ಯಕ್ಕಿಂಥ ರಾಜ್ಯ ನಾಯಕರ ದೌರ್ಬಲ್ಯವೇ ಮಿಗಿಲಾಗಿರುವುದರಿಂದ ಬಿಜೆಪಿ ಮುಂದಕ್ಕೊಡದೆ ಪದ್ಮಾಸನ ಸ್ಥಿತಿಯಲ್ಲಿ ಕುಳಿತಿದೆ. ರಾಜ್ಯ ನಾಯಕರ ನಡುವಣ ಪರಸ್ಪರ ಅಸಹಕಾರ ಮನೋಭಾವ, ಅಸಹಿಷ್ಣುತೆ, ದ್ವೇಷಾಸೂಯೆ ಮುಂದೆ ಸಿದ್ದರಾಮಯ್ಯ ಸರಕಾರ ವಿರುದ್ಧದ ಸಹಜ ಆಡಳಿತವಿರೋಧಿ ಅಲೆಯೂ ಕರಗಿ ನೀರಾಗಿ ಹೋಗಿದೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕುಂಭಕರ್ಣ ನಿದ್ದೆಯಿಂದ ಎಚ್ಚೆತ್ತವರಂತೆ ಕೋಮು ಸಂಘರ್ಷ ಹಾಗೂ ಹಿಂದೂವಾದಿಗಳ ಹತ್ಯೆ ವಿಚಾರ ಹಿಡಿದು ಹೊರಟಿರುವ ಬಿಜೆಪಿಗೆ ಕಾಲ ಸರಿದು ಹೋಗಿರುವುದೇ ಗೊತ್ತಾದಂತಿಲ್ಲ. ರಾಜ್ಯಾದ್ಯಂತ ನಡೆಸುತ್ತಿರುವ ಪರಿವರ್ತನಾ ಯಾತ್ರೆ ಸಕಾರಾತ್ಮಕ ಫಲ ನೀಡುವ ಬದಲು, ನಾಯಕರ ನಡುವಣ ಸಮನ್ವಯ ಕೊರತೆ ಅನಾವರಣಕ್ಕಷ್ಟೇ ಸೀಮಿತವಾದಂತಿದೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗದಿರುವುದರಿಂದ ಈ ಸ್ಥಿತಿ.  ಈ ಮಧ್ಯೆ, ದೇಶದ ಹಲವೆಡೆ ಅನೇಕ ರಾಜಕೀಯ ತಂತ್ರಗಳನ್ನು ಹೆಣೆದು ಯಶಸ್ವಿಯಾಗಿರುವ ಅಮಿತ್ ಶಾ ಅವರು ಅನೇಕ ಬಾರಿ ಕರ್ನಾಟಕಕ್ಕೆ ಬಂದು ಹೋದರೂ ಸ್ಥಳೀಯ ನಾಯಕರ ಅನಾದರ ಧೋರಣೆ ಮುಂದೆ ಅವರ ಪ್ರಭಾವ ಯಾವುದೇ ರೀತಿಯಲ್ಲೂ ಕೆಲಸ ಮಾಡಿಲ್ಲ. ಹೀಗಾಗಿಯೇ ಚುನಾವಣೆ ಪೂರ್ವ ಸಮೀಕ್ಷೆಗಳಲ್ಲಿ ಬಿಜೆಪಿಗೆ ನೂರರ ಗಡಿ ದಾಟಲು ಸಾಧ್ಯವಾಗಿಲ್ಲ. ಮುಂದೇನಾದರೂ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜಾದೂಗೀದೂ ಮಾಡಿ ಪರಿಸ್ಥಿತಿ ಬದಲಾಯಿಸಬಹುದು ಎಂದು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಕಾಯ್ದುಕೊಂಡು ಕೂತಿದ್ದಾರೆ. ಅವರ ನಿರೀಕ್ಷೆ ಎಷ್ಟರ ಮಟ್ಟಿಗೆ ನಿಜವಾಗುತ್ತದೋ ಗೊತ್ತಿಲ್ಲ. ಆದರೆ ಇವತ್ತಿನವರೆಗೂ ಸಿದ್ದರಾಮಯ್ಯ ಅವರು ನಿರಾಳ!
ಮತ್ತೊಂದು ಪ್ರತಿಪಕ್ಷ ಜಾತ್ಯತೀತ ಜನತಾ ದಳ ಸ್ಥಿತಿಯೇನೂ ಉತ್ತಮವಾಗಿಲ್ಲ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರಿಗೆ ಉತ್ತಮ ಆಳ್ವಿಕೆ ಕೊಟ್ಟ ಹೆಸರು ಇದೆಯಾದರೂ ಅವರ ಪಕ್ಷ ಏಕಾಂಗಿಯಾಗಿ ಅಧಿಕಾರ ಹಿಡಿಯುವ ಪರಿಸ್ಥಿತಿಯಂತೂ ಇಲ್ಲವೇ ಇಲ್ಲ. ಕಾಲಾಂತರದಲ್ಲಿ ನಾನಾ ರೂಪಾಂತರಗಳಿಂದ ರಾಷ್ಟ್ರೀಯ ಪಕ್ಷದಿಂದ ಪ್ರಾಾದೇಶಿಕ ಪಕ್ಷದ ಸ್ಥಿತಿ ತಲುಪಿರುವ ಜೆಡಿಎಸ್‌ನಲ್ಲೂ ಆಂತರಿಕ ಕಚ್ಚಾಾಟದ್ದೇ ಸಮಸ್ಯೆ. ಕುಮಾರಸ್ವಾಮಿ ಬಲಗೈ ಬಂಟರೆಂದೇ ಗುರುತಿಸಿಕೊಂಡಿದ್ದ ಏಳು ಮಂದಿ ಶಾಸಕರು ಪಕ್ಷದಿಂದ ಅಮಾನತುಗೊಂಡು ಕಾಂಗ್ರೆಸ್ ಬಾಗಿಲಲ್ಲಿ ನಿಂತಿದ್ದಾರೆ. ಹುಮ್ಮಸ್ಸು, ವಿಶ್ವಾಸ ಇದ್ದರೂ ದೇವೇಗೌಡರ ವಯಸ್ಸು ಮತ್ತು ಕುಮಾರಸ್ವಾಮಿಯವರ ಆರೋಗ್ಯ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡಲು ಸಹಕರಿಸುತ್ತಿಲ್ಲ. ಹೀಗಾಗಿ ಜೆಡಿಎಸ್‌ದ್ದೇನಿದ್ದರೂ ಅತಂತ್ರ ವಿಧಾನಸಭೆ ಏರ್ಪಟ್ಟರೆ ಕಿಂಗ್ ಮೇಕರ್ ಆಗುವ ಪಾತ್ರಕ್ಕಷ್ಟೇ ಸೀಮಿತ. ಒಂದೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಹತ್ತಿರದಲ್ಲಿರುವ ಸಮೀಕ್ಷೆಗಳು ನಿಜವಾಗಿ, ಪಕ್ಷೇತರರ ಬೆಂಬಲವೂ ಸಿಗದಿದ್ದರಷ್ಟೇ ಜೆಡಿಎಸ್‌ಗೆ ಮೈತ್ರಿಕೂಟ ಸರಕಾರದ ಭಾಗವಾಗುವ ಭಾಗ್ಯ. ಇನ್ನೈದು ತಿಂಗಳಲ್ಲಿ ಪರಿಸ್ಥಿತಿ ಎಷ್ಟೇ ಸುಧಾರಿಸಿಕೊಂಡರೂ ಜೆಡಿಎಸ್ ಮತ್ತೊಬ್ಬರಿಗೆ ಆಶ್ರಯವಾಗಬಹುದೇ ಹೊರತು ಏಕಾಂಗಿಯಾಗಿ ದರ್ಬಾರು ಮಾಡುವ ಅವಕಾಶ ದುರ್ಲಭ.
ಅದೇನೇ ಇರಲಿ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಹಗಲು ರಾತ್ರಿ ಎನ್ನದೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಪ್ರಚಾರಕ್ಕೆ ಇಳಿದಿವೆ. ಎಲ್ಲ ಪಕ್ಷಗಳೂ ಈಗಾಗಲೇ ಅಧಿಕಾರದ ರುಚಿ ಕಂಡಿವೆ. ತಮ್ಮ, ತಮ್ಮ ಅವಧಿಯಲ್ಲಾದ ಸಾಧನೆ, ಮುಂದಿನ ಭರವಸೆ ಜತೆಜತೆಗೆ ಎದುರಾಳಿಗಳ ವಿರುದ್ಧದ ಅಪವಾದ, ಅವರ ದೌರ್ಬಲ್ಯ ಮುಂದಿಟ್ಟುಕೊಂಡು ಜನರ ಮುಂದೆ ಹೋಗುತ್ತಿವೆ. ಮತಗಳಿಗೆ ಗಾಳ ಹಾಕುತ್ತಿವೆ. ಜನ ಕೂಡ ಈ ಗಾಳದ ಕಿಮ್ಮತ್ತು ಎಷ್ಟು ಎಂದು ಅವಲೋಕಿಸುತ್ತಿದ್ದಾರೆ.
ಪ್ರಚಾರ ಎಂಬುದು ಜನರ ಜನರ ಮತ ಸೆಳೆವ ಒಂದು ಸಾಧನವಾದರೆ, ಒಳ ರಾಜಕೀಯ ಎಂಬುದು ಮತ್ತೊಂದು ಅಸ್ತ್ರ. ಪಕ್ಷದ ಒಳಗಿನ ಮತ್ತು ಎದುರಾಳಿಗಳನ್ನು ಸದೆಬಡಿಯಲು ವಿರೋಧಿಗಳ ಜತೆ ಒಳಒಪ್ಪಂದ, ಆಂತರಿಕ ಶತ್ರುಗಳನ್ನು ಮಣಿಸಲು ಪಕ್ಷದೊಳಗೇ ಮತ್ತೊಬ್ಬರನ್ನು ಎತ್ತಿ ಕಟ್ಟುವುದು, ಬೇರೆ ಪಕ್ಷದ ನಾಯಕರ ವಿರೋಧಿಗಳನ್ನು ತಮ್ಮ ಪಕ್ಷಕ್ಕೆ ಸೆಳೆಯುವುದು ಈ ಒಳರಾಜಕೀಯದ ತಂತ್ರ-ಕುತಂತ್ರಗಳು. ಅದು ಕೂಡ ರಾಜ್ಯದೆಲ್ಲೆಡೆ ಪಕ್ಷಬೇಧವಿಲ್ಲದೆ ಎಗ್ಗಿಲ್ಲದೆ ಸಾಗಿದೆ. ಕೆಲವು ಕಡೆಯಂತೂ ಯಾರು ಯಾವ ಪಕ್ಷದಲ್ಲಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಅವರ ಅಸ್ತಿತ್ವ ಎಲ್ಲಿ ಎಂಬುದನ್ನು ತಿಳಿಯಲು ಚುನಾವಣೆ ಟಿಕೆಟ್ ಹಂಚಿಕೆ ಸಂದರ್ಭದವರೆಗೂ ಕಾಯಬೇಕಾದ ಪರಿಸ್ಥಿತಿ.
ಈ ಎಲ್ಲ ಅಪಸವ್ಯಗಳ ನಡುವೆ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ನಡೆಸಿರುವ ಚುನಾವಣೆ ಪೂರ್ವ ಸಮೀಕ್ಷೆಗಳು ನಾನಾ ರಾಜಕೀಯ ಪಕ್ಷಗಳ ಮೌಲ್ಯಮಾಪನ, ಅವುಗಳ ತಾಕತ್ತು, ದೌರ್ಬಲ್ಯ, ಆ ಪಕ್ಷಗಳ ಬಗ್ಗೆ ಜನರ ಅಭಿಮತ, ಅವರು ಗಮನಿಸಿರುವ ಸಕಾರಾತ್ಮಕ, ನಕಾರಾತ್ಮಕ ಅಂಶಗಳು, ಗಳಿಸಬಹುದಾದ ಸ್ಥಾನಗಳು, ಹಂಚಿಕೆ ಆಗಬಹುದಾದ ಶೇಕಡಾವಾರು ಮತಗಳ ಬಗ್ಗೆ ಬೆಳಕು ಚೆಲ್ಲಿವೆ. ಸಮೀಕ್ಷೆಗಳಿಗೆ ಜನರ ಮನಸ್ಸನ್ನು ಬಿಂಬಿಸಲು ಸಾಧ್ಯವೇ ಹೊರತು ಅವರ ಅಭಿಪ್ರಾಯವನ್ನು ಬದಲಿಸಲು ಸಾಧ್ಯವಿಲ್ಲ. ಆದರೆ ಜನರ ಮನಸ್ಸು ಅರಿತು ಅದಕ್ಕನುಗುಣವಾಗಿ ನಡೆದುಕೊಳ್ಳಲು ರಾಜಕೀಯ ಪಕ್ಷಗಳಿಗೆ ಅವಕಾಶ ಕಲ್ಪಿಸಲಿದೆ. ಹಾಗೆಂದು ರಾಜಕೀಯ ಪಕ್ಷಗಳು ಜನರ ಮೇಲೆ ಸವಾರಿ ಮಾಡುವ ಕಾಲ ಮುಗಿದು ಎಷ್ಟೋ ದಿನಗಳಾಗಿವೆ. ಮತದಾರರು ರಾಜಕಾರಣಿಗಳಿಗಿಂತಲೂ ಬುದ್ಧಿವಂತರಿದ್ದಾರೆ. ತಮ್ಮದೇ ಆದ ಶೈಲಿಯಲ್ಲಿ ವಿಶ್ಲೇಷಿಸುವಷ್ಟು, ವ್ಯಾಖ್ಯಾನಿಸುವಷ್ಟು ಸಮರ್ಥರೂ ಇದ್ದಾರೆ. ಹೀಗಾಗಿ ಸಮೀಕ್ಷೆಗಳ ಪರಿಮಿತಿಯೂ ಜನರ ಮನೋಧರ್ಮಕ್ಕೆ ಅನುಗುಣವಾಗಿ ಬದಲಾಗುತ್ತಾ ಹೋಗಬೇಕಾಗುತ್ತದೆ. ಏಕೆಂದರೆ ಚುನಾವಣೆಗೆ ಇನ್ನೂ ಐದು ತಿಂಗಳು ಬಾಕಿ ಇದೆ. ಈ ಅವಧಿಯಲ್ಲಿ ಏನೂ ಬೇಕಾದರೂ ಆಗಬಹುದು!
ಲಗೋರಿ: ಬೀಗಿದವ ಬಾಗಬಹುದು, ಬಾಗಿದವ ಬೀಗಬಹುದು!
(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply