ಸಿದ್ರಾಮಯ್ಯ ಅದ್ಯಾವ ಸೀಮೆ ಹಿಂದೂ; ಯೋಗಿ ಆದಿತ್ಯನಾಥ್ ವ್ಯಂಗ್ಯ!

ಡಿಜಿಟಲ್ ಕನ್ನಡ ಟೀಮ್:
‘ಗುಜರಾತ್ ಚುನಾವಣೆ ವೇಳೆ ರಾಹುಲ್ ಗಾಂಧಿ ಅವರಿಗೆ ದೇವಸ್ಥಾನಗಳ ನೆನಪಾಗಿತ್ತು. ಅದೇ ರೀತಿ ಈಗ ಕರ್ನಾಟಕ ಸಿಎಂ ಸಿದ್ರಾಮಯ್ಯ ಅವರು ತಾವೊಬ್ಬ ಹಿಂದೂ ಎಂದು ಹೇಳುತ್ತಿದ್ದಾರೆ. ಅವರಿಗೆ ನಿಮ್ಮೆಲ್ಲರ ಶಕ್ತಿ ನೋಡಿ ಹಿಂದುತ್ವದ ನೆನಪಾಗಿದೆ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲೇವಡಿ ಮಾಡಿದ್ದಾರೆ.
ಬೆಂಗಳೂರಿನ ವಿಜಯನಗರದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಿದ್ದ ಅವರು, ಕಾಂಗ್ರೆಸ್ ಮುಖಂಡರನ್ನು ಹುರಿದು ಮುಕ್ಕಿದರು. ಆ ಪಕ್ಷದ ಒಂದೊಂದೇ ನಡೆಯನ್ನು ಮನಬಂದಂತೆ ಛೇಡಿಸಿದರು. ಆ ಪರಿ ಹೀಗಿತ್ತು:
‘ಹಿಂದೂಗಳ ಶಕ್ತಿ ನೋಡಿಯೇ ರಾಹುಲ್ ಗಾಂಧಿ ಗುಜರಾತ್ ಚುನಾವಣೆ ವೇಳೆ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಈಗ ಸಿದ್ದರಾಮಯ್ಯ ಅವರ ದಾರಿಯಲ್ಲಿ ನಡೆಯುತ್ತಿದ್ದಾರೆ. ತಾವೂ ಹಿಂದೂ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಹಿಂದುತ್ವ ಯಾವತ್ತಿಗೂ ಗೋಮಾಂಸ ತಿನ್ನುವವರ ಪರ ವಕಾಲತ್ತು ವಹಿಸುವುದಿಲ್ಲ. ಗೋವನ್ನು ಪೂಜನೀಯ ಭಾವನೆಯಿಂದ ಕಾಣುತ್ತದೆ. ಗೋಮಾಂಸ ಭಕ್ಷಣೆ ಬೆಂಬಲಿಸುವ ಸಿದ್ದರಾಮಯ್ಯ ಅದ್ಯಾವ ಸೀಮೆ ಹಿಂದೂವಾಗುತ್ತಾರೆ. ಇದೆಲ್ಲ ಬರೀ ಚುನಾವಣೆ ಸಂದರ್ಭದ ಬೂಟಾಟಿಕೆ.’
‘ಸೀತಾ ದೇವಿಯ ಅಪಹರಣ ಆದಾಗ ಶ್ರೀರಾಮಚಂದ್ರ ಕಾಡಿನಲ್ಲಿ ಅಲೆಯುತ್ತಿದ್ದಾಗ, ಕರುನಾಡು ಮೂಲದ ಹನುಮಂತ ಅವರ ನೆರವಿಗೆ ಬರುತ್ತಾರೆ. ಕರ್ನಾಟಕ ಭಜರಂಗ ಬಲಿಯ ಜನ್ಮಭೂಮಿ. ಅತ್ಯಂತ ವಿಷಮ ಸ್ಥಿತಿಯಲ್ಲಿ ಭಗವಂತ ಶ್ರೀರಾಮನಿಗೆ ಕರ್ನಾಟಕದ ಹನುಮಂತ ದಾರಿ ತೋರಿಸಿದ. ಅದೇ ರೀತಿ ಕರ್ನಾಟಕ ಸಂಕಷ್ಟದ ಪರಿಸ್ಥಿತಿಯಲ್ಲಿ ದೇಶಕ್ಕೆ ಮಾರ್ಗ ತೋರಿಸಿದ ಭೂಮಿಯಾಗಿದೆ. ಅಂಥ ನಾಡು ಇದೀಗ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲು ದಾರಿ ತೋರಿಸಬೇಕು.’
ಸಿದ್ದರಾಮಯ್ಯ ಕರ್ನಾಟಕವನ್ನು ವಿಕಾಸದ ಪಥದಲ್ಲಿ ಕೊಂಡೊಯ್ಯುವ ಬದಲು ಹಿಂದಕ್ಕೆ ತಳ್ಳಿದ್ದಾರೆ. ಕರ್ನಾಟಕ ಸರಕಾರ ಹೈಕಮಾಂಡ್‌ಗೆ  ಒಂದು ಎಟಿಎಂ ಇದ್ದ ಹಾಗೆ. ಸಂಪನ್ಮೂಲ ಸರಬರಾಜು ಬಿಟ್ಟು ಹೈಕಮಾಂಡ್ ಸಿದ್ದರಾಮಯ್ಯ ಸರ್ಕಾರದಿಂದ ಬೇರೇನನ್ನೂ ಬಯಸುವುದಿಲ್ಲ. ರಾಜ್ಯ ಸರ್ಕಾರ ಅದಕ್ಕೊಂದು ಬಳಕೆ ವಸ್ತು. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ವಿಕಾಸ ಯೋಜನೆಗಳು ರಾಜ್ಯದ ರೈತರು, ಯುವ ಜನಾಂಗಕ್ಕೆ ತಲುಪಬೇಕಾಗಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ. ಕೇಂದ್ರದ ಯೋಜನೆಗಳು ರಾಜ್ಯಕ್ಕೆ ಸಿಗಬೇಕಾದರೆ ಇಲ್ಲೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು.’
‘ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸರಕಾರವಿದ್ದಾಗ, ಬೆಂಗಳೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ ರೈಲು ಸೇರಿದಂತೆ ಹಲವು ಯೋಜನೆಗಳನ್ನು ನೀಡಿದರು. ಮೋದಿ ಅವರು ಪ್ರಧಾನಿ ಆದ ಬಳಿಕ ಬೆಂಗಳೂರಿಗೆ ಸ್ಮಾರ್ಟ್ ಸಿಟಿ ಯೋಜನೆ ನೀಡಿದ್ದು, ಇದರ ಅನುಷ್ಠಾನಕ್ಕೆ ಸಿದ್ದರಾಮಯ್ಯ ಸರ್ಕಾರ ಒಲವು ತೋರಿಸುತ್ತಿಲ್ಲ.’

Leave a Reply