ಮದರಸಾಗಳ ನಿಷೇಧಕ್ಕೆ ಶಿಯಾ ಮುಸ್ಲಿಮರ ಮನವಿ; ಮೋದಿ ಬಗ್ಗೆ ಹೆಚ್ಚುತ್ತಿದೆ ಅಲ್ಪಸಂಖ್ಯಾತರ ವಿಶ್ವಾಸ!

ಡಿಜಿಟಲ್ ಕನ್ನಡ ಟೀಮ್:

‘ದೇಶದಲ್ಲಿರುವ ಎಲ್ಲಾ ಮದ್ರಾಸಗಳನ್ನು ನಿಷೇಧಿಸಿ ಅಥವಾ ಶಾಲೆಗಳನ್ನಾಗಿ ಪರಿವರ್ತಿಸಿ…’

ಹೀಗೊಂದು ಬೇಡಿಕೆ ಮುಂದಿಟ್ಟು ಶಿಯಾ ವಕ್ಫ್ ಬೋರ್ಡ್ ಮಂಡಳಿಯ ಅಧ್ಯಕ್ಷ ವಸೀಮ್ ರಿಜ್ವಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಈಗಾಗಲೇ ಮೋದಿ ಸರ್ಕಾರ ಮಂಡಿಸಿರುವ ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕು ರಕ್ಷಣೆ ಹಿನ್ನೆಲೆಯ ತ್ರಿವಳಿ ತಲಾಕ್ ಪದ್ಧತಿ ನಿಷೇಧ ಕುರಿತ ವಿಧೇಯಕ ಲೋಕಸಭೆಯಲ್ಲಿ ಅಂಗೀಕೃತವಾಗಿದೆ. ರಾಜ್ಯಸಭೆಯಲ್ಲಿ ಇನ್ನಷ್ಟೇ ಅನುಮೋದನೆ ಪಡೆಯಬೇಕಿದೆ. ಈ ಹಂತದಲ್ಲಿ ಶಿಯಾ ವಕ್ಫ್ ಮಂಡಳಿ ಮದರಸಾಗಳನ್ನು ಮುಚ್ಚಿಸಿ ಎಂದು ಕೇಂದ್ರಕ್ಕೆ ಪತ್ರ ಬರೆದಿರುವುದು ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ.

ಭಾರತಕ್ಕೆ ಸ್ವಾತಂತ್ರ ಬಂದ ನಂತರ ಮುಸಲ್ಮಾನರನ್ನು ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳಲಾಗಿತ್ತು. ಅನೇಕ ಸರ್ಕಾರಗಳು ಬಂದು ಹೋದರೂ ಮುಸ್ಲಿಂರ ಹಕ್ಕು, ಹಿತರಕ್ಷಣೆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಅವರ ವೈಯಕ್ತಿಕ ಕಾನೂನಿನಲ್ಲಿದ್ದ ಲೋಪಗಳನ್ನು ಸರಿಪಡಿಸುವ ಸಾಹಸಕ್ಕೆ ಕೈ ಹಾಕಿರಲಿಲ್ಲ. ಆದರೆ ಈ ಬಗ್ಗೆ ಒಂದಷ್ಟು ಚಿಂತನೆ ನಡೆದಿರುವುದು ಮೋದಿ ಸರ್ಕಾರದಲ್ಲಿ. ಹಾಗೆಂದು ಮೋದಿ ಸರ್ಕಾರ ನೇರವಾಗಿ ಮುಸ್ಲಿಂರ ವೈಯಕ್ತಿಕ ಆಚಾರ-ವಿಚಾರಗಳಲ್ಲಿ ಮೂಗು ತೂರಿಸಿರಲಿಲ್ಲ. ಯಾವಾಗ ತ್ರಿವಳಿ ತಲಾಕ್ ಪದ್ಧತಿ ಪ್ರಶ್ನಿಸಿ ಮುಸ್ಲಿಂ ಮಹಿಳೆಯರು ಕೋರ್ಟ್ ಮೊರೆ ಹೋದರು, ಸಾರ್ವಜನಿಕವಾಗಿ ಸಿಡಿದೆದ್ದರೋ ಆಗ ಸರಕಾರ ನ್ಯಾಯಾಲಯದ ಸೂಚನೆಯಂತೆ ಅವರ ರಕ್ಷಣೆಗೆ ಧಾವಿಸಿತು. ಈಗ ಅದೇ ರೀತಿ ಮದರಸಾಗಳ ವಿಷಯದಲ್ಲಿ ವಸೀಮ್ ಪ್ರಧಾನಿಗೆ ಬರೆದಿರುವ ಪತ್ರ ಮತ್ತೊಂದು ಹೋರಾಟಕ್ಕೆ ನಾಂದಿಯಾಡಿದೆ.

ವಸೀಮ್ ಪತ್ರದಲ್ಲಿ, “ದೇಶದ ಪ್ರತಿ ನಗರ, ಹಳ್ಳಿಗಳಲ್ಲಿ ಅಣಬೆಗಳಂತೆ ತಲೆ ಎತ್ತುತ್ತಿರುವ ಮದರಸಾಗಳನ್ನು ಮುಚ್ಚಬೇಕು ಇಲ್ಲವೇ ಐಸಿಎಸ್ಸಿ ಅಥವಾ ಸಿಬಿಎಸ್ಸಿ ಶಾಲೆಗಳನ್ನಾಗಿ ಪರಿವರ್ತಿಸಬೇಕು. ಆ ಶಾಲೆಗಳಲ್ಲಿ ಇಸ್ಲಾಂ ಧಾರ್ಮಿಕ ಶಿಕ್ಷಣ ಆಯ್ಕೆ ವಿಷಯವಾಗಬೇಕು. ಸದ್ಯ ಮದರಸಾಗಳಲ್ಲಿ ನೀಡುತ್ತಿರುವ ಶಿಕ್ಷಣ ಪ್ರಸ್ತುತ ಸಮಾಜಕ್ಕೆ ಸಂಬಂಧಿಸುತ್ತಿಲ್ಲ. ಪರಿಣಾಮ ಇಲ್ಲಿ ಓದಿದ ಅನೇಕ ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ. ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣವನ್ನು ತಪ್ಪಾಗಿ ಬೋಧಿಸಲಾಗುತ್ತಿದೆ. ಕೆಲವು ಮದರಸಾಗಳಿಂದಾಗಿ ಯುವಕರು ಭಯೋತ್ಪಾದನೆಯತ್ತ ಆಕರ್ಷಿತರಾಗುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಹಾದಿ ತುಳಿಯುತ್ತಿರುವ ಮುಸ್ಲಿಂ ಯುವಕರು ಇಡೀ ಮುಸ್ಲಿಂ ಸಮುದಾಯವನ್ನೇ ಅನುಮಾನದ ದೃಷ್ಟಿಯಲ್ಲಿ ನೋಡುವಂಥ ಸ್ಥಿತಿ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಹೀಗಾಗಿ ಮದರಸಾಗಳ ಬಗ್ಗೆ ಬೇರೆಯವರಿರಲಿ ಸ್ವತಃ ಮುಸ್ಲಿಂರೇ ಅಸಮಾಧಾನ ಹೊಂದಿದ್ದರು. ಅದೀಗ ವಸೀಮ್ ಅವರ ಪತ್ರದ ರೂಪದಲ್ಲಿ ಹೊರ ಹೊಮ್ಮಿದೆ. ಈ ಪತ್ರಕ್ಕೆ ಕೆಲವು ಕಟ್ಟರ್ ಮುಸ್ಲಿಂ ಸಂಘಟನೆಗಳು ವಿರೋಧ ಎತ್ತಿದ್ದರೂ ಇನ್ನೂ ಕೆಲವರು ಮೌನವಾಗಿಯೇ ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ. ತ್ರಿವಳಿ ತಲಾಕ್ ವಿಚಾರದಲ್ಲಿ ನಡೆದದ್ದೂ ಇದೇ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇಷ್ಟು ದಿನ ತಮ್ಮನ್ನು ಮತಬ್ಯಾಂಕ್ ಗಳಾಗಿ ಬಳಸಿಕೊಂಡ ನಾನಾ ಸರಕಾರಗಳ ಕಾಲದಲ್ಲಿ ತುಟಿ ಬಿಚ್ಚದವರು ಈಗ ಧೈರ್ಯವಾಗಿ ಇಂಥ ಹೋರಾಟಕ್ಕೆ ಇಳಿದಿರುವುದು. ತಮ್ಮ ಹಕ್ಕುಗಳ ರಕ್ಷಣೆ, ನೆರವಿಗೆ ಕೇಂದ್ರದ ಬಿಜೆಪಿ ಸರಕಾರದ ಮೊರೆ ಹೋಗುತ್ತಿರುವುದು. ಇದು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಇರುವ ವಿಶ್ವಾಸದ ಧ್ಯೋತಕವಾಗಿದೆ.

Leave a Reply