ಲೇ ಚಮಚಾಗಿರಿ ಅಧ್ಯಕ್ಷ, ನಿಂತ್ಕೊಳೋ ಇಲ್ಲಿ; ಪರಮೇಶ್ವರಗೆ ವೈಜನಾಥ ತರಾಟೆ

ಡಿಜಿಟಲ್ ಕನ್ನಡ ಟೀಮ್:

‘ಲೇ ಅಧ್ಯಕ್ಷ… ನಿಂತ್ಕೊಳೋ ಇಲ್ಲಿ, ನಮ್ಮ ಭಾಗದ ಸಮಸ್ಯೆ ಸ್ವಲ್ಪ ಕೇಳೋ ಇಲ್ಲಿ. ಬರೀ ಚಮಚಾಗಿರಿ ಮಾಡ್ಕೊಂಡೇ ಅಧ್ಯಕ್ಷ ಆಗಿದ್ದೀಯ, ನೀ ಉದ್ಧಾರ ಆಗಲ್ಲ..’

ಮಾಜಿ ಸಚಿವ ವೈಜನಾಥ ಪಾಟೀಲರು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರನ್ನು ಕಾಂಗ್ರೆಸ್ ಕಚೇರಿ ಎದಿರು ಮಂಗಳವಾರ ತರಾಟೆಗೆ ತೆಗೆದುಕೊಂಡ ಪರಿ ಇದು. ಪಾಟೀಲರ ಮಾತಿನ ಭರಾಟೆಗೆ ಅಲ್ಲಿದ್ದವರೆಲ್ಲ ದಂಗು ಬಡಿದು ಹೋದರು.
ಆಗಿದ್ದೇನಪ್ಪಾ ಅಂತಂದ್ರೇ.., ಹೈದರಾಬಾದ್-ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷರೂ ಆಗಿರುವ ಪಾಟೀಲರು ಇವತ್ತು ಮಧ್ಯಾಹ್ನ ಪರಮೇಶ್ವರ ಅವರನ್ನು ಭೇಟಿ ಮಾಡಲು ಬಂದರು. ಆದರೆ ಅಧ್ಯಕ್ಷರು ಇವರನ್ನು ಕಂಡೂ ಕಾಣದವರಂತೆ ಮುಂದೆ ಹೋದರು. ಇದರಿಂದ ಪಿತ್ತ ನೆತ್ತಿಗೇರಿದಂತಾದ ಪಾಟೀಲರು, ಲೇ ಅಧ್ಯಕ್ಷ ನಿಂತ್ಕೋಳೋ ಇಲ್ಲಿ, ಹೈದರಾಬಾದ್-ಕರ್ನಾಟಕ ಭಾಗದ ಸಮಸ್ಯೆ ಹೇಳೋಕೆ ಬಂದ್ರೆ ಐದು ಮಿನಿಟ್ ಕೇಳೋಕೆ ನಿನಗೂ ಪುರುಷೊತ್ತಿಲ್ಲ. ಆ ಸಿದ್ರಾಮಯ್ಯಂಗೂ ಸಮಯ ಇಲ್ಲ. ನೀನು, ಅವನೂ ಇಬ್ರೂ ಚಮಚಾಗಿರಿ ಮಾಡ್ಕೊಂಡೇ ಮೇಲಕ್ಕೆ ಬಂದ್ರಿ ಅಂತ ಗುಡುಗಿದರು. ಆದ್ರೆ ಪರಮೇಶ್ವರ ತಿರುಗಿ ನೋಡದೆ ಮುಂದಕ್ಕೆ ನಡೆದರು.
ಇದರಿಂದ ಇನ್ನಷ್ಟು ಕೆರಳಿದ ಪಾಟೀಲರು ಮಾಧ್ಯಮದವರ ಬಳಿ ನೋವು ತೋಡಿಕೊಂಡು ಪರಮೇಶ್ವರ ಅವರನ್ನು ಇನ್ನಷ್ಟು ಜರಿದರು. ‘ಆ ಧರ್ಮಸಿಂಗ್ ಮಕ್ಕಳಿಗೆ ಟಿಕೆಟ್ ಕೊಡೋಕೆ ಇವರಿಗೆ (ಪರಮೇಶ್ವರ, ಸಿದ್ರಾಮಯ್ಯ) ಆಗುತ್ತದೆ. ಆದರೆ ನನ್ನ ಮಗನಿಗೆ ಎಂಎಲ್ಸಿ ಚುನಾವಣೆ ಟಿಕೆಟ್ ಕೇಳಿದ್ರೆ ಕೊಡೋಕೆ ಆಗಲ್ಲ. ನಾನೇನೂ ಪಕ್ಷಕ್ಕೆ ದುಡಿದಿಲ್ವಾ. ಸಿಎಂ ಮತ್ತು ಪಕ್ಷದ ಅಧ್ಯಕ್ಷ ಸ್ಥಾನ ಎರಡೂ ಹಳೇ ಮೈಸೂರು ಭಾಗದ ಪಾಲಾಗಿರೋದ್ರಿಂದ ನಮ್ಮ ಭಾಗದ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ. ಇನ್ನು ಮುಂದಾದರೂ ಎರಡರಲ್ಲಿ ಒಂದು ಹುದ್ದೇನಾ ಹೈದರಾಬಾದ್-ಕರ್ನಾಟಕ ಭಾಗಕ್ಕೆ ಕೊಡಿ ಅಂತ ಹೈಕಮಾಂಡ್ ಒತ್ತಾಯಿಸುತ್ತೇನೆ’ ಅಂದಾಗ ಪಾಟೀಲರ ಸಿಟ್ಟಿನ ಮೂಲ ಅವರ ಮಗ ವಿಕ್ರಂ ಪಾಟೀಲ್ ಗೆ ವಿಧಾನ ಪರಿಷತ್ ಪದವೀಧರರ ಕ್ಷೇತ್ರದ ಚುನಾವಣೆ ಟಿಕೆಟ್ ಕೊಡದೇ ಹೋದದ್ದು ಎಂಬುದು ಗೊತ್ತಾಯ್ತು. ಹೈದರಾಬಾದ್-ಕರ್ನಾಟಕದ ಸಮಸ್ಯೆ ಅದರೊಟ್ಟಿಗಿನ ಉಪ್ಪಿನ ಕಾಯಿಯಂತಿತ್ತು!

Leave a Reply