‘ಕಾಂಗ್ರೆಸ್ ಜತೆಗಿನ ಮೈತ್ರಿ ಕೇವಲ ಸಮಯ ವ್ಯರ್ಥ’ ಇದು ಅಖಿಲೇಶರ ಉಪದೇಶ!

ಡಿಜಿಟಲ್ ಕನ್ನಡ ಟೀಮ್:

‘ಕಾಂಗ್ರೆಸ್ ಜತೆಗಿನ ಮೈತ್ರಿ ಬಗ್ಗೆ ಮಾತನಾಡುವುದರಿಂದ ಕೇವಲ ಸಮಯ ವ್ಯರ್ಥವಾಗುತ್ತದೆ…’ ಇಂತಹ ಹೇಳಿಕೆ ಕೊಟ್ಟಿರೋದು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್.

‘ಮುಂಬರುವ 2019ರ ಲೋಕಸಭಾ ಚುನಾವಣೆಗೆ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹೆಚ್ಚು ಗಮನಹರಿಸುತ್ತೇವೆಯೇ ಹೊರತು. ಕಾಂಗ್ರೆಸ್ ಜತೆಗಿನ ಮೈತ್ರಿ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡುವುದಿಲ್ಲ’ ಎಂದು ಅಖಿಲೇಶ್ ಕಡ್ಡಿ ಮುರಿದಂತೆ ಹೇಳಿದ್ದಾರೆ. 2017ರ ಉತ್ತರ ಪ್ರದೇಶ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸಹವಾಸ ಮಾಡಿ ಮುಗ್ಗರಿಸಿದ್ದು ಅಖಿಲೇಶ್ ಇಂತಹ ಗಟ್ಟಿ ನಿರ್ಧಾರಕ್ಕೆ ಬರಲು ಕಾರಣ.

ಕಳೆದ ವರ್ಷ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಮೋದಿ ಅಲೆಯನ್ನು ತಡೆಯಲು ರಾಹುಲ್ ಗಾಂಧಿ ಜತೆಗೆ ಕೈ ಜೋಡಿಸಿದ್ದ ಅಖಿಲೇಶ್ ಯಾದವ್ ತೀವ್ರ ಮುಖಭಂಗ ಅನುಭವಿಸಿದ್ದರು. 403 ವಿಧಾನಸಭಾ ಕ್ಷೇತ್ರಗಳ ಪೈಕಿ ಸಮಾಜವಾದಿ ಪಕ್ಷ 47 ಕ್ಷೇತ್ರಗಳನ್ನು ಗೆದ್ದರೆ, ಕಾಂಗ್ರೆಸ್ ಗೆದ್ದಿದ್ದು ಬರೀ 7. ಬಿಜೆಪಿ ಗೆದ್ದಿದ್ದು 325. ಹೀಗೆ ಹೀನಾಯ ಸೋಲುಂಡ ಬಳಿಕ ಬುದ್ಧಿ ಕಲಿತಿರುವ ಅಖಿಲೇಶ್ ಯಾದವ್ ಇನ್ನು ಮುಂದೆ ಮೈತ್ರಿ ಬಗ್ಗೆ ವಿಚಾರ ಮಾಡದೇ ಪಕ್ಷವನ್ನು ಮತ್ತೆ ಕಟ್ಟುವ ಬಗ್ಗೆ ಮಾತನಾಡುತ್ತಿದ್ದಾರೆ. ಇನ್ನೊಂದೂವರೆ ವರ್ಷದಲ್ಲಿ ಎದುರಾಗಲಿರುವ ಲೋಕಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಯೋಗಿ ಆದಿತ್ಯನಾಥ್ ಅವರ ಆಡಳಿತವನ್ನು ಎಷ್ಟರ ಮಟ್ಟಿಗೆ ಧಿಕ್ಕರಿಸಿ ಮೇಲಕ್ಕೇರುತ್ತದೆ ಎಂಬುದು ಗೊತ್ತಿಲ್ಲ. ಆದರೆ ಪಕ್ಷವನ್ನು ಸಂಘಟಿಸದೇ ಕೇವಲ ಮೈತ್ರಿ ಬಗ್ಗೆ ಯೋಚಿಸಿದರೆ ಯಾವುದೇ ಲಾಭವಿಲ್ಲ ಎಂಬುದನ್ನು ಅಖಿಲೇಶ್ ಚೆನ್ನಾಗಿಯೇ ಅರಿತಿರುವುದು ಸ್ಪಷ್ಟವಾಗಿದೆ.

ಹಾಗೆ ನೋಡಿದರೆ ಇಂತಹ ಜ್ಞಾನೋದಯವಾಗಬೇಕಾಗಿದ್ದು ಕಾಂಗ್ರೆಸ್ ನಾಯಕರಿಗೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಜತೆಗಿನ ಮೈತ್ರಿ, ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ಬಳಸಿ ಅಧಿಕಾರಕ್ಕೆ ಬರುವ ಅವಕಾಶವಿದ್ದರೂ ಜಿಗ್ನೇಶ್ ಮೆವಾನಿ, ಹಾರ್ದಿಕ್ ಪಟೇಲ್, ಅಲ್ಪೇಶರ ಜತೆಗೆ ಮೈತ್ರಿ ಮಾಡಿಕೊಂಡು ಜನರ ನಂಬಿಕೆಯನ್ನು ತಾನಾಗಿಯೇ ಕಳೆದುಕೊಂಡಿತ್ತು. ಕಳೆದ 25 ವರ್ಷಗಳಲ್ಲಿ ಗುಜರಾತಿನಲ್ಲಿ ಮೋದಿಗೆ ಪರ್ಯಾಯವಾಗಿ ನಾಯಕನ್ನನ್ನು ಬೆಳೆಸಲು ಸಾಧ್ಯವಾಗಿಲ್ಲ. ಅದರ ಪರಿಣಾಮವಾಗಿಯೇ ಕಾಂಗ್ರೆಸ್ ಬಹುತೇಕ ಎಲ್ಲಾ ಪ್ರಮುಖ ರಾಜ್ಯಗಳ ಚುನಾವಣೆಯಲ್ಲಿ ಬೇರೆಯವರ ಸಹಾಯ ಹಸ್ತ ಚಾಚುತ್ತಿದ್ದು, ಸ್ಥಳೀಯವಾಗಿ ನಾಯಕರನ್ನು ಬೆಳೆಸುವಲ್ಲಿ ಎಡವಿದೆ. ಹೀಗಾಗಿಯೇ ಅಖಿಲೇಶ್ ಗೆ ಬಂದಿರುವ ಬುದ್ಧಿ ಕಾಂಗ್ರೆಸ್ ನಾಯಕರಿಗೆ ಬರಬೇಕಿತ್ತು.

ಒಟ್ಟಿನಲ್ಲಿ ಅಖಿಲೇಶ್ ಯಾದವ್ ಅವರ ಈ ಮನವರಿಕೆ ತಕ್ಷಣಕ್ಕೆಯಲ್ಲದಿದ್ದರೂ ದೂರದೃಷ್ಟಿಯಲ್ಲಿ ಪಕ್ಷಕ್ಕೆ ಸಕಾರಾತ್ಮಕ ಆಲೋಚನೆ ಎಂದೇ ಪರಿಗಣಿಸಬಹುದು. ಅಲ್ಲದೆ ಅಖಿಲೇಶ್ ಅವರ ಈ ಮಾತು ಇತರೆ ರಾಜ್ಯಗಳಲ್ಲಿ ಕಾಂಗ್ರೆಸ್ ಜತೆ ಮೈತ್ರಿಗೆ ಮುಂದಾಗುವ ಸ್ಥಳೀಯ ಪಕ್ಷಗಳಿಗೆ ಉಪದೇಶವಾದರೂ ಅನುಮಾನವಿಲ್ಲ.

Leave a Reply